ವರ ವಧುವಿಗೆ ಸಿಂಧೂರ ಹಚ್ಚುವುದು
ಚಿತ್ರ: vogueshaire
ಇಂದಿನ ದಿನಗಳಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳು ನಿಮಿಷಗಳಲ್ಲಿ ವಸ್ತುಗಳನ್ನು ತಂದುಕೊಡುತ್ತಿವೆ. ಆಹಾರ ಪದಾರ್ಥಗಳಿಂದ ಹಿಡಿದು ಮನೆಗೆ ಬೇಕಾದ ತರಕಾರಿ ಸೇರಿದಂತೆ ಇತರೆ ದಿನ ಬಳಕೆ ವಸ್ತುಗಳೂ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬರುತ್ತಿವೆ. ಇದೇ ರೀತಿ ನಿಮಿಷಗಳಲ್ಲಿ ಸಾಮಗ್ರಿಗಳನ್ನು ವಿತರಣೆ ಮಾಡುವ ಬ್ಲಿಂಕಿಟ್, ದೆಹಲಿಯಲ್ಲಿ ಮದುವೆಯೊಂದರಲ್ಲಿ ಹಸೆಮಣೆ ಏರಿ ಕುಳಿತಿದ್ದ ವಧು– ವರರಿಗೆ ಸಿಂಧೂರವನ್ನು ತಂದುಕೊಟ್ಟಿದೆ.
ಮದುವೆ ನಡೆಯುವ ವೇಳೆ ಸಿಂಧೂರವೇ ಇಲ್ಲದೆ ಗಾಬರಿಯಾದಾಗ ಕ್ವಿಕ್ ಕಾಮರ್ಸ್ ಕಂಪನಿಯ ನಿಮಿಷಗಳ ವಿತರಣೆ ಹೇಗೆ ಸಹಾಯ ಮಾಡಿತು ಎನ್ನುವುದನ್ನು ದೆಹಲಿಯ ಪೂಜಾ ಎನ್ನುವವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯ ಸಿದ್ದತೆಯ ಭರದಲ್ಲಿ ಕುಟುಂಬ ಸದಸ್ಯರು ಸಿಂಧೂರ ತರುವುದನ್ನು ಮರೆತಿದ್ದರು. ಮದುವೆಯಲ್ಲಿ ವರ, ವಧುವಿನ ಹಣೆಗೆ ಸಿಂಧೂರ ಇಡಬೇಕು ಎನ್ನುವಾಗ, ಸಿಂಧೂರವೇ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದನ್ನು ತಿಳಿದ ಕುಟುಂಬಸ್ಥರು ಅಂಗಡಿಗೆ ಓಡಲಿಲ್ಲ. ಬದಲಾಗಿ ತಮ್ಮ ಮೊಬೈಲ್ ಪೋನ್ ತೆಗೆದು ಆನ್‌ಲೈನ್‌ನಲ್ಲಿ ನಿಮಿಷಗಳಲ್ಲಿ ವಿತರಣೆ ಮಾಡುವ ಬ್ಲಿಂಕಿಟ್‌ನಲ್ಲಿ ಸಿಂಧೂರವನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದಾರೆ.
ಇದರ ಬಗ್ಗೆ ವಿವರಿಸಿ ಪೂಜಾ ಅವರು ಹಂಚಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಆನ್‌ಲೈನ್ ಶಾಪಿಂಗ್ ವೇದಿಕೆಗಳನ್ನು ಹೀಗೂ ಬಳಸಿಕೊಳ್ಳಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳುತ್ತಿದ್ದಾರೆ.
’ಮದುವೆಗೆ ಬೇಕಾದ ಸಿಂಧೂರ ತರುವಲ್ಲಿ ಮರೆತಿರುವುದು ತಿಳಿದ ಮೇಲೆ ಎಲ್ಲರ ಮುಖದಲ್ಲಿ ಮುಗುಳು ನಗೆ ಕಾಣಿಸಿಕೊಂಡಿತು. ಮದುವೆಯ ಮುಹೂರ್ತ ಮೀರುತ್ತಿತ್ತು. ಆದರೆ ಬ್ಲಿಂಕಿಟ್ ಮೂಲಕ ಆ ಕ್ಷಣಕ್ಕೆ ಸರಿಯಾಗಿ ಸಿಂಧೂರ ದೊರೆತದ್ದು, ಎಲ್ಲರಿಗೂ ಖುಷಿ ಕೊಟ್ಟಿತು’ ಎಂದು ಬರೆದುಕೊಂಡಿದ್ದಾರೆ.
ಮದುವೆಗೆ ಬಂದ ಜನರು ಇತರ ಘಟನೆಗಳನ್ನು ನೆನಪು ಮಾಡಿಕೊಂಡರು. ’ಗುಜರಾತ್‌ನಲ್ಲಿ ನಡೆದ ನನ್ನ ಮದುವೆಯಲ್ಲೂ ಹೀಗೆಯೇ ಆಗಿತ್ತು. ಬ್ಲಿಂಕಿಟ್‌ನಿಂದ ಅದನ್ನು ತರಿಸಿಕೊಂಡೆವು’ . ’ಬ್ಲಿಂಕಿಟ್ ಬಳಕೆದಾರರೆ, ನೀವು ಎಂದಾದರೂ ಇದರ ಬಗ್ಗೆ ಯೋಚಿಸಿದ್ದೀರಾ?’ ಹೀಗೆ ನಾನಾ ರೀತಿಯ ತಮಾಷೆಗಳನ್ನು ಮದುವೆಗೆ ಸೇರಿದ್ದವರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.