ADVERTISEMENT

ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ?: ತಂದೆಯನ್ನೇ ಅನಾಥರನ್ನಾಗಿಸಿದ X ಎಂಬುವರ ಕಥೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 8:03 IST
Last Updated 4 ಆಗಸ್ಟ್ 2025, 8:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ಅಮೆರಿಕದಲ್ಲಿ 15 ವರ್ಷದಿಂದ ನೆಲೆಸಿರುವ ವ್ಯಕ್ತಿಯ ತಂದೆಯೊಬ್ಬರು ಇತ್ತೀಚೆಗೆ ನಿಧನರಾದರು. ಅವರ ತಾಯಿಯೂ ಮೂರು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಆದರೆ ಈ ‘ಅಮೆರಿಕ ಪುತ್ರ’ನ ಪಿತೃ ಆರೈಕೆಯನ್ನು ಕಂಡಮೇಲೆ ಭಾರತೀಯ ಕುಟುಂಬ ವ್ಯವಸ್ಥೆ ನಶಿಸಿತೇ ಎಂಬ ನೋವು ಕಾಡುತ್ತಿದೆ...

ಹೀಗೆಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಮಗಾದ ಘಟನೆಯೊಂದನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ ವನಶಿವಟೆಕ್‌ ಕಂಪನಿಯ ಸಂಸ್ಥಾಪಕ, ತಂತ್ರಜ್ಞ ಗೌರವ್ ಖೆತೆರ್ಪಾಲ್‌. 

ADVERTISEMENT

ಗೌರವ್‌ ಅವರು ಈ ಅಮೆರಿಕ ಪುತ್ರನನ್ನು ‘ಎಕ್ಸ್‌’ ಎಂದು ಸಂಬೋಧಿಸಿ ಘಟನೆಯನ್ನು ವಿವರಿಸಿದ್ದಾರೆ. 

ಕೆಲ ದಿನಗಳ ಹಿಂದೆ 3ರ ಜಾವದಲ್ಲಿ ಕರೆಯೊಂದು ಬಂತು. ತನ್ನ 84 ವರ್ಷದ ತಂದೆಗೆ ಏನಾಗಿದೆ ಹೋಗಿ ನೋಡು ಎಂಬ ಕೋರಿಕೆಯದು. ಆ ಮಾತಿನಲ್ಲಿ ಆತಂಕವಿತ್ತು. ಪತ್ನಿಯ ನಿಧನ ನಂತರ ಒಬ್ಬರೇ ಇದ್ದ ಎಕ್ಸ್‌ನ ತಂದೆಗೆ ಹೃದಯಾಘಾತವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದಲೂ ಅವರು ಬಳಲುತ್ತಿದ್ದರು. ನಾನು ಮತ್ತು ನನ್ನ ಕೆಲ ಸ್ನೇಹಿತರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು.

‘ನಮ್ಮ ಕೈಯಲ್ಲಾದ ಉತ್ತಮ ಚಿಕಿತ್ಸೆ ಕೊಡಿಸಲು ನಾವು ಪ್ರಯತ್ನಿಸಿದೆವು. ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಇವರ ಕೆಲ ಸಂಬಂಧಿಗಳು ಬಂದು ಹೋದರು. ಆದರೆ ಯಾರೂ ಅವರ ಆರೈಕೆಗಾಗಲೀ ಅಥವಾ ಆಸ್ಪತ್ರೆಯ ವೆಚ್ಚ ಭರಿಸಲು ಸಿದ್ಧರಿರಲಿಲ್ಲ. ಬಹುಕೋಟಿ ವ್ಯವಹಾರದಲ್ಲಿ ಮುಳುಗಿದ್ದ ಅಮೆರಿಕದ ಪುತ್ರ ‘ಎಕ್ಸ್‌’ ಭಾರತಕ್ಕೆ ಬರಲೇ ಇಲ್ಲ. ಇತ್ತ ಜೀವನ್ಮರಣ ಹೋರಾಟದಲ್ಲಿದ್ದ ತಂದೆ ತೀವ್ರ ನಿಗಾ ಘಟಕದಲ್ಲಿ ಜೀವನದ ಕೊನೆಯ ಕ್ಷಣಗಳಲ್ಲಿದ್ದರು.

ಕಳೆದ ವಾರ ಅವರು ಮೃತಪಟ್ಟರು. ‘ಎಕ್ಸ್‌’ ಭಾರತಕ್ಕೆ ಬಂದರು. ಮೂರು ದಿನ ಇದ್ದರು. ಕೆಲಸದ ಒತ್ತಡ ಎಂದು ಅಮೆರಿಕಕ್ಕೆ ಮರಳಿದರು. ಇಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆಯ ಆರೈಕೆಗಿಂತ ಅಮೆರಿಕದ ಕನಸೇ ಎಕ್ಸ್‌ಗೆ ದೊಡ್ಡದಾಗಿದ್ದು. ತಂದೆ ತೀರಿಕೊಂಡಾಗಲೂ ಎಕ್ಸ್ ತಾನೊಬ್ಬ ಬಂದರೇ ಹೊರತು, ಹೆಂಡತಿ, ಮಕ್ಕಳನ್ನು ಕರೆತರಲಿಲ್ಲ. ಅವರೆಲ್ಲರೂ ಅಮೆರಿಕದಲ್ಲೇ ಇದ್ದರು.

‘ಮಡದಿಗೆ ಕೆಲಸವಿದೆ ಹಾಗೂ ಮಕ್ಕಳಿಗೆ ಶಾಲೆ ಇದೆ’ ಎಂದಾಗ ನಿಜಕ್ಕೂ ನಂಬಲಾಗಲಿಲ್ಲ. ಜೈಪುರದಲ್ಲಿದ್ದ ಅವರ ಯಾವ ಸಂಬಂಧಿಗಳೂ ಔಪಚಾರಿಕ ಭೇಟಿಯನ್ನು ಹೊರತುಪಡಿಸಿ ಇನ್ಯಾವುದೇ ನೆರವಿಗೆ ಮುಂದಾಗಲಿಲ್ಲ. ನಾವು ಸ್ನೇಹಿತರೇ ಓಡಾಡಿದೆವು. ಆಸ್ಪತ್ರೆಯ ಬಿಲ್ಲನ್ನೂ ಭರಿಸಿದೆವು. ಎಕ್ಸ್‌ನ ತಂದೆಯನ್ನು ಕೊನೆಗಾಲದಲ್ಲಿ ಅನಾಥರಾಗಲು ಬಿಡಲಿಲ್ಲ. 

ತಂದೆ ತೀರಿಕೊಂಡಾಗ ಬಂದ ಎಕ್ಸ್‌, ಕೇವಲ ಮೂರೇ ದಿನಗಳಲ್ಲಿ ಅಮೆರಿಕ ಹೊರಟ. ತಿಥಿ ಕರ್ಮಗಳಿಲ್ಲ. ಅಸ್ಥಿ ವಿಸರ್ಜನೆ ಇಲ್ಲ. ‘ಇವೆಲ್ಲವೂ ಮೂಢ ನಂಬಿಕೆ. ನಾವು ಇದರಲ್ಲಿ ನಂಬಿಕೆಯನ್ನು ಹೊಂದಿಲ್ಲ’ ಎಂದು ಹೊರಟರು.

‘ಭಾರತೀಯ ಕುಟುಂಬ ವ್ಯವಸ್ಥೆ ಇಡೀ ಜಗತ್ತಿನಲ್ಲೇ ಅತ್ಯಂತ ಮೌಲ್ಯಯುತವಾದದ್ದು. ನಮ್ಮ ಆಚಾರ, ವಿಚಾರ, ಕುಟುಂಬ ಪರಿಕಲ್ಪನೆಯು ಜಗತ್ತಿನಲ್ಲೇ ಅತ್ಯುತ್ತಮವಾದದ್ದು ಮತ್ತು ಬಲಿಷ್ಠವಾದದ್ದು. ಆದರೆ ಈ ಘಟನೆಯು ನನ್ನನ್ನು ವಿಚಲಿತನನ್ನಾಗಿಸಿತು. ಭಾರತೀಯ ಸಮಾಜ ಎತ್ತ ಸಾಗುತ್ತಿದೆ ಎಂದು ಆಘಾತವಾಯಿತು. ನಮ್ಮ ಕುಟುಂಬ ಮೌಲ್ಯಗಳು ಏಕೆ ಹೀಗೆ ಮರೆಯಾಗುತ್ತಿದೆ ಎಂದು ಆತಂಕ ಎದುರಾಯಿತು ಎಂದು ಗೌರವ್ ಬರೆದುಕೊಂಡಿದ್ದಾರೆ.

ಆದರೆ ಆ ‘ಎಕ್ಸ್‌’ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.