ಜಯಾ ಬಚ್ಚನ್, ಕಂಗನಾ
ಬೆಂಗಳೂರು: ಅಭಿಮಾನಿಯೊಬ್ಬ ಇತ್ತೀಚೆಗೆ ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯೆ ಹಾಗೂ ನಟಿ ಜಯಾ ಬಚ್ಚನ್ ಅವರನ್ನು ಕಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಜಯಾ ಅವರು ವರ್ತಿಸಿದ ರೀತಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ನಿಧನರಾದ ನಟ ಮನೋಜ್ ಕುಮಾರ್ ಅವರಿಗೆ ಸಮಾಜವಾದಿ ಪಕ್ಷದ ವತಿಯಿಂದ ಲಖನೌ ಕಚೇರಿಯಲ್ಲಿ ಶೃದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಜಯಾ ಅವರನ್ನು ಕಂಡು ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾದ.
ಆಗ ಏಕಾಏಕಿ ಸಿಡಿಮಿಡಿಗೊಂಡ ನಟಿ ಜಯಾ ಅವರು ಏನು ಮಾಡುತ್ತೀದಿಯಾ ನೀನು? ಎಂದು ಗದರಿ ಅವಾಚ್ಯ ಶಬ್ದಗಳಿಂದ ಆತನನ್ನು ನಿಂದಿಸಿದ್ದರು. ಅಲ್ಲದೇ ಆತನನ್ನು ಕೈಯಿಂದ ತಳ್ಳಿದ್ದರು. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ, ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ವಿಡಿಯೊ ಹಂಚಿಕೊಂಡು, ಅತ್ಯಂತ ಸವಲತ್ತು ಪಡೆದ ಮತ್ತು ಅತ್ಯಂತ ಹಾಳಾದ ಮಹಿಳೆ ಎಂದು ಮೂದಲಿಸಿದ್ದಾರೆ.
ಅಮಿತಾಭ್ ಅವರ ಪತ್ನಿಯಂದು ಜನ ಇವಳ ಕೋಪ, ಅಜ್ಞಾನವನ್ನು ಸಹಿಸಿಕೊಂಡರು, ಆ ಸಮಾಜವಾದಿ ಪಕ್ಷದ ಟೋಪಿಯನ್ನು ನೋಡಿ, ಕೋಳಿ ತಲೆ ಕಂಡ ಹಾಗೇ ಕಾಣುತ್ತದೆ. ಇವಳೂ ಒಬ್ಬ ಜಂಭದ ಕೋಳಿ, ಎಂಥಹ ನಾಚಿಕೆಗೇಡು ಎಂದು ಜಯಾ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ ಅನೇಕ ನೆಟ್ಟಿಗರೂ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಹಲವಾರು ಬಾರಿ ಸಾರ್ವಜನಿಕವಾಗಿ ಜಯಾ ಅವರು ಹೀಗೆ ನಡೆದುಕೊಂಡಿದ್ದ ಉದಾಹರಣೆಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.