ADVERTISEMENT

ಲಕ್ಷ ಮೌಲ್ಯದ ₹10 ನಾಣ್ಯಗಳನ್ನೇ ನೀಡಿ ಸ್ಕೂಟರ್‌ ಖರೀದಿಸಿದ ವ್ಯಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2024, 6:38 IST
Last Updated 22 ಫೆಬ್ರುವರಿ 2024, 6:38 IST
   

ಜೈಪುರ: ಜೈಪುರದ ವ್ಯಕ್ತಿಯೊಬ್ಬರು ₹1 ಲಕ್ಷ ಮೊತ್ತದ ₹10 ನಾಣ್ಯ ನೀಡಿ ಏಥರ್‌ 450 ಮಾದರಿಯ ಎಲೆಕ್ಟ್ರಿಕ್‌ ಸ್ಕೂಟರ್ ಖರೀದಿಸಿದ್ದಾರೆ.

ಈ ಕುರಿತು ಏಥರ್ ಎನರ್ಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ತರುಣ್ ಮೆಹ್ತಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯು ಹಣ ಪಾವತಿ ಮಾಡಿದ ವಿಧಾನಕ್ಕೆ ಅಚ್ಚರಿ ವ್ಯಕ್ತಪಡಿಸಿದ ಅವರು, ವ್ಯಕ್ತಿಗೆ ಸ್ಕೂಟರ್‌ ಹಸ್ತಾಂತರಿಸುತ್ತಿರುವ ಸಂದರ್ಭ ಮತ್ತು  ₹10 ನಾಣ್ಯದ ಪೊಟ್ಟಣವಿರುವ ಫೋಟೊ ಹಂಚಿಕೊಂಡಿದ್ದಾರೆ.

‘ಜೈಪುರದಲ್ಲಿ ವ್ಯಕ್ತಿಯೊಬ್ಬರು ಹೊಸ ಏಥರ್ 450 ಖರೀದಿಸಿದ್ದಾರೆ, ಅದೂ ಪೂರ್ಣ ₹10 ನಾಣ್ಯಗಳನ್ನು ನೀಡಿ’ ಎಂದು ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಆದರೆ ಸ್ಕೂಟರ್‌ ಖರೀದಿಸಿದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 

ಸದ್ಯ ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್‌ ಆಗುತ್ತಿದ್ದು, ಅದರಲ್ಲಿ ಎಷ್ಟು ನಾಣ್ಯಗಳಿವೆ, ಹೇಗೆ ಎಣಿಸಿದಿರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

ಅಂದಹಾಗೆ ನಾಣ್ಯಗಳನ್ನು ನೀಡಿ ವಾಹನ ಖರೀದಿ ಮಾಡಿದವರ ಪೈಕಿ ಇವರು ಮೊದಲಲ್ಲ. ಕಳೆದ ವರ್ಷ, ಅಸ್ಸಾಂನ ವ್ಯಕ್ತಿಯೊಬ್ಬರು ತಾವು ಉಳಿತಾಯ ಮಾಡಿದ ನಾಣ್ಯಗಳ ಹಣದಿಂದ ಸ್ಕೂಟರ್ ಖರೀದಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದರು. ಗುವಾಹಟಿಯ ಸಣ್ಣ ಅಂಗಡಿಯವರಾದ ಎಂ.ಡಿ ಸೈದುಲ್ ಹೊಕ್ ಎನ್ನುವವರು  ತಮ್ಮ ಕನಸಿನ ದ್ವಿಚಕ್ರ ವಾಹನವನ್ನು ಖರೀದಿಸಲು 5-6 ವರ್ಷಗಳಿಂದ ಕಷ್ಟಪಟ್ಟು ದುಡಿದ ಹಣವನ್ನು ಉಳಿಸಿದ್ದರು. ₹ 1, ₹ 2, ₹ 5 ಮತ್ತು ₹ 10 ನಾಣ್ಯಗಳನ್ನು ನೀಡಿ ಸ್ಕೂಟರ್‌ ಖರೀದಿಸಿ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.