ADVERTISEMENT

ಮಂಗ Vs ನಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಏನಿದು ಗ್ಯಾಂಗ್‌ ವಾರ್‌!

#MonkeyVsDoge: ಮಂಗಗಳ ಆಕ್ರಮಣಕಾರಿ ನಡೆಗೆ ಗ್ರಾಮಸ್ಥರು ಕಂಗಾಲಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ನಗೆಗಡಲಲ್ಲಿ ತೇಲಿಸುತ್ತಿವೆ.

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 6:23 IST
Last Updated 19 ಡಿಸೆಂಬರ್ 2021, 6:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲ್‌ಗಾಂವ್‌ ಎಂಬಲ್ಲಿ ನಾಯಿಗಳು ಮತ್ತು ಮಂಗಗಳ ನಡುವಣ ಕದನಕ್ಕೆ ಸಂಬಂಧಿಸಿದ ವರದಿಗಳು ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ 'ಗ್ಯಾಂಗ್‌ ವಾರ್‌' ಆರಂಭಗೊಂಡಿದೆ. #MonkeyVsDoge ಹ್ಯಾಶ್‌ ಟ್ಯಾಗ್‌ನಲ್ಲಿ ತರಹೇವಾರಿ ಮೀಮ್‌ಗಳ ಕದನ ಏರ್ಪಟ್ಟಿದೆ.

ನಾಯಿ ಮರಿಗಳನ್ನು ಎತ್ತಿ ಕೊಂಡೊಯ್ಯುತ್ತಿರುವ ಮಂಗಗಳು ಮರದ ಮೇಲಿಂದ ಕೆಳಗೆ ಎಸೆಯುತ್ತಿರುವ ಬಗ್ಗೆ ಒಂದೆಡೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿನ ಮೀಮ್‌ಗಳು ನಗೆಗಡಲಲ್ಲಿ ತೇಲಿಸುತ್ತಿವೆ.

ಕೋತಿ ಮರಿಯೊಂದನ್ನು ಬೀದಿನಾಯಿಗಳು ಸಾಯಿಸಿದ್ದಕ್ಕೆ ಪ್ರತೀಕಾರವಾಗಿ ಮಂಗಗಳು ಈ ಕೃತ್ಯ ನಡೆಸುತ್ತಿವೆ ಎನ್ನಲಾಗಿದೆ. ಮಂಗಗಳ ಆಕ್ರಮಣಕಾರಿ ನಡೆಗೆ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಎರಡು ಮಂಗಳನ್ನು ಸೆರೆ ಹಿಡಿದು ನಾಗ್ಪುರಕ್ಕೆ ಸಾಗಿಸಲಾಗಿದೆ.

ADVERTISEMENT

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಗಂಭೀರವಾಗಿ ಫೋನ್‌ನಲ್ಲಿ ಮಾತನಾಡುತ್ತಿರುವ ಫೋಟೊವನ್ನು ಅನ್ಶುಮನ್‌ ಎಂಬುವವರು ಟ್ವೀಟ್‌ ಮಾಡಿದ್ದು, 'ಮಂಗಗಳು ಮತ್ತು ನಾಯಿಗಳ ನಡುವಣ 3ನೇ ವಿಶ್ವಯುದ್ಧವನ್ನು ನಿಲ್ಲಿಸುವ ಸಲುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಕರೆ ಮಾಡಿ, ರಾಜತಾಂತ್ರಿಕ ಮಾತುಕತೆ ನಡೆಸುತ್ತಿದ್ದಾರೆ' ಎಂದು ಹಾಸ್ಯ ಮಾಡಿದ್ದಾರೆ.

ದೋಣಿಯೊಂದರಲ್ಲಿ ಜಾಕೆಟ್‌ ಮತ್ತು ಟೋಪಿ ಧರಿಸಿ ವಿಹರಿಸುತ್ತಿರುವ ನಾಯಿಯೊಂದರ ಚಿತ್ರಕ್ಕೆ 'ಈ ನಡುವೆ ಎನ್ಆರ್‌ಐ ನಾಯಿಗಳು' ಎಂದು ತಲೆಬರಹ ನೀಡಿರುವ ಪೋಸ್ಟ್‌ಅನ್ನು 'ಲೂತಾನ್‌ ಕಬೂತರ್‌' ಎಂಬ ಟ್ವಿಟರ್‌ ಪ್ರೊಫೈಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಸಂಚರಿಸುತ್ತಿರುವ ಆಟೋ ಒಂದರ ಮೇಲೆ ನಾಯಿಯೊಂದು ನಿಂತಿರುವ ವಿಡಿಯೊಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ 'ಕಬಾಲಿ' ಸಿನಿಮಾದ ಮಾಸ್‌ ಎಂಟ್ರಿ ಬಿಜಿಎಂ ಅನ್ನು ಹಿನ್ನೆಲೆಯಾಗಿ ಬಳಸಿದ್ದು, 'ಪ್ರತೀಕಾರ ತೀರಿಸಿಕೊಳ್ಳಲು ಆಗಮಿಸುತ್ತಿರುವ ನಾಯಿ' ಎಂಬ ತಲೆಬರಹ ನೀಡಲಾಗಿದೆ.

ಕೋತಿಯೊಂದು ಮಹಡಿ ಮೇಲೆ ನಿಂತು ಗಾಳಿಪಟ ಹಾರಿಸುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿರುವ ಅಜಯ್‌ ಸಿಂಗ್‌ ಎಂಬುವವರು, 'ನಾಯಿಮರಿಗಳನ್ನು ಹತ್ಯೆ ಮಾಡಿದ ಬಳಿಕ ಸಂಭ್ರಮಾಚರಿಸುತ್ತಿರುವ ಅಪರಾಧಿ ಮಂಗ' ಎಂದು ದೂರಿದ್ದಾರೆ.

'ಮಂಗಗಳು ಮತ್ತು ನಾಯಿಗಳ ನಡುವಣ ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಿರ್ಧರಿಸಿದ್ದಾರೆ' ಎಂಬೆಲ್ಲ ಹಾಸ್ಯದ ತುಣುಕುಗಳು ಟ್ವಿಟರ್‌ ಅನ್ನು ತುಂಬಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.