ADVERTISEMENT

30ರೊಳಗೆ ಮಕ್ಕಳನ್ನು ಹೊಂದಬೇಕು: ಝೊಹೊ ಮುಖ್ಯಸ್ಥ ವೆಂಬು ಸಲಹೆ ಹುಟ್ಟುಹಾಕಿದ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2025, 11:01 IST
Last Updated 19 ನವೆಂಬರ್ 2025, 11:01 IST
<div class="paragraphs"><p>ಶ್ರೀಧರ ವೆಂಬು</p></div>

ಶ್ರೀಧರ ವೆಂಬು

   

ಎಕ್ಸ್ ಚಿತ್ರ

ಬೆಂಗಳೂರು: ವಾರಕ್ಕೆ 72 ಗಂಟೆ ದುಡಿಯಿರಿ ಎಂಬ ಇನ್ಫೊಸಿಸ್‌ನ ನಾರಾಯಣ ಮೂರ್ತಿ ಅವರ ಹೇಳಿಕೆ ಸೃಷ್ಟಿಸಿದ ಚರ್ಚೆಯಂತೆಯೇ, 30 ರೊಳಗೆ ಮದುವೆಯಾಗಿ ಮಕ್ಕಳನ್ನು ಪಡೆಯಿರಿ ಎಂಬ ಝೊಹೊ ಸಹ ಸಂಸ್ಥಾಪಕ ಶ್ರೀಧರ್ ವೆಂಬು ಅವರ ಹೇಳಿಕೆಯೂ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ADVERTISEMENT

‘ಇಂದಿನ ಯುವ ಜನತೆಯು 30 ವರ್ಷದೊಳಗಾಗಿ ಮದುವೆಯಾಗಿ, ಮಕ್ಕಳನ್ನು ಹೊಂದಬೇಕು. ಆ ಮೂಲಕ ಸಮಾಜ ಮತ್ತು ಪೂರ್ವಿಕರ ವಂಶಾವಳಿಯ ಮುಂದುವರಿಸುವ ಕರ್ತವ್ಯವನ್ನು ಪೂರೈಸಬೇಕು’ ಎಂದು ಶ್ರೀಧರ್ ವೆಂಬು ಅವರು ಹೇಳಿದ್ದರು.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘ನನ್ನನ್ನು ಭೇಟಿ ಮಾಡುವ ಯುವ ಉದ್ದಿಮೆದಾರರಿಗೆ ನಾನು ಈ ಸಲಹೆಯನ್ನು ಸದಾ ನೀಡುತ್ತೇನೆ. ಮದುವೆ ಹಾಗೂ ಮಕ್ಕಳನ್ನು ಮಾಡಿಕೊಳ್ಳುವುದನ್ನು ಎಂದಿಗೂ ಮುಂದೂಡಬೇಡಿ ಎಂಬುದೇ ನನ್ನ ಸಲಹೆ. ನನ್ನ ಈ ಮಾತು ವಿಚಿತ್ರ ಹಾಗೂ ಹಿಂದಿನ ಕಾಲದ ಕಲ್ಪನೆ ಎಂದೆನಿಸಬಹುದು. ಆದರೆ ಮುಂದೊಂದು ದಿನ ಇದುವೇ ಮಂತ್ರವಾಗಲಿದೆ’ ಎಂದಿದ್ದಾರೆ.

ವೆಂಬು ಅವರ ಈ ಹೇಳಿಕೆಗೂ ಒಂದು ಕಾರಣವಿದೆ. ನಟ ರಾಮ್‌ ಚರಣ್ ಅವರ ಪತ್ನಿಯೂ ಆಗಿರುವ ಅಪೊಲೊ ಆಸ್ಪತ್ರೆಯ ಸಿಎಸ್‌ಆರ್ ವಿಭಾಗದ ಉಪಾಧ್ಯಕ್ಷೆ ಉಪಾಸನಾ ಕೊನಿಡೆಲಾ ಅವರು ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಗಳೊಂದಿಗೆ ಇಂಥದ್ದೊಂದು ಚರ್ಚೆಯನ್ನು ಇತ್ತೀಚೆಗೆ ನಡೆಸಿದ್ದರು. ಅಲ್ಲಿ ಮದುವೆ ಕುರಿತು ಬದಲಾಗುತ್ತಿರುವ ಈ ಅವರ ಆಲೋಚನೆಗಳನ್ನು ಗ್ರಹಿಸಿದ್ದರು.

‘ನಿಮ್ಮಲ್ಲಿ ಎಷ್ಟು ಜನ ಮದುವೆಯಾಗಬಯಸುತ್ತೀರಿ?’ ಎಂಬ ಉಪಾಸನಾ ಅವರ ಪ್ರಶ್ನೆಗೆ ಕೆಲವೇ ಯುವಕರು, ಅದಕ್ಕೂ ಕಡಿಮೆ ಸಂಖ್ಯೆಯ ಯುವತಿಯರು ಕೈ ಎತ್ತಿದ್ದರು. ಯುವಕರಿಗೆ ಹೋಲಿಸಿದಲ್ಲಿ, ವೃತ್ತಿ ಮೇಲೆ ಮಹಿಳೆಯರು ಹೆಚ್ಚಾಗಿ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಇದು ನವ ಹಾಗೂ ಪ್ರಗತಿಪರ ಭಾರತದ ಬದಲಾದ ಸ್ಥಿತಿ. ನಿಮ್ಮ ದೃಷ್ಟಿಕೋನವನ್ನು ನಿರ್ಧರಿಸಿ. ನಿಮ್ಮದೇ ಆದ ಗುರಿಯನ್ನು ಹೊಂದಿ. ನಿಮ್ಮನ್ನು ಯಾವುದೇ ಶಕ್ತಿ ತಡೆಯಲಾಗದ ಸ್ಥಿತಿಯನ್ನು ಊಹಿಸಿ’ ಎಂದು ವಿದ್ಯಾರ್ಥಿಗಳಿಗೆ ಅವರು ಸಲಹೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ರೂಪದ ವೆಂಬು ಅವರ ಹೇಳಿಕೆಯು ಆನ್‌ಲೈನ್ ವೇದಿಕೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

‘ಮದುವೆ ಮತ್ತು ಮಕ್ಕಳನ್ನು ಹೊಂದಲು ಯಾವುದೇ ಸಾಂಸ್ಕೃತಿಕ ಹಿಂಜರಿಕೆ ಇಲ್ಲ. ಬದಲಿಗೆ ಆರ್ಥಿಕ ಒತ್ತಡವೇ ಕಾರಣ. ಇಂದಿನ ಯುವಜನತೆ ಅನಿಶ್ಚಿತ ಆದಾಯ ಹೊಂದಿದ್ದಾರೆ. ದುಡಿಮೆ ಅವಧಿ ಹಿಂದಿಗಿಂತಲೂ ಹೆಚ್ಚಾಗಿದೆ. ಜೀವನ ನಿರ್ವಹಣೆ ಊಹಿಸಲೂ ಸಾಧ್ಯವಿಲ್ಲ. ಮನೆ ಬಾಡಿಗೆ ಎಂಬುದು ಗಳಿಕೆಯ ಬಹುಪಾಲನ್ನೇ ನುಂಗುತ್ತಿದೆ. ಇದನ್ನು ಸರಿಪಡಿಸಿದರೆ ಎಲ್ಲವೂ ನೀವಂದುಕೊಂಡಂತೆ ಸಹಜವಾಗಿಯೇ ಇರಲಿದೆ’ ಎಂದು ಒಬ್ಬರು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವೆಂಬು, ‘ಹಣವುಳ್ಳವರೂ ಮದುವೆಗೆ ಹಿಂಜರಿಯುತ್ತಿದ್ದಾರೆ. ಮಕ್ಕಳನ್ನು ಹೊಂದಲು ಒಪ್ಪುತ್ತಿಲ್ಲ. ಅದು ಸದ್ಯದ ಸಂಸ್ಕೃತಿ’ ಎಂದಿದ್ದಾರೆ.

ವೆಂಬು ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವ್ಯಕ್ತಿ, ‘30ರೊಳಗೆ ಮಕ್ಕಳನ್ನು ಹೊಂದುವ ಸಲಹೆಯನ್ನು ನೀವು ನೀಡುತ್ತಿದ್ದೀರಿ. ಆದರೆ ಇಂದಿನ ನಿರ್ದಯಿ ಉದ್ಯೋಗ ಮಾರುಕಟ್ಟೆಯಲ್ಲಿ ವೃತ್ತಿ ಬದುಕು ಕಂಡುಕೊಳ್ಳಲು ಇದು ತಡೆಯೊಡ್ಡುವುದಿಲ್ಲವೇ? ಏಕೆಂದರೆ ಮಕ್ಕಳನ್ನು ಹೊಂದುವುದರಿಂದ ವೈಯಕ್ತಿಕ ಬದುಕಿನ ಬೆಳವಣಿಗೆ ಸದಾ ಕುಂಠಿತವೇ ಆಗಿರುತ್ತದೆ. ನನಗೂ ಮಕ್ಕಳು ಬೇಕೆಂಬ ಆಸೆ ಇದೆ. ಆದರೆ ಅದುವೇ ನನ್ನ ಬದುಕಿನ ಪರಮೋಚ್ಛ ಉದ್ದೇಶವಲ್ಲ’ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಪ್ರತಿಕ್ರಿಯಿಸಿರುವ ವೆಂಬು, ‘ಜೀವನ ಎಂಬುದು ಓಟದ ಸ್ಪರ್ಧೆಯಲ್ಲ. ಯಾವುದೇ ವಯೋಮಾನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಬಹಳಷ್ಟು ಅವಕಾಶಗಳಿರುತ್ತವೆ. ಕೆಲವರಿಗೆ 30ನೇ ವಯಸ್ಸೇ ವೃತ್ತಿಯ ಆರಂಭವಾಗಿರುತ್ತದೆ. ನನ್ನ ಈ ಸಲಹೆಯನ್ನು ನನಗೆ ನನ್ನಮ್ಮ ನೀಡಿದ್ದರು. ನಾನು ಅದನ್ನು ಸ್ವೀಕರಿಸಿದೆ ಎಂಬುದೇ ನನ್ನ ಹೆಮ್ಮೆ. ಬದುಕನ್ನು ನಾನು ಓಟವೆಂದೇ ಪರಿಗಣಿಸಿದ್ದರೆ, ನನಗಿಂತ 20 ವರ್ಷ ಸಣ್ಣವರಾಗಿರುವ ಮಾರ್ಕ್‌ ಝುಕರ್‌ಬರ್ಗ ಅವರಿಗೆ ಹೋಲಿಸಿದರೆ ನಾನು ವಿಫಲನಾಗಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಸೋತಿದ್ದೇನೆಯೇ? ವೈಫಲ್ಯವನ್ನೇ ಆಲೋಚಿಸುತ್ತಾ ನಾನು ದಿನವನ್ನು ಆರಂಭಿಸುವುದಿಲ್ಲ. ಇಂಥದ್ದೊಂದು ಸುಭೀಕ್ಷವಾದ ಬದುಕನ್ನು ನನಗೆ ನೀಡಿದ ನನ್ನಮ್ಮನಿಗೆ ನಾನು ಧನ್ಯವಾದ ಹೇಳಬೇಕು’ ಎಂದಿದ್ದಾರೆ.

ವೆಂಬು ಅವರ ವಾದಕ್ಕೆ ಪ್ರತಿಕ್ರಿಯಿಸಿರುವ ಒಬ್ಬರು, ‘30ರೊಳಗೆ ಮಕ್ಕಳನ್ನು ಹೊಂದುವುದೇ ಮುಖ್ಯವಾಗುವುದಾದರೆ ವೃತ್ತಿ ಬದುಕಿಗೆ ಸಂಪೂರ್ಣ ಎಳ್ಳು ನೀರೇ ಬಿಡಬೇಕು. ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಹೊಂದಿದ ಬಹಳಷ್ಟು ಕುಟುಂಬಗಳು ವಿಚ್ಛೇದನದಲ್ಲೋ ಅಥವಾ ವಿರಸದಲ್ಲೋ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು’ ಎಂದಿದ್ದಾರೆ.

ಇದಕ್ಕೂ ವೆಂಬು ಪ್ರತಿಕ್ರಿಯಿಸಿದ್ದಾರೆ. ‘ಯಾವುದೇ ವ್ಯಕ್ತಿ ತನ್ನ 28ನೇ ವಯಸ್ಸಿನಲ್ಲಿ ಇಂಥ ಎಲ್ಲಾ ಹಿಂಜರಿಕೆ ಅನುಭವಿಸಿದರೆ, ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಇಡೀ ಜೀವನವೇ ಇದೆ’ ಎಂದು ಸಲಹೆ ನೀಡಿದ್ದಾರೆ.

57 ವರ್ಷದ ಶ್ರೀಧರ ವೆಂಬು ಅವರು 1990ರಲ್ಲಿ ಪರಿಮಳಾ ಶ್ರೀನಿವಾಸನ್‌ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ. 2020ರವರೆಗೂ ವೆಂಬು ಕುಟುಂಬ ಅಮೆರಿಕದಲ್ಲಿ ನೆಲೆಸಿತ್ತು. ನಂತರ ಪರಿಮಳಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.

ಮದುವೆಯನ್ನು ಮುರಿದುಕೊಳ್ಳುತ್ತಿರುವುದಾಗಿ ವೆಂಬು ಅವರು ವಾಟ್ಸ್‌ಆ್ಯಪ್‌ ಮೂಲಕ ಪರಿಮಳಾ ಅವರಿಗೆ ಸಂದೇಶ ಕಳುಹಿಸಿ, ತಮಿಳುನಾಡಿಗೆ ಬಂದಿದ್ದರು. ಝೊಹೊ ಕಂಪನಿಯ ಬಹುತೇಕ ಷೇರುಗಳನ್ನು ತಮ್ಮ ಸೋದರಿಯರು ಹಾಗೂ ಸಂಬಂಧಿಕರಿಗೆ ನೀಡಿದ್ದಾರೆ. ಇದಕ್ಕೆ ನನ್ನ ಅನುಮತಿ ಪಡೆದಿಲ್ಲ. ಹೀಗಾಗಿ ಇದು ಕ್ಯಾಲಿಫೋರ್ನಿಯಾದ ಸಮುದಾಯ–ಆಸ್ತಿ ಕಾನೂನಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.