ADVERTISEMENT

ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್‌ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2025, 7:45 IST
Last Updated 21 ಆಗಸ್ಟ್ 2025, 7:45 IST
<div class="paragraphs"><p>ಡಿಂಪಲ್‌ ಯಾದವ್‌, ಸ್ವರಾ ಭಾಸ್ಕರ್</p></div>

ಡಿಂಪಲ್‌ ಯಾದವ್‌, ಸ್ವರಾ ಭಾಸ್ಕರ್

   

ಮುಂಬೈ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮುಂದಿನ ಚಿತ್ರಗಳ ಕುರಿತೋ ಅಥವಾ ತಮ್ಮ ಕುರಿತು ಮಾತನಾಡುವ ನೆಟ್ಟಿಗರ ವಿರುದ್ಧ ಕಿಡಿಕಾರಿ ಅಲ್ಲ. ಬದಲಿಗೆ ತಾವು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗಿರುವುದಾಗಿ ಹೇಳಿದ ಅವರ ಹೇಳಿಕೆ ಬಾಲಿವುಡ್‌ ಮತ್ತು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.

ರಾಜಕಾರಣಿಯಾಗಿರುವ ತಮ್ಮ ಪತಿ ಫಹಾದ್ ಅಹ್ಮದ್ ಅವರೊಂದಿಗೆ ‘ಪತಿ, ಪತ್ನಿ ಔರ್ ಪಂಗಾ– ಜೋಡಿಯೊ ಕಾ ರಿಯಾಲಿಟಿ ಚೆಕ್‌’ ಎಂಬ ಟಿ.ವಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವರಾ, ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನ ವಿಡಿಯೊ ಈಗ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

‘ಪ್ರತಿಯೊಬ್ಬರೂ ವಿರುದ್ಧ ಲಿಂಗದವರ ಕುರಿತು ಆಕರ್ಷಣೆ ಹೊಂದಬೇಕು ಎಂಬುದು ಮನುಷ್ಯರ ಮೇಲೆ ಹೇರಲಾದ ಸಿದ್ಧಾಂತ. ಆದರೆ ಸ್ವಭಾವದಿಂದ ನಾವೆಲ್ಲರೂ ದ್ವಿಲಿಂಗಿಗಳು. ಜನರನ್ನು ಅವರ ಪಾಡಿಗೆ ಅವರಿರುವಂತೆ ಬಿಟ್ಟರೆ ಸಮಾನ ಲಿಂಗದವರತ್ತ ಸಹಜವಾಗಿ ಆಕರ್ಷಣೆ ಹೊಂದುತ್ತಾರೆ. ಆದರೆ ಸಾವಿರಾರು ವರ್ಷಗಲಿಂದ ಅನ್ಯ ಲಿಂಗದವರನ್ನೇ ಒಪ್ಪಿಕೊಳ್ಳುವಂತೆ, ಅವರತ್ತಲೇ ಆಕರ್ಷಣೆ ಹೊಂದುವಂತೆ ಸಿದ್ಧಾಂತ ಹೇರಲಾಗಿದೆ. ಇದರಿಂದಲೇ ಮಾನವ ಜನಾಂಗ ಉಳಿಯಲಿದೆ ಮತ್ತು ಅದುವೇ ನಿಯಮ ಎಂಬುದನ್ನೂ ಹೇಳಿಕೊಂಡು ಬರಲಾಗಿದೆ’ ಎಂದು ಸಂದರ್ಶನದಲ್ಲಿ ಸ್ವರಾ ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೆ ನಿಮಗೆ ಯಾರ ಮೇಲಾದರೂ ಮೋಹವಾಗಿದೆಯೇ ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದ ಸ್ವರಾ, ‘ಇತ್ತೀಚೆಗೆ ನಾನು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್‌ ಯಾದವ್‌ ಅವರನ್ನು ಭೇಟಿ ಮಾಡಿದ್ದೆ. ಅವರತ್ತ ಆಕರ್ಷಿತಳಾಗಿದ್ದೇನೆ’ ಎಂದಿದ್ದಾರೆ.

‘ತನ್ನ ಲೈಂಗಿಕ ದೃಷ್ಟಿಕೋನವು ಮಹಾರಾಷ್ಟ್ರದಲ್ಲಿ ಪತಿಯ ರಾಜಕೀಯ ಜೀವನಕ್ಕೆ ಸಮಸ್ಯೆಯನ್ನುಂಟು ಮಾಡಿತ್ತು. ಈಗ ಉತ್ತರ ಪ್ರದೇಶದಲ್ಲೂ ಸಮಸ್ಯೆ ಸೃಷ್ಟಿಸುವ ಅಪಾಯವಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಡಿಂಪಲ್ ಯಾದವ್ ಅವರ ಜನ್ಮದಿನದ ಚಿತ್ರವನ್ನು ಸ್ವರಾ ಭಾಸ್ಕರ್ ಹಂಚಿಕೊಂಡಿದ್ದರು. ತನ್ನ ಪತಿಯನ್ನು ಗುರಿಯಾಗಿಸಿಕೊಂಡು ಮಾಡಲಾದ ಜಾತಿ ನಿಂದನೆ ಕುರಿತು ಕೆಲ ದಿನಗಳ ಹಿಂದೆ ನಟಿ ಸುದ್ದಿಯಲ್ಲಿದ್ದರು.

ಸ್ವರಾ ಮತ್ತು ಫಹಾದ್‌ಗೆ ಪುತ್ರಿ ರಾಬಿಯಾ ಇದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.