ADVERTISEMENT

ಒಂದು ಕೈಲಿ ಗ್ಯಾಸ್‌ಸ್ಟೌ, ಮತ್ತೊಂದರಲ್ಲಿ ಸಮೋಸ: ಹುಡುಗನ ಶ್ರಮಕ್ಕೆ ಶ್ಲಾಘನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2022, 7:15 IST
Last Updated 4 ಫೆಬ್ರುವರಿ 2022, 7:15 IST
'ಯೂಟ್ಯಬ್‌ ಸ್ವಾದ್‌ ಅಫಿಶಿಯಲ್‌' ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಮೋಸ ಮಾರಾಟ ಮಾಡುತ್ತಿರುವ ಹುಡುಗನ ವಿಡಿಯೊ ಸ್ಕ್ರೀನ್‌ಶಾಟ್‌.
'ಯೂಟ್ಯಬ್‌ ಸ್ವಾದ್‌ ಅಫಿಶಿಯಲ್‌' ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಮೋಸ ಮಾರಾಟ ಮಾಡುತ್ತಿರುವ ಹುಡುಗನ ವಿಡಿಯೊ ಸ್ಕ್ರೀನ್‌ಶಾಟ್‌.   

ಒಂದು ಕೈಯಲ್ಲಿ ಗ್ಯಾಸ್‌ಸ್ಟೌಅನ್ನು ಹಿಡಿದು, ಮತ್ತೊಂದು ಕೈಯಲ್ಲಿ ಸಮೋಸಗಳಿರುವ ಬಕೆಟ್‌ ಹಿಡಿದು ವ್ಯಾಪಾರ ಮಾಡುತ್ತಿರುವ ಹುಡುಗ ಸಾಮಾಜಿಕ ಜಾಲತಾಣದ ಮನಗೆದ್ದಿದ್ದಾನೆ. ಗ್ರಾಹಕರಿಗೆ ಗರಿಗರಿಯಾದ ಸಮೋಸವನ್ನು ಕೊಡಲು ಗ್ಯಾಸ್‌ಸ್ಟೌಅನ್ನು ಜೊತೆಗೆ ಸಾಗಿಸುತ್ತಿದ್ದಾನೆ. ಬೀದಿಯಲ್ಲಿ ಸಿಕ್ಕಿದ ಗ್ರಾಹಕರಿಗೆ ಅಲ್ಲಿಯೇ ಕುಳಿತು ಸಮೋಸವನ್ನು ಕರಿದು ಕೊಡುತ್ತಿದ್ದಾನೆ.

ಬಾಣಲೆಯಿಟ್ಟಿರುವ ಗ್ಯಾಸ್‌ಸ್ಟೌಅನ್ನು ತಂತಿಗಳ ಸಹಾಯದಿಂದ ಹಿಡಿಯಂತೆ ಕಟ್ಟಿಕೊಂಡು ಎಲ್ಲೆಂದರಲ್ಲಿ ಸಾಗಿಸುತ್ತಿದ್ದಾನೆ. ಕುದಿಯುವ ಎಣ್ಣೆಯಿರುವ ಬಾಣಲೆಯನ್ನು ಎತ್ತಿಕೊಂಡೊಯ್ಯುತ್ತಿರುವುದು ವಿಡಿಯೊದಲ್ಲಿದೆ.

ಹಣ ಮಾಡಲು ನಾನಾ ಮೋಸದ ಮಾರ್ಗಗಳನ್ನು ಹಿಡಿಯುವವರೇ ಹೆಚ್ಚಿರುವ ಸಮಾಜದಲ್ಲಿ ಹೊಟ್ಟೆ ಪಾಡಿಗಾಗಿ ಬಿಸಿ ಎಣ್ಣೆಯ ಜೊತೆಗೆ ಶ್ರಮ ಪಡುತ್ತಿರುವ ಹುಡುಗ ನಿಜವಾದ ಹೀರೋ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಶ್ರಮಿಕರಿಂದ ಖರೀದಿಸಬೇಕು ಎಂದು ಕರೆ ಕೊಡುತ್ತಿದ್ದಾರೆ.

ADVERTISEMENT

'ಶ್ರಮಿಕ ಹುಡುಗನಿಗೆ ದೇವರು ಒಳ್ಳೆಯದು ಮಾಡಲಿ. ತುಂಬ ಬಿಸಿಯಿರುವುದನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುವುದನ್ನು ನೋಡಿ ಹೃದಯ ತುಂಬಿ ಬಂತು. ಎಣ್ಣೆಯೂ ಶುದ್ಧವಾಗಿರುವುದು ಕಾಣಿಸುತ್ತದೆ. ಶ್ರಮದ ನಡುವೆ ಗ್ರಾಹಕರಿಗೆ ಉತ್ತಮ ಪದಾರ್ಥವನ್ನು ನೀಡಬೇಕು ಎಂಬ ಆಶಯ ಹೊಂದಿರುವುದು ಇದರಿಂದ ತಿಳಿಯುತ್ತದೆ' ಎಂದು ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ಕಮೆಂಟ್‌ ಮಾಡಿದ್ದಾರೆ.

'ಯೂಟ್ಯಬ್‌ ಸ್ವಾದ್‌ ಅಫಿಶಿಯಲ್‌' (youtubeswadofficial) ಇನ್‌ಸ್ಟಾಗ್ರಾಮ್‌ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ₹10ಕ್ಕೆ 4 ಸಮೋಸಗಳನ್ನು ಮಾರಟ ಮಾಡುತ್ತಿರುವುದಾಗಿ ವಿಡಿಯೊದಲ್ಲಿ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.