ADVERTISEMENT

ಕೆಲಸಕ್ಕೆ ಮಾತ್ರವಲ್ಲ, ಇಂಟರ್ನ್‌ಗೂ ಭತ್ಯೆಯಿಲ್ಲ: Zepto ವಿತರಕನಾದ ಹುಡುಗನ ವ್ಯಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 6:24 IST
Last Updated 19 ಜನವರಿ 2026, 6:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಇತ್ತೀಚೆಗೆ ಪದವಿ ಮುಗಿದರೂ ಕೆಲಸ ಸಿಗುತ್ತಿಲ್ಲ, ಸಿಕ್ಕ ಕೆಲಸದಲ್ಲೂ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂದು ಅಲವತ್ತುಕೊಳ್ಳುವವರ ಸಂಖ್ಯೆಯೇ ಅಧಿಕವಾಗಿದೆ. ಈ ನಡುವೆ ಹಣ ಪಾವತಿಸುವ ಇಂಟರ್ನ್‌ಶಿಪ್‌ಗಳೂ ಸಿಗುತ್ತಿಲ್ಲ ಎಂದು ಯುವಕನೊಬ್ಬ ಕ್ವಿಕ್ ಕಾಮರ್ಸ್‌ ಕಂಪನಿಯಾದ ಜೆಪ್ಟೊದ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿರುವ ಸುದ್ದಿ ಚರ್ಚೆಯಾಗುತ್ತಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸ್ವಪ್ನಿಲ್‌ ಕೊಮ್ಮಾವರ್ ಎನ್ನುವವರು ಈ ಬಗ್ಗೆ ಬರೆದುಕೊಂಡಿದ್ದಾರೆ. 

ADVERTISEMENT

'ನನ್ನ ಸ್ನೇಹಿತನ ಸಹೋದರನನ್ನು ಭೇಟಿಯಾಗಿದ್ದೆ. ಆತ ಪದವಿ ಓದುತ್ತಿದ್ದಾನೆ. ಕಾಲೇಜಿನ ಸಮಯ ಮುಗಿದ ಬಳಿಕ ಆತ ಜೆಪ್ಟೊದಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದಾನೆ. ಆರ್ಡರ್‌ಗಳನ್ನು ಗ್ರಾಹಕರ ಮನೆಗೆ ತಲುಪಿಸಿ ಒಂದಿಷ್ಟು ಹಣ ಸಂಪಾದಿಸುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ಯಾಕೆ ಇಂಟರ್ನಶಿಪ್‌ ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಕೇಳಿದ್ದಕ್ಕೆ ಆತ ‘ಇಂಟರ್ನ್‌ಶಿಪ್‌ಗಳನ್ನು ಪಡೆಯುವುದು ಅಥವಾ ಸೇರಿಕೊಳ್ಳುವುದು ಬಹಳ ಸುಲಭ. ಆದರೆ, ಹಣ ಪಾವತಿಸುವ ಇಂಟರ್ನ್‌ಶಿಪ್‌ಗಳು ಸಿಗುವುದು ಕಷ್ಟ ಎಂದಿದ್ದಾನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಕನಿಷ್ಠ ಪಕ್ಷ ಹಣವಾದರೂ ಬರುತ್ತದೆ ಎಂದು ಅರೆಕಾಲಿಕ ಕೆಲಸವನ್ನು ಆರಿಸಿಕೊಂಡಿದ್ದಾನೆ. ಖುಷಿಯ ವಿಚಾರ ಎಂದರೆ ಕೆಲಸ ಅಥವಾ ಇಂಟರ್ನ್‌ಶಿಪ್ ಸಿಗುತ್ತಿಲ್ಲವೆಂದು ಸುಮ್ಮನೆ ಕುಳಿತಿಲ್ಲ. ದೊಡ್ಡ ಕೆಲಸವಲ್ಲ. ದೊಡ್ಡ ಸಂಬಳವೂ ಅಲ್ಲ. ಆದರೆ ಒಂದು ದೊಡ್ಡ ಪಾಠ!’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ, ಈ ಪೋಸ್ಟ್‌ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೃತ್ತಿಪರರು, ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವರು ಈ ಬಗ್ಗೆ ಕಮೆಂಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. 

ಬಳಕೆದಾರರೊಬ್ಬರು ಕಮೆಂಟ್‌ ಮಾಡಿ, ‘ಇದು ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಕೆಲಸದ ಬಗ್ಗೆ ಅಲ್ಲ, ಮನಸ್ಥಿತಿಯ ಬಗ್ಗೆ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ‘ಪಾಶ್ಚಿಮಾತ್ಯ ಶಿಕ್ಷಣ ವ್ಯವಸ್ಥೆಗಳಲ್ಲಿ ಜೀವನ ಕಲಿಕೆಯ ಭಾಗವಾಗಿ ಈ ರೀತಿ ವಿಧಾನವನ್ನು ಅನುಸರಿಸುತ್ತಾರೆ. ಅಧ್ಯಯನದ ಸಮಯದಲ್ಲಿ ಕೆಲಸಗಳನ್ನು ಮಾಡುವ ಮೂಲಕ ಮಕ್ಕಳು ಹಣಕಾಸು, ಸಂವಹನ ಮತ್ತು ಒಟ್ಟಾರೆ ನಾಯಕತ್ವದ ಬಗ್ಗೆ ಬಹಳಷ್ಟು ಕಲಿಯುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು, ‘ಭಾರತದಲ್ಲಿ  ಅನೇಕ ಕಂಪನಿಗಳಲ್ಲಿ ಇಂಟರ್ನ್‌ಗಳಿಗೆ ಹಣ ಪಾವತಿಸುವುದಿಲ್ಲ, ಇಂಟರ್ನ್‌ಶಿಪ್‌ಗಳು ಎಂದರೆ ನಮ್ಮ ದೇಶದಲ್ಲಿ ಶೋಷಣೆಯಾಗಿದೆ. ನಿಜ ಜೀವನದ ಕಲಿಕೆ ಇಲ್ಲದಿದ್ದರೆ, ಹಣ ಪಾವತಿಯೂ ಇಲ್ಲದೆ ಇದ್ದರೆ ಅಂತಹ ಇಂಟರ್ನ್‌ಶಿಪ್‌ಗಳು ಹಗರಣದಂತೆ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.