ADVERTISEMENT

ಇದೋ ಇಲ್ಲಿದೆ ಮಕ್ಕಳಿಗಾಗಿ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಇದೋ ಇಲ್ಲಿದೆ ಮಕ್ಕಳಿಗಾಗಿ ಸಹಾಯವಾಣಿ
ಇದೋ ಇಲ್ಲಿದೆ ಮಕ್ಕಳಿಗಾಗಿ ಸಹಾಯವಾಣಿ   

1098- ಇದು ನೆರವಿನ ಅಗತ್ಯ ಇರುವ ಮಕ್ಕಳಿಗಾಗಿ ದೇಶದಾದ್ಯಂತ 24 ಗಂಟೆಯೂ ಕಾರ್ಯ ನಿರ್ವಹಿಸುವ ಉಚಿತ ತುರ್ತು ದೂರವಾಣಿ ಸೇವೆ. ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್‌ಗಾಗಿ ದೂರಸಂಪರ್ಕ ಇಲಾಖೆ ಈ ಸಂಖ್ಯೆಯನ್ನು ಮಂಜೂರು ಮಾಡಿದೆ.

ಬೀದಿ ಮಕ್ಕಳು, ಬಾಲ ಕಾರ್ಮಿಕರು, ಮನೆಗೆಲಸದವರು, ಕುಟುಂಬ, ಶಾಲೆ ಅಥವಾ ಸಂಸ್ಥೆಗಳಲ್ಲಿ ದೌರ್ಜನ್ಯಕ್ಕೆ ತುತ್ತಾಗುವವರು, ಲೈಂಗಿಕ ಕಾರ್ಯಕರ್ತರು, ಪೋಷಕರಿಂದ ದೂರವಾದವರು, ಅಪಘಾತಕ್ಕೆ ತುತ್ತಾದವರು...

ಹೀಗೆ ನಾನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿ ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನ ಬಯಸುತ್ತಿರುವ ಮಕ್ಕಳು ಅಥವಾ ಅವರ ಬಗ್ಗೆ ಕಳಕಳಿ ಉಳ್ಳವರು ಈ ಸಂಖ್ಯೆಗೆ ಕರೆ ಮಾಡಬಹುದು.  ಪ್ರಸ್ತುತ ದೇಶದ 184 ನಗರಗಳಲ್ಲಿ ಈ ಸೇವೆ ಕಾರ್ಯ ನಿರ್ವಹಿಸುತ್ತಿದೆ.

ಸೇವಾ ಮನೋಭಾವ ಹೊಂದಿದ ಸಂಸ್ಥೆಗಳು, ಸಮುದಾಯಗಳು ಮತ್ತು ಕಳಕಳಿ ಇರುವ ವ್ಯಕ್ತಿಗಳ ನೆರವಿನಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಮತ್ತು ತುರ್ತು ಸಂದರ್ಭಗಳಲ್ಲಿ 25 ವರ್ಷದವರೆಗಿನ ಯುವಜನರವರೆಗೂ ಈ ಕೇಂದ್ರ ಸಹಾಯಹಸ್ತ ಚಾಚುತ್ತದೆ. ಕರೆ ಬಂದ ಗರಿಷ್ಠ 60 ನಿಮಿಷದೊಳಗೆ ಸೇವಾ ತಂಡ ಮಗುವಿನ ಬಳಿ ಇರುತ್ತದೆ.

ಮಗುವಿನ ಸ್ಥಿತಿಗತಿ ಮತ್ತು ಇಷ್ಟಾನಿಷ್ಟ ಆಧರಿಸಿ ಅದನ್ನು ಮರಳಿ ಮನೆಗೆ, ಪೊಲೀಸ್ ಠಾಣೆಗೆ, ಕಲ್ಯಾಣ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಮಕ್ಕಳು ಮತ್ತು ಪುನರ್ವಸತಿ ಸಂಸ್ಥೆಗಳ ನಡುವೆ ಸಂಪರ್ಕ ಸೇತುವಾಗಿಯೂ ಕಾರ್ಯ ನಿರ್ವಹಿಸುತ್ತದೆ.

ರಾಜ್ಯದಲ್ಲೂ ಸೇವೆ ಲಭ್ಯ

ನಮ್ಮ 12 ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ. ಅವುಗಳೆಂದರೆ ಬೆಂಗಳೂರು, ಮಂಗಳೂರು, ಗುಲ್ಬರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ಬಳ್ಳಾರಿ, ರಾಯಚೂರು, ಬೀದರ್, ಧಾರವಾಡ, ಶಿವಮೊಗ್ಗ. ಇತರ ಜಿಲ್ಲೆಗಳಿಗೂ ಸೇವೆ ವಿಸ್ತರಿಸುವ ಪ್ರಯತ್ನ ಪ್ರಗತಿಯಲ್ಲಿದೆ.

ಈವರೆಗೆ ಬಿಎಸ್‌ಎನ್‌ಎಲ್ ದೂರವಾಣಿಯಿಂದ ಮಾತ್ರ ಕರೆ ಮಾಡಲು ಸಾಧ್ಯವಾಗುತ್ತಿತ್ತು. ಹೀಗಾಗಿ ತಿಂಗಳಿಗೆ ಒಟ್ಟಾರೆ ಕೇವಲ 100-150 ಕರೆಗಳು ಬರುತ್ತಿದ್ದವು. ಇದೀಗ ಏರ್‌ಟೆಲ್, ವೊಡಾಫೋನ್, ಡೊಕೊಮಾದಂತಹ ಖಾಸಗಿ ಸಂಪರ್ಕದ ಮೊಬೈಲ್‌ಗಳಿಂದಲೂ ಕರೆ ಮಾಡಬಹುದಾದ್ದರಿಂದ 13 ಸಾವಿರದಿಂದ 14 ಸಾವಿರ ಕರೆಗಳು ಬರುತ್ತಿವೆ.

ಆದರೆ ಬೇರೆ ಜಿಲ್ಲೆಗಳಿಂದ ಬರುವ ಖಾಸಗಿ ದೂರವಾಣಿ ಕರೆಗಳು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಾಸ್ಕೊ ಮತ್ತು ಅಪ್ಸಾ ಸಂಸ್ಥೆಗಳ ನೆರವಿನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಚೈಲ್ಡ್‌ಲೈನ್ ಕೇಂದ್ರದ ಮುಖ್ಯ ಕಚೇರಿಗೆ ಬರುತ್ತವೆ. ಬಳಿಕ ಈ ಸಂದೇಶವನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ.

`ಬಸ್ಸು, ರೈಲು ನಿಲ್ದಾಣಗಳಿಂದಲೇ ಮಕ್ಕಳಿಂದ ಹೆಚ್ಚಾಗಿ ನಮಗೆ ಕರೆಗಳು ಬರುತ್ತವೆ. ತಿಂಗಳಿಗೆ ಕನಿಷ್ಠ ನಾಲ್ಕು ಶಾಲೆಗಳು ಮತ್ತು ಕೊಳೆಗೇರಿಗಳಲ್ಲಿ ಭಿತ್ತಿಪತ್ರ, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಇತ್ಯಾದಿಗಳ ಮೂಲಕ ಸಹಾಯವಾಣಿಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ.

ಪಬ್ಲಿಕ್ ಬೂತ್‌ಗಳ ಮೂಲಕ ಸ್ವತಃ ಕರೆ ಮಾಡಿಕೊಂಡು, ಈ ಸಂಖ್ಯೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಆಗಾಗ್ಗೆ ಪರೀಕ್ಷಿಸುತ್ತಿರುತ್ತೇವೆ~ ಎಂದು ಹೇಳುತ್ತಾರೆ ಬೆಂಗಳೂರಿನ ಬಾಸ್ಕೊ ಚೈಲ್ಡ್‌ಲೈನ್ ಕೇಂದ್ರದ ಸಂಚಾಲಕರಾದ ಜೆನ್ನಿಫರ್.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.