ADVERTISEMENT

ಪಿಜಿ ಲೈಫ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಕಾಲೇಜು ಮುಗಿಸಿ ಮನೆಯಲ್ಲಿದ್ದಾಗ ಅಮ್ಮ ಏನಾದ್ರೂ ಕೆಲಸ ಹೇಳಿದ್ರೆ `ಹೋಗಮ್ಮ ನಂಗೆ ಆಗಲ್ಲ. ಏನು ಕಾಟ ಕೊಡ್ತೀಯಾ ಈಗ ತಾನೇ ಪರೀಕ್ಷೆ ಮುಗಿಸಿ ಸ್ವಲ್ಪ ವಿಶ್ರಾಂತಿ ತೆಗೋಳೋಣ ಅಂದ್ರೆ ನಿಂದ್ ಬೇರೆ~ ಅಂತ ಗೊಣಗಿಕೊಂಡೇ ಕೆಲಸ ಮಾಡ್ತಿದ್ದೆ.

ಅಮ್ಮ ಏನಾದ್ರು `ಬರೇ ಟಿ. ವಿ. ನೋಡ್ತೀಯ, ಮನೆ ಕೆಲಸ ಮಾಡಲ್ಲ~ ಅಂತ ರೇಗಿದ್ರೆ ಊಟ ಮಾಡದೆ ಹಠ ಹಿಡಿದು ಕೂರ್ತಿದ್ದೆ. `ಅಯ್ಯೋ ದೇವ್ರೆ ಎಲ್ಲಾದ್ರೂ ದೂರದ ಊರಲ್ಲಿ ಕೆಲಸ ಸಿಗ್ಲಪ್ಪ ..ಆಗಾದ್ರು ಇವರ ಕಾಟ ತಪ್ಪುತ್ತೆ~ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ.

ದೇವರಿಗೆ ನನ್ನ ಬೇಡಿಕೆ ಮುಟ್ಟಿತೋ ಅಥವಾ ನನ್ನ ಗ್ರಹಚಾರವೋ ಅಂತೂ ಇಂತು ಒಂದು ಸರ್ಕಾರಿ ಕೆಲಸ ನನ್ನ ಇಚ್ಛೆಯಂತೆಯೇ ದೂರದ ಊರಿನಲ್ಲೇ ಸಿಕ್ಕಿತು. ಮನೆಯಲ್ಲಿ ತಂದೆ ತಾಯಿಗೆ ಮಗಳಿಗೆ ಕೆಲಸ ಸಿಕ್ಕಿದ ಸಂಭ್ರಮ.
 
ತಮ್ಮ ಮಗಳು ಏನೂ ಬೇಕಾದ್ರೂ ನಿಭಾಯಿಸುತ್ತಾಳೆ ಎಂಬ ನಂಬಿಕೆ ನಾನು ಹೊಸ ಹುರುಪಿನಿಂದ ಕಣ್ಣಿನಲ್ಲಿ ಆಸೆಯನ್ನು ತುಂಬಿಕೊಂಡೇ ಕೆಲಸಕ್ಕಾಗಿ ತುಮಕೂರಿಗೆ ಬಂದೆ. ಹೊಸ ಪ್ರದೇಶ, ದೊಡ್ಡ ನಗರ ಬೇರೆ.

ಅಬ್ಬಾ! ಎಷ್ಟು ಚೆನ್ನಾಗಿದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಹೊಸ ಪರಿಸರವನ್ನು ಸವಿದೆ. ಅಪ್ಪ ನನ್ನ ಜೊತೆ ಬಂದು ಒಳ್ಳೆ ಪಿ. ಜಿ. ನೋಡಿ ನನ್ನನ್ನು ಅಲ್ಲಿಗೆ ಸೇರಿಸಿಯೂ ಆಯಿತು. ನಾನು ನನ್ನ ರೂಮ್ ಮೇಟ್ಸ್ ಹಾಗೂ ನನ್ನ ಸಹೋದ್ಯೋಗಿಗಳ ಜೊತೆ ಹೊಂದಿಕೊಂಡು ಹೊಸ ಜೀವನ ಚೆನ್ನಾಗಿದೆ ಅಂದುಕೊಂಡೆ.

ಆದ್ರೆ ಅಮ್ಮ, ಅಪ್ಪ, ತಮ್ಮನ ಪ್ರೀತಿಯ ಅರಿವು ಈಗ ನನ್ನ ಕಾಡುತ್ತಾ ಇದೆ. ಪ್ರತಿ ಕ್ಷಣ, ಪ್ರತಿ ದಿನ ಅವರು ನನ್ನ ಜೊತೆ ಇರ್ಬೇಕು ಅನ್ನಿಸ್ತಾ ಇದೆ. ಅಮ್ಮನ ಜೊತೆ ಏಟು ತಿಂದಿದ್ದು, ತಮ್ಮನ ಜೊತೆ ಜಗಳ ಆಡಿದ್ದು, ಅಪ್ಪನ ಜೊತೆ ತರಲೆ ಮಾಡಲು ಹೋಗಿ ಬೈಯಿಸಿಕೊಂಡಿದ್ದು, ಪ್ರತಿ ದಿನ ಕಾಡುತ್ತೆ.
 
ಮನೆಯವರ ನೆನಪಾದಾಗ ಅವರ ಫೋಟೋನ ಹಾಗೆ ಮೊಬೈಲ್‌ನಲ್ಲಿ ನೋಡ್ತಾನೇ ಇರಬೇಕು ಅನ್ನಿಸುತ್ತೆ. ರಾತ್ರಿ ಏನಾದ್ರು ಕೆಟ್ಟ ಕನಸು ಬಿದ್ರೆ ಅಮ್ಮನ ಫೋಟೋ ಜೊತೆಯಲ್ಲಿ ಇಟ್ಟುಕೊಂಡು ಮಲಗಿ ಅಳಬೇಕು ಅನ್ನಿಸುತ್ತೆ. ಅಮ್ಮನ ಕಾಳಜಿ, ಪ್ರೀತಿ ಇದರ ಬೆಲೆ ಈಗ ನಂಗೆ ತಿಳೀತಾ ಇದೆ.

ಊಟ ಮಾಡದೆ ಇದ್ರೆ ಬೈದು ಅನ್ನ ಕಲಸಿ  ಅಮ್ಮನೇ ತಿನ್ನಿಸುತ್ತಾ ಇದ್ದಿದ್ದು ನೆನಪಾಗ್ತಾ ಇದೆ. ಪಿ. ಜಿ.ನಲ್ಲಿ ಮಾಡಿದ ಅಡುಗೆಗೆ ಹುಳಿ, ಖಾರ, ಉಪ್ಪು ಇಲ್ಲ ಅಂದ್ರೂ ಸುಮ್ನೆ ತಿನ್ನುವಾಗ ಅಳುನೇ ಬರುತ್ತೆ.

ಏನಾದ್ರೂ ಆರೋಗ್ಯ ಸರಿಯಿಲ್ಲದಿದ್ರೆ ಯಾರೂ ಏನು ಉಪಚಾರ ಮಾಡಿದ್ರು ಅಮ್ಮನ ತೊಡೆಯ ಆಸರೆ ಬೇಕು ಎಂದನಿಸುತ್ತೆ. ಆಫೀಸಿನಲ್ಲಿ ಏನಾದ್ರೂ ಕಹಿ ಘಟನೆ ನಡೆದರೆ ಅದನ್ನ ತಂದೆತಾಯಿಯ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತೆ.

ಸಹೋದ್ಯೋಗಿಗಳು ಅವರ ಮನೆಯಿಂದ ಮಧ್ಯಾಹ್ನ ಊಟಕ್ಕೆ ಅವರ ಅಮ್ಮಂದಿರ ಸ್ಪೆಷಲ್ ಕೈರುಚಿಯ ಅಡುಗೆ ಮಾಡಿಸಿಕೊಂಡು ಬಂದಾಗ, ಅವರ ಮನೆಯಲ್ಲಿ ನಡೆದ ಸವಿ ಹಾಸ್ಯದ ಘಟನೆಗಳನ್ನು ಹೇಳಿದಾಗ ನನ್ನ ಮನೆಯ ನೆನಪು ತುಂಬಾನೇ ಕಾಡುತ್ತೆ. ಏನೋ ಒಂಟಿತನದ ಜೀವನ ನನ್ನದು ಅಂತ ಅನ್ನಿಸುತ್ತೆ.

ಯಾವಾಗ 2-3 ದಿನ ರಜ ಬರುತ್ತೋ ಅಂತ ಕ್ಯಾಲೆಂಡರಿನಲ್ಲಿ ತಿಂಗಳಿಗಿಂತ ಮೊದಲೇ ನೋಡಿ ಊರಿಗೆ ಹೋಗಲು ತಯಾರಿ ಮಾಡೋದು. ಊರಿಗೆ ಹೋದ್ರೆ ಅಮ್ಮನ ಬೆಚ್ಚಗಿನ ಆಸರೆಯಲ್ಲಿ ದಿನ ಕಳಿಯೋದು. `ದೇವ್ರೆ ಏಕಾದ್ರು ದಿನ ಬೇಗ ಮುಗಿಯಿತ್ತೋ. ಕಾಲ ಹಾಗೇ ಇರಬಾರದ~ ಎಂದು ದೇವರಲ್ಲಿ ಬೇಡೋದು ಮಾಮೂಲಾಗಿದೆ.
 
ಪುನಃ ಕೆಲಸಕ್ಕೆ ಬರಬೇಕು ಅಂದ್ರೆ ಅಮ್ಮ, ಅಪ್ಪ, ತಮ್ಮನನ್ನು ತಬ್ಬಿ ಅತ್ತಾಗ, ಅಮ್ಮ `ಚಿಕ್ಕ ಮಗೂ ಥರ ಆಡ ಬೇಡ ನಿಂಗೆ ಕೆಲಸ ಮಾಡೋಕೆ ಇಷ್ಟ ಇಲ್ಲ ಅಂದ್ರೆ ಬಿಟ್ಟು ಬಿಡು~ ಅಂತಾನೇ ಕಣ್ಣಂಚಲ್ಲಿ ನೀರು ಬಂದ್ರು ಏನೂ ಆಗದ ಹಾಗೆ ಮಾತಾಡಿದ ಮುಖ ನಂಗೆ ಈಗಲೂ ನೆನಪಾಗ್ತಾ ಇದೆ.

ನಾನೂ ಇಷ್ಟು ಭಾವುಕಳಾ? ಎಂಬ ಆಶ್ಚರ್ಯ ನಂಗೆ ಈಗ ಆಗುತ್ತೆ. ಮನೆಯವರ ಆತ್ಮೀಯತೆಯ ಪರಿಚಯ ನನಗೆ ಆಗಿದ್ದು ಈಗಲೇ. ಆಧುನಿಕತೆಯ ಜೀವನದಲ್ಲಿ ಸ್ವಾವಲಂಬನೆಯ ಹಾದಿಯನ್ನು ಹಿಡಿಯಲು ಮನೆಯ ಹೊಸ್ತಿಲು ದಾಟಿ ಹುಡುಗಿಯರು ಬರೋದು ಅನಿವಾರ್ಯ. ಆದರೆ ಈ ಅನಿವಾರ್ಯತೆಯ ಹಿಂದೆ ಕಾಡುವ ಭಾವುಕತೆ ಮಾತ್ರ ಅಪಾರ, ಅಮೂಲ್ಯ.

ಪಿಜಿ ಲೈಫ್- ನೀವೂ ಬರೆಯಿರಿ
ಪಿಜಿ ಲೈಫ್‌ನ ಸುಖ-ದುಃಖಗಳನ್ನು ನೀವು ನಿಭಾಯಿಸಿದ ಪರಿ ಹೇಗೆ? ಕಾಡುವ ಅನಾಥ ಭಾವದೊಡನೇ, ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದು ಹೇಗೆ? ನಿಮ್ಮ ಮನದಾಳದ ಭಾವಗಳನ್ನು ನಮ್ಮಡನೆ ಹಂಚಿಕೊಳ್ಳಿ.

ನಿಮ್ಮ ಬರಹ ಚಿಕ್ಕದಾಗಿರಲಿ. ಆಪ್ತವಾಗಿರಲಿ. ಪ್ರಕಟಿತ ಬರಹಗಳಿಗೆ ಸಂಭಾವನೆ ಉಂಟು. ಬರಹ ಕಳಿಸ ಬೇಕಾದ
ವಿಳಾಸ
 ಸಂಪಾದಕರು, ಭೂಮಿಕಾ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು 560001
ಇಮೇಲ್ - bhoomika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT