ADVERTISEMENT

ನೋಡಿ ಸ್ವಾಮಿ ನಾವಿರೋದೇ ಹೀಗೆ..!: ಕುಂಕುಮ ಹಚ್ಚಲ್ಲ. ಹಚ್ಚಬಾರದು ಅಂತೇನೂ ಇಲ್ಲ

ಸುಶೀಲಾ ಡೋಣೂರ
Published 10 ಮಾರ್ಚ್ 2023, 19:30 IST
Last Updated 10 ಮಾರ್ಚ್ 2023, 19:30 IST
   

ಹೌದು ಸ್ವಾಮಿ, ನಾವು ಕುಂಕುಮ ಹಚ್ಚಲ್ಲ. ಹಚ್ಚಬಾರದು ಅಂತೇನೂ ಇಲ್ಲ. ಅದರ ಮೇಲೆ ಸಿಟ್ಟು, ತಿರಸ್ಕಾರವೇನೂ ಇಲ್ಲ. ಅದೊಂದು ಚಂದದ ಅಲಂಕಾರ, ಮುಖದ ಅಂದ ಹೆಚ್ಚಿಸುವಂಥದ್ದು... ಸೀರೆಯಂಥ ಸಾಂಪ್ರದಾಯಿಕ ದಿರಿಸು ಧರಿಸಿದಾಗಲಂತೂ ಕುಂಕುಮದ ಇರುವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಇದಷ್ಟೆ ಅದರ ಗುರುತು. ಜಾತಿ–ಧರ್ಮ–ಸಂಪ್ರದಾಯ–ಸಂಸ್ಕೃತಿ ಅಂತನ್ನುವುದನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದಾಗ, ಅದೊಂದು ಅಪ್ಪಟ ಸಿಂಗಾರಕ್ಕೆ ಬಳಸುವ ಪುಡಿ.

ಹಾಗೆ ನೋಡಿದರೆ ನಮಗ್ಯಾರಿಗೂ ಕುಂಕುಮದ ಬಗ್ಗೆ ಸಮಸ್ಯೆ ಎನ್ನುವುದಿಲ್ಲ. ಕುಂಕುಮವೂ ಈ ಬಗ್ಗೆ ತಗಾದೆ ತೆಗೆದಿಲ್ಲ. ಯಾರೋ ದಾರಿಲಿ ಹೋಗುವವ ಬಂದು, ‘ಯಾಕಮ್ಮ ಕುಂಕುಮ ಇಟ್ಟಿಲ್ಲ? ಗಂಡ ಇದ್ದಾನೆ ತಾನೆ?’ ಅಂತ ಕಣ್ಣಗಲಿಸಿ ಕೇಳುವುದನ್ನು ನೋಡಿದರೆ ನಗು ಬರುತ್ತದೆ, ಮತ್ತೇನಿಲ್ಲ.

ಆದರೂ, ಖರೆ ಹೇಳಬೇಕೆಂದರೆ ದಿನವೂ ಕುಂಕುಮ ಇಡಲು ಆಗುವುದಿಲ್ಲ. ಕಾರಣವಿಷ್ಟೆ, ಕೆಲವೊಮ್ಮೆ ಮನೆಯಿಂದ ಹೊರಡುವ ಮುನ್ನ ಕುಂಕುಮ ನೆನಪಾಗುವುದಿಲ್ಲ. ಇಡಲೇಬೇಕು ಅನ್ನುವ ಜರೂರೂ ಕಾಣುವುದಿಲ್ಲ. ಮಾರ್ಗಮಧ್ಯೆ ಯಾರಾದರೂ ಅಡ್ಡಗಟ್ಟಿ ‘ಯಾಕೆ ಕುಂಕುಮ ಇಟ್ಟಿಲ್ಲ?’ ಅಂತ ಗದರಬಹುದೆನ್ನುವ ಅಂಜಿಕೆಯೂ ಇರಲಿಲ್ಲ (ಈವರೆಗೆ). ಹೀಗಾಗಿ, ಕೆಲವೊಮ್ಮೆ ಕುಂಕುಮ ಇಟ್ಟೂ, ಕೆಲವೊಮ್ಮೆ ಪುಟ್ಟ ಸಿಂಧೂರ ಅಥವಾ ಬಿಂದಿ ಇಟ್ಟೂ, ಒಮ್ಮೊಮ್ಮೆ ಏನೂ ಇಲ್ಲದೆಯೂ ಮನೆಯಿಂದ ಆಚೆ ಹೊರಡುವುದಿತ್ತು.

ಕುಂಕುಮ ಕೆಲವರಿಗೆ ತುಂಬ ಇಷ್ಟವಾಗುತ್ತದೆ. ಅವರು ದಿನವೂ ಕುಂಕುಮವಿಟ್ಟುಕೊಳ್ಳುತ್ತಾರೆ. ಕೆಲವರಿಗೆ ಹಣೆಯ ಮೇಲೆ ದೊಡ್ಡ ಕುಂಕುಮವೇ ಚಂದ, ಇನ್ನೂ ಕೆಲವರ ಮುಖಕ್ಕೆ ಪುಟ್ಟ ಬಿಂದಿ ಒಪ್ಪುತ್ತದೆ, ಕೆಲವರಿಗೆ ಕೆಂಪು ಇ಼ಷ್ಟ, ಕೆಲವರಿಗೆ ಕಪ್ಪು. ಮತ್ತೆ ಕೆಲವರು ಅಂದಿನ ದಿರಿಸಿಗೆ ಮ್ಯಾಚ್‌ ಆಗುವ ಬಣ್ಣ ಬಣ್ಣದ ಬಿಂದಿ ಧರಿಸುತ್ತಾರೆ. ಕೆಲವರಂತೂ ಬಿಂದಿ–ಕುಂಕುಮದ ಗೋಜಿಗೇ ಹೋಗುವುದಿಲ್ಲ. ಮತ್ತೆ ಕೆಲವರಿಗೆ ಅದೇನಿದ್ದರೂ ಹಬ್ಬಕ್ಕೆ, ಪೂಜೆ–ಪುನಸ್ಕಾರಗಳಂತಹ ಸಾಂಪ್ರದಾ ಯಿಕ ಕಾರ್ಯಕ್ರಮಗಳಿಗೆ ಹೋಗುವಾಗ ಮಾತ್ರ ನೆನಪಾಗುತ್ತದೆ. ಇನ್ನೂ ಕೆಲವರಿದ್ದಾರೆ, ಅವರಿಗೆ ಕುಂಕುಮ ಅಥವಾ ಬಿಂದಿ ಇಟ್ಟರೆ ಅಲರ್ಜಿ. ಹಣೆಯೆಲ್ಲಾ ತುರಿಕೆ, ಚರ್ಮ ಸುಲಿಯುವ ಹೆದರಿಕೆ. ಹೀಗೆ ಕುಂಕುಮ ಈಗ ಅವರವರ ಅನುಕೂಲ, ಆಸಕ್ತಿ, ಅಭಿರುಚಿ ಹಾಗೂ ಆಯ್ಕೆಗೆ ಬಿಟ್ಟಿದ್ದು...

ADVERTISEMENT

ಅಂದಹಾಗೆ, ಈ ಕುಂಕುಮಕ್ಕೂ–ಗಂಡನಿಗೂ ಏನು ಸಂಬಂಧ?!

ಇವೆರಡಕ್ಕೂ ಅಂಥ ಗಾಢ ಸಂಬಂಧ ಇದೆ ಅಂತ ಅನಿಸಲ್ಲ. ಅಜ್ಜಿ ಹೇಳುತ್ತಿದ್ದಳು ದೊಡ್ಡ ಕುಂಕುಮ ಇಟ್ಟರೆ ಗಂಡನ ಆಯಸ್ಸು ಜಾಸ್ತಿ ಅಂತ. ಹಾಗೆ ಹೇಳುತ್ತ ಹೇಳುತ್ತ ಹಣೆ ತುಂಬ ಕುಂಕುಮವಿಡುತ್ತಿದ್ದ ಅಜ್ಜಿ, ತನ್ನ 32ನೇ ವಯಸ್ಸಿಗೆ ಗಂಡನ್ನ ಕಳೆದುಕೊಂಡಾಗ ಅಚ್ಚರಿಯಾಯ್ತು ದೊಡ್ಡ ಕುಂಕುಮಕ್ಕೂ ಗಂಡನ ಆಯಸ್ಸಿಗೂ ಎಂಥ ಸಂಬಂಧ ಅಂತ... ಅಜ್ಜಿಯ ಮಾತು ಕೇಳಿ ಅವಳಷ್ಟೇ ದೊಡ್ಡ ಸೈಜಿನ ಬಿಂದಿ ಹಚ್ಚುತ್ತಿದ್ದ ದೊಡ್ಡಮ್ಮನ ಗಂಡ ಅರ್ಧ ದಾರಿಯಲ್ಲೇ ಎದ್ದು ಹೋದಾಗ ಪಕ್ಕಾ ಆಯ್ತು, ಈ ಕುಂಕುಮಕ್ಕೂ–ಗಂಡನಿಗೂ ಸಂಬಂಧವೇ ಇಲ್ಲ ಅಂತ.

ಅವರಿಗಿಂತ ಸಣ್ಣ ಕುಂಕುಮ ಹಚ್ಚುತ್ತ, ತನಗೆ ಬೇಸರವಾದಾಗ, ಸಮಯ ಸಿಗದೇ ಇದ್ದಾಗ ಕುಂಕುಮವನ್ನೇ ಇಡದೇ ಖಾಲಿ ಹಣೆ ಬಿಟ್ಟುಕೊಂಡು ಓಡಾಡುತ್ತ, ಅಜ್ಜಿಯಿಂದಲೂ, ದೊಡ್ಡಮ್ಮನಿಂದಲೂ ಬೈಸಿಕೊಳ್ಳುತ್ತಿದ್ದ ಅಮ್ಮ 80ರ ಹೊಸ್ತಿಲಲ್ಲೂ ಅಪ್ಪನೊಂದಿಗೆ ಜೊತೆಜೊತೆಯಾಗಿರುವುದನ್ನು ಕಂಡಾಗೆಲ್ಲಾ ಅನಿಸುತ್ತಿರುತ್ತದೆ, ಅರೆ! ಈ ಕುಂಕುಮಕ್ಕೂ ಗಂಡನಿಗೂ ಏನೇನೂ ಸಂಬಂಧವಿಲ್ಲವಲ್ಲ ಅಂತ…

ತನಗೆ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ, ಯಾರ ಮುಲಾಜೂ ಕಾಯದೆ ತನ್ನ ಹೊಟ್ಟೆಗೆ ತಾನು ದುಡಿದು ತಿನ್ನುವ ಸ್ವಾಭಿಮಾನಿ ಹೆಣ್ಣುಮಗಳನ್ನು ಹಾಗೆ ನಡುಬೀದಿಯಲ್ಲಿ ಪ್ರಶ್ನಿಸಿ ಮುಖಭಂಗ ಮಾಡಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ಅವರ ಹಣೆಗೆ ಊರಗಲದ ಕುಂಕುಮವನ್ನಿಟ್ಟು ಸಿಂಗರಿಸಿ ಖುಷಿ ಪಡುತ್ತಿದ್ದಾರೆ. ಇದು ಆಕ್ರೋಶವೂ ಹೌದು, ಸಂಭ್ರಮವೂ ಹೌದು...

ಅಷ್ಟಕ್ಕೂ, ತಮಗೆ ಕುಂಕುಮ ಇಷ್ಟ ಎಂದರೆ ತಾವು ಇಟ್ಟುಕೊಳ್ಳಲಿ... ಬೇರೆಯವರ ಹಣೆಯ ಕುಂಕುಮದ ಬಗ್ಗೆ ಮಾತಾಡಿ ಮರ್ಯಾದೆ ಕಳಕೊಳ್ಳುವುದು ಯಾಕೆ ಬೇಕಿತ್ತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.