ADVERTISEMENT

ಸದೃಢ ಕೂದಲಿಗೆ ನೆಲ್ಲಿಕಾಯಿ ಹೇರ್‌ಪ್ಯಾಕ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 8:41 IST
Last Updated 10 ಜೂನ್ 2020, 8:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೆಲ್ಲಿಕಾಯಿ ಎಂದಾಕ್ಷಣ ನೆನಪಾಗುವುದು ಉಪ್ಪಿನಕಾಯಿ. ನೋಡಿದಾಕ್ಷಣ ಬಾಯಲ್ಲಿ ನೀರೂರುವ ನೆಲ್ಲಿಕಾಯಿ ಕೂದಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಅಧಿಕ ಪೌಷ್ಟಿಕಾಂಶವಿದ್ದು ಕೂದಲು ಸದೃಢವಾಗಿ ಬೆಳೆಯಲು ಹಾಗೂ ಬುಡದಿಂದ ಗಟ್ಟಿಯಾಗಲು ನೆರವಾಗುತ್ತದೆ. ಅಲ್ಲದೇ ಕೂದಲು ಉದುರಿ ತೆಳುವಾಗುವುದನ್ನು ತಪ್ಪಿಸುತ್ತದೆ. ಕೂದಲು ಉದುರುತ್ತದೆ ಎಂದು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ವಸ್ತುಗಳನ್ನು ಬಳಸುವುದಕ್ಕಿಂತ ಮನೆಯಲ್ಲಿಯೇ ನೆಲ್ಲಿಕಾಯಿಯ ನೈಸರ್ಗಿಕ ಹೇರ್ ಪ್ಯಾಕ್ ತಯಾರಿಸಿ ಉಪಯೋಗಿಸಬಹುದು. ಇದರಿಂದ ಕೂದಲು ಉದುರುವುದನ್ನು ತಪ್ಪಿಸುವ ಜೊತೆಗೆ ತಲೆಹೊಟ್ಟನ್ನು ನಿವಾರಿಸಬಹುದು. ಜೊತೆಗೆ ನೆಲ್ಲಿಕಾಯಿಯಲ್ಲಿರುವ ಟ್ಯಾನಿನ್‌ ಅಂಶ ಕೂದಲಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ.

ನೆಲ್ಲಿಕಾಯಿ ಮತ್ತು ತೆಂಗಿನೆಣ್ಣೆ

ಮೊದಲು ತೆಂಗಿನೆಣ್ಣೆ ಹಾಗೂ ಆಲೀವ್‌ ಎಣ್ಣೆಯನ್ನು ಒಂದು ಬೌಲ್‌ನಲ್ಲಿ ಹಾಕಿ ಬಿಸಿ ಮಾಡಿ. ಅದಕ್ಕೆ ಎರಡು ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಆ ಎಣ್ಣೆಯನ್ನು ತಣ್ಣಗಾಗಲು ಬಿಡಿ. ಅದನ್ನು ತೆಳುವಾದ ಬಟ್ಟೆಯಿಂದ ಸೋಸಿ. ಸೋಸಿದ ಎಣ್ಣೆಯನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ.15 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್‌ ಮಾಡಿ. ಕನಿಷ್ಠ ಅರ್ಧ ಗಂಟೆ ಹಾಗೇ ಬಿಡಿ. ನಂತರ ಸಲ್ಫೇಟ್‌ ರಹಿತ ಶ್ಯಾಂಪೂ ಬಳಸಿ ತಲೆಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಕೂದಲ ಹಾನಿಯನ್ನು ತಪ್ಪಿಸಬಹುದಲ್ಲದೇ ಸೀಳಾಗದಂತೆ ತಡೆಯಬಹುದು. ಜೊತೆಗೆ ಕೂದಲಿನ ಹೊಳಪು ಹೆಚ್ಚಿ ಉದುರುವುದು ಕಡಿಮೆಯಾಗುತ್ತದೆ.

ADVERTISEMENT

ನೆಲ್ಲಿಕಾಯಿ ಮತ್ತು ಸೀಗೆಕಾಯಿ

ಒಂದು ಕಪ್‌ನಲ್ಲಿ 2 ಟೇಬಲ್ ಚಮಚ ನೆಲ್ಲಿಕಾಯಿ ಪುಡಿ ಹಾಗೂ 2 ಟೇಬಲ್ ಚಮಚ ಸೀಗೆಕಾಯಿ ಪುಡಿ ಹಾಗೂ 4 ಟೇಬಲ್ ಚಮಚ ನೀರು ಸೇರಿಸಿ. ಈ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ. 40 ನಿಮಿಷಗಳ ಕಾಲ ಇದನ್ನು ಹಾಗೇ ಬಿಡಿ. ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ಸೀಗೆಕಾಯಿ ಹಾಗೂ ನೆಲ್ಲಿಕಾಯಿ ಮಿಶ್ರಣ ಬಳಸಿದಾಗ ಶ್ಯಾಂಪೂ ಬಳಸುವ ಅವಶ್ಯಕತೆ ಇಲ್ಲ.ಈ ಪ್ಯಾಕ್‌ ಕೂದಲ ಬುಡವನ್ನು ಸದೃಢಗೊಳಿಸಿ ಕೂದಲು ದಟ್ಟವಾಗಿ ಬೆಳೆಯಲು ನೆರವಾಗುತ್ತದೆ.

ನೆಲ್ಲಿಕಾಯಿ ಹಾಗೂ ಮೊಟ್ಟೆ

ಎರಡು ಮೊಟ್ಟೆಯನ್ನು ಒಡೆದು ಕಪ್‌ನಲ್ಲಿ ಹಾಕಿ. ಅದಕ್ಕೆ ನೆಲ್ಲಿಕಾಯಿ ಪುಡಿ ಸೇರಿಸಿ. ಚೆನ್ನಾಗಿ ಪೇಸ್ಟ್‌ ತಯಾರಾಗುವವರೆಗೂ ಕಲೆಸಿ. ನಂತರ ಅದನ್ನು ಕೂದಲಿಗೆ ಹಚ್ಚಿ. ಇದನ್ನು 1 ಗಂಟೆ ಬಿಡಿ. ನಂತರ ತಣ್ಣೀರಿನಿಂದ ತಲೆಸ್ನಾನ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಮೊಟ್ಟೆಯಲ್ಲಿ ಪ್ರೊಟೀನ್ ಅಂಶ ಅಧಿಕವಿದ್ದು ಇದು ಕೂದಲ ಬೆಳವಣಿಗೆಗೆ ನೆರವಾಗುತ್ತದೆ.

ನೆಲ್ಲಿಕಾಯಿ ಹಾಗೂ ಲೋಳೆಸರ

ನೆಲ್ಲಿಕಾಯಿ ಪುಡಿ, ಲೋಳೆಸರ ಹಾಗೂ ತೆಂಗಿನೆಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಪೇಸ್ಟ್ ತಯಾರಿಸಿ. ಆ ಪೇಸ್ಟ್‌ಗೆ 3 ಟೇಬಲ್ ಚಮಚ ತುಳಸಿರಸ ಸೇರಿಸಿ ಮಿಶ್ರಣ ಮಾಡಿ. ಆ ಪೇಸ್ಟ್‌ ಅನ್ನು ಕೂದಲ ಬುಡಕ್ಕೆ ಹಚ್ಚಿ. ಅರ್ಧಗಂಟೆ ನಂತರ ಸ್ನಾನ ಮಾಡಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದಲ್ಲದೇ ಕೂದಲ ಹೊಳಪು ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.