
ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ನಾವು ಏನು ತಿನ್ನುತ್ತೇವೆ, ಏನು ಕುಡಿಯುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಚರ್ಮದ ಮೇಲೆ ಎಷ್ಟೇ ಲೋಷನ್, ಕ್ರೀಮ್‌ಗಳನ್ನು ಹಚ್ಚಿದರೂ ಅದು ಶೇ 20ರಷ್ಟು ಪರಿಣಾಮವನ್ನು ಮಾತ್ರ ಬೀರಬಲ್ಲದು. ಉಳಿದಂತೆ ನಾವು ಸೇವಿಸುವ ಆಹಾರದಲ್ಲಿ ಆರೋಗ್ಯವಿರುತ್ತದೆ.
ಮೊದಲಿಗೆ ನಾನು ಸಕ್ಕರೆ, ಬೆಲ್ಲ ಯಾವುದನ್ನೂ ಬಳಸುವುದಿಲ್ಲ. ಹಾಗೊಮ್ಮೆ ತಿನ್ನಲೇಬೇಕು ಎನ್ನುವ ಕಡುಬಯಕೆ ಶುರುವಾದರೆ ಒಂದು ಸ್ಕೂಪ್ ಐಸ್‌ಕ್ರೀಂ ಅನ್ನು ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ತಿನ್ನುತ್ತೇನೆ. ಕಾಫಿ, ಟೀ ಯಾವುದನ್ನೂ ಕುಡಿಯುವುದಿಲ್ಲ.
ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುವ ಗ್ರೀನ್ ಟೀಯನ್ನು ದಿನಕ್ಕೆ ನಾಲ್ಕು ಬಾರಿ ಕುಡಿಯುತ್ತೇನೆ. ಹಾಳಾದ ಚರ್ಮಕೋಶಗಳನ್ನು ಸರಿಪಡಿಸುವಲ್ಲಿ ಗ್ರೀನ್ ಟೀ ಮಹತ್ತರ ಪಾತ್ರವನ್ನು ವಹಿಸುತ್ತದೆ. ನನ್ನ ಊಟದ ತಟ್ಟೆಯಲ್ಲಿ ಬಗೆಬಗೆಯ ಹಣ್ಣು ಹಾಗೂ ತರಕಾರಿ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುತ್ತೇನೆ. ನಿತ್ಯ 10ರಿಂದ 12 ಲೋಟ ನೀರನ್ನು ಕಡ್ಡಾಯವಾಗಿ ಕುಡಿಯುತ್ತೇನೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕನಿಷ್ಠ ಐದು ಲೋಟಗಳಷ್ಟು ನೀರು ಕುಡಿದಿರುತ್ತೇನೆ.
6– 8 ಗಂಟೆ ಗಾಢ ನಿದ್ರೆ ಮಾಡುವುದು ಮುಖ್ಯವಾಗುತ್ತದೆ. ಉತ್ತಮ ನಿದ್ರೆ ಇಲ್ಲದೇ ಇದ್ದರೆ ಕಣ್ಣಿನ ಸುತ್ತ ಕಪ್ಪು ವರ್ತುಲ ಉಂಟಾಗುತ್ತದೆ. ಚರ್ಮ ಜೋತು ಬಿದ್ದ ಹಾಗೆ ಆಗುತ್ತದೆ. ನೆರಿಗೆಗಳು ಮೂಡಿ ಬೇಗ ವಯಸ್ಸಾದಂತೆ ಅನ್ನಿಸುತ್ತದೆ. ಮತ್ತೆ ಚರ್ಮ ಮೊದಲಿನಂತೆ ಆಗುವುದು ಕಷ್ಟ. ಹಾಗಾಗಿ, ಉತ್ತಮ ನಿದ್ರೆ ಕೂಡ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ನೀರು ಹಾಗೂ ಗ್ರೀನ್ ಟೀಯನ್ನು ಕುಡಿಯುತ್ತೇನೆ. ಮಲ್ಟಿವಿಟಮಿನ್, ಒಮೆಗಾ ತ್ರೀ ಮಾತ್ರೆಗಳು, ಕೊಲಾಜಿನ್ ಪೌಡರ್ ಸೇವಿಸುತ್ತೇನೆ. ನಿತ್ಯ ವ್ಯಾಯಾಮ ಮಾಡುವುದು ಬಹಳ ಮುಖ್ಯ. ವ್ಯಾಯಾಮ ಮಾಡಿ ಬೆವರಿದಷ್ಟೂ ಚರ್ಮ ಉತ್ತಮಗೊಳ್ಳುತ್ತದೆ. ಒಮ್ಮೊಮ್ಮೆ ಒಂದೊಂದು ಬಗೆಯ ವ್ಯಾಯಾಮ ಮಾಡುತ್ತೇನೆ. ಸದ್ಯಕ್ಕೆ ‘ಡಿಟಾಕ್ಸ್ ಡಿಸೆಂಬರ್’ ಪರಿಕಲ್ಪನೆಯಲ್ಲಿ, ಚೆನ್ನಾಗಿ ನೀರು ಕುಡಿಯುವುದು ಮತ್ತು ಪ್ರತಿದಿನ ಹತ್ತು ಸಾವಿರ ಹೆಜ್ಜೆ ಹಾಕುವುದನ್ನು ಕಡ್ಡಾಯ ಮಾಡಿಕೊಂಡಿದ್ದೇನೆ.
ಸಮಯ ಇದ್ದಾಗ ಏರೋಬಿಕ್ಸ್‌ಗೆ ಹೋಗುತ್ತೇನೆ. ಇನ್ನು ಚರ್ಮದ ಆರೈಕೆ ಮಾಡುವುದರಲ್ಲಿ ಅರ್ಧದಷ್ಟೂ ಕೂದಲ ಆರೈಕೆ ಮಾಡುವುದಿಲ್ಲ. ಹೇರ್ ಸ್ಟೈಲಿಂಗ್, ಕಲರಿಂಗ್, ಸ್ಟ್ರೈಟನಿಂಗ್ ಮಾಡಿಸುವುದು ಅನಿವಾರ್ಯ. ಅವುಗಳ ನಡುವೆ ಕೂದಲು ಉಳಿದಿರುವುದೇ ಹೆಚ್ಚು. ಹೇರ್‌ವಾಷ್, ಹೇರ್‌ಮಾಸ್ಕ್, ಕಂಡೀಷನರ್ ಅನ್ನು ಕಡ್ಡಾಯವಾಗಿ ಬಳಸುತ್ತೇನೆ. ಮನೆಮದ್ದು ಮಾಡುವಷ್ಟು ಸಮಯ ಇರುವುದಿಲ್ಲ. ಕೂದಲು ಚೆನ್ನಾಗಿ ಬೆಳೆಯಲು ಪ್ರೋಟೀನ್ ಇರುವ ಆಹಾರವನ್ನು ಹೆಚ್ಚು ಸೇವಿಸುತ್ತೇನೆ. ಕಲಾವಿದರು ಸ್ವಯಂ ಆರೈಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಕೆಲಸ ಹಾಗೂ ಸ್ವಯಂ ಆರೈಕೆಗೆ ಸರಿಯಾದ ವೇಳಾ
ಪಟ್ಟಿಯನ್ನು ಹಾಕಿಕೊಳ್ಳುತ್ತೇನೆ. ಆಂತರಿಕವಾಗಿ ಹೆಚ್ಚು ನೆಮ್ಮದಿ, ತೃಪ್ತ ಭಾವದಿಂದ ಇರುವವರು ಸಹಜವಾಗಿ ಖುಷಿಯಿಂದ ಇರುತ್ತಾರೆ. ಸೌಂದರ್ಯ ಎನ್ನುವುದು ಸಹಜವಾದ ಖುಷಿಯಲ್ಲಿ ಅಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.