ADVERTISEMENT

ಮದುಮಗಳಿಗೆ ಡಿಸೈನರ್‌ ಮಾಸ್ಕ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 19:30 IST
Last Updated 25 ಜೂನ್ 2020, 19:30 IST
ಮದುಮಗಳಿಗೆ ಡಿಸೈನರ್ ಮಾಸ್ಕ್
ಮದುಮಗಳಿಗೆ ಡಿಸೈನರ್ ಮಾಸ್ಕ್   
""
""

‘ಬಾಹುಬಲಿ’ಯ ಬಲ್ಲಾಳದೇವನ ಪಾತ್ರಧಾರಿ ರಾನಾ ದಗ್ಗುಬಾಟಿಯ ಭಾವಿ ಪತ್ನಿ ಮಿಹಿಕಾ ಬಜಾಜ್‌ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ. ಅವರು ಮನೆಯಲ್ಲಿ ನಡೆಯುತ್ತಿರುವ ಮದುವೆ ಸಿದ್ಧತೆಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು.

ಆ ಫೋಟೊಗಳಲ್ಲಿ, ಈರುಳ್ಳಿ ಬಣ್ಣದ, ಅದ್ದೂರಿ ವಿನ್ಯಾಸದ ಲೆಹೆಂಗಾ ತೊಟ್ಟಿರುವ ಮಿಹಿಕಾ ಮುದ್ದಾಗಿ ಕಾಣಿಸುತ್ತಿದ್ದರು. ಆದರೂ ಅವರನ್ನು ಗಮನಿಸುವಂತೆ ಮಾಡಿದ್ದು ಅವರು ಧರಿಸಿದ್ದ ಲೆಹಂಗಾ ಬಣ್ಣದ ಬಟ್ಟೆಯ ಮಾಸ್ಕ್‌. ಬಣ್ಣ ಮತ್ತು ವಿಶಿಷ್ಟ ವಿನ್ಯಾಸದ ಮಾಸ್ಕ್‌ನಲ್ಲಿ ಅವರು ಚಂದವಾಗಿ ಕಾಣುತ್ತಿದ್ದರು.

ಬದುಕಿನ ಹೊಸ ಘಟ್ಟಕ್ಕೆ ಕಾಲಿಡುವ ಘಳಿಗೆ ಮದುವೆ. ಆ ದಿನ ತಾನು ಅಂದವಾಗಿ ಕಾಣಬೇಕು ಎಂಬುದು ಪ್ರತಿ ಹೆಣ್ಣಿನ ಆಸೆ. ಆದರೆ ಈಗ ಕೊರೊನಾ ಸೋಂಕಿನ ಭೀತಿಯಿಂದಾಗಿ ಮದುವೆ ಸಮಾರಂಭದಲ್ಲಿ ಮಾಸ್ಕ್‌ ತೊಡುವುದು ಕಡ್ಡಾಯವಾಗಿದೆ. ಹೀಗಾಗಿಡಿಸೈನರ್‌ ಸೀರೆ, ಲೆಹೆಂಗಾದಂತೆಯೇ ಡಿಸೈನರ್‌ ಮಾಸ್ಕ್‌ ಕೂಡ ಟ್ರೆಂಡ್‌ ಆಗಿದೆ.

ADVERTISEMENT

ಕೊರೊನೋತ್ತರ ಕಾಲದಲ್ಲಿ ಮದುವೆ ಬಟ್ಟೆಗಳ ವಿನ್ಯಾಸದ ಪಟ್ಟಿಗೆ ಮಾಸ್ಕ್‌ ಕೂಡ ಸೇರಿಕೊಂಡಿದೆ.ಮದುಮಗಳು ಧರಿಸುವ ವಸ್ತ್ರದ ಬಣ್ಣ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಮಾಸ್ಕ್‌ಗಳನ್ನು ವಿನ್ಯಾಸ ಮಾಡಲಾಗುತ್ತದೆ. ಮದರಂಗಿ ಶಾಸ್ತ್ರ, ಗೌರಿ ಪೂಜೆ, ಮದುವೆ, ರಿಸೆಪ್ಷನ್‌ ಹೀಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಬಟ್ಟೆಗೆ ಹೊಂದಿಕೊಳ್ಳುವ ಹಾಗೇ ಮಾಸ್ಕ್‌ ವಿನ್ಯಾಸವಿರುತ್ತದೆ.

ವಸ್ತ್ರ ವಿನ್ಯಾಸಕಿ ಶಿಲ್ಪಾ ಪೂಜಾರಿ

‘ಮದುವೆಯಲ್ಲಿ ಬೆಲೆಬಾಳುವ, ಅದ್ದೂರಿ ವಸ್ತ್ರ ತೊಡುವಾಗ ಅದರ ಜೊತೆ ಮ್ಯಾಚಿಂಗ್‌ ಆಗದ ಮಾಸ್ಕ್‌ ತೊಟ್ಟರೆ ಅಂದವೇ ಹಾಳಾಗುತ್ತದೆ. ಆದರೆ, ಡಿಸೈನರ್‌ ಮಾಸ್ಕ್‌ ಸ್ಟೈಲಿಷ್‌ ಲುಕ್‌ ಕೊಡುತ್ತದೆ’ ಎನ್ನುತ್ತಾರೆ ಬೆಂಗಳೂರಿನಬಸವೇಶ್ವರ ನಗರದ ಟೈನಾಟ್‌ ಡಿಸೈನರ್‌ ಸಂಸ್ಥೆಯ ವಿನ್ಯಾಸಕಿ ಶಿಲ್ಪಾ ಪೂಜಾರಿ.

ಮದುಮಗಳು ತೊಡುವ ಸೀರೆ, ಲೆಹೆಂಗಾಕ್ಕೆ ಮ್ಯಾಚ್‌ ಆಗುವ ಹಾಗೇ ಮಾಸ್ಕ್‌ನಲ್ಲಿ ಎಂಬ್ರಾಯ್ಡರಿ, ಜರ್ದೋಸಿ ವಿನ್ಯಾಸ ಇರುತ್ತದೆ. ಈಮಾಸ್ಕ್‌ಗಳಿಗೆ ವಿಶೇಷವಾಗಿ ಖರ್ಚು ಮಾಡಬೇಕಿಲ್ಲ. ಬ್ಲೌಸ್‌, ಲೆಹೆಂಗಾ ಹೊಲಿದು, ಅದರಲ್ಲಿ ಉಳಿದ ಬಟ್ಟೆಯನ್ನು ಬಳಸಿ, ವಿನ್ಯಾಸ ಮಾಡುತ್ತೇವೆ.ಬ್ಲೌಸ್‌ನಂತೆ ಮುತ್ತು, ಹರಳು ಅಥವಾ ಎಂಬ್ರಾಯ್ಡರಿ ವರ್ಕ್‌ನಿಂದ ಮಾಸ್ಕ್‌ ವಿನ್ಯಾಸಗೊಳಿಸುತ್ತೇವೆ’ ಎಂದು ಅವರು ಡಿಸೈನರ್‌ ಮಾಸ್ಕ್‌ಗಳ ಕುರಿತು ಮಾಹಿತಿ ನೀಡಿದರು.

ಮದುಮಗನಿಗೂ ಮ್ಯಾಚಿಂಗ್‌ ಡಿಸೈನರ್‌ ಮಾಸ್ಕ್‌ ಟ್ರೆಂಡ್‌ ಆಗಿದೆ. ಆದರೆ ಮದುಮಗನ ಮಾಸ್ಕ್‌ಗಳು ಹೆಚ್ಚಾಗಿ ಡಿಸೈನ್‌ ರಹಿತ‌ ವಿನ್ಯಾಸದ್ದಾಗಿರುತ್ತವೆ.

ಈಗ ಸೀರೆ ಬ್ಲೌಸ್‌ ಹೊಲಿದುಕೊಡುವಾಗ, ಉಳಿಕೆ ಬಟ್ಟೆಯಿಂದ ಮಾಸ್ಕ್‌ ಕೂಡ ಹೊಲಿದುಕೊಡುತ್ತಿದ್ದಾರೆ ಟೈಲರ್‌ಗಳು.ಮದುವೆಯಂತಹ ಕಾರ್ಯಕ್ರಮಗಳಿಗೆ ಹೋಗುವಾಗ ಮ್ಯಾಚಿಂಗ್‌ ಮಾಸ್ಕ್‌ ತೊಟ್ಟರೆ ಚಂದ ಕಾಣುತ್ತದೆ. ಸಲ್ವಾರ್‌ ಕಮೀಜ್‌ ಜೊತೆಗೂ ಮ್ಯಾಚಿಂಗ್‌ ಮಾಸ್ಕ್‌ ಹೊಲಿದುಕೊಡುವ ಸಂಪ್ರದಾಯ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.