ಸಾಂದರ್ಭಿಕ ಚಿತ್ರ
(ಎ.ಐ ಚಿತ್ರ)
‘ಎಮೋಷನ್ ಈಸ್ ದ ಎನಿಮಿ ಆಫ್ ಲಾಜಿಕ್’ ಎಂಬ ಮಾತಿದೆ. ಭಾವನೆಗಳು ಅತಿರೇಕಕ್ಕೆ ಹೋದಾಗ ಮೊದಲು ಬಲಿಯಾಗುವುದೇ ತರ್ಕ. ಮನಸ್ಸು ಭಾವನೆಗಳನ್ನು ನಿಯಂತ್ರಿಸುವಷ್ಟು ಪ್ರಬುದ್ಧವಾಗಿ ಇಲ್ಲದೇ ಇದ್ದಾಗ ಕೊಲೆಯಂಥ ಅತಿರೇಕದ ಕೃತ್ಯಗಳನ್ನು ಮಾಡುತ್ತಾರೆ.
ರಿಂಗ್‌ರೋಡ್ ಶುಭಾ ಅಥವಾ ಹನಿಮೂನ್ ಹತ್ಯೆಯ ಸೋನಂ ಪ್ರಕರಣಗಳಲ್ಲಿ ಇಬ್ಬರೂ ಉನ್ನತ ಶಿಕ್ಷಣ ಪಡೆದಿರುವ ಮೇಲ್ಮಧ್ಯಮ ವರ್ಗದ ಹೆಣ್ಣುಮಕ್ಕಳೇ. ಹೀಗಿದ್ದೂ ತಮ್ಮ ಇಷ್ಟಾನಿಷ್ಟಗಳನ್ನು ನಿರ್ಭಿಡೆಯಿಂದ ಹೇಳುವ ಸೂಕ್ತ ವಾತಾವರಣ ಸಿಗದೇ ಇದ್ದ ಕಾರಣಕ್ಕೆ ಹೀಗೆ ಮಾಡಿರಬಹುದು ಎಂದು ಊಹಿಸಲು ಆಗದು. ಪುರುಷಪ್ರಧಾನ ಸಮಾಜದ ಭಾವನಾತ್ಮಕ ಬೆದರಿಕೆಗೆ ಹಲವು ಸಲ ಹೆಣ್ಣುಮಕ್ಕಳು ಬಲಿಯಾಗುವುದು ನಿಜ. ಆದರೆ ಇಲ್ಲಿ ಅದು ಮಾತ್ರ ಕಾರಣವಾಗಿರುವ ಸಾಧ್ಯತೆ ಕಡಿಮೆ. ವ್ಯಕ್ತಿತ್ವ ದೋಷವಿರುವವರು, ಅದರಲ್ಲೂ ಸಮಾಜಘಾತುಕ, ಸಮಾಜವಿರೋಧಿ ವ್ಯಕ್ತಿತ್ವ ದೋಷ ಇರುವವರು ಸಮಾಜದ ಧೋರಣೆಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ತಮಗೆ ಸರಿ ಅನಿಸಿದ್ದನ್ನು ಪಡೆಯುವ ಸಲುವಾಗಿ ಅನೈತಿಕ, ಅಕ್ರಮ ಕೆಲಸಗಳಲ್ಲಿ ಭಾಗಿಯಾಗಲು ಹಿಂದೆ ಮುಂದೆ ನೋಡುವುದಿಲ್ಲ. ಈ ಮನಃಸ್ಥಿತಿಯಲ್ಲಿ ಇರುವವರಿಗೆ ಸರಿ–ತಪ್ಪುಗಳ ನಡುವಿನ ಅಂತರದ ಅರಿವಿರುವುದಿಲ್ಲ. ವಿವೇಚನಾರಹಿತರಾಗಿ ಇರುತ್ತಾರೆ. ಸಿಕ್ಕಿಹಾಕಿಕೊಂಡರಷ್ಟೇ ತಪ್ಪು, ಇಲ್ಲದಿದ್ದರೆ ತಪ್ಪೇ ಅಲ್ಲ ಅನ್ನುವುದು ಅವರ ನಂಬಿಕೆಯಾಗಿರುತ್ತದೆ.
ಇಂಥಾ ಕ್ರೌರ್ಯ ಎಸಗುವವರು ಭಾರಿ ಚತುರರಾಗಿಯೇ ಇರುತ್ತಾರೆ ಎಂದೇನಿಲ್ಲ. ಇದು ಲೋ ಐ.ಕ್ಯು ಕ್ರೈಂ. ಮೇಲ್ನೋಟಕ್ಕೆ ಕಾಣುವ ಉಪಾಯಗಳು ಇರುವ ಸಿನಿಮಾ, ಧಾರಾವಾಹಿಗಳಿಂದ ಪ್ರೇರಿತರಾಗಿಯೂ ಇಂಥ ಕೃತ್ಯ ಎಸಗಿರುವ ಸಾಧ್ಯತೆ ಇರುತ್ತದೆ. ಪ್ರೀತಿ ಕುರುಡಾಗಿರಬಹುದು, ಆದರೆ ಕ್ರೂರವಾಗಲು ಸಾಧ್ಯವಿಲ್ಲ. ಎಲ್ಲಿ ಕ್ರೌರ್ಯ ಇರುವುದೋ ಅದು ಪ್ರೀತಿಯಾಗದು.
ಮಕ್ಕಳ ಪ್ರೀತಿಯ ಆಯ್ಕೆ ಸರಿಯಿಲ್ಲ ಎಂದು ಪೋಷಕರು ತರಾತುರಿಯಲ್ಲಿ ಮದುವೆ ಮಾಡಲು ಹೊರಡುವ ನಿರ್ಧಾರವೂ ಈ ಕೃತ್ಯಗಳಿಗೆ ಭಾಗಶಃ ಕಾರಣವಾಗಿರಬಹುದು. ಆದರೆ, ಪೋಷಕರ ಆತುರದ ಹಿಂದೆ ಪ್ರೀತಿ ಮತ್ತು ಕಾಳಜಿಯೂ ಅಡಗಿರುತ್ತದೆ.
ಜೀವನ ಎಂದ ಮೇಲೆ ಸಮಸ್ಯೆಗಳು, ಸಂದಿಗ್ಧ ಪರಿಸ್ಥಿತಿಗಳು ಇದ್ದೇ ಇರುತ್ತವೆ. ಕೊಲೆ ಇವುಗಳಿಗೆ ಪರಿಹಾರವಲ್ಲ ಎಂಬುದನ್ನು ಅರಿಯಬೇಕು. ಸಾಯುವುದು ಮತ್ತು ಸಾಯಿಸುವ ಆಲೋಚನೆಗಳೇ ಸರಿಯಲ್ಲ. ಇಂತಹ ಆಲೋಚನೆಗಳಿಂದ ನೋವು, ಸಂಕಟ, ಭರಿಸಲಾಗದ ನಷ್ಟ. ಹಾಗಾಗಿ, ಎಂಥ ಸಂದರ್ಭದಲ್ಲಾದರೂ ಒಳಗಿನ ಒತ್ತಡ ಹಾಗೂ ಸಂದಿಗ್ಧ ಸ್ಥಿತಿಯನ್ನು ನಿರ್ವಹಿಸುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕು. ಸಂಯಮದಿಂದ ಇರುವ, ಪ್ರಶಾಂತ ಮನಃಸ್ಥಿತಿಯನ್ನು ರೂಢಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಬೇಕು.
ಲೇಖಕಿ: ಮನೋವೈದ್ಯೆ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.