ADVERTISEMENT

ಟ್ರೆಂಡ್: ಫಾಸ್ಟ್‌ ಫ್ಯೂಷನ್‌ ಸೀರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 2:15 IST
Last Updated 3 ಸೆಪ್ಟೆಂಬರ್ 2022, 2:15 IST
ರೂಪದರ್ಶಿ: ಸಹನಾ ಮಲ್ಲಿಕಾರ್ಜುನ
ರೂಪದರ್ಶಿ: ಸಹನಾ ಮಲ್ಲಿಕಾರ್ಜುನ   

ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು. ಹಬ್ಬ ಎಂದ ಕೂಡಲೇ ಸೀರೆಯತ್ತ ಕಣ್ಣು ಹೊರಳುವುದು ಸಹಜ. ಸಾಂಪ್ರದಾಯಿಕವಾಗಿ ಸೀರೆ ಉಟ್ಟು, ಓಡಾಡುವುದೇ ಒಂದು ಸಂಭ್ರಮ.

ಅಂದ ಹಾಗೆ, ಸೀರೆ ಉಡುವುದರಲ್ಲೂ ಹಲವು ವಿಧಗಳಿವೆ. ಸಾಂಪ್ರದಾಯಿಕವಾಗಿ ಸೀರೆಯುಡುವ ಫ್ಯಾಷನ್‌ ಚಾಲ್ತಿಯಲ್ಲಿರುವುದು ಗೊತ್ತಿದೆ. ಈಗ ಪ್ಯಾಂಟ್ ಮೇಲೆ ತರಹೇವಾರಿ ಸೀರೆಯುಟ್ಟು ‘ಫ್ಯೂಷನ್‌’ ಕ್ರಿಯೇಟ್ ಮಾಡುವ ಫ್ಯಾಷನ್‌ ಕೂಡ ಟ್ರೆಂಡಿಯಾಗಿದೆ. ಸಂಪ್ರದಾಯ ಪಾಲಿಸುತ್ತಲೇ ಟ್ರೆಂಡಿಯಾಗಿ ಕಾಣಬೇಕು ಎನ್ನುವ ಯುವತಿಯರಿಗೆ ‘ಫ್ಯೂಷನ್‌’ ಸೀರೆ ಅಚ್ಚುಮೆಚ್ಚು. ಸ್ವಲ್ಪ ಸೃಜನಾತ್ಮಕವಾಗಿದ್ದರೆ ಎಲ್ಲದರ ಜತೆ ಪರ್ಫೆಕ್ಟ್ ಕಾಂಬಿನೇಷನ್‌ ಅನಿಸಿಕೊಳ್ಳುತ್ತೆ ಈ ಸೀರೆ.

ಡೆನಿಮ್ ಜೀನ್ಸ್ ಸೀರೆ: ಇದು ಜೀನ್ಸ್ ಮೇಲೆ ತೊಡುವ ಸೀರೆ. ಇಂಡೊ– ವೆಸ್ಟರ್ನ್‌ ಫ್ಯಾಷನ್‌ಗೆ ಹೇಳಿ ಮಾಡಿಸಿದ ಕಾಂಬಿನೇಷನ್‌ ಇದು. ಗಾಢ ನೀಲಿ, ಆಕಾಶ ನೀಲಿ, ಬಿಳಿ, ಕಪ್ಪು ಹೀಗೆ ತರಹೇವಾರಿ ಜೀನ್ಸ್‌ ಪ್ಯಾಂಟ್‌ ಮೇಲೆ ಅದಕ್ಕೊಪ್ಪುವ ಸೀರೆ ಉಡಲಾಗುತ್ತದೆ. ಗಾಢ ನೀಲಿ ಬಣ್ಣದ ಜೀನ್ಸ್‌ ಆಗಿದ್ದರೆ ಸೀರೆ ತಿಳಿ ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ಬಿಳಿ ಜೀನ್ಸ್ ಆಗಿದ್ದರೆ, ಸೀರೆ ಗಾಢ ನೀಲಿ ಬಣ್ಣದಾಗಿರಬೇಕು. ಇನ್ನು ಇದರಲ್ಲಿ ಡೆನಿಮ್‌ ರವಿಕೆಯ ಸೀರೆಯೂ ಇದೆ. ರವಿಕೆ ಜೀನ್ಸ್ ಬಟ್ಟೆಯಾಗಿದ್ದು, ವೆಸ್ಟರ್ನ್‌ ಶೈಲಿಯಲ್ಲಿರುತ್ತದೆ. ಇದು ಕೂಡ ಟ್ರೆಂಡಿಯಾಗಿ ಕಾಣುತ್ತದೆ.

ADVERTISEMENT

ಪ್ಲಾಜೊ, ಲೆಗ್ಗಿನ್‌ ಜತೆ ಸೀರೆ: ತಿಳಿ ಬಣ್ಣದ ಪ್ಲಾಜೊ ಮತ್ತು ಅದಕ್ಕೆ ಹೊಂದುವ ಕ್ರಾಪ್‌ ಟಾಪ್‌ ಮೇಲೆ ಉಡುವ ಸೀರೆ ಇದು. ಪ್ಲಾಜೊ ಮತ್ತು ಟಾಪ್‌ ಸಾಮಾನ್ಯವಾಗಿ ಸಾದಾ ಆಗಿರುತ್ತದೆ. ಅದರ ಮೇಲೆ ಉಡುವ ಸೀರೆ ಫ್ಲೋರಲ್‌ ವಿನ್ಯಾಸವನ್ನು ಹೊಂದಿರುತ್ತದೆ. ಕ್ರೇಪ್‌ ಬಟ್ಟೆಯ ಸೀರೆ ಇದಕ್ಕೆ ಹೆಚ್ಚು ಹೊಂದಿಕೊಳ್ಳುತ್ತದೆ. ಕಾಕ್‌ಟೇಲ್ ಪಾರ್ಟಿಗಳಿಗೆ ಹೇಳಿ ಮಾಡಿಸಿದಂಥ ಸೀರೆಯಿದು.

ಕಾಕ್‌ಟೇಲ್‌ ಸೀರೆ: ಒಂಬತ್ತು ಗಜ ಸೀರೆ ಇಷ್ಟಪಡದ ಆದರೂ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕೆಂದು ಇಷ್ಟಪಡುವವರ ನೆಚ್ಚಿನ ಸೀರೆಯಿದು. ಸೀರೆಯ ಅಂಚು ಸಾಮಾನ್ಯವಾಗಿ ಹೆಚ್ಚು ಪ್ಲೀಟೆಡ್‌ ಅನ್ನು ಹೊಂದಿರುತ್ತದೆ. ಉದ್ದನೆಯ ಸ್ಕರ್ಟ್‌ ಮೇಲೆ ಇದನ್ನು ತೊಡಲಾಗುತ್ತದೆ. ರವಿಕೆ ಗಾಢ ಹೊಳಪನ್ನು ಹೊಂದಿದ್ದರೆ, ಸೀರೆ ಮಾತ್ರ ಸಾದಾ ರೀತಿಯಲ್ಲಿ ಇರುತ್ತದೆ.

ಧೋತಿ ಸೀರೆ: ಧೋತಿ ಸೀರೆಯು ಸಾಂಪ್ರದಾಯಿಕ ಸಮಾರಂಭಗಳಿಗೆ ಹೇಳಿ ಮಾಡಿಸಿದ್ದು. ಧೋತಿ ಶೈಲಿಯ ನೆರಿಗೆ ಜತೆಗೆ ಸೀರೆಯ ನೆರಿಗೆಯೂ ಸೇರಿ ವಿಭಿನ್ನ ಲುಕ್‌ ನೀಡುತ್ತದೆ. ಬಹಳ ಆರಾಮಾದಾಯಕ ಎನಿಸುವ ಸೀರೆಗಳಿವು. ಧೋತಿ ಸೀರೆಗೆ ಸಾಮಾನ್ಯವಾಗಿ ಜೇಬಿರುತ್ತದೆ. ಗಾಢ ಹಸಿರಿಗೆ, ಬೂದು ಬಣ್ಣದ ಟಾಪ್, ನೇರಳೆ ಬಣ್ಣದ , ಲೆಮನ್‌ ಗ್ರೀನ್‌ ಬಣ್ಣದ ಧೋತಿ ಸೀರೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಈ ಸೀರೆಗೆ ಸೊಂಟಕ್ಕೆ ಬೆಲ್ಟ್ ಹಾಕಿಕೊಂಡು ಇನ್ನಷ್ಟು ಮೆರುಗು ಕೊಡಬಹುದು.

ಕ್ರಾಪ್ ಟಾಪ್ ಕಾಂಬಿನೇಷನ್: ಸಾಂಪ್ರದಾಯಿಕ ರವಿಕೆಯ ಬದಲು ಕ್ರಾಪ್ ಟಾಪ್‌, ಟೀಶರ್ಟ್‌ಗಳು ಧರಿಸಬಹುದು. ಇದು ಕಾಟನ್‌ ಸೀರೆಗೆ ಹೆಚ್ಚು ಸೂಕ್ತವಾಗಿರುತ್ತದೆ. ಅದರಲ್ಲೂ ಕೈಮಗ್ಗ ಸೀರೆಗಳ ಜತೆ ಕ್ರಾಪ್‌ ಟಾಪ್‌, ಟೀಶರ್ಟ್‌ ಹಾಕಿಕೊಂಡರೆ ಟ್ರೆಂಡಿಯಾಗಿ ಕಾಣಬಹುದು. ಫುಲ್ ಓವರ್‌ಗಳ ಮೇಲೂ ಇದನ್ನು ತೊಡಬಹುದು. ಉದ್ದ ತೋಳಿನ ಟಿ–ಶರ್ಟ್‌ಗಳು, ಫಂಕಿ ಎನಿಸುವ ಟಿ–ಶರ್ಟ್‌ ಮೇಲೆ ಸಾದಾ ಸೀರೆ ಉಡಬಹುದು.

ಶರ್ಟ್‌ ಜತೆ ಸೀರೆ: ಫಾರ್ಮಲ್‌ ಎನಿಸುವ, ಕಾಲರ್‌ ಹಾಗೂ ಬಟನ್‌ ಶರ್ಟ್‌ಗಳ ಮೇಲೂ ಕಾಟನ್‌ ಅಥವಾ ಶಿಫಾನ್‌ ಸೀರೆ ಉಡಬಹುದು. ಮಿಕ್ಸ್ ಆ್ಯಂಡ್‌ ಮ್ಯಾಚ್‌ ಪರಿಕಲ್ಪನೆಯಡಿ ಶರ್ಟ್‌ಗೆ ಸೂಕ್ತವನಿಸುವ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೇಶವಿನ್ಯಾಸ, ಹಾಕಿಕೊಳ್ಳುವ ಜುವೆಲರಿಯಿಂದಲೂ ಶರ್ಟ್‌ ಜತೆ ಸೀರೆ ಉಟ್ಟು ಅಂದ ಹೆಚ್ಚಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.