ADVERTISEMENT

ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಅರಿವು ಸಮಾಜಕ್ಕಿರಲಿ

ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಅರ್ಥಪೂರ್ಣ ಆಚರಣೆಗೆ ಸರ್ಕಾರ ಸೂಚನೆ

ಪ್ರಜಾವಾಣಿ ವಿಶೇಷ
Published 23 ಜನವರಿ 2021, 19:30 IST
Last Updated 23 ಜನವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಸಮಾಜಕ್ಕೆ ಹೆಣ್ಣು ಮಕ್ಕಳ ಪ್ರಾಮುಖ್ಯತೆಯ ಅರಿವಾಗಬೇಕು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲೈಂಗಿಕ ಅಪರಾಧಗಳಿಂದ ರಕ್ಷಣೆ ದೊರೆಯಬೇಕು. ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಸದುದ್ದೇಶದಿಂದ ಜ.24ರಂದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ ಆಚರಿಸಲಾಗುತ್ತಿದೆ.

‌ಹೆಣ್ಣುಮಕ್ಕಳ ದಿನಾಚರಣೆ ನೆಪಮಾತ್ರಕ್ಕೆ ನಡೆಯದೆ ಅರ್ಥಪೂರ್ಣವಾಗಿ ನಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಣೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಆಯಾ ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿರುವ 6 ರಿಂದ 18 ವರ್ಷದ ಹೆಣ್ಣುಮಕ್ಕಳನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಆಯೋಜಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಭಾನುವಾರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.

ಆಚರಣೆ ಹೇಗೆ

ADVERTISEMENT

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ದಿನ ಹೆಣ್ಣು ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುವುದು, ಪ್ರಬಂಧ, ಚಿತ್ರಕಲೆ, ಕಥೆ ಹೇಳುವುದು, ನೃತ್ಯ ಹೀಗೆ ಸಂವಾದಾತ್ಮಕ ಚಟುವಟಿಕೆಗಳನ್ನು ಆಯೋಜಿಸುವುದು, ಶೈಕ್ಷಣಿಕ ಚಟುವಟಿಕೆಗಳ ಅರಿವು ಮೂಡಿಸುವುದು ಕಾರ್ಯಕ್ರಮದ ಭಾಗವಾಗಿರುತ್ತದೆ.

ಮುಖ್ಯವಾಗಿ ಹೆಣ್ಣು ಮಕ್ಕಳ ರಕ್ಷಣೆ ಸಂಬಂಧ ವಿವಿಧ ಇಲಾಖೆಗಳ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡುವುದು, ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ಮರು ದಾಖಲು ಮಾಡುವುದು, ಜನನ ಪ್ರಮಾಣ ಪತ್ರ ಇಲ್ಲದ ಹೆಣ್ಣು ಮಕ್ಕಳಿಗೆ ಪ್ರಮಾಣಪತ್ರ ವಿತರಿಸುವುದು, ಲೈಂಗಿಕ ಅಪರಾಧಗಳಿಂದ ರಕ್ಷಣೆ ಪಡೆಯುವ ಬಗ್ಗೆ ಅರಿವು ಮೂಡಿಸುವುದು, ಆತ್ಮರಕ್ಷಣೆಯ ಪಾಠ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಮುಖ ವಿಷಯಗಳು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌.

ಜ.30ರಂದು ಜಿಲ್ಲಾ ಪಂಚಾಯಿತಿಯ ಕಚೇರಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ 8, 9 ಹಾಗೂ 10ನೇ ತರಗತಿಯ ಆಯ್ದ ವಿದ್ಯಾರ್ಥಿನಿಯರನ್ನು ಆಹ್ವಾನಿಸಲಾಗುವುದು. ಜಿಲ್ಲಾ ಪಂಚಾಯಿತಿಯಲ್ಲಿ ಏನೆಲ್ಲ ಕಾರ್ಯ ಚಟುವಟಿಕೆಗಳು ನಡೆಯುತ್ತವೆ. ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳಿಗೆ ಮೀಸಲಿರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುವುದು. ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವೂ ಇದೆ ಎಂದರು ಸಿಇಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.