ADVERTISEMENT

ಮಹಿಳಾ ದಿನ ವಿಶೇಷ | ರೈಲ್ವೆ ಕೋಚ್‌ಗಳ ಸಮಸ್ಯೆಗೆ ‘ಸರಳ’ ಪರಿಹಾರ

ವಿಡಿಯೊ ಸ್ಟೋರಿ

ಎನ್.ನವೀನ್ ಕುಮಾರ್
Published 8 ಮಾರ್ಚ್ 2020, 5:31 IST
Last Updated 8 ಮಾರ್ಚ್ 2020, 5:31 IST
ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಕೋಚ್‌ ಡಿಪೊ ಹಿರಿಯ ಟೆಕ್ನಿಷಿಯನ್‌ ಸರಳಾ ಯಾದವ್‌. (ಬಲದಿಂದ ಮೊದಲನೆಯವರು)
ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಕೋಚ್‌ ಡಿಪೊ ಹಿರಿಯ ಟೆಕ್ನಿಷಿಯನ್‌ ಸರಳಾ ಯಾದವ್‌. (ಬಲದಿಂದ ಮೊದಲನೆಯವರು)   

ಮೈಸೂರು: ಕಳೆದ 15 ವರ್ಷಗಳಿಂದ ಮೆಕ್ಯಾನಿಕ್‌ ವೃತ್ತಿಯಲ್ಲಿ ತೊಡಗಿರುವ ಈ ಮಹಿಳೆಗೆ, ಅತಿ ಭಾರವಾದ ವಸ್ತುಗಳನ್ನು ಎತ್ತುವುದು, ವೀಲ್ ಟ್ರಕ್ ಅನ್ನು ರೈಲು ಬೋಗಿಯಿಂದ ತೆಗೆಯುವುದು, ಜೋಡಿಸುವುದು, ಬೋಗಿಯಲ್ಲಿ ಕಾಣಿಸಿಕೊಳ್ಳುವ ಎಲ್ಲ ರೀತಿಯ ಸಮಸ್ಯೆಗಳನ್ನೂ ಪರಿಹರಿಸುವುದು ತುಂಬಾ ಸಲೀಸು.

ಅವರೇ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಕೋಚ್‌ ಡಿಪೊದಲ್ಲಿನ ಹಿರಿಯ ಟೆಕ್ನೀಷಿಯನ್‌ ಸರಳಾ ಯಾದವ್‌. ಇಲ್ಲಿ ಮಹಿಳಾ ಮೆಕ್ಯಾನಿಕ್‌ಗಳು 100 ಮಂದಿ ಇದ್ದರೂ ಈ ಪೈಕಿ ಸರಳಾ ಅವರು ಸೇವಾ ಹಿರಿತನ ಹೊಂದಿದ್ದಾರೆ.

ದೆಹಲಿಯವರಾದ ಸರಳಾ, 15 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಮೈಸೂರು ವಿಭಾಗದಲ್ಲಿ ಮೆಕ್ಯಾನಿಕ್‌ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಆಗ ಮೂವರು ಮಹಿಳೆಯರು ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದದ್ದು ವಿಶೇಷ.

ADVERTISEMENT

ನಿರ್ವಹಣಾ ವಿಭಾಗ, ಸಿಕ್‌ ಲೈನ್‌ ಹಾಗೂ ಪ್ಲ್ಯಾಟ್‌ಫಾರ್ಮ್‌ನಲ್ಲಿ ಮಹಿಳೆಯರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಈ ವಿಭಾಗಗಳಲ್ಲಿ ಪುರುಷ ಮೆಕ್ಯಾನಿಕ್‌ಗಳೂ ಕೆಲಸ ನಿರ್ವಹಿಸುತ್ತಾರೆ. ಕ್ಲಿಷ್ಟಕರ ಸಮಸ್ಯೆಗಳು ಕಾಣಿಸಿಕೊಂಡರೆ ಬೋಗಿಗಳನ್ನು ಸಿಕ್‌ ಲೈನ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿ ಬೋಗಿಯಿಂದ ವೀಲ್‌ ಟ್ರಕ್‌ ಅನ್ನು ಬೇರ್ಪಡಿಸುತ್ತಾರೆ. ಅದರಲ್ಲಿ ಸಮಸ್ಯೆ ಇದ್ದರೆ ಸರಿಪಡಿಸುತ್ತಾರೆ. ಚಕ್ರಗಳಲ್ಲಿ ದೋಷ ಕಂಡುಬಂದರೆ ಅದನ್ನು ಪತ್ತೆ ಮಾಡಿ ರಿಪೇರಿ ಮಾಡುತ್ತಾರೆ. ಮತ್ತೆ ವೀಲ್‌ ಟ್ರಕ್‌ ಅನ್ನು ಬೋಗಿಗೆ ಜೋಡಿಸುತ್ತಾರೆ. ಇಲ್ಲಿ ಬಳಸುವ ವಸ್ತುಗಳೆಲ್ಲಾ ತುಂಬಾ ಭಾರ ಇರುತ್ತವೆ. ಬೋಗಿಯ ಮೇಲೆ ಭಾರವಾದ ವಸ್ತುಗಳನ್ನು ಎತ್ತಿಕೊಂಡು ಹತ್ತಿ ಇಳಿಯಬೇಕಿರುತ್ತದೆ.

ಇನ್ನು, ಪ್ಲ್ಯಾಟ್‌ಫಾರ್ಮ್‌ನಲ್ಲಿ ಬಂದು ನಿಲ್ಲುವ ರೈಲು ಬೋಗಿಗಳ ಬ್ರೇಕ್, ಏರ್‌ಬ್ರೇಕ್, ರೋಲಿಂಗ್ ಪರಿಶೀಲಿಸಿ ದೋಷ ಕಾಣಿಸಿಕೊಂಡರೆ ಅದನ್ನು ಸರಿಪಡಿಸುತ್ತಾರೆ.

‘ರಾತ್ರಿ 10ರಿಂದ ಬೆಳಿಗ್ಗೆ 6ರವರೆಗಿನ ರಾತ್ರಿ ಪಾಳಿಯೂ ಸೇರಿದಂತೆ ಒಟ್ಟು ಮೂರು ಪಾಳಿಗಳು ಇರುತ್ತವೆ. ಸಿಕ್‌ ಲೈನ್‌ನಲ್ಲಿ ದಿನಕ್ಕೆ ಒಂದೆರಡು ಬೋಗಿಗಳನ್ನು ರಿಪೇರಿ ಮಾಡುತ್ತೇವೆ. ಈ ಕೆಲಸ ಒಬ್ಬರಿಂದ ಆಗುವುದಿಲ್ಲ. ಉಳಿದ ಮಹಿಳಾ ಸಹೋದ್ಯೋಗಿಗಳು ಸೇರಿಕೊಂಡು ರಿಪೇರಿ ಮಾಡುತ್ತೇವೆ’ ಎನ್ನುತ್ತಾರೆ ಸರಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.