ಡಾ.ರಾಜೇಶ್ವರಿ
ಕೆ.ಆರ್.ಪೇಟೆ: ವೈದ್ಯರಾಗಿದ್ದ ಮಾವ ಮಡುವಿನಕೋಡಿ ಗಣೇಶ್ ಗೌಡರು ಹಣಕ್ಕಾಗಿ ಹಂಬಲಿಸದೆ ಮನೆಗಳಿಗೆ ಹೋಗಿ ಚಿಕಿತ್ಸೆ ಕೊಟ್ಟು ಜನಪ್ರಿಯರಾಗಿದ್ದವರು. ಸೊಸೆ ಡಾ.ರಾಜೇಶ್ವರಿ ಅವರೂ ಮಾವನ ರೀತಿ ಸೇವೆಯ ಬದುಕಲ್ಲೇ ಸಂತೃಪ್ತಿ ಕಾಣುತ್ತಿದ್ದಾರೆ.
ವೈದ್ಯರಾಗಿಯಷ್ಟೇ ಅಲ್ಲದೆ ಸಹಕಾರಿ ಧುರೀಣರಾಗಿದ್ದ ಗೌಡರು, ಜನಪರವಾಗಿರಬೇಕು ಎಂದು ನೀಡಿದ ಸಲಹೆಯನ್ನು ಈ ವೈದ್ಯೆ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದಲೇ, ಅವರ ‘ಸಂಜೀವಿನಿ ಕ್ಲಿನಿಕ್’ ಮುಂದೆ ದಿನವೂ ಜನದಟ್ಟಣೆ ಏರ್ಪಟ್ಟಿರುತ್ತದೆ.
ಎಂಬಿಬಿಎಸ್ ಮಾಡಿದ್ದರೂ, ಅವರು ಹಣ ಗಳಿಸಲು ನಗರಕ್ಕೆ ವಲಸೆ ಹೋಗಿಲ್ಲ. ಸರ್ಕಾರಿ ವೃತ್ತಿಯನ್ನು ಬಯಸಿಲ್ಲ. ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಗ್ರಾಮೀಣ ಜನರ ಸೇವೆಯೇ ಅವರ ಜೀವನದ ಪರಮಧ್ಯೇಯವಾಗಿ. ಅಂದ ಹಾಗೆ ಅವರ ಕನ್ಸಲ್ಟೇಶನ್ ಶುಲ್ಕ ಕೇವಲ ₹ 50. ಪಟ್ಟಣದ ಮುಖ್ಯರಸ್ತೆಯಲ್ಲಿ ಬಿಜಿಎಸ್ ಶಾಲೆ ಸಮೀಪ ಇರುವ ಅವರ ಕ್ಲಿನಿಕ್ ಬಡಜನರ ಪಾಲಿಗೆ ನಿಜಕ್ಕೂ ‘ಸಂಜೀವಿನಿ’ ಎನಿಸಿದೆ. ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಯಲ್ಲಿ ಅವರಿಗೆ ವಿಶೇಷ ಪರಿಣತಿ ಉಂಟು.
ವೈದ್ಯರ ಭೇಟಿಗೇ ನೂರಾರು ರೂಪಾಯಿ ವ್ಯಯಿಸಬೇಕಾದ ಈ ಕಾಲಘಟ್ಟದಲ್ಲಿ ಅವರು ಕಡಿಮೆ ಶುಲ್ಕ ಪಡೆದು ವೈದ್ಯಕೀಯ ಸಲಹೆ, ಚಿಕಿತ್ಸೆ ನೀಡುವುದೇ ವಿಶೇಷ ಎನ್ನುತ್ತಾರೆ ಜನ. ಜೊತೆಗೆ ಆರೋಗ್ಯ ಶಿಕ್ಷಣ ನೀಡುವುದು ಇನ್ನೊಂದು ವಿಶೇಷ. ‘ಹೆಚ್ಚು ದರದ ಮಾತ್ರೆ, ಔಷಧ ಬರೆಯದೆ ರೋಗದ ಪರಿಣಾಮಕ್ಕನುಗುಣವಾಗಿ ಚಿಕಿತ್ಸೆ ನೀಡುತ್ತಾರೆ’ ಎಂಬುದು ಜನರ ಶ್ಲಾಘನೆಯ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.