ಕಲಾಕೃತಿ ರಚನೆಯಲ್ಲಿ ತಲ್ಲೀನರಾದ ಚರಿತಾ
ಜಾತಿ ನಿರ್ಮೂಲನೆಯ ಆಶಯದಿಂದ ಅಂತರ್ಜಾತಿ ಮದುವೆಯಾದ ಪೋಷಕರ ಮೊದಲ ಮಗಳು ಚರಿತಾ. ತಂದೆ ಪರಿಶಿಷ್ಟ ಜಾತಿಯವರೆಂಬ ಕಾರಣಕ್ಕಾಗಿಯೇ, ಬಾಲ್ಯದಲ್ಲಿ ಕರ್ನಾಟಕ ಸಂಗೀತ ಕಲಿಕೆಯಿಂದ ವಂಚಿತರಾಗಿ ಅಸ್ಪೃಶ್ಯತೆಯ ನೋವುಂಡವರು. ಅದನ್ನು ಮೀರಿಕೊಳ್ಳಲು ಹಿಂದೂಸ್ಥಾನಿ ಕಲಿತವರು. ‘ಕಲೆಯ ದಾರಿ ಜೀವನಕ್ಕೆ ಅಪ್ರಯೋಜಕ’ ಎಂಬ ಪ್ರತಿಪಾದನೆಯನ್ನು ಸುಳ್ಳು ಮಾಡಿ ನಡೆದಿರುವುದೇ ಅವರ ಹಿರಿಮೆ.
ವಿಜ್ಞಾನ, ವಾಣಿಜ್ಯ ವಿಷಯಕ್ಕೇ ಆದ್ಯತೆ ಇದ್ದ ಕಾಲದಲ್ಲಿ, ಪ್ರದರ್ಶಕ ಕಲೆಯನ್ನೇ ಉನ್ನತ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಂಡು, ವಿಭಿನ್ನ ಹಾದಿ ತುಳಿದು ಎಲ್ಲರ ಹುಬ್ಬೇರುವಂತೆ ಮಾಡಿದವರು. ಮೈಸೂರಿನ ಕಾವಾ(cava)ದಲ್ಲಿ ಬಿಎಫ್‌ಎ ಪದವಿ ಪಡೆದ ಬಳಿಕ, ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವ
ವಿದ್ಯಾಲಯದಲ್ಲಿ ಪೇಂಟಿಂಗ್ ಎಂಎಫ್‌ಎ ಪದವಿ ಪಡೆದರು. ಆ ಅವಧಿಯಲ್ಲೇ ಬಂಗಾಳಿ ಮತ್ತು ಅಸ್ಸಾಮಿ ಭಾಷೆಯನ್ನೂ ಕಲಿತಿದ್ದು ವಿಶೇಷ. ಈ ಎರಡೂ ಭಾಷೆಗಳ ಕಲಾವಿದರು, ಸ್ನೇಹಿತರೊಂದಿಗೆ ಅವರು ಅವರದ್ದೇ ಭಾಷೆಯಲ್ಲೇ ಸಂವಾದಿಸಿ ಖುಷಿ ಕಾಣುವ ಅವಕಾಶವನ್ನು ಸೃಷ್ಟಿಸಿಕೊಂಡವರು.
ಹೀಗೆ, ಭಾಷೆಯ ಮೌಖಿಕ ಸಾಧ್ಯತೆಗಳ ಜೊತೆಗೆ ದೇಶ–ಕಾಲ ಮೀರಿದ ಕಲೆಯ ಸಾಧ್ಯತೆಗಳ ಕುರಿತು ಅತೀವ ಆಸಕ್ತಿಯುಳ್ಳ ಅವರು ಕಲಾವಿದೆಯಾಗಿಯಷ್ಟೇ ಅಲ್ಲದೆ ಲೇಖಕಿಯಾಗಿಯೂ ಗಮನ ಸೆಳೆದವರು. ಜೊತೆಗೆ ಸಂಘಟಕಿ, ಪಿಎಚ್‌ಡಿ ವಿದ್ಯಾರ್ಥಿಗಳ ಮೆಚ್ಚಿನ ಸಂಶೋಧನಾ ಮಾರ್ಗದರ್ಶಕಿ. ‘ಉಸಿರಾಡುವ ಬಣ್ಣಗಳು’, ‘ದೃಶ್ಯಕಲೆಯ ವಿಮರ್ಶೆ–ಪರಾಮರ್ಶೆ’ ಅವರ ಪ್ರಮುಖ ಕೃತಿಗಳು. ಏಳು ಸಾಧಕಿಯರ ಕುರಿತ ‘ಸಪ್ತ ಸ್ವಯಂ ಕಲಾವಿದೆಯರು’ ಸಾಕ್ಷ್ಯಚಿತ್ರಗಳಿಗೆ ಇವರದ್ದೇ ನೇತೃತ್ವ. ಎರಡೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಅವರ ನೂರಾರು ಕಲಾಕೃತಿಗಳ ಪ್ರದರ್ಶನವೂ ನಡೆದಿದೆ.
‘ಕರ್ನಾಟಕದ ಚಿತ್ರಕಲಾ ಪರಂಪರೆಯಲ್ಲಿ ಮೈಸೂರು ಸಾಂಪ್ರದಾಯಿಕ ಕಲಾವಿದರ ಪಾತ್ರ– ಒಂದು ಅಧ್ಯಯನ’ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.
ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲೂ ಅತಿಥಿ ಉಪನ್ಯಾಸಕಿಯಾಗಿದ್ದರು. ಕಾವಾದಲ್ಲಿ ವಿದ್ಯಾರ್ಥಿಗಳನೇಕರು ಅವರ ಒತ್ತಾಸೆಯಿಂದಲೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಗಮನ ಸೆಳೆದಿದ್ದಾರೆ. ‘ಇಂಥ ಉತ್ತೇಜಕ ಗುರುಗಳು ವಿರಳ’ ಎಂಬುದು ವಿದ್ಯಾರ್ಥಿಗಳ ವಿನಮ್ರ ನುಡಿ.
ಹಲವು ವರ್ಷ ಜಾತಿ ತಾರತಮ್ಯದ ವಿರುದ್ಧ ತೊಡಗಿದ್ದ ಆಕ್ಟಿವಿಸಂ ಕಾರಣದಿಂದಲೂ ಸಾಕಷ್ಟು
ಸಮಯ ವ್ಯಯಿಸಿದ ಅವರು, ಸದ್ಯ ಉದ್ಯೋಗ, ಬರವಣಿಗೆ ಮತ್ತು ಕಲಾಭ್ಯಾಸಕ್ಕೆ ಮರಳಿದ್ದಾರೆ.
ಈಗ ಕಲಾ ಮಾಧ್ಯಮ ಮತ್ತು ಬೋಧನೆಯೇ ಅವರ ಆಕ್ಟಿವಿಸಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.