
ಎನ್.ಅಂಬಿಕಾ
ಚಿತ್ರ ಕೃಪೆ: ಎಕ್ಸ್
14ರ ವಯಸ್ಸಲ್ಲಿ ಮದುವೆ, 18ರ ವಯಸ್ಸಿಗೇ ಇಬ್ಬರು ಮಕ್ಕಳ ತಾಯಿಯಾದ ಆಕೆಗೆ ತಾನು ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ. ಆಕೆ ಛಲಗಾರ್ತಿ, ತನ್ನ ಆಸೆಯನ್ನು ಕೇಳಿ ಸಮಾಜ ನಗುತ್ತಿದ್ದರೆ, ತಾನು ಐಪಿಎಸ್ ಅಧಿಕಾರಿಯಾಗಿಯೇ ಸಿದ್ದ ಎಂಬ ಹಠಕ್ಕೆ ಬಿದ್ದಳು. ಮಕ್ಕಳನ್ನು ಗಂಡನ ಹೆಗಲಿಗೆ ವಹಿಸಿ ಬ್ಯಾಗು ಹಿಡಿದು ಹೊರಟೆ ಬಿಟ್ಟಳು ದೂರದ ಚೆನ್ನೈಗೆ.. ತನ್ನ ಕನಸಿನ ಊರಿಗೆ...
ಇದು ಕಥೆಯಲ್ಲ, ಐಪಿಎಸ್ ಅಧಿಕಾರಿ ಎನ್. ಅಂಬಿಕಾ ಅವರ ಯಶೋಗಾಥೆ. ಏನು ತೋಚದ ವಯಸ್ಸಿನಲ್ಲಿ ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಮದುವೆಯಾಗುತ್ತಾರೆ. ವಯಸ್ಸು 18 ಆಗುತ್ತಿದ್ದಂತೆ ಮಡಿಲಲ್ಲಿ ಇಬ್ಬರು ಮಕ್ಕಳು. ಗಂಡನ ನೆರಳಿನಲ್ಲಿ ಬದುಕುವ ಅಂಬಿಕಾ ಅವರಿಗೆ ಅದೊಂದು ದಿನ ತನ್ನ ಜೀವನದ ಧ್ಯೇಯ ಅರಿವಾಗುತ್ತದೆ. ಗಂಡನೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋದ ಅವರಿಗೆ, ಅಲ್ಲಿ ಐಪಿಎಸ್ ಅಧಿಕಾರಿಗಳಿಗೆ ಕೊಡುತ್ತಿರುವ ಗೌರವ ಕಂಡು ಅಚ್ಚರಿಯಾಗುತ್ತದೆ. ನಾಲ್ಕು ಗೋಡೆಯ ಮಧ್ಯೆ ಬದುಕುತ್ತಿದ್ದ ಆಕೆಗೆ ಅವರಂತೆ ತಾನೂ ಈ ಗೌರವಕ್ಕೆ ಅರ್ಹಳು ಎಂಬ ಅರಿವಾಗುತ್ತದೆ. ಅದೇ ತಡ, ತನ್ನ ಕನಸನ್ನು ಗಂಡನ ಮುಂದೆ ಹೇಳಿಕೊಳ್ಳುತ್ತಾರೆ.
ಅಂಬಿಕಾ ಅವರ ಆಸೆಗೆ ತಣ್ಣೀರೆರಚುವ ಕೆಲಸವನ್ನು ಅವರ ಪತಿ ಮಾಡಿಲ್ಲ. ಬದಲಾಗಿ ‘ಎರಡು ಮಕ್ಕಳ ತಾಯಿಯಾಗಿರುವ ನಿನಗೆ ಐಪಿಎಸ್ ಅಧಿಕಾರಿ ಆಗುವುದು ಅಷ್ಟು ಸುಲಭವಲ್ಲ, ಅದಕ್ಕೆ ಬಲವಾದ ಇಚ್ಛಾಶಕ್ತಿ ಅಗತ್ಯವಿದೆ’ ಎಂದು ಹೇಳುತ್ತಾರೆ. ಎಸ್‌ಎಸ್‌ಎಲ್‌ಸಿಯನ್ನೂ ಪೂರ್ಣಗೊಳಿಸದ ಅಂಬಿಕಾ ಐಪಿಎಸ್ ಅಧಿಕಾರಿ ಆಗುವುದು ಒಂದು ಕನಸಷ್ಟೇ ಎಂಬ ಭಾವನೆ ಅವರದ್ದು. ಆದರೆ, ‘ಅದೆಲ್ಲವನ್ನೂ ನಾನು ಮಾಡಬಲ್ಲೆ’ ಎಂಬ ಅಂಬಿಕಾ ಅವರ ಛಲಕ್ಕೆ ಅವರು ತಲೆಬಾಗುತ್ತಾರೆ.
ಮೊದಲಿಗೆ ದೂರಶಿಕ್ಷಣದ ಮೂಲಕ ಎಸ್‌ಎಸ್‌ಎಲ್‌ಸಿ , ಪಿಯುಸಿ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಅವರ ಊರಾದ ತಮಿಳಿನಾಡಿನ ದಿಂಡಿಗಲ್‌ನಲ್ಲಿ ಯಾವುದೇ ಯುಪಿಎಸ್‌ಸಿ ತರಬೇತಿ ಕೇಂದ್ರಗಳು ಇರಲಿಲ್ಲ. ಇದರಿಂದ ಅವರಿಗೆ ಅಲ್ಪ ನಿರಾಸೆಯಾದರೂ ರಾಜಧಾನಿ ಚೆನ್ನೈಗೆ ಹೋಗಿ ತರಬೇತಿ ಪಡೆಯುವ ಮನಸ್ಸು ಮಾಡುತ್ತಾರೆ. ಮಕ್ಕಳನ್ನು ಬಿಟ್ಟು ಹೋಗುವುದು ಯಾವ ತಾಯಿಗಾದರೂ ಕಷ್ಟವೇ. ಆದರೆ ಕನಸಿನ ಮುಂದೆ ಅಂಬಿಕಾ ಅವರಿಗೆ ಎಲ್ಲವೂ ಗೌಣವಾಗಿತ್ತು. ಗಂಡನ ಬಳಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಹೋಗಿ ತರಬೇತಿ ಪಡೆಯುತ್ತಾರೆ.
ಅಂಬಿಕಾ ಅವರ ಅನುಪಸ್ಥಿತಿಯಲ್ಲಿ ಮಕ್ಕಳ ಜವಾಬ್ದಾರಿಯನ್ನು ಪತಿ ವಹಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಮಾಡಿದರೂ ಅಂಬಿಕಾ ಅವರಿಗೆ ಕಷ್ಟ ತಪ್ಪಿಲ್ಲ. ಮೂರು ಬಾರಿ ಪರೀಕ್ಷೆ ಬರೆದ ಅವರು ಮೂರು ಬಾರಿಯೂ ಅನುತ್ತೀರ್ಣರಾಗುತ್ತಾರೆ. ಅತ್ತ ಊರಿಗೆ ಹಿಂತಿರುಗುವಂತೆ ಕುಟುಂಬದಿಂದಲೂ ಒತ್ತಾಯ ಬರುತ್ತದೆ. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆ. 2008ರಲ್ಲಿ ಐಪಿಎಸ್ ಅಧಿಕಾರಿಯಾಗುವ ಮೂಲಕ ‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ನಿಜ ಮಾಡುತ್ತಾರೆ.
ಮೊದಲು ಮಹಾರಾಷ್ಟ್ರಕ್ಕೆ ನಿಯೋಜನೆಗೊಳ್ಳುವ ಅವರು, ತಮ್ಮ ನಿರ್ಭೀತ ಕೆಲಸದ ಮೂಲಕ ಜನರಿಂದ ‘ಲೇಡಿ ಸಿಂಗಂ’ ಎಂದು ಕರೆಸಿಕೊಳ್ಳುತ್ತಾರೆ. ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸುವ ವೇಳೆ 2019ರಲ್ಲಿ ‘ಲೋಕಮತ ಮಹಾರಾಷ್ಟ್ರ ಪ್ರಶಸ್ತಿ’ಗೂ ಭಾಜನರಾಗುತ್ತಾರೆ.
ಬಾಲ್ಯದಲ್ಲಿಯೇ ವಿವಾಹವಾಗಿ, ಎರಡು ಮಕ್ಕಳ ತಾಯಿಯಾಗಿ, ಯಾವುದೇ ಪದವಿ ಇಲ್ಲದೆಯೂ ತಮ್ಮ ಕನಸು ನನಸು ಮಾಡಿಕೊಳ್ಳುವ ಮೂಲಕ ಅಂಬಿಕಾ ಅವರು ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.
ನನ್ನ ಈ ಯಶಸ್ಸಿನ ಹಿಂದೆ ನನ್ನ ಪತಿಯ ಪಾತ್ರ ಮುಖ್ಯವಾಗಿದೆ. ಐಪಿಎಸ್ ತರಬೇತಿಗಾಗಿ ದೂರದ ಊರಿಗೆ ಹೋದಾಗ ನನ್ನ ಮಕ್ಕಳನ್ನು ಅವರು ನೋಡಿಕೊಂಡಿದ್ದಾರೆ. ಹೆಣ್ಣಿನ ಯಶಸ್ಸಿನ ಹಿಂದೆ ಒಬ್ಬ ಗಂಡು ಇರುತ್ತಾನೆ.– ಎನ್.ಅಂಬಿಕಾ, ಐಪಿಎಸ್ ಅಧಿಕಾರಿ, (‘ಲೋಕಮತ ಮಹಾರಾಷ್ಟ್ರ ಪ್ರಶಸ್ತಿ’ ಸ್ವೀಕರಿಸುವ ಸಂದರ್ಭ ಆಡಿದ ಮಾತುಗಳು)