
ಮದುವೆ ಅಥವಾ ಇತರ ಸಮಾರಂಭಕ್ಕೆ ಸಿದ್ಧರಾಗುವ ಹೆಣ್ಣುಮಕ್ಕಳಿಗೆ ಯಾವ ಆಭರಣ ಧರಿಸುವುದು ಎಂಬ ಜಿಜ್ಞಾಸೆ ಕಾಡುವುದು ಸಹಜ. ಕಂಠಿಹಾರವೋ ನೆಕ್ಲೆಸ್ಸೋ ಅಥವಾ ಚೋಕರ್ ಧರಿಸುವುದೋ ಎಂಬ ಗೊಂದಲ ಬಗೆಹರಿಯುವ ಹೊತ್ತಿಗೆ ಸಮಾರಂಭದ ದಿನವೇ ಹತ್ತಿರ ಬಂದುಬಿಟ್ಟಿರುತ್ತದೆ! ಅಂತಹವರ ಸಮಸ್ಯೆ ಬಗೆಹರಿಸಲೆಂದೇ ಈಗ ಬಂದಿದೆ ‘ಜುವೆಲ್ ಬ್ಲೌಸ್’.
ಚಿನ್ನದ ಬೆಲೆ ಗಗನಕ್ಕೇರಿರುವ ಈ ಹೊತ್ತಿನಲ್ಲಿ, ಸೀರೆಗೆ ಸರಿಹೊಂದುವ ಚಿನ್ನದ ಆಭರಣವನ್ನು ಖರೀದಿಸಲು ಸಾಧ್ಯವಿಲ್ಲ, ಇರುವ ಚಿನ್ನದ ಆಭರಣಗಳನ್ನೇ ಪದೇ ಪದೇ ಧರಿಸಲೂ ಇಷ್ಟವಿಲ್ಲ ಎನ್ನುವ ಆಧುನಿಕ ನಾರಿಯರಿಗೆ ಜುವೆಲ್ ಬ್ಲೌಸ್ ಈಗ ಬೆಸ್ಟ್ ಚಾಯ್ಸ್. ಈ ರವಿಕೆಯೇ ಗ್ರ್ಯಾಂಡ್ ಲುಕ್ ಕೊಡುವುದರಿಂದ, ಕತ್ತಿಗೆ ಅಥವಾ ತೋಳಿಗೆ ಪ್ರತ್ಯೇಕ ಆಭರಣ ಧರಿಸಬೇಕಾದ ಅಗತ್ಯವೇ ಬರುವುದಿಲ್ಲ. ಹಾಕಿಕೊಳ್ಳಲೇಬೇಕು ಎನಿಸಿದರೆ ಕೃತಕ ಆಭರಣ ಧರಿಸಿದರೂ ನಡೆಯುತ್ತದೆ.
ಸೀರೆ ಸಿಂಪಲ್ ಆಗಿದ್ದರೂ ಬ್ಲೌಸ್‌ನಲ್ಲಿ ಜಾಸ್ತಿ ವರ್ಕ್ ಇರಬೇಕು, ಗ್ರ್ಯಾಂಡ್ ಲುಕ್ ನೀಡಬೇಕು ಎಂಬುದು ಸದ್ಯದ ಟ್ರೆಂಡ್. ಅದಕ್ಕೆ ತಕ್ಕಂತೆ ಅತ್ಯಂತ ಗ್ರ್ಯಾಂಡ್ ಆಗಿ ಕಾಣುವ ಡಿಸೈನರ್ ಬ್ಲೌಸ್ ಇದು. ಕುಂದನ್, ಬೀಡ್ಸ್‌ನಂತಹ ನಾನಾ ಬಗೆಯ ಆಕರ್ಷಕವಾದ ಆಲಂಕಾರಿಕ ವಸ್ತುಗಳನ್ನು ಬಳಸಿ ಇದನ್ನು ವಿನ್ಯಾಸ ಮಾಡಲಾಗುತ್ತದೆ. ಉದಾಹರಣೆಗೆ– ನೆಕ್ಲೆಸ್, ಬಾಜುಬಂದ್ ಧರಿಸುವ ಬದಲಾಗಿ ಬ್ಲೌಸ್‌ನಲ್ಲಿಯೇ ಅದೇ ರೀತಿಯ ವಿನ್ಯಾಸ ಮಾಡಲಾಗಿರುತ್ತದೆ. ಹೀಗಾಗಿ, ನೋಡಲು ಅದು ಥೇಟ್ ನೆಕ್ಲೆಸ್, ತೋಳಬಂದಿಯಂತೆಯೇ ಭಾಸವಾಗುತ್ತದೆ. ಹ್ಯಾಂಡ್ ಎಂಬ್ರಾಯಿಡರಿಗೆ ವಿವಿಧ ಜುವೆಲರಿಗಳನ್ನು ಬಳಸಿಯೂ ಇದನ್ನು ವಿನ್ಯಾಸ ಮಾಡಲಾಗುತ್ತದೆ.
ಜುವೆಲ್ ಬ್ಲೌಸ್ ಅನ್ನು ಸೀರೆ ಮಾತ್ರವಲ್ಲ ಹಾಫ್ ಸೀರೆ ಜತೆಗೆ ಮತ್ತು ಕ್ರಾಪ್ ಟಾಪ್ ಆಗಿಯೂ ಬಳಸಬಹುದು ಎಂಬುದು ಅದರ ಹೆಚ್ಚುಗಾರಿಕೆ. ಈ ವಿನ್ಯಾಸದ ಬ್ಲೌಸ್, ಸೀರೆ ಅಥವಾ ಲೆಹೆಂಗಾದ ಸಂಪೂರ್ಣ ಅಂದವನ್ನೇ ಬದಲಾಯಿಸಬಲ್ಲದು. ಉದ್ಯಮಿ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಕಾರ್ಯಕ್ರಮ ವೊಂದರಲ್ಲಿ ಲೆಹೆಂಗಾ ಜತೆ ಧರಿಸಿದ್ದ ಜುವೆಲರಿ ಬ್ಲೌಸ್ ಫ್ಯಾಷನ್ ಲೋಕದಲ್ಲಿ ಸದ್ದು ಮಾಡಿತ್ತು. ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸ ಮಾಡಿದ್ದ ಈ ಕಲಾತ್ಮಕ ಕಸೂತಿಯ ವಿನ್ಯಾಸಕ್ಕೆ ‘ಸೋ ಬ್ಯೂಟಿಫುಲ್, ಸೋ ಎಲಿಗಂಟ್, ಜಸ್ಟ್ ಲುಕಿಂಗ್ ಲೈಕ್ ವ್ಹಾವ್’ ಎನ್ನುವ ಮೆಚ್ಚುಗೆ ಹರಿದುಬಂದಿತ್ತು. ಕಾರ್ಯಕ್ರಮ
ವೊಂದರಲ್ಲಿ ನಟಿ ಜಾಹ್ನವಿ ಕಪೂರ್ ಅವರು ಧರಿಸಿದ್ದ ಜುವೆಲರಿ ಲೆಹೆಂಗಾ ಅವರಿಗೆ ಥೇಟ್ ಬಂಗಾರದ ಗೊಂಬೆಯ ಲುಕ್ ನೀಡಿತ್ತು.
ಸಾಂಪ್ರದಾಯಿಕವಲ್ಲದ ಆಭರಣಗಳನ್ನು ಇಷ್ಟಪಡುವವರು, ಚಿನ್ನ ಅಥವಾ ಬೆಳ್ಳಿಯನ್ನು ಇಷ್ಟಪಡದೆ ಇರುವವರಿಗೂ ಈ ರೀತಿಯ ಬ್ಲೌಸ್ ಡಿಸೈನ್ ಹೆಚ್ಚು ಇಷ್ಟವಾಗಬಹುದು. ಈ ಆಲಂಕಾರಿಕ ಬ್ಲೌಸ್‌ನಲ್ಲಿ ವಿಧವಿಧದ ಡಿಸೈನ್‌ಗಳು ಲಭ್ಯವಿವೆ. ಮಹಾರಾಣಿ ಬ್ಲೌಸ್, ಕಾಜಲ್ ವಂಕಿ ಡಿಸೈನ್ ಬ್ಲೌಸ್ ಕೆಲವು ಉದಾಹರಣೆಗಳು. ನಿಮ್ಮ ಬಳಿ ಇರುವ ಸೀರೆ ಮತ್ತು ಅದರ ಬಣ್ಣ ಆಧರಿಸಿ ಅದಕ್ಕೆ ತಕ್ಕಂತೆ ನೀವು ವಿನ್ಯಾಸ ಮಾಡಿಸಿಕೊಳ್ಳಬಹುದು.
ಅಂತಹ ಕೆಲವು ಬ್ಲೌಸ್‌ಗಳ ವಿವರ ಇಲ್ಲಿದೆ:
ನೆಕ್ಲೆಸ್ ಡಿಸೈನ್: ಟ್ರೆಂಡಿ ಬ್ಲೌಸ್ ಡಿಸೈನ್ ಎಂದರೆ ಅದು ಬೋಟ್‌ನೆಕ್ ಅಥವಾ ಹೈ ನೆಕ್ ಡಿಸೈನ್. ಜುವೆಲ್ ನೆಕ್ಲೆಸ್ ಡಿಸೈನ್ ಈ ರೀತಿಯ ಬ್ಲೌಸ್‌ಗೆ ಹೇಳಿ ಮಾಡಿಸಿದಂತೆ ಇರುತ್ತದೆ. ಸಣ್ಣ ಚೋಕರ್ ಅಥವಾ ದೊಡ್ಡದಾದ ನೆಕ್ಲೆಸ್ ರೀತಿಯಲ್ಲಿಯೂ ಡಿಸೈನ್ ಮಾಡಿಸಿಕೊಳ್ಳಬಹುದು.
ಟೆಂಪಲ್ ಡಿಸೈನ್: ವಿವಾಹದ ದಿನ ಮದುಮಗಳ ಅಂದ ಹೆಚ್ಚಿಸುವಲ್ಲಿ ಝರಿ ಸೀರೆಯದ್ದು ಒಂದು ತೂಕವಾದರೆ ಬ್ಲೌಸ್‌ನದ್ದು ಮತ್ತೊಂದು ತೂಕ. ಹೊಸ ಜೀವನದ ಹೊಸ್ತಿಲಿನಲ್ಲಿರುವ ವಧುವಿಗೆ ಟೆಂಪಲ್ ಡಿಸೈನ್ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಸಮೃದ್ಧಿಯ ಸಂಕೇತವಾದ ಲಕ್ಷ್ಮಿ, ಪಲ್ಲಕ್ಕಿಯಲ್ಲಿ ಕೂತ ವಧು... ಹೀಗೆ ವಿವಿಧ ಕಾನ್ಸೆಪ್ಟ್‌ನ ಬ್ಲೌಸ್‌ಗಳು ಮದುಮಗಳ ಅಂದವನ್ನು ಹೆಚ್ಚಿಸುತ್ತವೆ. ಮದುವೆಯಲ್ಲಿ ಪಾಲ್ಗೊಳ್ಳುವ ಅತಿ ಹತ್ತಿರದ ಸಂಬಂಧಿ ಹೆಣ್ಣುಮಕ್ಕಳಿಗೂ ಇದು ಚೆನ್ನಾಗಿ ಒಪ್ಪುತ್ತದೆ.
ವಂಕಿ ಜುವೆಲ್: ತೋಳಬಂದಿ ವಿನ್ಯಾಸವು ಮದುವೆ ಅಥವಾ ಸಾಂಪ್ರದಾಯಿಕ ಸಮಾರಂಭಗಳಿಗೆ ಸೂಕ್ತ ಎನಿಸುವ ಸರಳ ವಿನ್ಯಾಸ. ಈ ರೀತಿ ಡಿಸೈನ್ ಮಾಡಿಸಿದರೆ ವಂಕಿಯನ್ನು
ಧರಿಸಬೇಕಾಗಿಲ್ಲ. ಸೀರೆಯ ಬಣ್ಣಕ್ಕೆ ತಕ್ಕಂಥ ವಂಕಿ ಡಿಸೈನ್ ಇರುವುದರಿಂದ ಬಂಗಾರಕ್ಕಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ರವಿಕೆಯ ತೋಳಿಗೆ ಪೂರ್ತಿಯಾಗಿ ಅಥವಾ ತುದಿಯಲ್ಲಿ ಇಲ್ಲವೇ ಮಧ್ಯದಲ್ಲಿ ಮಾಡಿಸುವ ವಂಕಿ ವಿನ್ಯಾಸವು ಬ್ಲೌಸ್‌ಗೆ ಮತ್ತಷ್ಟು ಮೆರುಗು ತಂದುಕೊಡುತ್ತದೆ.
ಬೀಡ್ಸ್ ಜುವೆಲ್: ಕುತ್ತಿಗೆ ಮತ್ತು ತೋಳುಗಳಿಗೆ ಬೀಡ್ಸ್‌ಗಳಿಂದ ವರ್ಕ್ ಮಾಡಿರುವ ವಿನ್ಯಾಸದ ಬ್ಲೌಸ್‌ಗಳು ಫ್ಯಾಷನ್‌ಪ್ರಿಯರನ್ನು ಸೆಳೆಯುತ್ತವೆ.
ಕಾಸಿನ ಡಿಸೈನ್: ಪಟ್ಟು ಸೀರೆ ಮತ್ತು ಬ್ರೈಡಲ್ ಬ್ಲೌಸ್‌ಗೆ ಈ ಡಿಸೈನ್ ಸೂಕ್ತ. ಚಿನ್ನದ ವರ್ಣದ, ಚಿಕ್ಕ ಮತ್ತು ದೊಡ್ಡದಾದ ಕೃತಕ ನಾಣ್ಯಗಳನ್ನು ಈ ವಿನ್ಯಾಸಕ್ಕೆ ಬಳಸಲಾಗುತ್ತದೆ.
ಪರ್ಲ್ ಜುವೆಲ್: ಕೋಲ್ಡ್ ಶೋಲ್ಡರ್ ಬ್ಲೌಸ್‌ಗಳಿಗೆ ಈ ವಿನ್ಯಾಸ ಆಕರ್ಷಕವಾಗಿ ಕಾಣಿಸುತ್ತದೆ. ಇದು ರಾಯಲ್ ಲುಕ್ ಸಹ ನೀಡುತ್ತದೆ.
ಡಿಸೈನರ್‌ಗಳಿಂದ ಜುವೆಲ್ ಬ್ಲೌಸ್ ವಿನ್ಯಾಸ ಮಾಡಿಸಿಕೊಳ್ಳುವುದು ಅಲ್ಪ ದುಬಾರಿಯೇ. ಆದರೆ ಚಿನ್ನ ಕೊಳ್ಳುವುದಕ್ಕಿಂತ ಈ ರೀತಿಯ ಡಿಸೈನರ್ ಬ್ಲೌಸ್ ಲೇಸು. ಆಕರ್ಷಕವಾದ ವಿವಿಧ ಬಗೆಯ ಕೃತಕ ಆಭರಣಗಳಿಂದ ವಿನ್ಯಾಸಗೊಳಿಸುವ ಈ ಬ್ಲೌಸ್ ಮೂರ್ನಾಲ್ಕು ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ. ಪ್ರತಿ ಜುವೆಲ್ ಬ್ಲೌಸ್‌ನ ದರವು ಅದರ ವಿನ್ಯಾಸಕ್ಕೆ ಬಳಸುವ ಕೃತಕ ಆಭರಣದ ಬೆಲೆ ಮತ್ತು ಗುಣಮಟ್ಟವನ್ನು ಆಧರಿಸಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.