ಮಗನೊಂದಿಗೆ ಲೀನಾ ಮೆದೀನಾ
ಕೃಪೆ: X / @goel2705·
ಆ 'ಹೆಣ್ಣಿನ' ಬಾಲ್ಯ ಎಲ್ಲರಂತಿರಲಿಲ್ಲ.
ಸರಿಯಾಗಿ ಎದ್ದು ನಡೆಯಲಾಗದ ವಯಸ್ಸಿಗೇ ಮೈನೆರೆದಿದ್ದಳು. ಶಾಲೆ ಸೇರುವ ಹೊತ್ತಿಗೆ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅಷ್ಟು ಸಣ್ಣ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ, ಆಕೆಯ ಪ್ರೀತಿಯ ತಂದೆ ಜೈಲು ಸೇರಬೇಕಾಯಿತು. ತಾನೇ ಹೆತ್ತು, ಮುತ್ತು-ತುತ್ತಿಟ್ಟು ಸಾಕಿದರೂ ಮಗನಿಗೆ 'ನಿನ್ನಕ್ಕ ನಾನು' ಎಂದು ಸುಳ್ಳು ಹೇಳಿ ಸಾಕಿ ದೊಡ್ಡವನನ್ನಾಗಿ ಮಾಡಿದಳು. ಇಷ್ಟೆಲ್ಲ ಆದರೂ ಅವಳು ಕುಗ್ಗಲಿಲ್ಲ. ಬದುಕು ಒಡ್ಡಿದ ಸವಾಲುಗಳಿಗೆ ಹೆದರಿ ಮೂಲೆ ಸೇರಲಿಲ್ಲ. ಎಲ್ಲವನ್ನೂ ಮೆಟ್ಟಿನಿಂತು ಎಲ್ಲರಂತೆ ಬದುಕಿ ತೋರಿದಳು.
ಹೀಗೆ, ಆಡಿಕೊಂಡಿರಬೇಕಾದ ವಯಸ್ಸಿನಲ್ಲಿ ಇನ್ನೊಂದು ಜೀವಕ್ಕೆ ಜೀವವಾಗಿ, ಆಸರೆಯಾಗಿ, ಆಧಾರವಾಗಿ ಬದುಕಿ ಉಳಿದವರು ಪೆರುವಿನ ಲೀನಾ ಮೆದೀನಾ.
***
ಪೆರುವಿನ ಸಣ್ಣ ಹಳ್ಳಿಯೊಂದರಲ್ಲಿ 1933ರ ಸೆಪ್ಟೆಂಬರ್ 23 ರಂದು ಜನಿಸಿದ ಮೆದೀನಾ, ತನಗೆ 5 ವರ್ಷ 7 ತಿಂಗಳು 21 ದಿನವಾಗಿದ್ದಾಗ ತಾಯಿಯಾಗಿದ್ದಳು. ಇದುವರೆಗೆ ದಾಖಲಾಗಿರುವ ಮಾಹಿತಿಗಳ ಪ್ರಕಾರ ಅತ್ಯಂತ ಕಿರಿಯ ವಯಸ್ಸಿಗೆ ತಾಯಿಯಾದವಳು ಈಕೆ.
ಮೆದೀನಾಗೆ ತಾನು ಗರ್ಭಿಣಿ ಎಂಬುದು ಆರಂಭದಲ್ಲಿ ಗೊತ್ತಾಗಿರಲೇ ಇಲ್ಲ. ಅದು ಗೊತ್ತಾಗುವ ವಯಸ್ಸೂ ಅಲ್ಲ. ಆದರೆ ಹೊಟ್ಟೆ ಬೆಳೆಯುತ್ತ ಹೋಗಿ ಕೊನೆಗೊಂದು ದಿನ, ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಪೋಷಕರಿಗೆ, ವೈದ್ಯರು ಗಡ್ಡೆಯಾಗಿರಬಹುದು ಎಂದು ಹೇಳಿದ್ದರು. ಆದರೆ, ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರಿಗೇ ಆಘಾತವಾಗಿತ್ತು. ಆಗಾಗಲೇ ಮೆದೀನಾ 7 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಅಷ್ಟೊತ್ತಿಗೆ ಕಾಲ ಕೈ ಮೀರಿತ್ತು. ಮೆದೀನಾ ಜೀವಕ್ಕೆ ಕುತ್ತು ಬರಬಹುದಾದ್ದರಿಂದ, ಒಳಗಿದ್ದ ಜೀವವನ್ನು ಹೊರತೆಗೆಯದೇ ಬೇರೆ ದಾರಿಯಿರಲಿಲ್ಲ.
ಆದರೆ ಅದು ಅಷ್ಟು ಸುಲಭ ಇರಲಿಲ್ಲ. ತುಂಬು ಗರ್ಭಿಣಿಯಾಗಿ, ಹೆರಿಗೆ ಸಮಯ ತಲುಪಿದರೂ, ಮೆದೀನಾಳ ಸೊಂಟ ಶಿಶುವಿಗೆ ಜನ್ಮ ನೀಡಲು ಯೋಗ್ಯ ಆಕಾರದಲ್ಲಿ / ಬಲಿಷ್ಠವಾಗಿ ಬೆಳೆದಿರಲಿಲ್ಲ. ಹೀಗಾಗಿ 1939ರ ಮೇ 14ರಂದು ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮೂಲಕ ಮಗುವನ್ನು ಹೆರಿಗೆ ಮಾಡಿಸಲಾಯಿತು. 2.7 ಕಿ.ಗ್ರಾಂ ತೂಕ ಹಾಗೂ ಆರೋಗ್ಯವಾಗಿ ಹುಟ್ಟಿದ ಆ ಗಂಡು ಮಗುವಿಗೆ, ಹೆರಿಗೆ ಮಾಡಿಸಿದ ವೈದ್ಯ ಗೆರಾರ್ಡೊ ಲೊಜಾಡಾ ಅವರ ಗೌರವಾರ್ಥ ʼಗೆರಾರ್ಡೊʼ ಎಂದು ಹೆಸರಿಸಲಾಯಿತು.
ಮಗನೊಂದಿಗೆ ಲೀನಾ ಮೆದೀನಾ
'ಪ್ರೀಕಾಷಿಯಸ್ ಪ್ಯೂಬರ್ಟಿ' (ಅವಧಿಪೂರ್ವ ಪ್ರೌಢಾವಸ್ಥೆ) ಆರೋಗ್ಯ ಸಮಸ್ಯೆಯಿಂದಾಗಿ ಮೆದೀನಾ, ಮೂರನೇ ವಯಸ್ಸಿಗೇ ಋತುಮತಿಯಾಗಿದ್ದಳು ಎಂಬುದು ನಂತರ ತಿಳಿದು ಬಂದ ಸಂಗತಿ.
ಆದರೆ ಅಸಲು ಬಗೆಹರಿಯದ, ದುರಂತದ ಸಂಗತಿ ಏನೆಂದರೆ, ಆಕೆ ಗರ್ಭ ಧರಿಸಲು ಕಾರಣ ಯಾರು? ಈ ಪ್ರಶ್ನೆಗೆ ಉತ್ತರ ಹುಡುಕಾಟಕ್ಕಿಳಿದ ಪೊಲೀಸರು ಮೆದೀನಾ ತಂದೆಯನ್ನು ಆತ್ಯಾಚಾರ ಆರೋಪದಲ್ಲಿ ಬಂಧಿಸಿದರು. ಆದರೆ ಅವರು ಕೃತ್ಯವೆಸಗಿದನ್ನು ಸಮರ್ಥಿಸಲು ಸೂಕ್ತ ಸಾಕ್ಷ್ಯಗಳು ಸಿಗಲಿಲ್ಲವಾದ್ದರಿಂದ ಕೆಲ ದಿನಗಳ ನಂತರ ಜೈಲಿನಿಂದ ಬಿಡುಗಡೆಯಾದರು. ಬಂಧನ; ಬಿಡುಗಡೆಗಳೇನೋ ನಡೆದುಹೋದವು. ಆದರೆ ನಂತರದ ದಿನಗಳಲ್ಲಿ ಅವರು ಅನುಭವಿಸಿದ ವೇದನೆ, ಸಹಿಸಿದ ಅವಮಾನಗಳು ಅಷ್ಟಿಷ್ಟಲ್ಲ.
ಆ ಮುಗ್ಧೆ ಗರ್ಭವತಿಯಾಗಲು ಕಾರಣವೇನು? ಎಂಬುದು ಈಗಲೂ ರಹಸ್ಯವಾಗಿಯೇ ಉಳಿದಿದೆ. ಕಾರಣ ಗೊತ್ತಿಲ್ಲದ್ದರಿಂದ ಹಾಗೂ ಮೆದೀನಾಗೂ ತೀರಾ ಸಣ್ಣ ವಯಸ್ಸಾಗಿದ್ದರಿಂದ 'ತಾಯಿ-ಮಗನ' ಸಂಬಂಧವನ್ನು 'ಅಕ್ಕ-ತಮ್ಮ' ಎಂದೇ ಬಿಂಬಿಸಲಾಯಿತು. ಆದರೆ, ಗೆರಾರ್ಡೊಗೆ 10 ವರ್ಷವಿದ್ದಾಗ ‘ಅಕ್ಕ’ ಮೆದೀನಾಳೇ ಆತನಿಗೆ ತಾಯಿ ಎಂಬ ಸತ್ಯವನ್ನು ತಿಳಿಸಲಾಯಿತು.
ಗೆರಾರ್ಡೊ 40ನೇ ವಯಸ್ಸಿನಲ್ಲಿ (1979ರಲ್ಲಿ) ಮೂಳೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು ಬೇರೆಯದೇ ಸಂಗತಿ.
ಮೂಲ: ವಿವಿಧ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.