ADVERTISEMENT

ಹಳೆಯ ಸೀರೆಗೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 14:18 IST
Last Updated 1 ಜುಲೈ 2020, 14:18 IST
ಸುವಿಧಾ, ವಿನ್ಯಾಸಕಿ
ಸುವಿಧಾ, ವಿನ್ಯಾಸಕಿ   

‘ಜೊತೆ ಜೊತೆಯಲಿ...’ ಸೀರಿಯಲ್‌ನಲ್ಲಿ ರಾಜನಂದಿನಿ ಸೀರೆ ಮಾರ್ಕೆಟಿಂಗ್ ಮಾಡುವಾಗ, ಹಳೆಯ ಸೀರೆಗಳಿಂದ ಹೊಸ ಹೊಸ ಡ್ರೆಸ್‌ ಹೊಲಿಸಬಹುದು ಎಂದು ನಾಯಕಿ ಅನು ಸಿರಿಮನೆ ಐಡಿಯಾ ಕೊಡುವ ದೃಶ್ಯವಿದೆ. ಈಗ ಅದೇ ರೀತಿ ಮನೆಯಲ್ಲಿ ಬಳಸದಿರುವ ಸೀರೆಗಳಿಂದ ಹೊಸ ವಿನ್ಯಾಸದ ಡ್ರೆಸ್‌ಗಳನ್ನು ಹೊಲಿಯಬಹುದು. ನಿಮ್ಮಲ್ಲಿ ಸೂಜಿದಾರದ ಜತೆಗೆ ಹೊಲಿಗೆಯಂತ್ರವಿದ್ದು ಹೊಲಿಯುವ ಹವ್ಯಾಸವಿದ್ದರೆ, ಮನೆಯಲ್ಲಿಯೇ ಕುಳಿತು ಹಳೆಯ ಸೀರೆಗಳಿಗೆ ಹೊಸ ರೂಪ ನೀಡಬಹುದು. ಜೊತೆಗೆ, ಹಳೆಯ ಸೀರೆಗಳಿಂದ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಬಹುದು.

‌‘ಅದೆಲ್ಲಾ ಸರಿ. ಎಂತಹ ಡ್ರೆಸ್‌ ಹೊಲಿಯಬಹುದು’ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಬೆಂಗಳೂರಿನ ವಸ್ತ್ರ ವಿನ್ಯಾಸಕಿ ಸುವಿಧಾ, ಹಳೆಯ ಸೀರೆಯಲ್ಲೇ ನವೀನ ವಿನ್ಯಾಸಗಳ ಡ್ರೆಸ್‌ಗಳನ್ನು ಹೇಗೆ ಹೊಲಿಯಬಹುದು ಎಂಬ ಬಗ್ಗೆ
‘ಪ್ರಜಾ ಪ್ಲಸ್’ಗೆ ಮಾಹಿತಿ ನೀಡಿದ್ದಾರೆ.

ಹೀಗೆಲ್ಲ ಹೊಲಿಯಬಹುದು

ADVERTISEMENT

ಹಳೆಯ ಸೀರೆಯಲ್ಲಿ ಸುಲಭವಾಗಿ ಹೊಲಿಯಬಹುದಾದ ಡ್ರೆಸ್‌ ಎಂದರೆ ಸ್ಕರ್ಟ್‌. ದೊಡ್ಡ ಅಂಚು ಇರುವಸೀರೆಯಲ್ಲಿ ಸ್ಕರ್ಟ್‌ ಮಾಡಿಕೊಂಡರೆ ಆಕರ್ಷಕವಾಗಿ ಕಾಣುತ್ತದೆ. ಅದಕ್ಕೆ ಹೀಗೆ ಮಾಡಿ; ನಿಮ್ಮ ಸೊಂಟದ ಸುತ್ತಳತೆಗೆ ತಕ್ಕಂತೆ ಸೀರೆಯ ನೆರಿಗೆ ಮಾಡಿ, ನೆರಿಗೆಗಳನ್ನು ಒಂದಕ್ಕೊಂದು ಸೇರಿಸಿ ಸೂಜಿದಾರದಲ್ಲೇ ಹೊಲಿಗೆ ಹಾಕಿ. ಎರಡು ತುದಿ ಸೇರಿಸಿ. ಪಟ್ಟಿ ಅಥವಾ ಲಾಡಿ ಹಾಕಲು ಜಾಗಬಿಡಿ. ಇಲ್ಲದಿದ್ದರೆ, ಮೇಲೊಂದು ಬೆಲ್ಟ್‌ ಧರಿಸಲು ಅವಕಾಶ ಕಲ್ಪಿಸಿದರೂ ಸಾಕು. ಹೊಸ ಮಾದರಿಯ ಸ್ಕರ್ಟ್‌ ಸಿದ್ಧ.

ಒಂದು ಸೀರೆ ಕತ್ತರಿಸಿ, ಸ್ಕರ್ಟ್‌ ಮಾಡಿದ್ದಾಯ್ತಾ? ಈಗ ಉಳಿದ ಸೀರೆಯನ್ನು ದಾವಣಿಯಾಗಿ ಬಳಸಬಹುದು. ಈ ದಾವಣಿಗೆ ಹೊಸ ಸ್ಪರ್ಶ ನೀಡಲು ಸೀರೆ ಅಂಚು ಬದಲಿಸಬೇಕು. ಬಟ್ಟೆ ಅಂಚಿನ ಬದಲು ಕುಂದನ್, ಕಟ್‌ವರ್ಕ್, ಮಿರರ್ ಕಸೂತಿ ಇರುವ ಅಂಚುಗಳನ್ನು ಹಾಕಿಕೊಳ್ಳಬಹುದು. ಅಂಚು ಬದಲಾಯಿಸುತ್ತಿದ್ದಂತೆ ಇಡೀ ಬಟ್ಟೆಗೆ ಹೊಸ ರೂಪ‍ ಸಿಗುತ್ತದೆ.

ಇನ್ನು ಸೀರೆಯಲ್ಲಿ ಸೆರಗಿನ ಭಾಗ ಉಳಿಯುತ್ತದೆ. ಅದನ್ನು ಬಳಸಿ ಸ್ಕರ್ಟ್‌ಗೆ ಹೊಂದುವಂತಹ ಟಾಪ್‌ ಹೊಲಿಯಬಹುದು. ಈ ಟಾಪ್‌ ಅನ್ನುಬೇರೆ ಸೀರೆಗೆ ಬ್ಲೌಸ್‌ ಆಗಿಯೂ ಬಳಸಬಹುದು.ಇದು ಸೀರೆಗೆ ಇಂಡೊ ಕ್ಲಾಸಿಕ್ ಲುಕ್ ನೀಡುತ್ತದೆ.

ಹಾಗೇ ಹೈವೇಸ್ಟ್‌ ಪ್ಯಾಟ್‌ನೊಂದಿಗೂ ಈ ಟಾಪ್ಚೆನ್ನಾಗಿ ಕಾಣುತ್ತದೆ. ಈ ರೀತಿ ಹೊಂದಿಸಿ ಧರಿಸುವುದಕ್ಕೆ ‘ಸ್ಟ್ರೀಟ್ ವೇರ್’ ಎನ್ನುತ್ತಾರಂತೆ.

ಗೃಹೋಪಯೋಗಿ ವಸ್ತುಗಳು

ತುಂಬಾ ಹಳೆಯ ಸೀರೆಯಾದರೆ ಇಟ್ಟಲ್ಲೇ ಹರಿದುಹೋಗಿರುತ್ತದೆ. ಹಾಗಾದರೆ, ಅದನ್ನು ಉಟ್ಟು ನೋಡೊಣ ಅಂದರೆ, ಉಡುವುದು ಕಷ್ಟ. ಇಂಥ ಸೀರೆಗಳಿಂದ ಸೋಫಾ ತುದಿಗಳಲ್ಲಿ ಇಡುವ ಕುಷನ್‌ಗಳಿಗೆ ಕವರ್‌‌ಗಳನ್ನು ಹೊಲಿಯಬಹುದು. ಚೌಕಾಕಾರವಾಗಿ ಬಟ್ಟೆ ಕತ್ತರಿಸಿ ಮೂಲೆ ಹೊಲಿದು, ಹಳೆ ಬಟ್ಟೆಯನ್ನು ತುಂಬಿದರೆ ಕುಷನ್ ಸಿದ್ಧ.

ಕಾಟನ್‌ ಸೀರೆಗಳ ಅಂಚು ತೆಗೆದು ಕಿಟಕಿಗಳಿಗೆ ಪರದೆಯನ್ನಾಗಿ ಮಾಡಬಹುದು. ಉಳಿದ ಅಂಚಿನಿಂದ ಕಾಲು ಒರೆಸುವ‌ ಮ್ಯಾಟ್‌ ಮಾಡಬಹುದು. ಮೂರು ಅಂಚು ಬಳಸಿ ಜಡೆಯಂತೆ ಹೆಣೆದು, ನಂತರ ಅದನ್ನು ವೃತ್ತಾಕಾರದಲ್ಲಿ ಸುತ್ತಿ ಒಂದಕ್ಕೊಂದು ಸೇರಿಸಿ ಸೂಜಿದಾರದಿಂದ ಹೊಲಿದರೆ ಆಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.