ADVERTISEMENT

ಭೂಮಿಕಾ: ಪಿಸು ಮಾತಿಗೆ ಹುಸಿ ಪ್ರೀತಿಗೆ ಸೋಲದಿರಲಿ ಮನಸು..

ಸುಶೀಲಾ ಡೋಣೂರ
Published 5 ಏಪ್ರಿಲ್ 2025, 0:54 IST
Last Updated 5 ಏಪ್ರಿಲ್ 2025, 0:54 IST
   

ಏನ್‌ ಚಂದ ಆ ನಿಮ್ಮ ಕಣ್ಣು...

ಸಂಪಿಗೆ ಮೂಗಿಗೆ ಹಾಕಿದ ಹೊಳೆವ ಮೂತಿಯೂ ಅಂದ.

ನಿಮ್ಮ ಕೇಶರಾಶಿಯ ನುಣುಪಿನ ಗುಟ್ಟೇನು?

ADVERTISEMENT

ಇಷ್ಟು ವರ್ಷಗಳಿಂದ ನೋಡ್ತಾ ಇದ್ರೂ ಒಂದಿಷ್ಟೂ ಬದಲಾಗಿಲ್ಲ ನೀವು.

ಎಷ್ಟು ಸೊಗಸು ನಿಮ್ಮ ಆ ಧ್ವನಿ...

ಏನಾಯ್ತು? ಎರಡು ದಿನದಿಂದ ಸಪ್ಪಗಾಗಿದ್ದೀರಿ?

ಏನೇ ಇದ್ದರೂ ನನ್ನೆದುರು ಹೇಳಿಕೊಳ್ಳಿ, ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ...

***

ಮನೆ, ಮಕ್ಕಳು, ಸಂಸಾರ, ಕಚೇರಿ, ಮೀಟಿಂಗು, ಪ್ರೆಸೆಂಟೇಶನ್ನು, ಓಡಾಟ, ಸುತ್ತಾಟಗಳ ನಡುವೆ ದಣಿದು ಉಸ್ಸೆಂದು ಕೂತ ಹೊತ್ತು ಮೊಬೈಲಿನ ಬೀಪ್ ಸದ್ದು... ತಮ್ಮವರಲ್ಲ, ಸ್ನೇಹಿತರೂ ಅಲ್ಲ, ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್ ಮೇಲೆ ಮಾತ್ರ ಎದುರಾಗುವ ಆಗಂತುಕ ಗೆಳೆಯರು ಕೊಡುವ ಕ್ಷಣಮಾತ್ರದ ಖುಷಿಗಳು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್, ವಾಟ್ಸ್‌ಆ್ಯಪ್‌, ಎಕ್ಸ್ ಖಾತೆಯ ಇನ್‌ಬಾಕ್ಸ್‌ನಲ್ಲೊಮ್ಮೆ ಕಣ್ಣಾಡಿಸಿದರೆ ಸಾಕು, ಇಂಥವೇ ಮೆಸೇಜುಗಳು... ಒಮ್ಮೊಮ್ಮೆ ಚಿಕ್ಕ ಪುಳಕ, ಸಣ್ಣ ನಗು, ಒಮ್ಮೊಮ್ಮೆ ಉದಾಸೀನತೆ, ತಿರಸ್ಕಾರ, ಅಸಡ್ಡೆ, ಕೆಲವೊಮ್ಮೆ ದೊಡ್ಡ ರೇಜಿಗೆ, ಕಿರಿಕಿರಿಗೂ ಕಾರಣವಾಗುವಂತಹ ಸಂದೇಶಗಳು. ಒಂದು ಪೋಸ್ಟ್, ಸ್ಟೋರಿ, ಸ್ಟೇಟಸ್, ಡೀಪಿ ಬದಲಾದಾಗಲೆಲ್ಲಾ ಬೇಕೆಂದೊ, ಬೇಡವೆಂದೊ ತೂರಾಡುವ ಸಾಲುಗಳು.

ಹೆಣ್ಣು ಸೋಲುವ, ಸಲುಗೆಗೆ ಸಿಗುವ, ಹಗುರಾಗುವ ಮೂಲ ಧಾತು ಹೊಗಳಿಕೆ ಎನ್ನುವ ಸಣ್ಣ ಎಳೆ ಹಿಡಿದು ಆ ಕ್ಷಣದ ತಮ್ಮ ಮಾತಿನ ಹುಕಿಗೆ ನಿಮ್ಮನ್ನು ಒದಗಿಸಿಕೊಳ್ಳುವ ಕಲಾವಿದರು. ಆದರೆ, ಎಲ್ಲ ಸಂದೇಶ ಧೀರರೂ ಮಹಾವಂಚಕರೂ ಅಂತ ಕೂಡ ಅಲ್ಲ. ಬಹುತೇಕರಿಗೆ ಆ ಗಳಿಗೆಯ ಖಾಲಿತನವನ್ನು ಸುಂದರ ಕ್ಷಣಗಳಿಂದ ತುಂಬಿಕೊಳ್ಳಬೇಕಿರುತ್ತದೆ. ಅದು ಸ್ನೇಹ-ಸಾಂಗತ್ಯ, ಬಾಂಧವ್ಯ ಅಂತೇನೂ ಅಲ್ಲದ ಒಡನಾಟವೊಂದರ ಹುಡುಕಾಟವಷ್ಟೇ. ಅದು ವರ್ಚುವಲ್ ಆಗಿದ್ದರೂ ಸರಿ, ಒಲಿದರೆ ಕಾಫಿಯೂ ಸೈ. ಆದರೆ, ಇಂತಹ ಪಿಸುಮಾತಿಗೆ, ಹುಸಿ ಪ್ರೀತಿಗೆ ಎಲ್ಲರೂ ಸೋತು ಶರಣಾಗುವುದಿಲ್ಲ, ಅಂತಹ ಸ್ಕ್ರೀನ್‌ ಸ್ನೇಹಕ್ಕೆ ನಿಮ್ಮಲ್ಲಿ ಸಮಯವಿಲ್ಲ  ಎನ್ನುವ ಸಂದೇಶ ನಿಮ್ಮಿಂದ ಹೋಗಲಿ, ಅದು ಮೌನ, ತಿರಸ್ಕಾರ, ಅನ್ ಫ್ರೆಂಡ್, ಅನ್ ಫಾಲೋ ಮೂಲಕವಾದರೂ ಸರಿ... ಆಮೇಲೆ ನೋಡಿ, ಅವರು ಮತ್ತೊಮ್ಮೆ ನಿಮ್ಮ ಪ್ರೊಫೈಲ್ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಅಷ್ಟರ ಮಟ್ಟಿಗೆ ಬಹುತೇಕ ಈ ’ಸೋಷಿಯಲ್’ ಸ್ನೇಹಿತರು ನಿರುಪದ್ರವಿಗಳು.

ಹೌದು, ಹೆಣ್ಣು ಭಾವಜೀವಿಯೇ. ಭಾವನೆಯೇ ಅವಳ ಅಂತಃಶಕ್ತಿ, ಹಾಗೆಂದು ಹುಸಿ ಬಾಂಧವ್ಯ ಎಲ್ಲಿಂದ ಬಂದರೂ ಬೊಗಸೆಯೊಡ್ಡುತ್ತಾಳೆ ಅಂತೇನೂ ಅರ್ಥವಲ್ಲ. ಮನೆಯ ಹೊರಗೂ ಒಳಗೂ ದುಡಿಯುತ್ತ, ಮನೆ, ಮಕ್ಕಳು, ಸಂಸಾರ, ಜವಾಬ್ದಾರಿಗಳ ನಡುವೆ, ಎಲ್ಲರಿಗೂ ಪ್ರೀತಿ ಹಂಚುತ್ತ, ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತ, ತನಗಾಗಿ ತಾನು ಒಂದು ಗಳಿಗೆ ಸಮಯವಿಟ್ಟುಕೊಳ್ಳದೇ ತೇಯುವವಳು. ಅಚಾನಕ್ಕಾಗಿ ಹರಿದು ಬರುವ ಇಂತಹ ಸಂದೇಶಗಳು ನೀಡುವ ಕಾಳಜಿ, ಅಂತಃಕರಣ, ಸಹಾನುಭೂತಿಯ ಮಾತುಗಳು ಅವಳನ್ನು ಒಂದು ಕ್ಷಣ ಮೆದುಗೊಳಿಸಬಹುದು. ಆದರೆ, ಇಲ್ಲಿ ಸೋಸಿ ತೆಗೆದರೂ ಒಂದೇ ಒಂದು ಸ್ನೇಹದ ಕೊಂಡಿ ಸಿಗಲಿಕ್ಕಿಲ್ಲ. ಸಿಗುವುದು ಹೊಗಳುಭಟರ ಹುಸಿಮಾತುಗಳಷ್ಟೇ.

ಹೆಣ್ಣು ಕೂಡ ಸಮಾಜಜೀವಿ, ಸ್ನೇಹಜೀವಿ. ಬೆಚ್ಚನೆಯ ಭಾವ ಮೀಟುವ ನೆಚ್ಚಿನ ಸ್ನೇಹಕ್ಕಾಗಿ ತಡಕಾಡಿದಾಗ ಸಿಗುವ ಇಂತಹ ಹೊಗಳಿಕೆಯ ಹೊನ್ನ ಶೂಲಗಳು ಆ ಕ್ಷಣದ ಮಾತಿನ ಮಂಟಪಗಳಷ್ಟೇ, ಸ್ನೇಹದ ಕೊಂಡಿಗಳಾಗಲಾರವು. ಗಟ್ಟಿಯಾದ ಗೆಳೆತನ ಇಂತಹ ಬಣ್ಣದ ಮಾತುಗಳಿಂದ ಹೆಣೆದುಕೊಳ್ಳುವ ಜೇಡರ ಬಲೆಯಲ್ಲ. ’ಎಂಥ ಸಮಯದಲ್ಲೂ ನಿನ್ನ ಜೊತೆ ನಾನಿರುತ್ತೀನಿ” ಎಂದವರೆಲ್ಲಾ ಆ ಸಮಯ ಬಂದಾಗ ಅಲ್ಲಿ ನಿಲ್ಲುವುದಿಲ್ಲ. ’ನನ್ನ ನಂಬು, ನಾನಿದ್ದೀನಿ” ಎಂದವರೆಲ್ಲಾ ನಂಬಿಕೆಗೆ ಯೋಗ್ಯರಾಗುವುದಿಲ್ಲ. ನಿಜವಾದ ಸ್ನೇಹಿತ ಹಾಗೆಲ್ಲಾ ಮೆಸೆಂಜ್‌ಗಳಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತ ನಿಲ್ಲುವುದಿಲ್ಲ. ಲೈಕ್, ಶೇರ್, ಕಮೆಂಟ್ ಮಾಡಲಿಲ್ಲವೆಂದು ದೂರ ಸರಿಯುವುದಿಲ್ಲ. ಕಾಫಿಗೆ ಬರಲಿಲ್ಲವೆಂದು ಮುನಿಸಿಕೊಳ್ಳುವುದಿಲ್ಲ. ಹಾಗೆಯೇ ನಿಮ್ಮ ಕೇಶರಾಶಿ, ಮುಖಾರವಿಂದ, ಹೊಳೆಯುವ ಮೂಗುತಿ, ಮೃದು ಮಾತುಗಳ ಸುತ್ತಲೇ ಗಿರಿಗಿಟ್ಲಿಯ ಹಾಗೆ ಸುತ್ತುವುದಿಲ್ಲ.

ಸ್ನೇಹ ಇದೆಲ್ಲದರಾಚೆಗೆ ಬೆಳೆದು ನಿಲ್ಲುತ್ತದೆ. ನಿಮ್ಮಲ್ಲಿನ ಅಂತಃಶಕ್ತಿಯನ್ನು ಜಾಗೃಗೊಳಿಸುತ್ತದೆ, ಕುಸಿದಾಗ ಧೈರ್ಯ ತುಂಬುತ್ತದೆ, ಸೋತಾಗ ಆತ್ಮಸ್ಥೈರ್ಯ ನೀಡುತ್ತದೆ, ಎಡವಿದಾಗ ಎಚ್ಚರಿಸುತ್ತದೆ. ನಿಮ್ಮ ಬೆನ್ನ ಹಿಂದೆಯೂ ನಿಮ್ಮ ಘನತೆ ಕುಸಿಯಗೊಡದಂತೆ  ನೋಡಿಕೊಳ್ಳುತ್ತದೆ. ನಿಜವಾದ ಸ್ನೇಹ ಯಾವತ್ತೂ ಮೊಬೈಲ್ ಅಥವಾ ಕಂಪ್ಯೂಟರ್ ಸ್ಕ್ರೀನ್‌ಗೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಅದರಾಚೆಗಿನ ಕಾಫಿ ಶಾಪ್, ಡಿನ್ನರಿಗೆ ಹಾತೊರೆಯುವುದಿಲ್ಲ. ಅದು ನಿಮ್ಮ ಕುಟುಂಬವನ್ನೂ ಒಳಗೊಳ್ಳುತ್ತದೆ, ನೆಲೆಗೊಳ್ಳುತ್ತದೆ ಅಲ್ಲಿಯೂ ಗೆಲ್ಲುತ್ತದೆ, ನಿಲ್ಲುತ್ತದೆ. ನಿಮ್ಮೊಂದಿಗೆ ನಿಮ್ಮ ಕುಟುಂಬವನ್ನೂ ಆಧರಿಸುತ್ತದೆ.

ಯಾವುದು ಸ್ನೇಹ, ಯಾವುದು ಸಲುಗೆ, ಯಾವುದು ಆ ಕ್ಷಣಕ್ಕೆ ಸಲ್ಲಬಹುದಾದ ಸಮಾಧಾನ, ಯಾವುದು ಬದುಕಿನ ಏರುದಾರಿಯಲ್ಲೂ ಜೊತೆ ನಿಲ್ಲಬಹುದಾದ ಅನುಬಂಧ ಎನ್ನುವುದು ಗೊತ್ತಾಗದ ಗೊಂದಲವೇನೂ ಅಲ್ಲ. ಇಂದಿನ ಬದಲಾದ ಕಾಲಘಟ್ಟದಲ್ಲಿ ಹೆಣ್ಣು-ಗಂಡಿನ ನಡುವೆ ಸ್ನೇಹ ಸರಳವಾಗುತ್ತಿದೆ. ಆದರೆ, ಸ್ನೇಹದ ಪರಿಧಿ, ಇತಿ-ಮಿತಿಯ ಅರಿವಿದ್ದರೆ, ವಲಯರೇಖೆ ಸ್ಪಷ್ಟವಾಗಿದ್ದರೆ ಆಘಾತಕ್ಕೆ ಆಸ್ಪದವಿರದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.