ADVERTISEMENT

Menopause: ಋತು‘ಬಂಧ’ನದಲ್ಲಿ ಕುಗ್ಗದಿರಲಿ ಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜನವರಿ 2026, 6:14 IST
Last Updated 30 ಜನವರಿ 2026, 6:14 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

‘ಯಾಕೆ ಶಾಲಿನಿ ಇತ್ತೀಚಿಗೆ ಎಲ್ಲದಕ್ಕೂ ಸಿಟ್ ಮಾಡ್ತೀಯಾ, ಯಾವ ಕೆಲಸವನ್ನೂ ಮುಂಚಿನ ರೀತಿ ಗಮನವಿಟ್ಟು ಮಾಡುವುದಿಲ್ಲ, ಸಪ್ಪೆ ಮುಖ ಹಾಕಿಕೊಂಡು ಕೂರುತ್ತೀಯಾ’ ಎಂದು ಗದರಿದ ಗಂಡ ಕಚೇರಿಗೆ ಹೊರಟಿದ್ದ. ವಯಸ್ಸು 50ರ ಆಸುಪಾಸಿನಲ್ಲಿದ್ದ ಶಾಲಿನಿ ಮಾನಸಿಕ ತೊಳಲಾಟದಲ್ಲಿ ಸಿಲುಕಿ ಏನಾಗುತ್ತಿದೆ ಎಂದು ಅರಿಯದೆ ಕಸಿವಿಸಿಗೊಂಡಿದ್ದಳು. ಇದ್ದಕ್ಕಿದ್ದ ಹಾಗೆ ಗೊಂದಲ, ಭಾವನೆಗಳ ಉದ್ವೇಗವನ್ನು ನಿಭಾಯಿಸಲಾಗಿದೆ, ಮನೆಯವರ ಕಣ್ಣಿನಲ್ಲೂ ದೂಷಿಯಾಗುತ್ತಿದ್ದಳು ಶಾಲಿನಿ. ಆ ಸಮಯಕ್ಕೆ ಮನೆಗೆ ಬಂದಿದ್ದ ಗೆಳತಿಯೊಂದಿಗೆ ಮಾತನಾಡಿದ ಶಾಲಿನಿಗೆ ಅರಿವಾಗಿದ್ದು ತನಗೆ ಮುಟ್ಟು ನಿಲ್ಲುತ್ತಿದೆ. ಋತುಬಂಧದ ಸಮಯವಿದು ಎಂದು. 

ಹದಿಹರೆಯದಲ್ಲಿ ಆರಂಭವಾಗುವ ಮುಟ್ಟು ವಯಸ್ಸು 45 ದಾಟುತ್ತಿದ್ದಂತೆ ನಿಲ್ಲುತ್ತದೆ. (ಕೆಲವರಲ್ಲಿ 40ನೇ ವಯಸ್ಸಿನಲ್ಲಿ, ಇನ್ನೂ ಕೆಲವರಲ್ಲಿ 55ನೇ ವಯಸ್ಸಿನಲ್ಲಿ ಋತುಬಂಧ ಕಾಡಬಹುದು) ಒಂದು ವರ್ಷಗಳ ಕಾಲ ಋತುಸ್ರಾವವಾಗದಿದ್ದರೆ ಇದಕ್ಕೆ ಋತುಬಂಧ ಅಥವಾ ಮೆನೋಪಾಸ್‌ ಎಂದು ಕರೆಯುತ್ತಾರೆ. ಸಂತಾನೋತ್ಪತ್ತಿ ಸಾಮರ್ಥ್ಯದ ಸ್ವಾಭಾವಿಕ ಅಂತ್ಯವೆನ್ನುತ್ತದೆ ವೈದ್ಯಲೋಕ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆ ಮಹಿಳೆಯರನ್ನು ತಲ್ಲಣಗೊಳಿಸುತ್ತದೆ. ಹೇಳಿಕೊಳ್ಳಲಾಗ ಮಾನಸಿಕ ಯಾತನೆ ಅವಳನ್ನು ಕಾಡುತ್ತದೆ. ಪ್ರತಿ ಹೆಣ್ಣು ತನ್ನ ಜೀವಿತಾವಧಿಯ‌ಲ್ಲಿ ಎದುರಿಸುವ ಘಟ್ಟವಿದು. ಇಂತಹ ಸಂದರ್ಭದಲ್ಲಿ ಬೇಕಾಗಿರುವುದು ಕುಟುಂಬದ ನೆರವು.

ADVERTISEMENT

ಈ ಸಮಯದಲ್ಲಿ ದೇಹದಲ್ಲಿ ಈಸ್ಟ್ರೋಜನ್ ಉತ್ಪಾದನೆ ಹೆಚ್ಚಳವಾಗುವ ಕಾರಣ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಉಂಟಾಗಿ, ಮನಸ್ಥಿತಿಯ ನಿಯಂತ್ರಣ, ನಿದ್ರೆ ಮತ್ತು ಗ್ರಹಿಕೆಯ ಸಾಮರ್ಥ್ಯದಲ್ಲಿ ಬದಲಾವಣೆ ಉಂಟಾಗುವಂತೆ ಮಾಡುತ್ತದೆ. ಋತುಬಂಧಕ್ಕೆ ಕಾಲಿಡುವ ಮಹಿಳೆಯರಲ್ಲಿ ಮೂರು ಹಂತಗಳಿರುತ್ತವೆ. ಪ್ರೀಮೆನೋಪಾಸ್, ಮೆನೋಪಾಸ್ ಮತ್ತು ಪೋಸ್ಟ್‌ಮೆನೋಪಾಸ್.

ಮಾನಸಿಕತೆಯಲ್ಲಿಯೇ ದೊಡ್ಡ ಬದಲಾವಣೆ

ಋತುಬಂಧ ದೈಹಿಕವಾಗಿ ಬದಲಾವಣೆ ತಂದಷ್ಟೇ ಮಾನಸಿಕವಾಗಿಯೂ ಹೊಡೆತ ನೀಡುತ್ತದೆ. ಮನಸ್ಥಿತಿಯ ಹಠಾತ್ ಬದಲಾವಣೆಗಳು, ಇದ್ದಕ್ಕಿದ್ದ ಹಾಗೆ ಮೈ ಬೆವರುವುದು, ಮಾನಸಿಕ ಕಿರಿಕಿರಿ, ದುಃಖ ಉಮ್ಮಳಿಸುವುದು, ಅಳು ಬರುವುದು, ಅನಗತ್ಯ ಆತಂಕ, ಗೊಂದಲ, ಸಿಟ್ಟು ಇವುಗಳು ಹೆಚ್ಚಿನವರಲ್ಲಿ ಕಂಡುಬರುತ್ತದೆ. ಇವಲ್ಲದೆ ಹಾರ್ಮೋನುಗಳ ಅಸಮತೋಲನದಿಂದ, ಈಗಾಗಲೇ ಆತಂಕ ಮತ್ತು ಖಿನ್ನತೆ ಸಮಸ್ಯೆಯಿದ್ದರೆ ಮತ್ತಷ್ಟು ಪ್ರಚೋದಿಸಿ ಮನೋನಿಗ್ರಹವನ್ನು ಕುಂಠಿಸಬಹುದು.

ಹಲವರಲ್ಲಿ ನಿದ್ರಾಹೀನತೆ, ಆಯಾಸ, ಆಲೋಚನೆಗಳೇ ಹೊಳೆಯದಂತಾಗುವುದು, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅನೇಕ ಮಹಿಳೆಯರಲ್ಲಿ ನೆನಪಿನ ಶಕ್ತಿಯ ಕೊರತೆ ಅಥವಾ ಏಕಾಗ್ರತೆಯ ತೊಂದರೆಯನ್ನು ಅನುಭವಿಸುತ್ತಾರೆ.

ಕುಟುಂಬವೇ ಶಕ್ತಿಯಾಗಿರಲಿ

ಮನುಷ್ಯ ವಯಸ್ಸಾದಂತೆ ಮಗುವಾಗುತ್ತಾನೆ ಎನ್ನುವ ಮಾತಿದೆ. ಅದು ಋತುಬಂಧದ ಸಮಯದಲ್ಲೂ ಅನ್ವಯವಾಗುತ್ತದೆ. ಹೇಳಿಕೊಳ್ಳಲಾಗದೆ ತೊಳಲಾಟದಲ್ಲಿ ಸಿಲುಕಿರುವ ಮಹಿಳೆಗೆ ಬೆಂಬಲವಾಗಿ ನಿಲ್ಲಬೇಕಾಗಿರುವುದು ಕುಟುಂಬ ಸದಸ್ಯರ ಜವಾಬ್ದಾರಿಯಾಗಿರುತ್ತದೆ. ‘ಇವಳಂತೂ ಇತ್ತೀಚೆಗೆ ಸುಖಾ ಸುಮ್ಮನೆ ಸಿಟ್ಟಾಗುತ್ತಾಳೆ, ಅಳುತ್ತಾಳೆ. ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಯಿದು, ಸಹಿಸಿಕೊಳ್ಳಬೇಕು’ ಎಂದು ಅಸಡ್ಡೆ ತೋರುವ, ಕೋಪಿಸಿಕೊಳ್ಳುವ ಬದಲು ಯಾಕೆ ಹೀಗೆ ಮಾಡುತ್ತಿರಬಹುದು ಎಂದು ಯೋಚಿಸಿ, ಮುಕ್ತವಾಗಿ ಮಾತನಾಡಿದರೆ ಅವಳ ಮನಸ್ಸು ಹಗುರ, ಸಮಸ್ಯೆಯನ್ನೂ ತಿಳಿದುಕೊಳ್ಳಬಹುದು.

ವೈದ್ಯರ ಸಲಹೆ ಅಗತ್ಯ

ಋತುಬಂಧದ ಸಮಯದಲ್ಲಿ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿರುತ್ತದೆ. ತೀರಾ ಮಾನಸಿಕ ಬದಲಾವಣೆಯಾಗುತ್ತಿದ್ದರೆ ಸಮಾಲೋಚಕರ ಸಲಹೆ ಪಡೆಯುವುದು ಉತ್ತಮ. ಮುಕ್ತವಾಗಿ ಮಾತನಾಡಿದಾಗ ಸಮಸ್ಯೆಯ ಆಳವನ್ನು ತಿಳಿದು ಪರಿಹಾರ ಕಂಡುಕೊಳ್ಳಬಹುದು.

ಋತುಬಂಧ ಮಹಿಳೆಯ ಚೈತನ್ಯದ ದಿನಗಳ ಮುಕ್ತಾಯವಲ್ಲ, ಜೀವನದ ಹೊಸ ಹಂತದ ಆರಂಭ. ಕುಟುಂಬದ ನೆರವು, ಸ್ವಆರೈಕೆಯಿಂದ ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ಡಾ.ಕವಿತಾ ಕೋವಿ, ಪ್ರಸೂತಿ, ಸ್ತ್ರೀರೋಗತಜ್ಞೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.