ಮುನ್ನಿ, ಮೇರಿ, ಮಲ್ಲಿಕಾ... ಹೆಸರು ಯಾವುದಾರೂ ಅಂದುಕೊಳ್ಳಿ. ನನಗಾಗ ಹತ್ತೋ–ಹನ್ನೆರಡೋ ವರ್ಷ. ಗೆಳತಿಯರೊಂದಿಗೆ ಹಗ್ಗದಾಟ ಆಡುತ್ತಿದ್ದೆ. ಇದ್ದಕ್ಕಿದ್ದಂತೆ ಕಿಬ್ಬೊಟ್ಟೆಯಲ್ಲಿ ಏನೋ ತಳಮಳ, ವಿಪರೀತ ನೋವು, ಒಳ ಉಡುಪಿಗೆ ಏನೋ ಅಂಟಿದಂತೆ ಭಾಸ. ಆಟಕ್ಕೆ ವಿರಾಮ ಕೊಟ್ಟು ಸೀದಾ ಬಚ್ಚಲಿಗೆ ಹೋಗಿ ನೋಡಿದರೆ ಒಳ ಉಡುಪೆಲ್ಲಾ ಕೆಂಪು ಕೆಂಪು. ಓಹ್ ನನಗೇನೋ ಗಾಯವಾಗಿರಬಹುದು ಎಂಬ ಭಯ ಆವರಿಸಿತ್ತು. ಬಚ್ಚಲಿನಿಂದಲೇ ಅಮ್ಮನನ್ನು ಕೂಗಿ ಕರೆದಾಗಲೇ ತಿಳಿದದ್ದು ನಾನು ಮುಟ್ಟಾಗಿದ್ದೇನೆ ಅಂತ.
ಓರಗೆಯ ಗೆಳತಿಯರಲ್ಲಿ ನಾನೇ ಮೊದಲು ಮುಟ್ಟಾಗಿದ್ದೆ. ಆಡುವುದಿರಲಿ ಶಾಲೆಗೆ ಹೋಗದಂತೆಯೂ ಅಮ್ಮ ತಾಕೀತು ಮಾಡಿದಳು. ಏಳು ದಿನಗಳು ನನ್ನ ಪಾಲಿಗೆ ಯಾತನದಾಯಕವಾಗಿದ್ದವು. ಒಂದೆಡೆ ರಕ್ತಸ್ರಾವ. ಮತ್ತೊಂದೆಡೆ ತೀವ್ರ ಹೊಟ್ಟೆನೋವು, ಒಮ್ಮೊಮ್ಮೆ ವಾಂತಿ ಬಂದಂತೆ, ಸುಮ್ಮನೆ ಮುದುಡಿ ಮಲಗಬೇಕೆನ್ನುವ ಸ್ಥಿತಿ. ಆ ನಡುವೆ ಮುಟ್ಟಿನ ಸಂಭ್ರಮವನ್ನು ಆಚರಿಸಿದ್ದ ಮನೆಯವರು ತಿನ್ನಲು ತರಹೇವಾರಿ ತಿಂಡಿಗಳ ರಾಶಿಯನ್ನೇ ಮುಂದಿಟ್ಟಿದ್ದರು. ಇಂಥ ತಿಂಡಿ ಎಲ್ಲ ಗೆಳತಿಯರಿಗೂ ಅವರು ಮುಟ್ಟಾದಾಗ ಸಿಗಲಿಲ್ಲ ಅನ್ನೋದು ಮುಂದೆ ತಿಳೀತು.
ನನ್ನ ಗೆಳತಿಯೊಬ್ಬಳು ಮುಟ್ಟಾದಾಗ ಅವಳು ಪಟ್ಟ ಪಾಡು ಮಾತ್ರ ಹೇಳತೀರದು. ಭಿನ್ನ ಜಾತಿಯವಳಾದ ಕಾರಣ ಆಕೆಯನ್ನು ಅವರ ಮನೆಯವರು ಹೊರಗೆ ಕೂರಿಸಿದ್ದರು. ಹಗಲಿರಲಿ, ರಾತ್ರಿಯೂ ಅಲ್ಲೇ ಕಳೆಯಬೇಕಿತ್ತು ಅವಳು. ಪರೀಕ್ಷೆ ಸಮಯದಲ್ಲೇ ಆಗಿದ್ದರಿಂದ ಅವಳೆಷ್ಟೇ ಬೇಡಿಕೊಂಡರೂ ಅವರ ಮನೆಯವರು ಮೈಲಿಗೆ ಅಂತ ಪರೀಕ್ಷೆ ಬರೆಸಲೇ ಇಲ್ಲ. ಅಲ್ಲ, ಶಾಲೆಯಲ್ಲಿ ನಮ್ಮ ಟೀಚರ್, ಮುಟ್ಟು ಅನ್ನೋದು ಸಹಜ ಕ್ರಿಯೆ ಅಂತ ಹೇಳಿಕೊಟ್ಟಿದ್ರು. ಹಾರ್ಮೋನ್‌ಗಳ ಪ್ರಭಾವದಿಂದ ಅಂಡಾಶಯಗಳು ಕ್ರಿಯಾಶೀಲವಾಗಿ ಅಂಡಾಣು ಬಿಡುಗಡೆ ಆಗುತ್ತವೆ. ಅವು ಫಲಿತವಾಗದಿದ್ದಾಗ ಹೊರಗೆ ಹೋಗುವ ಕ್ರಿಯೆಯೇ ಮುಟ್ಟು ಅಂತ ಹೇಳಿದ್ದರು.
ಈಚೆಗೆ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮುಟ್ಟಾಗಿದ್ದಳು ಅನ್ನೋ ಕಾರಣಕ್ಕೆ ಟೀಚರ್ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ್ದರಂತೆ. ಅಲ್ಲ, ಆ ಟೀಚರ್‌ಗೇ ಮೊದಲು ಮುಟ್ಟಿನ ಪಾಠ ಹೇಳಿಕೊಡಬೇಕು ಅನಿಸ್ತು. ಟೀಚರ್ ಹೋಗಲಿ, ಅದ್ಯಾರೋ ಸ್ವಾಮೀಜಿ, ‘ಮುಟ್ಟಾದ ಹೆಣ್ಣು ಅಡುಗೆ ಮಾಡಿದ್ರೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ತಾರೆ’ ಅಂದಿದ್ದರು. ಅಲ್ಲ, ಈಗಿರುವ ಜನ್ಮದಲ್ಲೇ ಹೆಣ್ಮಕ್ಕಳಿಗೆ ಮುಟ್ಟಿನ ದಿನಗಳನ್ನು ಆರಾಮದಾಯಕ ಮಾಡೋದು ಬಿಟ್ಟು, ಮುಂದಿನ ಜನ್ಮದ್ದು ಕಟ್ಕೊಂಡು ಏನ್ ಮಾಡೋದು? ಅಲ್ಲ, ಈ ಗಂಡಸರಿಗೆ ‘ಮುಟ್ಟು’ ಅಂದರೇನು ಅಂತ ಮೊದಲು ಅರ್ಥ ಮಾಡಿಸಬೇಕು. ಹೆಣ್ಮಕ್ಕಳು ಮುಟ್ಟಾಗದಿದ್ದರೆ ನೀವು ಹುಟ್ಟುತ್ತಿರಲಿಲ್ಲ ಕಣ್ರೀ. ಹೆಣ್ಣಿನ ದೇಹದ ಕುರಿತು ಮಾತಾಡೋಕೆ ನಿಮಗೇನಿದೆ ಅಧಿಕಾರ ಅಂತ ಕೇಳಬೇಕು ಅನ್ಸುತ್ತೆ.
ಮೊದಲ ಸಲ ಮುಟ್ಟಾದಾಗ ಮನೆಯಲ್ಲೇ ಇದ್ದೆ. ಆದರೆ, ಶಾಲೆಯಲ್ಲಿದ್ದಾಗ ಮುಟ್ಟಾದರೆ ಏನ್ಮಾಡೋದು ಅನ್ನೋ ಚಿಂತೆ ನನ್ನಂತೆ ಅನೇಕರದ್ದು. ನಮ್ ಶಾಲೆಯಲ್ಲಿ ಬಾತ್‌ರೂಂ ಏನೋ ಇದೆ. ಆದರೆ ನೀರಿಲ್ಲ. ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್. ಆಮೇಲೆ ಆ ಪ್ಯಾಡ್ ವಿಲೇವಾರಿಗೆ ಮಷೀನ್ ಕೂಡಾ ಇಲ್ಲ. ಹಾಗಾಗಿ, ನನ್ನ ಅನೇಕ ಗೆಳತಿಯರು ಮುಟ್ಟು ಕಾಣಿಸಿಕೊಂಡ ಮೇಲೆ ಶಾಲೆಯನ್ನೇ ಬಿಟ್ಟಿದ್ದಾರೆ. ಅವರಪ್ಪಮ್ಮ ಕೂಡಾ ಮಗಳು ಮುಟ್ಟಾದ ಒಂದೆರಡು ವರ್ಷದಲ್ಲೇ ಮದ್ವೆ ಮಾಡಿ ಗಂಡನ ಮನೆಗೆ ಕಳಿಸಿದ್ದಾರೆ. ಮೇರಿ, ಮಮತಾ, ಮುಮ್ತಾಜ್ ಎಷ್ಟೊಂದು ಗೆಳತಿಯರು ಡಾಕ್ಟ್ರು, ಎಂಜಿನಿಯರ್, ಟೀಚರ್ ಅಗಬೇಕೆಂಬ ಕನಸು ಕಂಡವರೆಲ್ಲ ಈಗ ಒಂದೊಂದು ಮಕ್ಕಳ ತಾಯಿಯಾಗಿಯೋ, ಕೆಲವರು ಮಗು ಹಡೆಯುತ್ತಲೇ ಸತ್ತೂ ಹೋಗಿದ್ದಾರೆ. ಇದನ್ನೆಲ್ಲ ನೆನೆದು ದುಃಖ ಆಗುತ್ತೆ ನನಗೆ. ಅಲ್ಲ ಮುಟ್ಟು ಅನ್ನೋದು ಹೆಣ್ಣುಮಕ್ಕಳಿಗೆ ಅಷ್ಟೊಂದು ದೊಡ್ಡ ಶಾಪ ನಾ ಅಂತ?
ದೇವರ ಮನೆಗೆ ಬಿಡಲ್ಲ, ಅಡುಗೆ ಮನೆಗೆ ಬಿಡಲ್ಲ, ಎಲ್ಲರ ಜತೆಗೆ ಬೆರೆಯಲು ಬಿಡಲ್ಲ, ಗಿಡ ಮುಟ್ಟುವಂತಿಲ್ಲ, ಉಪ್ಪಿನಕಾಯಿ ಮುಟ್ಟುವಂತಿಲ್ಲ, ಪುಟ್ಟಮಕ್ಕಳನ್ನೂ ಮುದ್ದು ಮಾಡುವಂತಿಲ್ಲ... ಈ ಇಲ್ಲಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಅಲ್ಲ ದೇವರು ಕೂಡಾ ಹೆಣ್ಣಾಗಿದ್ದರೆ ಆಕೆ ಕೂಡಾ ಮುಟ್ಟಾಗ್ತಾಳೆ ಅಲ್ವಾ ಅವಳನ್ನು ಹೇಗೆ ಹೊರಗೆ ಇಡ್ತೀರಿ ಅಂತ ಕೇಳಬೇಕೆನ್ನಿಸುತ್ತೆ.
ನಿಜ ಹೇಳಬೇಕು ಅಂದರೆ ಮುಟ್ಟಿನ ಕುರಿತು ನಮಗೆ ಶಾಲೆಯಲ್ಲಿ ತಿಳಿವಳಿಕೆ ನೀಡುವಂಥ ವಾತಾವರಣ ಬೇಕು. ಒಳ್ಳೆಯ ಶೌಚಾಲಯದ ಜತೆಗೆ ಪ್ಯಾಡ್ ಸುಲಭವಾಗಿ ಸಿಗುವಂಥ ವ್ಯವಸ್ಥೆ, ಅದನ್ನು ವಿಲೇವಾರಿ ಮಾಡುವ ಯಂತ್ರ, ಕುಡಿಯಲು ಶುದ್ಧನೀರು ಇಷ್ಟಾದರೂ ಬೇಕು. ಶಾಲೆಯಲ್ಲಿ ಹೋಗಲಿ ನಮ್ಮತ್ತೆ ಕೆಲಸ ಮಾಡುವ ಆಫೀಸಿನಲ್ಲೂ ಇಂಥ ಸೌಲಭ್ಯವಿಲ್ಲವಂತೆ. ಹಾಗಾಗಿ, ಆ ದಿನಗಳಲ್ಲಿ ನಮ್ಮತ್ತೆ ತುಂಬಾ ಹಿಂಸೆ ಅನುಭವಿಸ್ತಾರೆ.
ಇನ್ನು ಕೂಲಿ ಕೆಲಸ ಮಾಡೋ ಹೆಣ್ಮಕ್ಕಳ ಕಥೆ ಏನಿರಬಹುದು? ಸರ್ಕಾರ ಏನೇನೋ ಯೋಜನೆ ಮಾಡುತ್ತೆ. ಹೆಣ್ಣುಮಕ್ಕಳಿಗೆ ಕನಿಷ್ಠ ಮುಟ್ಟಿನ ದಿನಗಳಲ್ಲಾದರೂ ನಿರಾಳವಾಗಿ ಇರುವಂಥ ಪರಿಸರ ಕಲ್ಪಿಸಲು ಆಗಲ್ಲವಾ? ಎಲ್ಲವನ್ನೂ ಸರ್ಕಾರವೇ ಮಾಡ್ಬೇಕಾ, ನಮ್ಮ ಸಮಾಜದ್ದೂ ಜವಾಬ್ದಾರಿ ಇರೋದಿಲ್ಲವಾ?
ಮತ್ತೆ ಟಿ.ವಿಯಲ್ಲಿ ಮೊನ್ನೆ ಒಂದು ಜಾಹೀರಾತು ನೋಡಿದೆ. ಅದರಲ್ಲಿ ಅವರಮ್ಮ ಮಗನಿಗೆ ಕೊಟ್ಟ ರೇಷನ್ ಪಟ್ಟಿಯಲ್ಲಿ ಪ್ಯಾಡ್ ಕೂಡಾ ಇತ್ತು. ಮಗ ಇದೇನಮ್ಮಾ ಅಂತ ಕೇಳಿದಾಗ ಅವಳು ಅದನ್ನು ಮಗನಿಗೆ ವಿವರಿಸಿ ಹೇಳಿದ್ಲು, ಅಷ್ಟೇ ಅಲ್ಲ ತಂಗಿ ಮುಟ್ಟಾದಾಗ ಹೇಗೆ ನೋಡಿಕೊಳ್ಳಬೇಕು ಅಂತಾನೂ ಹೇಳಿದ್ಲು.
ಎಲ್ಲ ಅಮ್ಮಂದಿರು ಈ ಥರ ಯೋಚನೆ ಮಾಡಿದ್ರೆ ಎಷ್ಟು ಚಂದ ಅಲ್ವಾ? ಈ ಜಾಹೀರಾತು ನಮ್ಮಪ್ಪನ ಕಾಲದಲ್ಲೇ ಬಂದಿದ್ರೆ ಅಮ್ಮನಿಗೆ ಆ ದಿನಗಳಲ್ಲಿ ಸ್ವಲ್ಪನಾದರೂ ವಿಶ್ರಾಂತಿ ಸಿಗುತ್ತಿತ್ತೇನೋ? ಸಿಟಿಯಲ್ಲಿ ಓದುವ ಅಕ್ಕನಿಗೆ ಸಹಪಾಠಿಗಳೇ ಪ್ಯಾಡ್ ತಂದುಕೊಟ್ಟಿದ್ದೂ ಇದೆಯಂತೆ. ಇದೆಲ್ಲ ಕೇಳಿದಾಗ ಗಂಡ್ಮಕ್ಕಳಿಗೂ ಮುಟ್ಟಿನ ಬಗ್ಗೆ ಅರಿವು ಮೂಡಿಸುತ್ತಾ ಇರೋದು ಒಳ್ಳೋದು ಅನಿಸುತ್ತೆ. ಆದರೂ, ಮುಟ್ಟು ಮುಟ್ಟು ಅಂತ ಹೇಳಿ ನಮ್ಮನ್ನೇ ಮುಟ್ಟಿಸಿಕೊಳ್ಳದಿರುವ ನಮ್ಮ ಸಮಾಜದ ಮನಸ್ಥಿತಿ ಬದಲಾಗಬೇಕು ಅನಿಸುತ್ತೆ. ಆ ದಿನಗಳಲ್ಲಿ ಒಂದ್ಚೂರು ಪ್ರೀತಿ, ತುಸು ವಿರಾಮ ಇಷ್ಟಾದರೂ ನಮ್ಮ ನಡುವಿನವರು ಕಲ್ಪಿಸಿಕೊಟ್ಟರೆ ನಾವ್ ಹೆಣ್ಮಕ್ಕಳು ಮುಟ್ಟಿನ ನೋವನ್ನು ಮೆಟ್ಟಿ ನಿಲ್ಲಬಲ್ಲೆವು ಅನಿಸುತ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.