ADVERTISEMENT

Menstrual Tips: ಶುಚಿ ಕಾಳಜಿಯ ಆ ದಿನಗಳಿಗೆ ಆಯ್ಕೆಗಳು ಹಲವು

​ಪ್ರಜಾವಾಣಿ ವಾರ್ತೆ
Published 2 ಮೇ 2025, 23:30 IST
Last Updated 2 ಮೇ 2025, 23:30 IST
ಸ್ಯಾನಿಟರಿ ಪ್ಯಾಡ್‌ಗಳು ಅಥವಾ ನ್ಯಾಪ್ಕಿನ್‌ಗಳು
ಸ್ಯಾನಿಟರಿ ಪ್ಯಾಡ್‌ಗಳು ಅಥವಾ ನ್ಯಾಪ್ಕಿನ್‌ಗಳು   

ಹದಿಹರೆಯದ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ, ಮುಟ್ಟಿನ ದಿನಗಳ ಚರ್ಚೆ ಸಾಮಾನ್ಯ ಎನಿಸಿದೆ. ಮೊದಲೆಲ್ಲ ಹೆಚ್ಚು ಆಯ್ಕೆಗಳಿರಲಿಲ್ಲ. ಹಳೆಯಬಟ್ಟೆ, ನ್ಯಾಪ್ಕಿನ್‌ ಅಥವಾ ಟ್ಯಾಂಪೂನ್‌ಗಳು ಬಳಕೆಯಲ್ಲಿದ್ದವು. ಬಹುತೇಕರ ಆಯ್ಕೆ ಬಟ್ಟೆಯದ್ದೇ ಆಗಿತ್ತು. ತೊಳೆದು ಒಣಗಿಸುವುದು ಸವಾಲಿನ ಕೆಲಸವೇ ಆಗಿತ್ತು. ಇದೀಗ ವಯಸ್ಸು, ಅಗತ್ಯ ಮತ್ತು ಸ್ರಾವದ ಪ್ರಮಾಣಕ್ಕೆ ಅನುಗುಣವಾಗಿ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. 

ಯುವತಿಯರ ಅಗತ್ಯಕ್ಕೆ ಅನುಸಾರವಾಗಿ ಯಾವುದನ್ನಾದರೂ ಕೊಳ್ಳಬಹುದಾಗಿದೆ. ಶುಚಿಯಾಗಿರುವುದು ಮತ್ತು ನಿರೋಗಿಗಳಾಗಿರುವುದು ಈ ಆಯ್ಕೆಯನ್ನು ಅವಲಂಬಿಸಿದೆ ಎಂಬ ಎಚ್ಚರ ಇರಬೇಕು.

1. ಸ್ಯಾನಿಟರಿ ಪ್ಯಾಡ್‌ - ನ್ಯಾಪ್ಕಿನ್‌

ADVERTISEMENT

ಇದು ಹೆಚ್ಚು ಜನಪ್ರಿಯವಾದ ಉತ್ಪನ್ನವಾಗಿದೆ. ಸಾಮಾನ್ಯವಾಗಿ ರೇಯಾನ್, ಹತ್ತಿ ಅಥವಾ ಸೆಲ್ಯುಲೋಸ್‌ನಂತಹ ಮೃದುವಾದ, ಹೀರಿಕೊಳ್ಳುವ ವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಇವು ಒಮ್ಮೆ ಮಾತ್ರ ಬಳಸಬಹುದಾದ ಪ್ಯಾಡ್‌ಗಳಾಗಿದ್ದು, ಅಗತ್ಯಕ್ಕೆ ತಕ್ಕಂತೆ ಅನೇಕ ಗಾತ್ರ ಮತ್ತು ಆಕಾರದಲ್ಲಿ ಲಭ್ಯವಿದೆ.

ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಲಭ್ಯವಿದ್ದು, ಇವುಗಳ ಬಳಕೆ ಸುಲಭವಾಗಿರುವುದರಿಂದ ಹೆಚ್ಚಿನವರು ತಮ್ಮ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಅಥವಾ ನ್ಯಾಪ್ಕಿನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ.

ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಅಥವಾ ಅಗತ್ಯವಿರುವಂತೆ ಪ್ಯಾಡ್ ಬದಲಾಯಿಸಬೇಕು. ಆದರೆ ಆರೋಗ್ಯದ ದೃಷ್ಟಿಯಿಂದ ಮೂರರಿಂದ ನಾಲ್ಕು ಗಂಟೆಯೊಳಗೆ ಬದಲಾಯಿಸುವುದು ಸೂಕ್ತ. ಇಲ್ಲದಿದ್ದರೆ ಆಲರ್ಜಿ ಮತ್ತು ಗಾಯಗಳು ಉಂಟಾಗುವ ಸಾಧ್ಯತೆಗಳಿವೆ. ಇವು ಕೆಲವೊಮ್ಮೆ ಕಿರಿಕಿರಿಯನ್ನು ಉಂಟುಮಾಡಬಲ್ಲವು. ಇವು ಹೆಚ್ಚು ಬಳಕೆಯಲ್ಲಿದ್ದರೂ ಆರೋಗ್ಯದ ದೃಷ್ಟಿಯಿಂದ ಉತ್ತಮವೇನಲ್ಲ; ಪರಿಸರಸ್ನೇಹಿಯೂ ಆಗಿಲ್ಲ. 

ಪ್ಯಾಂಟಿಲೈನರ್: ಪ್ಯಾಂಟಿಲೈನರ್‌ಗಳು ಚಿಕ್ಕ ಮತ್ತು ತೆಳುವಾದ ಪ್ಯಾಡ್‌ಗಳಾಗಿದ್ದು, ಋತುಚಕ್ರವು ತುಂಬಾ ಕಡಿಮೆ ಇರುವ ದಿನಗಳಲ್ಲಿ ಇದನ್ನು ಬಳಸಬಹುದು. ಪ್ರತಿ 4ರಿಂದ 6 ಗಂಟೆಗಳಿಗೊಮ್ಮೆ ಇವುಗಳನ್ನು ಬದಲಾಯಿಸಬೇಕು. ಇದರ ಜತೆಗೆ ಮುಟ್ಟಿನ ಕಪ್‌ಗಳು ಅಥವಾ ಟ್ಯಾಂಪೂನ್‌ಗಳನ್ನು ಬ್ಯಾಕಪ್ ಆಗಿಯೂ ಬಳಸಬಹುದು.

2. ಮರುಬಳಕೆ ಮಾಡಬಹುದಾದ ಪ್ಯಾಡ್‌

ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳು ಸ್ಯಾನಿಟರಿ ಪ್ಯಾಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಹೆಚ್ಚಾಗಿ ಬಟ್ಟೆಗಳಿಂದ ಮಾಡಲಾಗುತ್ತದೆ. ಅದರೊಂದಿಗೆ ಹತ್ತಿ, ಬಿದಿರು ಅಥವಾ ಸೆಣಬುಗಳಿಂದ ತಯಾರಿಸಲಾಗುತ್ತದೆ.

ಇವು ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಮೃದು ಮತ್ತು ಆರಾಮದಾಯಕವಾಗಿರುತ್ತವೆ. ಇವುಗಳಲ್ಲಿಯೂ ವಿಭಿನ್ನ ಗಾತ್ರ ಮತ್ತು ಆಕಾರಗಳನ್ನೂ ಕಾಣಬಹುದು. ಪ್ಯಾಡ್‌ಗಳಿಗೆ ಹೋಲಿಸಿದರೆ, ಇವುಗಳು ಹೆಚ್ಚು ದುಬಾರಿಯಾಗಿರುತ್ತವೆ.

ಇವುಗಳನ್ನು ಒಮ್ಮೆ ಬಳಸಿದ ನಂತರ ಸ್ವಚ್ಛ ಮಾಡಿ ಪುನಃ ಬಳಸಬಹುದು. ಸರಿಯಾದ ನಿರ್ವಹಣೆಯಿದ್ದರೆ ಕನಿಷ್ಠ ಮೂರು ವರ್ಷಗಳು ಬಾಳಿಕೆ ಬರುತ್ತದೆ. ಇವು ಪರಿಸರಸ್ನೇಹಿ ಎನಿಸಿವೆ.

3. ಟ್ಯಾಂಪೂನ್‌

ಟ್ಯಾಂಪೂನ್‌ಗಳು ಸಿಲಿಂಡರ್‌ ಆಕಾರದಲ್ಲಿ ಇರುತ್ತವೆ. ಇವುಗಳನ್ನು ಹತ್ತಿ, ರೇಯಾನ್ ಅಥವಾ ಎರಡರ ಮಿಶ್ರಣದಿಂದ ತಯಾರಿಸಲಾಗುತ್ತದೆ. ಒಮ್ಮೆ ಬಳಸಿದ ಬಳಿಕ ಬಿಸಾಡಬಹುದಾದ ಉತ್ಪನ್ನಗಳಾಗಿವೆ.

ಯೋನಿಯ ಒಳಗಿನಿಂದಲೇ ರಕ್ತವನ್ನು ಹೀರಿಕೊಳ್ಳುತ್ತವೆ. ಪ್ರತಿ 4–6 ಗಂಟೆಗಳಿಗೊಮ್ಮೆ ಇವುಗಳನ್ನು ಬದಲಾಯಿಸಬೇಕು. ವಿವಿಧ ರೀತಿಯ ಟ್ಯಾಂಪೂನ್‌ಗಳಿವೆ. ಇವು ಹೆಚ್ಚು ಆರಾಮದಾಯಕವಾಗಿರಲು ಸಹಾಯ ಮಾಡುವುದರಿಂದ ಕ್ರೀಡೆಯಂಥ ಚಟುವಟಿಕೆಗಳಲ್ಲಿ ತೊಡಗುವವರಿಗೆ ಇವು ಸೂಕ್ತ.

ನ್ಯಾಪ್ಕಿನ್‌ಗಳಿಗೆ ಹೋಲಿಸಿದರೆ ಇವು ಹೆಚ್ಚು ದುಬಾರಿ ಮತ್ತು ಪರಿಸರಸ್ನೇಹಿಯಲ್ಲ. ಟ್ಯಾಂಪೂನ್‌ ಬಳಕೆಯ ಅಪಾಯವೆಂದರೆ, ಟಾಕ್ಸಿಕ್ ಶಾಕ್ ಸಿಂಡ್ರೋಮ್‌ನಂಥ ಸೋಂಕು ಉಂಟಾಗಬಹುದು. ಹಾಗಾಗಿ ಇವುಗಳನ್ನು ಆಗಾಗ್ಗೆ ಬದಲಾಯಿಸುವುದು ಮುಖ್ಯ.

4. ಕಪ್‌

ಹೆಚ್ಚು ಜನಪ್ರಿಯ ಮತ್ತು ಪರಿಸರಸ್ನೇಹಿ ಎನಿಸಿವೆ. ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ ಆಯ್ಕೆಯಾಗಿದೆ. ಈ ಕಪ್‌ಗಳನ್ನು ಮರುಬಳಕೆ ಮಾಡಬಹುದು. ಮುಟ್ಟಿನ ದ್ರವವನ್ನು ಹೀರಿಕೊಳ್ಳುವ ಬದಲಿಗೆ ಇವು ಸಂಗ್ರಹಿಸುತ್ತವೆ.

ಮುಟ್ಟಿನ ಕಪ್‌ಗಳನ್ನು ಸಿಲಿಕಾನ್‌, ಲ್ಯಾಟೆಕ್ಸ್ ರಬ್ಬರ್ ಅಥವಾ ಎಲಾಸ್ಟೊರ್ಮ್‌ನಿಂದ ತಯಾರಿಸಲಾಗುತ್ತದೆ. ಈ ಉತ್ಪನ್ನಗಳು ವಿಭಿನ್ನ ಗಾತ್ರದಲ್ಲಿಯೂ ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿಸಬಹುದು.

ಬಳಸಿ 6–8 ಗಂಟೆಯ ನಂತರ ತೆಗೆದು, ಖಾಲಿ ಮಾಡಬೇಕು. ಸೂಕ್ತ ಕಾಳಜಿ ವಹಿಸಿದರೆ ಒಂದು ಮುಟ್ಟಿನ ಕಪ್ 5 ರಿಂದ10 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಆಟಗಾರರಿಗೆ, ದೈಹಿಕ ಚಟುವಟಿಕೆಗಳಲ್ಲಿ ನಿರತರಾದವರಿಗೆ ಕಪ್‌ಗಳು ಉತ್ತಮ ಆಯ್ಕೆಯಾಗಿವೆ.

5. ಪಿರಿಯಡ್ಸ್‌ ಪ್ಯಾಂಟಿಸ್‌ /ಒಳ ಉಡುಪು

ಪಿರಿಯಡ್ಸ್ ಪ್ಯಾಂಟಿಸ್‌ಗಳು ಸಾಮಾನ್ಯ ಒಳ ಉಡುಪಿನಂತೆ ಇರುತ್ತವೆ. ಆದರೆ, ಬಟ್ಟೆಗಳ ಮೇಲೆ ಸೋರಿಕೆಯಾಗುವುದನ್ನು ತಡೆಯಲು ಹಲವು ವಿಶೇಷ ಪದರಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಹತ್ತಿ, ಬಿದಿರು ಮತ್ತು ಸ್ಪ್ಯಾಂಡೆಕ್ಸ್‌ನಂಥ ಹೀರಿಕೊಳ್ಳುವ ಮತ್ತು ತೇವಾಂಶ-ಹೀರುವ ಬಟ್ಟೆಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ.

ಏಕ ಬಳಕೆಯ ಪ್ಯಾಂಟಿಸ್‌ಗಳು ಮತ್ತು ಮರು ಬಳಕೆಯ ಪ್ಯಾಂಟಿಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರತಿ 4 ರಿಂದ 6 ಗಂಟೆಗಳಿಗೊಮ್ಮೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ.

ಇವುಗಳ ಬೆಲೆ ದುಬಾರಿಯಾಗಿದ್ದು, ಕನಿಷ್ಠ 400ರಿಂದ 500 ಇರುತ್ತದೆ. ಇವು ಪರಿಸರಸ್ನೇಹಿಯಾಗಿದೆ. ವಿವಿಧ ಪ್ರಮಾಣದ ಮುಟ್ಟಿನ ದ್ರವವನ್ನು ಹಿಡಿದಿಟ್ಟುಕೊಳ್ಳುತ್ತದೆ.

6. ಡಿಸ್ಕ್‌

ಪ್ಲಾಸ್ಟಿಕ್ ಅಥವಾ ಸಿಲಿಕಾನ್‌ನಿಂದ ಮಾಡಿರುವ ಮುಟ್ಟಿನ ಡಿಸ್ಕ್‌ಗಳು ದುಂಡಗಿನ, ಹೊಂದಿಕೊಳ್ಳುವ ಉಂಗುರದ ಆಕಾರದಲ್ಲಿ ಇರುತ್ತದೆ. ಕಪ್‌ಗಳಂತೆ ಇದು ಕಾರ್ಯನಿರ್ವಹಿಸುತ್ತದೆ.

ಪ್ಲಾಸ್ಟಿಕ್‌ನಿಂದ ತಯಾರಾದ ಡಿಸ್ಕ್‌ಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಸಿಲಿಕಾನ್‌ ಮತ್ತು ರಬ್ಬರ್‌ನಿಂದ ತಯಾರಾದ ಡಿಸ್ಕ್‌ಗಳನ್ನು ಮರುಬಳಕೆ   ಮಾಡಬಹುದು. ಸ್ವಚ್ಚವಾಗಿಟ್ಟುಕೊಂಡರೆ ಡಿಸ್ಕ್‌ಗಳು ವರ್ಷಗಳವರೆಗೆ ಬಾಳಿಕೆ ಬರುತ್ತದೆ. 

ಕಪ್‌ಗಳಿಗೆ ಹೋಲಿಸಿದರೆ ಡಿಸ್ಕ್‌ಗಳು ತೆಳ್ಳಗಿರುತ್ತವೆ. ಹೆಚ್ಚು ನಿಖರವಾಗಿ ಹೊಂದಿಕೊಳ್ಳುವ ಕಾರಣ ಲೈಂಗಿಕ ಚಟುವಟಿಕೆಯ ಸಮಯದಲ್ಲಿಯೂ ಬಳಸಬಹುದು.

7. ಸ್ಪಾಂಜ್‌

ಸ್ಪಾಂಜ್‌ಗಳು ಟ್ಯಾಂಪೂನ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಕೆಲವು ಸ್ಪಾಂಜ್‌ಗಳನ್ನು ಮರುಬಳಕೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.

ಸ್ಪಾಂಜ್‌ಗಳನ್ನು ಕೆಲವು ಗಂಟೆಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಮರುಬಳಕೆ ಮಾಡಬಹುದಾದ ಸ್ಪಾಂಜ್‌ಗಳು 6 ತಿಂಗಳವರೆಗೆ ಬಾಳಿಕೆ ಬರಬಹುದು. ಆದರೆ ಇವುಗಳ ನಿರ್ವಹಣೆ ಕಷ್ಟ. ತುಂಬಾ ಮೃದುವಾಗಿರುವುದರಿಂದ, ಹೊಂದಿಕೊಳ್ಳುವುದರಿಂದ ಅವು ಹೆಚ್ಚು ಆರಾಮದಾಯಕವೆಂದು ಹೇಳಲಾಗುತ್ತದೆ. ಆದರೆ ಸ್ಪಾಂಜ್‌ಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂಬುದು ತಜ್ಞವೈದ್ಯರ ಅಭಿಪ್ರಾಯ. ಇವು ಉಪಯೋಗಕ್ಕಿಂತ ಹೆಚ್ಚು ಅಡ್ಡಪರಿಣಾಮವನ್ನೇ ಉಂಟುಮಾಡಬಲ್ಲದು.

ಭಾರತದಲ್ಲಿ ಶೇ 76.15 ಮಹಿಳೆಯರು ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ನಗರ ಪ್ರದೇಶಗಳಿಗಿಂತ (ಶೇ 89.37) ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಉತ್ಪನ್ನಗಳ ಬಳಕೆ (ಶೇ 72.32) ಕಡಿಮೆಯಿದೆ ಎಂದು ಅದು ತಿಳಿಸಿದೆ.
18 ವರ್ಷ ಮೇಲ್ಪಟ್ಟವರು ಮಾತ್ರ ಮುಟ್ಟಿನ ಕಪ್‌ಗಳನ್ನು ಬಳಸುವುದು ಸೂಕ್ತ. ಚಿಕ್ಕ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳನ್ನು ಬಳಸುವುದು ಉತ್ತಮ. ಮುಟ್ಟಿನ ದಿನಗಳಲ್ಲಿ ವೈಯಕ್ತಿಕ ಶುಚ್ಚಿತ್ವದ ಕಡೆ ಹೆಚ್ಚು ಗಮನವಹಿಸಬೇಕು.
–ಡಾ. ವೀಣಾ ಎನ್‌., ಸ್ತ್ರೀರೋಗ ತಜ್ಞರು – ಸುಳ್ಳ
ಸ್ಯಾನಿಟರಿ ಪ್ಯಾಡ್‌, ಕಪ್‌ಗಳ ಬಳಕೆ ಹೆಚ್ಚಿದ್ದು, ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳು ಮತ್ತು ಹೊಸದಾಗಿ ಬರುತ್ತಿರುವ ಪಿರಿಯಡ್ ಪ್ಯಾಂಟಿಸ್‌ಗಳನ್ನು ಕೂಡ ಬಳಸುತ್ತಿದ್ದಾರೆ. ಭಾರತಕ್ಕಿಂತ ವಿದೇಶಗಳಲ್ಲಿ ಟ್ಯಾಂಪೂನ್‌ ಮತ್ತು ಡಿಸ್ಕ್‌ಗಳ ಬಳಕೆ ಹೆಚ್ಚಿದೆ. ಸ್ವಚ್ಛವಾದ ಬಟ್ಟೆ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಹರಿವಿನ ಮಟ್ಟ, ಕಂಫರ್ಟ್ ಪರಿಗಣಿಸಿ ನಿಮಗೆ ಹೊಂದುವ ಸೂಕ್ತ ಉತ್ಪನ್ನವನ್ನು ಆಯ್ಕೆ ಮಾಡಿ. ಉತ್ಪನ್ನದ ಬಳಕೆ ಯಾವುದೇ ಆದರೂ ನೈರ್ಮಲ್ಯದ ಕಡೆ ಹೆಚ್ಚು ಒತ್ತು ನೀಡುವುದು ಅವಶ್ಯಕ. ನಿಗದಿತ ಸಮಯಕ್ಕೆ ಅವುಗಳನ್ನು ಬದಲಾಯಿಸುವುದು ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಇತರೆ ಅಡ್ಡಪರಿಣಾಮಗಳಿಂದ ದೂರವಿರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.