ನವರಾತ್ರಿ ಎನ್ನುವುದು ನಮ್ಮೊಳಗಿನ ಶಕ್ತಿಯ ಉದ್ದೀಪನವೇ ಆಗಿದೆ. ‘ಲೋಕದ ಅಪನಂಬಿಕೆಯ ನೋಟವನ್ನು ಕ್ಷುಲ್ಲಕವಾಗಿಸಿ, ಅಂತರಂಗದಲ್ಲಿ ಅಡಗಿರುವ ಶಕ್ತಿಗೆ ಓಗೊಡು. ಆತ್ಮವಿಶ್ವಾಸದ ನಡೆಯಿದ್ದರೆ ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬಹುದು’ ಎಂದು ಸಾರುತ್ತದೆ ಒಂಬತ್ತು ದಿನಗಳ ಸಂಭ್ರಮ. ಅಸಾಮಾನ್ಯ ಎನಿಸುವ ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ ಈ ಬಾರಿಯ ‘ಭೂಮಿಕಾ’ ವಿಶೇಷ. ‘ಅಯ್ಯಬ್ಬ ಹೆಣ್ಣುಮಕ್ಕಳು ಈ ಕೆಲಸ ಮಾಡೋದಾ’ ಎನ್ನುವವರ ವಾರೆನೋಟವನ್ನು ಲೆಕ್ಕಿಸದೆ, ಸವಾಲುಗಳನ್ನೇ ಸಾಮರ್ಥ್ಯವಾಗಿಸಿಕೊಂಡು ವೃತ್ತಿಬದ್ಧತೆ ತೋರಿರುವ ನಮ್ಮ ನಡುವಿನ ಈ ನವದುರ್ಗೆಯರು ರೂಪಾ ಕೆ.ಎಂ. ಅವರಿಗೆ ನೀಡಿರುವ ಸ್ವವಿವರ ಇಲ್ಲಿದೆ..
ಪೌರೋಹಿತ್ಯ– ನಮ್ಮದೂ ಇರಲಿ ಪಾರುಪತ್ಯ
37 ವರ್ಷಗಳಿಂದ ಪೌರೋಹಿತ್ಯ ಮಾಡುತ್ತಾ ಬಂದಿದ್ದೇನೆ. ಆದರೆ ಉದ್ದೇಶಪೂರ್ವಕವಾಗಿ ಈ ವೃತ್ತಿಗೆ ಬಂದವಳಲ್ಲ. ಟಿ. ನರಸೀಪುರದಲ್ಲಿ ದೊಡ್ಡ ಜಮೀನ್ದಾರರಾಗಿದ್ದ ತಂದೆಯ ಮಗಳು ನಾನು. ಸಂಪ್ರದಾಯಸ್ಥ ಕುಟುಂಬವಾಗಿತ್ತು. ಮನೆಯಲ್ಲಿ ಪೂಜೆ–ಪುನಸ್ಕಾರ ಮಾಡುವಾಗೆಲ್ಲ ಪುರೋಹಿತರು ಬರುತ್ತಿದ್ದರು. ಅಲ್ಲಿಯವರೆಗೆ ಮನೆಯ ಯಜಮಾನಿಯರಂತಿದ್ದ ಹೆಣ್ಣುಮಕ್ಕಳು ಪುರೋಹಿತರು ಬಂದ ಕೂಡಲೇ ತೆರೆಮರೆಗೆ ಸರಿಯುತ್ತಿದ್ದರು. ನನಗೆ ಹದಿನಾರು ವರ್ಷಕ್ಕೆ ಮದುವೆಯಾಯಿತು. ನನ್ನ ತಂದೆ 52 ವರ್ಷಕ್ಕೆ ಕಾಲವಾದರು. ಆ ನಂತರ ಬದುಕಿನ ಬಗ್ಗೆ ಪ್ರಶ್ನೆಗಳು ಎದ್ದವು.
ದೇವರು ಯಾರು? ಗಂಡೋ–ಹೆಣ್ಣೋ?, ಪೂಜೆ ಮಾಡುವವರೆಲ್ಲ ನೆಮ್ಮದಿಯಿಂದ ಇರುವರೇ? ಯಾಕೆ ಈ ಪ್ರಪಂಚ ಒಂದೇ ತರಹ ಇಲ್ಲ ಎನ್ನುವಂಥ ಹಲವು ಜಿಜ್ಞಾಸೆಗಳು ಹುಟ್ಟಿಕೊಂಡವು. ಸುಶ್ರಾವ್ಯವಾಗಿ ಹಾಡುತ್ತಿದ್ದೆ. ಆ ಕಾರಣಕ್ಕೆ ಸತ್ಸಂಗಗಳಿಗೆ ಹೋಗುತ್ತಿದ್ದೆ. ಅಲ್ಲಿ ವಿಶ್ವಶಾಂತಿನಿಕೇತನದ ಸ್ವಾಮೀಜಿ ಬ್ರಹ್ಮದೇವ್‌ಜೀ ಸಿಕ್ಕರು. ಅವರು ಆಗಲೇ ವೇದಾಧ್ಯಯನದಲ್ಲಿ ದೊಡ್ಡ ಹೆಸರು ಮಾಡಿದ್ದರು. ಅವರೇ ನನ್ನ ಗುರುಗಳು. ಅವರಿಗೆ ಒಂದು ಪ್ರಶ್ನೆ ಮುಂದಿಟ್ಟೆ: ‘ಈ ಸಾವು–ನೋವು ಯಾವ ಮಾನದಂಡದ ಮೇಲೆ ಬರುತ್ತವೆ?’ ಎಂದು. ಅದಕ್ಕೆ ಉತ್ತರವೇನೋ ಸಿಕ್ಕಿತು. ಆದರೆ, ಉಳಿದ ಜಿಜ್ಞಾಸೆಗಳಿಗೆ ಹೇಗೆ ಉತ್ತರ ಕಂಡುಕೊಳ್ಳುವೆ ಎಂದು ಕೇಳಿದ ಸ್ವಾಮೀಜಿ, ‘ವೇದ ಅಧ್ಯಯನ ಮಾಡು ’ ಎಂದು ಸಲಹೆ ಕೊಟ್ಟರು. ಸಂಸ್ಕೃತ ಜ್ಞಾನಕ್ಕಾಗಿ ಪರೀಕ್ಷೆಗಳನ್ನು ಬರೆದೆ.
ದೇವರು ಅಂದರೆ ಏನು ಎಂದು ವೇದದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಜೀವನ ಎಂದರೇನು ಎಂಬುದನ್ನೂ ಅಷ್ಟೇ ಸ್ಪಷ್ಟವಾಗಿ ತಿಳಿಸಿಕೊಟ್ಟಿದೆ. ಜೀವನ ದಲ್ಲಿ ಇರುವುದು ಹದಿನಾರು ಸಂಸ್ಕಾರಗಳು, ಪಂಚ ಮಹಾಯಜ್ಞಗಳು. ವೇದಗಳಲ್ಲಿ ಶ್ರಾದ್ಧಮಂತ್ರಗಳಿಲ್ಲ. ಇನ್ನು ಹೆಣ್ಣು ಶ್ರಾದ್ಧ ಮಾಡಬಹುದೇ ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಇದನ್ನೆಲ್ಲ ಕಲಿತ ಮೇಲೆ ಪಂಚ ಮಹಾಯಜ್ಞಗಳನ್ನು ಮನೆಯಲ್ಲಿಯೇ ಮಾಡಲು ಆರಂಭಿಸಿದೆ. ಸಂಧ್ಯಾವಂದನೆ ಮಾಡಬೇಕಿತ್ತು. ಉಪನಯನ ಮಾಡಿಸಿಕೊಂಡೆ. ಆಗ ದೊಡ್ಡ ವಿರೋಧವೇ ವ್ಯಕ್ತವಾಯಿತು. ಶಿವದಾರದವಳಿಗೆ ಜನಿವಾರ ಯಾಕೆ ಎಂಬ ಪ್ರಶ್ನೆ ಬಂತು. ಜನಿವಾರವೆಂಬುದು ಜಾತಿಯ ಸಂಕೇತವಲ್ಲ, ಅದು ಜ್ಞಾನದ ಸಂಕೇತ.
ಘನಪಾಠಿ ಕೃಷ್ಣ ಭಟ್ಟರು ನನಗೆ 16 ವರ್ಷ ಋಗ್ವೇದ ಪಾಠ ಮಾಡಿದರು. ಗುರುಗಳ ಮುಖೇನವೇ ಎಲ್ಲವನ್ನೂ ಕಲಿತೆ. ದರ್ಶನ, ಉಪನಿಷತ್ತುಗಳನ್ನು ಕಲಿತೆ. ವೇದ ಕಲಿತ ಮೇಲೆ ವೇದೋಕ್ತ ಜೀವನವನ್ನೇ ಮಾಡಬೇಕು. ಮನೆಯಲ್ಲಿಯೇ ಅಗ್ನಿಹೋತ್ರ ಮಾಡಲು ಶುರು ಮಾಡಿದೆ. ಸ್ವಾಮೀಜಿಯ ಮಾರ್ಗದರ್ಶನದಲ್ಲಿ 1995ರಲ್ಲಿ ಮೊದಲ ಬಾರಿಗೆ ಮಹಿಳೆಯರ ಪೌರೋಹಿತ್ಯದಲ್ಲೇ ಹುಡುಗಿಯೊಬ್ಬಳಿಗೆ ಉಪನಯನ ಮಾಡಿಸಲಾಯಿತು. ಅದೇ ಹುಡುಗಿಯ ಮದುವೆಯ ಪೌರೋಹಿತ್ಯವನ್ನು ನಾನೇ ವಹಿಸಿದ್ದೆ. ನೂರಾರು ಮದುವೆಗಳ ಪೌರೋಹಿತ್ಯ ವಹಿಸಿದ್ದೇನೆ. 28 ವರ್ಷಕ್ಕೆ ಯಜ್ಞ ಮಾಡಲು ಶುರು ಮಾಡಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪೌರೋಹಿತ್ಯ ಕ್ಷೇತ್ರಕ್ಕೆ ಬರಬೇಕು. ಈವರೆಗೆ ನೂರಾರು ಹೆಣ್ಣುಮಕ್ಕಳಿಗೆ ಅವರ ಜಾತಿ ಯಾವುದು ಎಂದು ಸಹ ಕೇಳದೆ ಪೌರೋಹಿತ್ಯ ಕಲಿಸಿದ್ದೇನೆ. ಹೆಣ್ಣುಮಕ್ಕಳು ಹಬ್ಬ, ಹರಿದಿನ, ಪೂಜೆ, ಉಪವಾಸ ಎಲ್ಲವನ್ನೂ ಹೇಗೆ ಮಾಡುವುದು ಎನ್ನುವ ಗೊಂದಲದಲ್ಲಿಯೇ ಕಳೆದುಹೋಗುತ್ತಾರೆ. ದೇಹವನ್ನು ಹೈರಾಣಾಗಿಸಿಕೊಳ್ಳುತ್ತಾರೆ. ಒತ್ತಡದಿಂದ ಬದುಕುತ್ತಾರೆ. ಒತ್ತಡಮುಕ್ತರಾಗಲು ಅವರು ವೇದಗಳನ್ನು ಅಧ್ಯಯನ ಮಾಡಬೇಕು.
ಡಾ. ಪಿ. ಭ್ರಮರಾಂಬ ಮಹೇಶ್ವರಿ, ಪುರೋಹಿತೆ
ಗೇರ್‌ಗೆ ರೈಟ್, ಗೇಲಿಗೆ ಬ್ರೇಕ್
ನನ್ನನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ನನಗೆ ನಾನೇ. ‘ಏನಾದರೂ ಮಾಡು ನಿಯತ್ತಾಗಿ ಮಾಡು. ಕಷ್ಟಪಟ್ಟು ದುಡಿದು ತಿನ್ನುವುದಕ್ಕೆ ವೃತ್ತಿ ಮುಖ್ಯ. ಅದರಲ್ಲಿ ಮೇಲು–ಕೀಳು ಎಂಬುದೆಲ್ಲ ಇಲ್ಲ’ ಎಂಬ ಮಾತನ್ನು ನಾನು ಕುಸಿದಾಗಲೆಲ್ಲ ಹೇಳಿಕೊಳ್ಳುತ್ತೇನೆ. ಹಾಗೆ ಹೇಳಿಕೊಳ್ಳುತ್ತಲೇ ಆಟೊ ಓಡಿಸಲು ಕಲಿತೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಹೆಣ್ಣೊಬ್ಬಳು ಆಟೊ ಓಡಿಸುವುದು ಅಷ್ಟು ಸುಲಭದ ಮಾತಲ್ಲ. ಗೇರ್ ಎಲ್ಲಿದೆ ಗೊತ್ತಾ, ಬ್ರೇಕ್, ಹಾಕೋಕೆ ಬರುತ್ತಾ ಎಂದೆಲ್ಲ ವ್ಯಂಗ್ಯವಾಡಿದವರ ಮುಂದೆ, ದಾರಿ ಯಾವುದೇ ಇರಲಿ, ಸರಾಗವಾಗಿ ಆಟೊ ಓಡಿಸಬಲ್ಲೆ.
ಮೂರು ವರ್ಷಗಳ ಹಿಂದೆ ಹೋಟೆಲ್‌ನಲ್ಲಿ ಮುಸುರೆ ತಿಕ್ಕುತ್ತಿದ್ದೆ. ಹುಡುಗಿಯೊಬ್ಬಳು ಆಟೊ ಓಡಿಸುತ್ತಿದ್ದುದನ್ನು ನೋಡಿದೆ. ಆಗ ನಾನೂ ಹೀಗೆ ಆಟೊ ಓಡಿಸಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ ಅಂದುಕೊಂಡಿದ್ದೆ. ಅಷ್ಟರಲ್ಲಿ ನನ್ನ ಗೆಳತಿಯೊಬ್ಬಳು ಆ್ಯಪ್ ಆಧಾರಿತ ಕ್ಯಾಬ್ ಸೇವೆಯಾದ ‘ನಮ್ಮ ಯಾತ್ರಿ’ಯಲ್ಲಿ ಹೆಣ್ಣುಮಕ್ಕಳಿಗೆ ಆಟೊ ಓಡಿಸಲು ತರಬೇತಿ ನೀಡುತ್ತಿರುವುದಾಗಿ ಹೇಳಿದಳು. ಆರಂಭದಲ್ಲಿ ತುಂಬಾ ಹೆದರಿದ್ದೆ. ಸೈಕಲ್ ಕೂಡ ಓಡಿಸಿ ಗೊತ್ತಿರಲಿಲ್ಲ. ‘ನಿನ್ನ ಕೈಲಿ ಆಗುತ್ತೆ. ನೀನು ಕಲಿತೀಯ’ ಎಂದು ಗೆಳತಿ ಹುರಿದುಂಬಿಸಿದಳು. ನಾನು ಓದಿದ್ದುದು 7ನೇ ತರಗತಿವರೆಗಷ್ಟೆ. ಆಗ ನನಗೆ 37 ವರ್ಷ. ನನಗೆ ಇದೆಲ್ಲ ಸಾಧ್ಯವೇ ಎಂಬ ಅಪನಂಬಿಕೆಯಿಂದಲೇ ಡ್ರೈವಿಂಗ್ ಸೀಟ್ ಮೇಲೆ ಕುಳಿತೆ. ಕಲಿಯುತ್ತಾ ಹೋದೆ. ಕಲಿಕೆ ಎಂಬುದು ದೃಢವಾಗುತ್ತಾ ಬಂದಂತೆ ಆತಂಕ ಕಡಿಮೆಯಾಗುತ್ತಾ ಬಂತು.
ತಮಿಳ್ ಸೆಲ್ವಿ
ಬೆಳಿಗ್ಗೆ 6ರಿಂದ 11ರವರೆಗೆ ಆಟೊ ಓಡಿಸುತ್ತೇನೆ. ಮೂವರು ಮಕ್ಕಳು. ಗಂಡ ತೀರಿಕೊಂಡು 10 ವರ್ಷಗಳಾಗಿವೆ. ಇದೇ ಆಟೊ ಓಡಿಸಿ ಮಗಳಿಗೆ ಮದುವೆ ಮಾಡಿದ್ದೇನೆ. ಒಬ್ಬ ಮಗ ಮೆಕ್ಯಾನಿಕ್ ಆಗಿದ್ದಾನೆ, ಮತ್ತೊಬ್ಬ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಎಲ್ಲರಂತೆ ಚಂದದ ಬದುಕು ಕಟ್ಟಿಕೊಳ್ಳಬೇಕು ಎಂಬ ಛಲದ ಮುಂದೆ ಎಲ್ಲ ಸಮಸ್ಯೆಗಳೂ ಗೌಣವಾದವು. ಈಗಲೂ ಹೆಣ್ಣುಮಕ್ಕಳ ಚಾಲನಾ ಪ್ರತಿಭೆಯ ಬಗ್ಗೆ ಉಳಿದ ಚಾಲಕರು ಅನುಮಾನ ವ್ಯಕ್ತಪಡಿಸುತ್ತಾರೆ. ಸುಮ್ಮನೆ ಹಾರ್ನ್ ಮಾಡೋದು, ಜಾಗ ಬಿಡದೇ ಸತಾಯಿಸುವುದೆಲ್ಲ ಮಾಡುತ್ತಾರೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದುಂಟೇ?
ತಮಿಳ್ ಸೆಲ್ವಿ, ಆಟೊ ಚಾಲಕಿ, ಬೆಂಗಳೂರು
ಹೆಸರಿಗೆ ಕ್ರೂರ, ಪ್ರೀತಿ ಅಪಾರ
ಬನ್ನೇರುಘಟ್ಟದಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ಚಲ್ಲೇಂದ್ರ ದೊಡ್ಡಿಯೇ ನನ್ನೂರು. ಮೊದಲಿನಿಂದಲೂ ಪ್ರಾಣಿಗಳೆಂದರೆ ಬಲು ಇಷ್ಟ. ಚಿಕ್ಕವಳಿದ್ದಾಗಿನಿಂದ ಕೋಳಿ, ಕುರಿ, ಮೇಕೆ, ಹಸು, ಎಮ್ಮೆ ಹೀಗೆ ಎಲ್ಲವನ್ನೂ ಚೆನ್ನಾಗಿ ಸಾಕಿ ಗೊತ್ತಿತ್ತು. ಗಂಡ ರಾಜು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಆಕಸ್ಮಿಕ ಅಗಲಿಕೆಯಿಂದಾಗಿ ಆ ಕೆಲಸ ನನಗೆ ಸಿಕ್ಕಿತು. ಆರಂಭದಲ್ಲಿ ಪ್ರಾಣಿಗಳ ಆಸ್ಪತ್ರೆಯಲ್ಲಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿ ಶುಶ್ರೂಷೆಗಾಗಿ ಎಲ್ಲ ಬಗೆಯ ಪ್ರಾಣಿಗಳು, ಅವುಗಳ ಮರಿಗಳು ಬರುತ್ತಿದ್ದವು. ನನ್ನೊಳಗೆ ಸಹಜವಾಗಿ ಇದ್ದ ಪ್ರಾಣಿಪ್ರೀತಿಯಿಂದಾಗಿ ‘ಅನಿಮಲ್ ಕೀಪರ್’ ಹುದ್ದೆ ಸಿಕ್ಕಿತು. ಈವರೆಗೆ ಹುಲಿ, ಚಿರತೆ, ಜಿಂಕೆ, ಕೋತಿ ಮರಿಗಳನ್ನು ಶುಶ್ರೂಷೆ ಮಾಡಿ, ಒಂದು ವರ್ಷದವರೆಗೆ ಮಕ್ಕಳ ಹಾಗೆ ಸಾಕಿದ್ದೇನೆ. ಪ್ರಾಣಿಗಳು ಮಕ್ಕಳಂತೆ. ಕಚ್ಚುತ್ತವೆ, ಪರಚುತ್ತವೆ. ಅವುಗಳ ವರ್ತನೆಯನ್ನು ಸಹಿಸಿಕೊಳ್ಳಬೇಕು. ತಾಳ್ಮೆಯಿಂದ ನಾಜೂಕಾಗಿ ಹೇಳಿದರೆ ಅವು ಕೇಳುತ್ತವೆ. ಕೆಲವೊಮ್ಮೆ ಅವುಗಳಿಗೆ ಅನಾರೋಗ್ಯವಾದಾಗ ಭಯಪಟ್ಟಿದ್ದಿದೆ. ಅವು ಗುಣಮುಖವಾಗುವವರೆಗೂ ಚಡಪಡಿಕೆ ಇದ್ದೇ ಇರುತ್ತದೆ. ನನಗೆ 24 ವರ್ಷ ಇರುವಾಗ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ. ಇಬ್ಬರು ಗಂಡುಮಕ್ಕಳ ಬದುಕನ್ನು ರೂಪಿಸಲು ಈ ಉದ್ಯೋಗ ನೆರವಾಗಿದೆ.
ಪ್ರಾಣಿ ಪ್ರೀತಿ..... ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಪಾಲಕ ಮಹೇಶ್, ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕಿ ಸಾವಿತ್ರಮ್ಮ ಅವರ ಪ್ರೀತಿಗೆ ಅನಾಥ ಚಿರತೆ ಮರಿಗಳ ಮನಸ್ಸೂ ಕರಗಿದೆ. ಇವರೊಂದಿಗೆ ಚಿರತೆ ಮರಿಗಳು ಸಾಮಾನ್ಯವೆಂಬಂತೆ ಚಿನ್ನಾಟವಾಡುತ್ತವೆ.
ನಾವು ಅವುಗಳಿಗೆ ಕ್ರೂರಪ್ರಾಣಿಗಳೆಂದು ಹೇಳುತ್ತೇವೆ ಅಷ್ಟೆ. ಅವುಗಳ ನಿಜವಾದ ಭಾಷೆ ಪ್ರೀತಿಯೊಂದೇ. ನಾವು ಅವುಗಳ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಅವುಗಳ ವರ್ತನೆ ಇರುತ್ತದೆ.
ಸಾವಿತ್ರಮ್ಮ ರಾಜು, ಅನಿಮಲ್ ಕೀಪರ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ನನ್ನ ಮುದ್ದುಮರಿ, ತುಂಟಾಟವೇ ಬರೀ
ಕಾಡಿನಲ್ಲಿಯೇ ಹುಟ್ಟಿ ಬೆಳೆದಿರುವುದರಿಂದ ಆನೆಗಳ ಬಗ್ಗೆ ಭಯ, ಅಂಜಿಕೆ ಯಾವತ್ತೂ ಇಲ್ಲ. ಮತ್ತೆ ನಾನು ಸಾಕಿರುವುದೆಲ್ಲ ಮರಿ ಆನೆಗಳನ್ನು. ಮಕ್ಕಳಂತೆ ರಚ್ಚೆ ಮಾಡುವ, ಮುದ್ದು ಬಂದರೆ ಗುದ್ದಾಡುವ ಪುಟ್ಟಪುಟ್ಟ ಮರಿ ಆನೆಗಳನ್ನು ಸಾಕಿ ಅವುಗಳನ್ನು ದೊಡ್ಡದು ಮಾಡುವುದರಲ್ಲಿ ಇರುವಷ್ಟು ಖುಷಿ ಬೇರೆ ಯಾವುದರಲ್ಲಿಯೂ ಈವರೆಗೆ ಸಿಕ್ಕಿಲ್ಲ. ಕರ್ನಾಟಕ– ತಮಿಳುನಾಡು ಗಡಿಯಲ್ಲಿರುವ ಮದುಮಲೆ ರಾಷ್ಟ್ರೀಯ ಉದ್ಯಾನವೇ ನಮಗೂ ಆನೆಗಳಿಗೂ ಆಶ್ರಯ ತಾಣ. ನನ್ನ ಗಂಡನ ಊರು ಬಂಡೀಪುರ ಸಮೀಪದಲ್ಲಿದೆ. ನನ್ನ ತಂದೆಯ ಊರು ಕೇರಳ. ಬೆಳೆದಿದ್ದೆಲ್ಲ ಕರ್ನಾಟಕದಲ್ಲಿ. ಆನೆಗಳಿಂದಲೇ ಬದುಕಿಗೊಂದು ಅರ್ಥ ಹಾಗೂ ಅಸ್ತಿತ್ವ ದೊರಕಿದೆ. ಆನೆಗಳನ್ನು ಪಳಗಿಸುವುದನ್ನು ನನ್ನ ಗಂಡ ಬೊಮ್ಮನ್ ಕಲಿತಿದ್ದಾರೆ. ನನ್ನದೇನಿದ್ದರೂ ಮರಿ ಆನೆಗಳ ದೇಖರೇಖಿ.
ಕೆಲವೊಮ್ಮೆ ಅವುಗಳಿಗೆ ಜ್ವರ, ಶೀತ ಬಂದುಬಿಡುತ್ತದೆ. ಹೊಟ್ಟೆಗೆ ಏನನ್ನೂ ತಿನ್ನುವುದಿಲ್ಲ. ಆಗೆಲ್ಲ ಜೀವಕ್ಕೆ ತೀರಾ ಸಂಕಟವಾಗಿ ಊಟ ಬಿಟ್ಟುಬಿಡುತ್ತೇನೆ. ಅವು ಹುಷಾರಾದ ಮೇಲೆ ನನಗೇ ಜೀವ ಬಂದಂತೆ ಆಗುತ್ತದೆ. ಆನೆ ನೋಡಿಕೊಳ್ಳುವ ಕೆಲಸಕ್ಕೆ ಸರ್ಕಾರದ ವತಿಯಿಂದ ಒಂದು ವರ್ಷದ ಹಿಂದೆ ಅಧಿಕೃತವಾಗಿ ನೇಮಕವಾಗಿರುವುದಕ್ಕೆ ಖುಷಿ ಇದೆ.
ಸದ್ಯಕ್ಕೆ ಈ ಕ್ಯಾಂಪ್‌ನಲ್ಲಿ 27 ಆನೆಗಳಿವೆ. ಪ್ರತಿಯೊಂದಕ್ಕೂ ಹೆಸರಿಟ್ಟಿದ್ದೇನೆ. ರಘು, ಬೊಮ್ಮಿ, ಇಂದ್ರ, ಕಾಮಾಕ್ಷಿ, ಬಾಮಾ, ಕೃಷ್ಣ, ಸ್ಯಾನ್‌ಗೋನ್, ಮುದುಮಲೆ... ಹೀಗೆ ಅವುಗಳ ಹೆಸರುಗಳನ್ನು ಕೂಗಿ ಕರೆದು ಖುಷಿ ಪಡುತ್ತೇನೆ. ಅವುಗಳೊಂದಿಗೆ ಬೆಸೆದುಕೊಂಡಿರುವ ನನ್ನ ಮತ್ತು ನನ್ನ ಗಂಡನ ಬದುಕು ತುಂಬಾ ಚಂದವಾಗಿದೆ ಎಂದು ಅನ್ನಿಸುತ್ತದೆ. ಈ ಮರಿಯಾನೆಗಳಿಗೆ ಆಗಾಗ್ಗೆ ಸ್ನಾನ ಮಾಡಿಸುವಾಗ ಅವು ಆಡುವ ತುಂಟಾಟಗಳನ್ನು ನೀವು ನೋಡಬೇಕು. ಅವು ನೀಡುವಷ್ಟು ಪ್ರೀತಿಯನ್ನು ಮನುಷ್ಯರು ನೀಡಲು ಸಾಧ್ಯವೇ ಇಲ್ಲ.
ಬೆಳ್ಳಿ, ಕಾವಾಡಿಗರು, ಮದುಮಲೆ ರಾಷ್ಟ್ರೀಯ ಉದ್ಯಾನ, ಚಾಮರಾಜನಗರ
ಬುಸ್‌ಬುಸ್ ಹಾವು ಕೊಟ್ಟಿದೆ ತಾವು
ಮೈಸೂರಿನ ‘ದಿ ಲಿಯಾನ ಟ್ರಸ್ಟ್’ನಲ್ಲಿ ಸರೀಸೃಪಗಳ ಮೇಲ್ವಿಚಾರಕಿಯಾಗಿ 2018ರಲ್ಲಿ ವೃತ್ತಿ ಆರಂಭಿಸಿದೆ. ಆರಂಭದಲ್ಲಿ ಸ್ವಯಂಸೇವಕಿಯಂತೆ ಕೆಲಸ ಮಾಡಿದೆ. ಮೊದಲಿನಿಂದಲೂ ನನಗೆ ಪ್ರಾಣಿಗಳೆಂದರೆ ಪ್ರೀತಿ. ಹಾಗಾಗಿ ಇದನ್ನೇ ವೃತ್ತಿಯನ್ನಾಗಿ ಆಯ್ದುಕೊಂಡೆ. ಹಾವುಗಳೆಂದರೆ ತುಂಬಾ ಅಪಾಯಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಅದು ನಿಜವಲ್ಲ. ಅವುಗಳ ವಾಸಕ್ಕೆ ಲಿಯಾನದಲ್ಲಿ ನಾವು ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಸಂಶೋಧನೆಗಾಗಿ ಅವುಗಳ ವಿಷ ಸಂಗ್ರಹಿಸುವ ಕೆಲಸ ಮಾಡುತ್ತೇನೆ. ಜತೆಗೆ ನೈಸರ್ಗಿಕ ನಡವಳಿಕೆ ಪ್ರದರ್ಶಿಸಲು ಅನುವಾಗುವಂತೆ ಅವುಗಳಿಗೆ ಶುದ್ಧ ನೀರು ಹಾಗೂ ಆಹಾರವನ್ನು ಪೂರೈಸುತ್ತೇವೆ.
ಲಿಸಾ
ಹಾವುಗಳ ಒಡನಾಟದಿಂದ ನನ್ನೊಳಗಿನ ತಾಳ್ಮೆ ಹೆಚ್ಚಿತು. ಹಾವುಗಳು ಸಾಮಾನ್ಯವಾಗಿ ದೀರ್ಘಕಾಲದವರೆಗೆ ಅಡಗಿಕೊಳ್ಳುತ್ತವೆ. ತಿಂಗಳುಗಟ್ಟಲೆ ಆಹಾರವನ್ನು ಬಿಟ್ಟು ಹೋಗುತ್ತವೆ. ಅವು ಇತರ ಪ್ರಾಣಿಗಳಂತೆ ಹೆಚ್ಚು ಅಭಿವ್ಯಕ್ತಿ ಮಾಡದೇ ಇರುವುದರಿಂದ ಅವುಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡು, ಭಾವನೆಗಳಿಗೆ ಸ್ಪಂದಿಸಲು ತಾಳ್ಮೆ ಬೇಕು.
ಲಿಸಾ
ವಿಶೇಷ ಎನಿಸುವ ವೃತ್ತಿ ಆಯ್ಕೆಯನ್ನು ನನ್ನ ಕುಟುಂಬ ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದೆ. ಆರಂಭದಲ್ಲಿ ಹಾವುಗಳ ಕಾರಣಕ್ಕೆ ಅವರಿಗೆ ಭಯ ಇತ್ತು. ನಂತರ ಅವರು ಅರ್ಥ ಮಾಡಿಕೊಂಡರು. ಈಗ ನನ್ನ ತಂದೆ– ತಾಯಿ ಮನೆಯಲ್ಲಿ ಒಟ್ಟಿಗೆ ವಾಸಿಸುವ ಇಲಿ ಮತ್ತು ಹಾವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಹಾವಿಗೆ ರಾಬರ್ಟ್ ಎಂದು ಹೆಸರಿಟ್ಟಿದ್ದಾರೆ.
–ಲಿಸಾ ಗೊನ್ಸಾಲ್ವಿಸ್, ಸರೀಸೃಪ ಮೇಲ್ವಿಚಾರಕಿ
ಜೀವನ ನೀಡುವ ನಿರ್ಜೀವ
40 ವರ್ಷ ಆಸುಪಾಸಿನ ಗಂಡಸಿನ ಹೆಣವನ್ನು ಒಂದು ಟೇಬಲ್ ಮೇಲೆ ಮಲಗಿಸಿದ್ದರು. ಅದನ್ನು ನೋಡಿದಾಗ ನಡುಗಿಹೋದೆ. ಒಳಗಿನಿಂದ ದುಃಖ ಒತ್ತರಿಸಿಕೊಂಡು ಬಂತು. ಆದರೆ ಅಳುತ್ತಾ ಕುಳಿತರೆ ಮನೆಯಲ್ಲಿ ಇರುವ ಒಬ್ಬಳೇ ಪುಟ್ಟ ಮಗಳನ್ನು ಸಾಕುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು. ಮೊದಲೇ ನಾನು ಸಿಂಗಲ್ ಮದರ್. ಆಗ ಮರುಯೋಚನೆ ಮಾಡಲಿಲ್ಲ. ವೈದ್ಯರ ಆಣತಿಯಂತೆ ಶವವನ್ನು ಕೊಯ್ಯಲು ಶುರು ಮಾಡಿದೆ. ಅವರು ಕೊಟ್ಟ ಪ್ರತಿ ಆಜ್ಞೆಯನ್ನೂ ನಿಷ್ಠೆಯಿಂದ ಪಾಲಿಸಿದೆ. ಅದು ಲೋಕದ ಕಣ್ಣಿಗೆ ಹೆಣ ಕೊಯ್ಯುವ ಕೆಲಸವೇ ಆಗಿರಬಹುದು. ಆದರೆ, ನನಗೆ ಹೊಟ್ಟೆ ತುಂಬಿಸುವ ಕಾಯಕವಾಗಿತ್ತು.
ರಾಜಮ್ಮ
ಆಸ್ಪತ್ರೆಯಲ್ಲಿ ಸ್ವಚ್ಛ ಮಾಡುವ ಕೆಲಸದಲ್ಲಿದ್ದೆ. ರವಿಕುಮಾರ್ ಎನ್ನುವ ವೈದ್ಯರು ಪೋಸ್ಟ್‌ಮಾರ್ಟಂನಲ್ಲಿ ಸಹಾಯಕಳಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಸಿಕೊಟ್ಟರು. ಆರಂಭದಲ್ಲಿ ಹೆಣಗಳನ್ನು ನೋಡಿ ಮೂರು ಸಲ ಜೋರು ಜ್ವರವೇ ಬಂದುಬಿಟ್ಟಿತ್ತು. ಪದೇ ಪದೇ ನೋಡುತ್ತಿದ್ದರೆ ಭಯವೆಲ್ಲ ಮಾಯವಾಗುತ್ತದೆ ಎಂದು ಹೇಳಿದ್ದು ನಿಜವಾಯಿತು. ಆಮೇಲೆ ತಿರುಗಿ ನೋಡಿದ್ದೇ ಇಲ್ಲ. ಈಗ ಈ ವೃತ್ತಿ ಆರಂಭಿಸಿ 18 ವರ್ಷಗಳೇ ಆಗಿವೆ. ಇಡೀ ಏಷ್ಯಾದಲ್ಲಿ ಪೋಸ್ಟ್‌ಮಾರ್ಟಂ ಕೆಲಸ ಮಾಡುತ್ತಿರುವ ಏಕೈಕ ಮಹಿಳೆಯೆಂದು ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಆದರೆ, ನನ್ನ ಕೆಲಸ ಮಾತ್ರ ಇನ್ನೂ ಕಾಯಂ ಆಗಿಲ್ಲ.
ಸದ್ಯಕ್ಕೆ ಸರಗೂರು, ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೆಲಸ ಮಾಡುತ್ತಿದ್ದೀನಿ. ಯಾವುದೇ ಕೊಲೆ ಪ್ರಕರಣದ ಶವಗಳಿದ್ದರೂ ಹೋಗಿ ಪೋಸ್ಟ್‌ಮಾರ್ಟ್‌ಂ ಮಾಡಿ ಬರುತ್ತೇನೆ. ಇದಲ್ಲದೇ ಗುಂಡ್ಲುಪೇಟೆ, ನಂಜನಗೂಡಿನ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಹಾಯ ಮಾಡಿ ಎಂದು ಕರೆದರೆ, ಅಲ್ಲಿಯೂ ಹೋಗಿ ಕೆಲಸ ಹೇಳಿಕೊಟ್ಟು ಬರುತ್ತೇನೆ. ಇದೇ ಕೆಲಸದಿಂದ ಜನ ಗುರುತು ಹಿಡಿಯುವಂತಾಗಿದೆ.
ರಾಜಮ್ಮ, ಪೋಸ್ಟ್‌ಮಾರ್ಟಂ ಅಟೆಂಡರ್, ಎಚ್.ಡಿ.ಕೋಟೆ
ಒಂದು ಸೆಲ್ಫಿ ಪ್ಲೀಸ್...
ನಾನು ಕೊಡಗು ಮೂಲದವಳು. ಮದುವೆಯಾದ ಮೇಲೆ ಬೆಂಗಳೂರಿಗೆ ಬಂದೆ. ಸದ್ಯಕ್ಕೆ ದೊಮ್ಮಲೂರಿನಲ್ಲಿ ವಾಸಿಸುತ್ತಿದ್ದೇನೆ. ಮೊದಲು ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಕೊರೊನಾ ಲಾಕ್‌ಡೌನ್ ವೇಳೆ ಆ ಅಂಗಡಿಯನ್ನು ಮುಚ್ಚಲಾಯಿತು. ಹಾಗಾಗಿ, ಬೇರೆ ಕೆಲಸ ನೋಡಿಕೊಳ್ಳುವುದು ಅನಿವಾರ್ಯವಾಯಿತು. ಕೆಲಸಕ್ಕಾಗಿ ಹಲವು ಕಡೆ ಅಲೆದೆ. ಎಲ್ಲಿಯೂ ಸಿಗಲಿಲ್ಲ. ಆಗ ಆರಂಭದಲ್ಲಿ ಡಂಜೊದಲ್ಲಿ ಡೆಲಿವರಿ ಸರ್ವಿಸ್ ಮಾಡಿದೆ. ಈಗ ರ್‍ಯಾಪಿಡೊದಲ್ಲಿ ಊಟ, ತಿಂಡಿಯ ಪಾರ್ಸೆಲ್ ಡೆಲಿವರಿ ಮಾಡುತ್ತೇನೆ.
ಆರಂಭದಲ್ಲಿ ಕೆಲಸ ಹೇಗೋ ಏನೋ ಎಂಬ ಆತಂಕ ಇತ್ತು. ಆದರೆ, ಬರಬರುತ್ತಾ ಆತ್ಮವಿಶ್ವಾಸ ಬಂದಿತು. ಈ ಡೆಲಿವರಿ ಸರ್ವಿಸ್‌ನಲ್ಲಿ ಆರಂಭದಲ್ಲಿ ಹಣ ಗಳಿಕೆ ಕಷ್ಟ ಅನ್ನಿಸಿತ್ತು. ಹೆಣ್ಣುಮಕ್ಕಳು ಡೆಲಿವರಿ ಸರ್ವಿಸ್ ಕೊಡುತ್ತಿದ್ದಾರೆ ಎಂದರೆ ಹಲವು ಗ್ರಾಹಕರು ಬಹಳ ಚೆನ್ನುಡಿಗಳನ್ನಾಡಿ, ಹುರಿದುಂಬಿಸುತ್ತಾರೆ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅದನ್ನೆಲ್ಲ ನೋಡುವಾಗ ಖುಷಿಯಾಗುತ್ತದೆ. ಅಲ್ಲದೆ, ಈ ಕೆಲಸಕ್ಕೆ ಬಂದಿದ್ದು ಸಾರ್ಥಕವಾಯಿತು ಎಂಬ ಭಾವ ಮೂಡುತ್ತದೆ.
ಸರಿತಾ ಎಂ.ಆರ್., ಡೆಲಿವರಿ ಸರ್ವಿಸ್
ನೀರಿಗಿಳಿಸಿದೆ ಬದುಕು
ದೋಣಿಗೆ ಹುಟ್ಟು ಹಾಕುವುದನ್ನು ಅಪ್ಪ ನನಗೆ ಕಲಿಸಿದ್ದರು. ನನ್ನ ಅಪ್ಪನಿಗೆ ಅವರ ಅವ್ವ ಹೇಗೆ ದೋಣಿ ನಡೆಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಳು. ಹೀಗೆ ವಂಶಪಾರಂಪರ್ಯವಾಗಿ ಬಂದ ಈ ವೃತ್ತಿಯನ್ನು ಎಂಟು ವರ್ಷಗಳಿಂದಲೂ ಆಸ್ಥೆಯಿಂದ ನಡೆಸಿಕೊಂಡು ಬರುತ್ತಿದ್ದೇನೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮೊಳವಾಡ ಗ್ರಾಮ ಹಾಗೂ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಧ್ಯೆ ಸಂಚಾರ. ಕೃಷ್ಣಾ ನದಿ ಈ ಎರಡೂ ತಾಲ್ಲೂಕುಗಳನ್ನು ವಿಭಜಿಸಿದೆ.
ಈ ನದಿಯಲ್ಲಿ ಹುಟ್ಟುಹಾಕಿ ದೋಣಿ ನಡೆಸುವುದು ನನಗೆ ಒಂದು ಬಗೆಯ ಖುಷಿ ಕೊಡುವ ಕೆಲಸ. ಸದ್ಯಕ್ಕೆ ಹೊಟ್ಟೆ ತುಂಬಿಸುತ್ತಿದೆ. ಶಾಲೆಗೆ ಹೋಗುವವರು, ಕೆಲಸಕ್ಕೆ ಹೋಗುವವರು ಸೇರಿದಂತೆ ಬೇರೆ ಬೇರೆ ಊರುಗಳಿಗೆ ಹೋಗಬೇಕಾದವರನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ದೋಣಿಯಲ್ಲಿ ಕರೆದೊಯ್ದು ತಲುಪಿಸುತ್ತೇನೆ. ಮೊದಲಿನಿಂದಲೂ ನೀರೆಂದರೆ ಬಲು ಇಷ್ಟ. ನೀರಿನ ಮಧ್ಯೆಯೇ ಬೆಳೆದವಳು ನಾನು. ಹಾಗಾಗಿ, ಯಾವ ರೀತಿಯಲ್ಲಿಯೂ ಅಂಜಿಕೆ ಆಗಲಿಲ್ಲ. ದೋಣಿ ಊರಿನದ್ದು. ಪಂಚಾಯಿತಿಯಿಂದ ಟೆಂಡರ್ ಕರೆಯಲಾಗುತ್ತದೆ. ಜುಲೈ, ಆಗಸ್ಟ್‌ನಲ್ಲಿ ನದಿಯ ಹರಿವು ಜೋರಾಗಿರುತ್ತದೆ. ಆಮೇಲೆ ನದಿ ತಟಸ್ಥವಾಗಿ ಉಳಿಯುತ್ತದೆ. ಒಬ್ಬರಿಗೆ ₹ 10ರಂತೆ ಟಿಕೆಟ್ ತೆಗೆದುಕೊಳ್ಳುತ್ತೇನೆ.
ಆರಂಭದಲ್ಲಿ ಕೈಯಲ್ಲಿಯೇ ಹುಟ್ಟು ಹಾಕಿ ದೋಣಿಯನ್ನು ನಡೆಸುತ್ತಿದ್ದೆ. ಈಗ 30 ಮಂದಿ ಹೋಗುವ ಸಾಮರ್ಥ್ಯವಿರುವ ದೊಡ್ಡದಾದ ಯಂತ್ರಚಾಲಿತ ದೋಣಿಯನ್ನು ಚಾಲನೆ ಮಾಡುತ್ತೇನೆ. 20 ವರ್ಷದವಳಿದ್ದಾಗಿನಿಂದ ಈ ಕೆಲಸ ಮಾಡುತ್ತಿದ್ದೇನೆ. ಖುಷಿ ಇದೆ. ಮುಂದೆ ಸೇತುವೆ ನಿರ್ಮಾಣವಾಗಬಹುದು. ವರ್ಷವಿಡೀ ದೋಣಿ ನಡೆಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿ ದ್ದೇನೆ. ನದಿಯೊಳಗೆ ದೋಣಿ ಇಳಿಯುವಾಗ ಆಗುವ ಖುಷಿಯ ಮುಂದೆ ಉಳಿದೆಲ್ಲವೂ ಗೌಣ.
ರೇಖಾ ಮಾರುತಿ ಅಂಬಿ, ದೋಣಿ ಚಾಲಕಿ
ಬದುಕು ರೂಪಿಸಿದ ಬಂದಿಖಾನೆ
ಜೈಲು ಎಂದರೆ ದೂರ ಸರಿಯುವವರೇ ಹೆಚ್ಚು. ಜೈಲಿಗೆ ಹೋಗಿ ಬಂದಿದ್ದಾರೆ ಎಂದರೆ ಅಂಥವರನ್ನು ಮಾತನಾಡಿಸಲು ಜನ ಹಿಂದೆ–ಮುಂದೆ ನೋಡುತ್ತಾರೆ. ಆದರೆ, ನಿತ್ಯ ನೂರಾರು ಕೈದಿಗಳ ಮಧ್ಯೆಯೇ ಇದ್ದು, ಅವರ ಸುಧಾರಣೆಗಾಗಿ ಶ್ರಮಿಸುತ್ತಿರುವುದಕ್ಕೆ ಖುಷಿ ಇದೆ. ವೃತ್ತಿಬದ್ಧತೆಗೆ ಹೆಸರಾಗಿರುವ, ಶತಮಾನದ ಇತಿಹಾಸ ಹೊಂದಿರುವ ಕಲಬುರಗಿ ಕೇಂದ್ರ ಕಾರಾಗೃಹದ ಪ್ರಥಮ ಮಹಿಳಾ ಮುಖ್ಯ ಅಧೀಕ್ಷಕಿ ಎಂದು ಹೆಸರಿಸಿದಾಗಲೆಲ್ಲ ಸಂತೋಷ ಇಮ್ಮಡಿಯಾಗುತ್ತದೆ. ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿ ನನ್ನೂರು. 2006ರಿಂದ ಕಾರಾಗೃಹ ಸೇವೆಯಲ್ಲಿ ಇದ್ದೇನೆ. ಮೈಸೂರು, ಮಡಿಕೇರಿ, ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಬಯಲು ಬಂದಿಖಾನೆ, ಪರಪ್ಪನ ಅಗ್ರಹಾರ, ವಿಜಯಪುರ, ಧಾರವಾಡ, ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ್ದೇನೆ.
ಅನಿತಾ ಆರ್
ನಮ್ಮ ತಂದೆ–ತಾಯಿಗೆ ನಾವು ಮೂವರೂ ಹೆಣ್ಣುಮಕ್ಕಳೇ ಇದ್ದು, ನಾನು ವೈದ್ಯೆಯಾಗಬೇಕು ಎಂಬುದು ತಂದೆಯವರ ಕನಸಾಗಿತ್ತು. ಹಾಗಾಗಿ, ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಆದರೆ ನಾನು ಆಡಳಿತಾಧಿಕಾರಿ ಆಗಬೇಕು ಎಂಬ ಆಸೆಯನ್ನು ಬಿಟ್ಟಿರಲಿಲ್ಲ. ಅಪ್ಪನ ಆಸೆಯಂತೆ ಮೊದಲು ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಅಭ್ಯಾಸ ಮಾಡಿ ಅಪ್ಪನ ಆಸೆಯನ್ನು ಈಡೇರಿಸಿದೆ. ಬಳಿಕ 2004ರಲ್ಲಿ ಕೆಎಸ್‌ಪಿಎಸ್ (ಕರ್ನಾಟಕ ಸ್ಟೇಟ್ ಪ್ರಿಸನ್ ಸರ್ವಿಸ್) ಪರೀಕ್ಷೆ ಎದುರಿಸಿ, ತಮಿಳುನಾಡಿನ ವೆಲ್ಲೂರಿನಲ್ಲಿ ತರಬೇತಿ ಮುಗಿಸಿಬಂದೆ. ಯಾವುದೋ ಅಪರಾಧಕ್ಕೆ ಸೆರೆಮನೆ ಸೇರುವ ತಾಯಿಯ ಜೊತೆಗೆ ಆಕೆಯ ಪುಟ್ಟ ಮಗುವೂ ಬಂದಿರುತ್ತದೆ. ಅಂಥ ಪ್ರಕರಣಗಳು ನನ್ನನ್ನು ಹೆಚ್ಚು ಭಾವನಾತ್ಮಕವಾಗಿಸುತ್ತವೆ. ಆದರೆ, ಆ ಮಗುವಿಗೆ ಜೈಲಿನಲ್ಲಿಯೂ ಒಳ್ಳೆಯ ವಾತಾವರಣ ಕಲ್ಪಿಸಬೇಕು ಎಂಬುದು ನೆನಪಿಗೆ ಬರುತ್ತಿದ್ದಂತೆಯೇ ಮತ್ತೆ ಉತ್ಸಾಹದಿಂದ ಪುಟಿದೇಳುತ್ತೇನೆ.
ಡಾ. ಅನಿತಾ ಆರ್., ಮುಖ್ಯ ಅಧೀಕ್ಷಕಿ, ಕಲಬುರಗಿ ಕೇಂದ್ರ ಕಾರಾಗೃಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.