ADVERTISEMENT

ಸ್ಪಂದನ ಅಂಕಣ: ಹದಿವಯಸ್ಸಿನಲ್ಲೂ ಬರುವುದೇ ಪಿಸಿಒಡಿ?

ಡಾ.ವೀಣಾ ಎಸ್‌ ಭಟ್ಟ‌
Published 21 ನವೆಂಬರ್ 2025, 23:30 IST
Last Updated 21 ನವೆಂಬರ್ 2025, 23:30 IST
   

lನನಗೆ ಒಬ್ಬಳೇ ಮಗಳು. 17 ವರ್ಷ, ಪಿಯುಸಿ ಓದುತ್ತಿದ್ದಾಳೆ. ಆರು ತಿಂಗಳ ಹಿಂದೆ ಆಗಾಗ ಸ್ವಲ್ಪ ಹೊಟ್ಟೆನೋವು ಬರುತ್ತಿತ್ತು. ಸ್ಕ್ಯಾನಿಂಗ್ ಮಾಡಿಸಿದಾಗ ಪಿಸಿಒಡಿ ಇದೆ ಎಂದು ತಿಳಿಯಿತು. ವೈದ್ಯರು ಮಾತ್ರೆ ಕೊಟ್ಟಿದ್ದರು. ಈಗ ಹೊಟ್ಟೆನೋವೇನೂ ಇಲ್ಲ. ಆದರೆ ಅವಳು ಪಿಸಿಒಡಿ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿ, ತುಂಬಾ ಅಂತರ್ಮುಖಿಯಾಗಿ ಬಿಟ್ಟಿದ್ದಾಳೆ. ಈ ವಯಸ್ಸಿನಲ್ಲೇ ಪಿಸಿಒಡಿ ಆದರೆ ಮುಂದೆ ನಿಜವಾಗಿಯೂ ತೊಂದರೆಯೇ? ಅವಳು ದಪ್ಪವೂ ಇಲ್ಲ. ನನಗಂತೂ ತುಂಬಾ ಭಯವಾಗಿದೆ, ಏನು ಮಾಡುವುದು ಡಾಕ್ಟರೇ?

⇒ಭಾರ್ಗವಿ, ಮಂಡ್ಯ

ಉ: ಆತಂಕ ಪಡಬೇಡಿ. ಪಿಸಿಒಡಿ (ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್) ಇಂದು ಹತ್ತರಲ್ಲಿ ನಾಲ್ವರು ಮಹಿಳೆಯರನ್ನು ಬಾಧಿಸುವ, ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆ. ಸ್ವಲ್ಪ ಮಟ್ಟಿಗೆ ಆನುವಂಶೀಯ ಹಿನ್ನೆಲೆ, ಪರಿಸರದ ಅಂಶಗಳಿಂದಲೂ ಪ್ರಭಾವಿತವಾಗಿರುವ ಸಮಸ್ಯೆ ಇದು. ಪ್ರತಿ ತಿಂಗಳು ಅಂಡಾಶಯದಿಂದ ಅಂಡಾಣು ಸರಿಯಾಗಿ ಬಿಡುಗಡೆಯಾಗದೆ ಹಾಗೆಯೇ ಅಪಕ್ವವಾಗಿ ಇದ್ದು, ಅಂತಹ ಅಪಕ್ವಕೋಶಿಕೆಗಳು ಅಂಡಾಶಯದ ತೊಗಟೆಯ ಭಾಗದಲ್ಲಿ ಮುತ್ತು ಪೋಣಿಸಿದ ಹಾಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ನಲ್ಲಿ ಕಾಣಿಸುತ್ತವೆ. ಇದರ ಜೊತೆಗೆ ಋತುಚಕ್ರದಲ್ಲಿ ಏರುಪೇರು ಆಗುವುದು, ಅಂದರೆ ಎರಡು– ಮೂರು ತಿಂಗಳಿಗೊಮ್ಮೆ ಋತುಸ್ರಾವ ಆರಂಭವಾಗಿ ದೀರ್ಘಾವಧಿ, ಅತಿಯಾಗಿ ರಕ್ತಸ್ರಾವ ಆಗಬಹುದು.

ADVERTISEMENT

ಕೆಲವರಲ್ಲಿ ಪುರುಷರ ಹಾರ್ಮೋನಾದ ಟೆಸ್ಟೊಸ್ಟಿರಾನ್ ಹೆಚ್ಚಳ ಉಂಟಾಗಿ ಗದ್ದ, ಮೀಸೆಯ ಭಾಗ, ಎದೆ,  ಹೊಟ್ಟೆಯಂತಹ ಕಡೆ ಅಸಹಜವಾಗಿ ಕೂದಲು ಕಾಣಿಸಿಕೊಂಡು (ಹರ್ಸುಟಿಸಂ), ಹಲವರು ಥ್ರೆಡಿಂಗ್, ಎಲೆಕ್ಟ್ರೋಲಿಸಿಸ್‌ನಂತಹವುಗಳಿಗೆ ಮೊರೆ ಹೋಗುವುದು ಸಾಮಾನ್ಯ. ಅತಿಯಾದ ಮೊಡವೆಯ ಕಾರಣದಿಂದ ಚರ್ಮರೋಗ ತಜ್ಞರಲ್ಲಿಗೆ ಹೋದಾಗಲೇ ಎಷ್ಟೋ ಬಾರಿ ಪಿಸಿಒಡಿ ಪತ್ತೆಯಾಗುತ್ತದೆ. ಈ ಸಮಸ್ಯೆ ಹದಿವಯಸ್ಸಿನಿಂದ ಹಿಡಿದು ವಯಸ್ಕರವರೆಗೆ ಯಾರನ್ನು ಬೇಕಾದರೂ ಬಾಧಿಸಬಹುದು. ಇದನ್ನು ಹಾಗೇ ಬಿಟ್ಟರೆ ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದನ್ನೆಲ್ಲ
ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಿಂದ ತಿಳಿದು ನಿಮ್ಮ ಮಗಳು ಖಿನ್ನತೆಗೆ ಒಳಗಾಗಿರಬಹುದು. ಆದರೆ ಹದಿವಯಸ್ಸಿನಲ್ಲಿ ಪ್ರೌಢಾವಸ್ಥೆಯ ಸಾಮಾನ್ಯ ಗುಣಲಕ್ಷಣಗಳಾದ ಮೊಡವೆ, ಮುಟ್ಟಿನ ಏರುಪೇರು ಹಾಗೆಯೇ ಸ್ಕ್ಯಾನಿಂಗ್‍ ಮಾಡಿಸಿದಾಗ ಸಹಜವಾಗಿಯೇ ಬಹುಪೊಳ್ಳುಗುಳ್ಳೆಗಳು (ಸಿಸ್ಟ್) ಕಂಡುಬರಬಹುದು. ಒಂದುವೇಳೆ ಹದಿವಯಸ್ಸಿನ ಹೆಣ್ಣುಮಕ್ಕಳಲ್ಲಿ ನಿಜವಾಗಿಯೂ ಪಿಸಿಒಡಿ ರೋಗಲಕ್ಷಣಗಳು ಕಂಡುಬಂದರೂ ಅವರನ್ನು ಪಿಸಿಒಡಿ ಆಗುವ ಅಪಾಯದಲ್ಲಿ ಇರುವವರು ಎಂದಷ್ಟೇ ಗುರುತಿಸಬೇಕು. ಆಗಾಗ್ಗೆ ಮರು ಮೌಲ್ಯಮಾಪನ ಮಾಡಿಸುತ್ತಾ ಅಂತಹ ಹೆಣ್ಣುಮಕ್ಕಳಿಗೆ ಕುಟುಂಬದ ಸದಸ್ಯರೇ ಆಪ್ತ ಸಮಾಲೋಚನೆ ನಡೆಸುತ್ತಾ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಜೀವನಶೈಲಿ ಬದಲಿಸಿಕೊಂಡರೆ, ಮುಂದಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂಬುದನ್ನು  ಮನದಟ್ಟು ಮಾಡಿಸಬೇಕು.

ನಿಮ್ಮ ಮಗಳು ತೂಕವನ್ನೇನೂ ಕಡಿಮೆ ಮಾಡಿಕೊಳ್ಳುವುದು ಬೇಡ. ಪ್ರೋಟೀನ್‌ ಸೇವನೆಯನ್ನು ಹೆಚ್ಚಿಸಲಿ. ಊಟದಲ್ಲಿ ಹಸಿರುಸೊಪ್ಪು, ತರಕಾರಿ ಹೆಚ್ಚಾಗಿ ಇರಲಿ. ಪ್ರತಿದಿನ ಒಂದು ಗಂಟೆ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡಲಿ. ರಾತ್ರಿ 6ರಿಂದ 8 ತಾಸು ಸುಖನಿದ್ರೆ ಅಗತ್ಯ. ಮೊಬೈಲ್, ಲ್ಯಾಪ್‌ಟಾಪ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲಿ. ದೀರ್ಘ ಉಸಿರಾಟ, ಪ್ರಾಣಾಯಾಮ, ಯೋಗ ರೂಢಿಸಿಕೊಳ್ಳಲಿ. ಆಗ ಖಂಡಿತವಾಗಿಯೂ ಅವಳು ಪಿಸಿಒಡಿ ಸಮಸ್ಯೆಯನ್ನು ಜಯಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.