ADVERTISEMENT

ಪ್ರಜಾವಾಣಿ ಸಾಧಕರು 2023 | ಮಂಜಮ್ಮ - ‘ಹಳ್ಳಿ ಸಿರಿ’ಯ ಯಶೋಗಾಥೆ

ಪ್ರಜಾವಾಣಿ ವಿಶೇಷ
Published 1 ಜನವರಿ 2023, 5:34 IST
Last Updated 1 ಜನವರಿ 2023, 5:34 IST
ಮಂಜಮ್ಮ ಎಸ್. ಬಾಲಯ್ಯ
ಮಂಜಮ್ಮ ಎಸ್. ಬಾಲಯ್ಯ   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ಮಂಜಮ್ಮ ಎಸ್. ಬಾಲಯ್ಯ

ADVERTISEMENT

ವೃತ್ತಿ: ಹಳ್ಳಿ ಸಿರಿ ಸಂಘದ ರೂವಾರಿ

ಸಾಧನೆ: ಮಹಿಳಾ ಸಬಲೀಕರಣ

ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರು ಋತುಮತಿಯಾದ ಸಮಯದಲ್ಲಿ ಮನೆಯಿಂದ ಹೊರಗೆ ಗುಡಿಸಲಿನಲ್ಲಿ ಕೆಲ ದಿನಗಳ ಕಾಲ ನೆಲೆಸುವಂತಹ ಸಂಪ್ರದಾಯ ನಡೆದುಕೊಂಡು ಬಂದಿದೆ. ಬಾಣಂತಿಯರಿಗೂ ಈ ಶಿಕ್ಷೆ ತಪ್ಪಿದ್ದಲ್ಲ. ಈ ಬಗ್ಗೆ ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಮಹಿಳೆಯರನ್ನು ಮನೆಯಿಂದ ಹೊರಗೆ ಕಳುಹಿಸದಂತೆ ಮನವೊಲಿಸಿ, ಕುಟುಂಬದವರ ಜತೆಗೆ ನೆಲೆಸುವಂತೆ ಮಾಡುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮದ ಮಂಜಮ್ಮ ಎಸ್. ಬಾಲಯ್ಯ.

ಗೊಲ್ಲರಹಟ್ಟಿಗಳಲ್ಲಿ ಸುತ್ತಾಡಿ, ನೂರಾರು ಮಹಿಳೆಯರನ್ನು ಗುಡಿಸಲು ವಾಸದಿಂದ ಮುಕ್ತಗೊಳಿಸಿ, ಮನೆಗಳಿಗೆ ಸೇರಿಸಿದ್ದಾರೆ. ಇಂತಹ ಸಂಪ್ರದಾಯ ಆಚರಿಸದಂತೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಹಳ್ಳಿ ಸಿರಿ ಸಂಘ’ ಸ್ಥಾಪಿಸಿ ಆ ಮೂಲಕ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಜತೆಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ. ಸಂಘದ ಮೂಲಕ ಬಯಲು ಸೀಮೆಯಲ್ಲಿ ಹಲಸಿನ ಹತ್ತಾರು ಖಾದ್ಯಗಳನ್ನು ತಯಾರಿಸಿ, ಹಲಸಿನ ಮೌಲ್ಯವರ್ಧನೆ ಮಾಡಿಸಿದ್ದಾರೆ. ಇಲ್ಲಿ ತರಬೇತಿ ಪಡೆದವರು ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಮಾರುಕಟ್ಟೆಗೆ ಕಳುಹಿಸಿ ಆರ್ಥಿಕವಾಗಿ ತಮ್ಮ ಕಾಲ ಮೇಲೆ ನಿಂತಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರ ಪಡೆಯೊಂದನ್ನು ಕಟ್ಟಿಕೊಂಡು ಸ್ತ್ರೀಯರ ಸಬಲೀಕರಣದಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.