ADVERTISEMENT

ಯಶಸ್ಸಿನ ಬೆನ್ನೇರಿ...

ಡಿ.ಯಶೋದಾ
Published 19 ಏಪ್ರಿಲ್ 2019, 19:30 IST
Last Updated 19 ಏಪ್ರಿಲ್ 2019, 19:30 IST
Attractive teenage girl standing behind white board, isolated on white backgroundHealth
Attractive teenage girl standing behind white board, isolated on white backgroundHealth   

ಯಾರಿಗೆ ಬೇಡ ಯಶಸ್ಸು? ಪ್ರಯತ್ನವೇ ಪಡದೇ, ಬರಿ ಕನಸು ಕಾಣುತ್ತಲೇ ಯಶಸ್ಸು ಬಯಸುವಂತಹವರೇ ಎಷ್ಟೋ ಜನ ಇದ್ದಾರೆ. ಇನ್ನು ಕಷ್ಟಪಟ್ಟು, ಸಾಧನೆ ಮಾಡಿ ಯಶಸ್ಸಿಗೆ ಹಂಬಲಿಸುವುದು ತಪ್ಪೇ?

ಖಂಡಿತ ಇಲ್ಲ, ಯಶಸ್ಸಿಗೆ ಪ್ರಯತ್ನಿಸುವುದು ಒಂದು ಸಕಾರಾತ್ಮಕ ಭಾವನೆಯೇ. ಆದರೆ ಯಶಸ್ಸು ಎಂದರೆ ಏನು, ಆ ಯಶಸ್ಸಿಗೆ ಪ್ರಯತ್ನವೇನು, ಯಾವ ರೀತಿಯ ಯಶಸ್ಸನ್ನು ಬಯಸುತ್ತೇವೆ, ಅದಕ್ಕಾಗಿ ಪಡೆದುಕೊಳ್ಳುವುದು ಏನು, ಕಳೆದುಕೊಳ್ಳುವುದು ಏನು, ಇನ್ನಿತರ ಕಷ್ಟನಷ್ಟಗಳೇನು ಎಂದು ಯೋಚಿಸಬೇಕಾಗುತ್ತದೆ.

ಯಶಸ್ಸು ಎಂದರೆ ಸನ್ಮಾನ, ಬಿರುದು- ಬಾವಲಿಗಳು, ಹಣ, ಕೀರ್ತಿ, ವಸ್ತುಗಳ ಉಡುಗೊರೆ, ಬಹುಪರಾಕ್, ಹೊಗಳಿಕೆ, ಕೆಲವು ಕೆಲಸಗಳಿಗೆ ಅವಕಾಶ.. ಇಷ್ಟೇನಾ? ಹೌದು ಎಂದರೆ ತಪ್ಪಾಗುತ್ತದೆ. ಯಶಸ್ಸು ಎಂದರೆ ಇದೇ ಎಂದು ಹೇಳಲಿಕ್ಕಾಗುವುದಿಲ್ಲ. ಒಬ್ಬೊಬ್ಬರ ಯಶಸ್ಸು ಒಂದೊಂದು ರೀತಿಯದು. ಹಾಗೆಯೇ ಒಬ್ಬೊಬ್ಬರ ಪರಿಸ್ಥಿತಿಯೂ ಒಂದೊಂದು ರೀತಿಯದು. ಆದರೆ ಯಾರು ಏನೇ ಆಸೆ ಹೊಂದಿರಲಿ, ಯಾರು ಏನೇ ಕನಸು ಕಾಣಲಿ, ಆಸೆ ಹೊಂದಿದ ಮಾತ್ರಕ್ಕೇ, ಕನಸು ಕಂಡ ಮಾತ್ರಕ್ಕೇ ಫಲ ದೊರೆಯುವುದಿಲ್ಲ. ತಮ್ಮ ಕಾಯಕದಲ್ಲಿ ಸಫಲರಾಗಲು ಪ್ರತಿಯೊಬ್ಬರ ವಿಪುಲ ಪ್ರಯತ್ನ ಅಗತ್ಯ.

ADVERTISEMENT

ಎರಡನೇ ವರ್ಷದ ಪದವಿ ಕಲಿಯುತ್ತಿರುವ ಕಾವ್ಯಳ ಕನಸು ಭವ್ಯವಾದುದೇ. ‘ನಾನು ಏನಾದರೂ ಸಾಧನೆ ಮಾಡಬೇಕು, ನನ್ನನ್ನು ಕಾಲೇಜಿನಲ್ಲಿ, ಮನೆಯಲ್ಲಿ, ಸಂಬಂಧಿಕರಲ್ಲಿ ಒಟ್ಟಾರೆ ಸಮಾಜದಲ್ಲಿ ಎಲ್ಲರೂ ಗುರುತಿಸುವಂತಾಗಬೇಕು’ ಇದು 6 ತಿಂಗಳ ಹಿಂದೆ ಕಾವ್ಯಳ ದಿನನಿತ್ಯದ ಜಪವಾಗಿತ್ತು. ತಾನು ಏನಾದರೂ ಮಾಡಬೇಕು ಎಂದು ಅವಳಿಗೆ ತಿಳಿದಿತ್ತು; ಆದರೆ ಏನು ಮಾಡಬೇಕು ಎಂಬುದು ಸ್ಪಷ್ಟವಿರಲಿಲ್ಲ. ಅವಳಲ್ಲಿರುವ ಪ್ರತಿಭೆ, ಸಾಮರ್ಥ್ಯ, ಏನಾದರೂ ಮಾಡಬೇಕು ಎಂಬ ತುಡಿತವನ್ನು ದುಡಿಸಿಕೊಳ್ಳುವುದು ಹೇಗೆ ಎಂದು ಅವಳಿಗೆ ಅರಿವಾದಾಗ ಅವಳ ಆ ಜಪ ನಿಂತಿತು, ಯಶಸ್ಸಿನ ಹಾದಿಯ ಕಡೆ ಅವಳ ಮನಸ್ಸು ಹೊರಳಿತು.

ಕಲ್ಲು ಮುಳ್ಳಿನ ಹಾದಿ

ಇದು ಒಂದು ಹಂತ. ನಾವು ಬಯಸಿದರೆ ಅಥವಾ ಬಯಸ್ಸಿದ್ದನ್ನು ಪಡೆಯುವ ದಾರಿ ಗೊತ್ತಿದ್ದರೆ ಯಶಸ್ಸು ಒಲಿದು ಬಿಡುವುದಿಲ್ಲ. ಯಶಸ್ಸಿನ ದಾರಿ ಕಲ್ಲು, ಮುಳ್ಳಿನ ಹಾದಿ. ನಾವು ಬರುತ್ತೇವೆ ಎಂದು ಆ ದಾರಿಯಲ್ಲಿ ಯಾರೂ ನಮಗೆ ಹೂವಿನ ಹಾಸಿಗೆ ಹಾಸುವುದಿಲ್ಲ. ಕಲ್ಲು, ಮುಳ್ಳುಗಳನ್ನೇ ಮೆತ್ತೆಯನ್ನಾಗಿ ಮಾಡಿಕೊಂಡು ಮೆತ್ತಗೆ ಸಾಗಬೇಕು. ಆ ದಾರಿಯಲ್ಲಿ ಸಾಗಿದವರ ಏಳು-ಬೀಳು, ನೋವು- ನಲಿವುಗಳಿಗೆ ಕಿವಿಕೊಟ್ಟಾಗ, ಮನಸ್ಸು ಗಟ್ಟಿಯಾಗುತ್ತದೆ, ಸಾಧಿಸುವ ಛಲ ಬಲವಾಗುತ್ತದೆ.

ಹೋಲಿಕೆ ಬೇಡವೇ ಬೇಡ

ನವವಿವಾಹಿತ ಮೋಹನ್ ಅವರದು ಹೋಲಿಕೆಯ ತೊಳಲಾಟ. ಫೇಸ್‌ಬುಕ್‌ನಲ್ಲಿ ಆತನ ಪರಿಚಿತರು, ಮಿತ್ರರು ತಮ್ಮ ಸಂಗಾತಿಯೊಂದಿಗೆ, ಕುಟುಂಬದೊಂದಿಗೆ ದೂರದ ಪ್ರವಾಸ ಕೈಗೊಂಡು ಅದರ ಸುಂದರ ಚಿತ್ರಗಳನ್ನು ವಿವರಣೆ ಮೂಲಕ ಹಾಕುತ್ತಿರುತ್ತಾರೆ. ಕೆಲವರು ತಾವು ಖರೀದಿಸಿದ ವಾಹನಗಳ ಚಿತ್ರಗಳನ್ನು ಅವುಗಳ ಬೆಲೆ ಸಮೇತ ಹಾಕಿರುತ್ತಾರೆ. ಮೋಹನ್‌ಗೆ ಕೊಂಚ ಆರ್ಥಿಕ ಸಮಸ್ಯೆ. ಹೀಗಾಗಿ, ತನ್ನ ಇಷ್ಟದಂತೆ ದೂರದ ಪ್ರವಾಸಗಳಿಗೆ ಹೋಗಲು ಸದ್ಯಕ್ಕೆ ಸಾಧ್ಯವಿಲ್ಲ. ಅಗತ್ಯವಿರುವ ವಾಹನವನ್ನೂ ಖರೀದಿಸಲಾಗಿಲ್ಲ. ಹಾಗಾಗಿ ತಾವು ಅವರೆಲ್ಲರಿಗಿಂತ ಕಡಿಮೆ ಎಂಬ ಕೀಳರಿಮೆ, ತಮ್ಮಿಂದ ಏನೂ ಸಾಧಿಸಲಾಗುತ್ತಿಲ್ಲ, ತಮಗೆ ಯಶಸ್ಸು ಎಂಬುದೇ ಇಲ್ಲ ಭಾವನೆ.

ಆದರೆ ಮೋಹನ್ ತಮಗೇ ತಿಳಿಯದಂತೆ ಹೆಚ್ಚು ಖರ್ಚುಗಳನ್ನು ಮಾಡದೇ, ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂದು ದುಬಾರಿಯ ಪ್ರವಾಸಗಳನ್ನು ಮುಂದೆ ಹಾಕಿ, ಉತ್ತಮ ಕೆಲಸವನ್ನೇ ಮಾಡಿದ್ದಾರೆ. ಮನೆಯ ಕಾರಣಕ್ಕಾಗಿ ತಮ್ಮ ಆಸೆಗಳನ್ನು ಮುಂದೂಡಿದ್ದಾರೆ. ಇದೂ ಒಂದೂ ಸಾಧನೆ. ಹಿತ-ಮಿತ, ಲೆಕ್ಕಾಚಾರದ ಖರ್ಚುಗಳಿಂದ ಕಷ್ಟಗಳನ್ನು ನೀಗಿ ಅವರು ಮುಂದೊಂದು ದಿವಸ ಉತ್ತಮ ಸ್ಥಿತಿಗೆ ಬಂದು, ತಮ್ಮ ಆಸೆಗಳನ್ನೆ ನೆರವೇರಿಸಿಕೊಳ್ಳಬಹುದು. ಇದು ನಿಧಾನವಾಗಬಹುದು. ಆದರೆ ಇಲ್ಲವೇ ಇಲ್ಲ ಎನ್ನಲಿಕ್ಕಾಗುವುದಿಲ್ಲ. ಹಾಗಾಗಿ ಅವರು ತಮ್ಮನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ.

ತಮ್ಮಿಂದ ತಮ್ಮವರಿಗೆ ಯಶಸ್ಸು

ಕೆಲವು ಮಹಿಳೆಯರದು ತಾವು ಗೃಹಕೃತ್ಯಕ್ಕಷ್ಟೇ ಸೀಮಿತರಾಗಿದ್ದೇವೆ, ತಾವು ಹೆಚ್ಚೇನೂ ಮಾಡುತ್ತಿಲ್ಲ, ತಮಗೆ ಯಶಸ್ಸು ಎಂಬುದೇ ಇಲ್ಲ ಎಂಬ ಅಳಲು. ಆದರೆ ಒಂದು ಮನೆಯನ್ನು ನಡೆಸುವುದು, ಮನೆಯ ಎಲ್ಲ ಸದಸ್ಯರ ಅಗತ್ಯಗಳನ್ನು ಯಾವುದೇ ಧಕ್ಕೆ ಬಾರದಂತೆ ಕಾಲಕಾಲಕ್ಕೆ ಪೂರೈಸುವುದರ ಜೊತೆಗೆ ಹೆಚ್ಚಿನ ಜವಾಬ್ದಾರಿಯ ಕೆಲಸ. ಇವರ ಈ ಕೆಲಸದಿಂದಾಗಿಯೇ ಮನೆಯವರ ಯಶಸ್ಸು. ಎಷ್ಟೋ ಜನ ಪುರುಷರು ಇಂದು ಸಮಾಜದಲ್ಲಿ ಗುರುತಿಸಿಕೊಂಡಿರುವುದಕ್ಕೆ ಇಂತಹ ಮಹಿಳೆಯರ ತ್ಯಾಗ ಬಹುದೊಡ್ಡ ಪಾತ್ರವಹಿಸುತ್ತದೆ. ಹೀಗಾಗಿ ಈ ಮಹಿಳೆಯರು ತಮ್ಮದು ಗೃಹಕೃತ್ಯವಷ್ಟೇ ಎಂದು ದುಃಖಿತರಾಗಬೇಕಿಲ್ಲ.

ಸಮಯವೇ ಶಕ್ತಿ

ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇವತ್ತು ಇರುವುದಂತೂ ಖಚಿತ. ಇವತ್ತು ನಮ್ಮ ಸಮಯ; ನಮ್ಮದೇ ಸಮಯ, ಈ ಸಮಯವನ್ನು ಶಕ್ತಿಯನ್ನಾಗಿ ಮಾಡಿಕೊಳ್ಳುವುದು ಒಂದು ಯಶಸ್ಸು. ನಾಳೆ ಮಾಡಿದರಾಯಿತು, ಮುಂದೆ ನೋಡೋಣ- ಈ ರೀತಿಯ ಧೋರಣೆಗಳಿದ್ದರೆ ಯಶಸ್ಸು ದೂರವೇ ಉಳಿಯುತ್ತದೆ. ನಾವು ಬೇರೆ ಏನನ್ನೇ ಕಳೆದುಕೊಂಡರೂ ಪುನಃ ಅದನ್ನು ಪಡೆಯಬಹುದು, ಆದರೆ ಸಮಯವನ್ನಲ್ಲ. ನಮ್ಮ ವಯಸ್ಸು ಎಷ್ಟೇ ಇರಲಿ, ಪ್ರತಿ ಕ್ಷಣವನ್ನೂ ನಾವು ಅನುಭವಿಸಬೇಕು. ಯಾವಾಗಲಾದರೂ ಒಮ್ಮೆ ನಮಗೆ ಇಷ್ಟು ವರ್ಷ ನಾನು ಬದುಕಿದ್ದು, ಏನೂ ಸಾಧಿಸಲಿಲ್ಲವಲ್ಲ ಎಂದೆನಿಸಬಾರದು. ನಮ್ಮ ಯಶಸ್ಸನ್ನು ಬೇರೆಯವರು ಗುರುತಿಸುವುದೇ ಮುಖ್ಯವಲ್ಲ. ಪ್ರತಿ ಕ್ಷಣ ಅದು ನಮಗೆ ಅರಿವಾಗುತ್ತಿರುತ್ತದೆ. ಸಣ್ಣ ಸಣ್ಣ ಕೆಲಸಗಳನ್ನೂ ಆಯಾಯ ಸಮಯಕ್ಕೆ ಸರಿಯಾಗಿ ನಿರ್ವಹಿಸುವುದೂ ಯಶಸ್ಸೇ. ನಮ್ಮ ಆಪ್ತರೊಂದಿಗೆ ಆಪ್ಯಾಯಮಾನವಾದ ಸಮಯ ಕಳೆಯುವುದೂ ದೊಡ್ಡ ಯಶಸ್ಸೇ. ಹಾಗಾಗಿ ಮುಖ್ಯವಾಗಿ ಕುಟುಂಬ, ನಂತರ ಸಂಬಂಧಿಕರು, ಸ್ನೇಹಿತರೊಂದಿಗೆ ಸಮಯದಲ್ಲಿ ಬೆರೆಯುವುದು ಮುಖ್ಯ.

ತಮ್ಮ ಜೊತೆ ಬೇರೆಯವರ ಯಶಸ್ಸಿಗೂ ಪ್ರಯತ್ನಿಸುವುದು, ಬೇರೆಯವರ ಬದುಕು ಸುಗಮವಾಗಲಿ ಎಂದು ಪ್ರಯತ್ನಿಸುವುದು ಮಹತ್ವದ ಯಶಸ್ಸು. ಹಾಗೆಯೇ ತಮಗೆ ಸಮಾಧಾನ ನೀಡುವ, ತಮ್ಮ ಮನಸ್ಸಿಗೆ ತೃಪ್ತಿ ನೀಡುವಂಥ ಕೆಲಸ ಮಾಡುವುದು ಯಶಸ್ಸೇ. ಎಲ್ಲದಕ್ಕಿಂತ ಹೆಚ್ಚಾಗಿ ಪರಿಸ್ಥಿತಿಗಳಿಗೆ ವಿಚಲಿತರಾಗದೇ ನಾವು ಶಾಂತಿ, ನೆಮ್ಮದಿಯಿಂದ ಇರುವುದೇ ದೊಡ್ಡ ಯಶಸ್ಸು.

ಇಟ್ಟ ಗುರಿ ಮುಟ್ಟಬೇಕು

ಕೆಲವರಿಗೆ ತಾಳ್ಮೆ ಎಂಬುದೇ ಇರುವುದಿಲ್ಲ. ತಾವು ಸಾಗುತ್ತಿರುವ ದಾರಿಯಲ್ಲಿ ಒಂದು ಸಣ್ಣ ತೊಂದರೆಯಾದರೆ ಅಥವಾ ಹಿನ್ನಡೆಯಾದರೆ ಅಷ್ಟಕ್ಕೇ ಅದನ್ನು ಬಿಟ್ಟುಬಿಡುವ ಆಲೋಚನೆ ಮಾಡುತ್ತಾರೆ. ಆದರೆ ಏನೇ ಅಡೆತಡೆ ಉಂಟಾದರೂ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದಂತೆ ಗುರಿಯ ಕಡೆ ಮುನ್ನುಗ್ಗುವಂತಿರಬೇಕು. ಎಡವಿದಷ್ಟೂ ಮುಂದಿನ ನಡೆ ಸ್ಪಷ್ಟವಾಗಿರುತ್ತದೆ. ಪ್ರಸಿದ್ಧ ವ್ಯಕ್ತಿಗಳು ಅವರ ರೂಪ, ಆಕಾರದ ಕಾರಣವಾಗಿ ನಮಗೆ ಆದರ್ಶವಾಗಬಾರದು. ಅವರ ಕೆಲಸ, ಸಾಧನೆ, ಯಶಸ್ಸು ನಮಗೆ ಸ್ಫೂರ್ತಿದಾಯಕವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.