ADVERTISEMENT

Shravana Masam 2025: ಶ್ರಾವಣಮಾಸದ ಉಪವಾಸ ಹೇಗಿದ್ದರೆ ಚೆನ್ನ?

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:22 IST
Last Updated 9 ಆಗಸ್ಟ್ 2025, 6:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಶ್ರಾವಣ ಮಾಸವೆಂದರೆ ಸಾಲು ಸಾಲು ಹಬ್ಬಗಳು. ಮನೆ ಮಂದಿಯ ಶ್ರೇಯಸ್ಸಿಗಾಗಿ ಇಷ್ಟದೇವರಿಗೆ ಉಪವಾಸ ವ್ರತ ಕೈಗೊಳ್ಳುವ ಹೆಣ್ಣುಮಕ್ಕಳು ಆರೋಗ್ಯದ ಕಡೆಗೂ ಗಮನಹರಿಸುವುದು ಉತ್ತಮ. ಮನೆ, ಕುಟುಂಬ, ಮಕ್ಕಳು, ಕಚೇರಿ ಹೀಗೆ ಎಲ್ಲವನ್ನೂ ನಿಭಾಯಿಸಿಕೊಂಡೇ ಒಂದು ದಿನದ ನಿಟ್ಟುಪವಾಸ ಇರುವ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಹಾಗಾಗಿ, ಉಪವಾಸ ಕೈಗೊಳ್ಳುವಾಗ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಆಯುರ್ವೇದ ತಜ್ಞ ಡಾ. ವಿನಾಯಕ‌ ಹೆಬ್ಬಾರ್‌ ಅವರೊಂದಿಗೆ ನಡೆಸಿದ ಪ್ರಶ್ನೋತ್ತರ ಹೀಗಿದೆ:

ಉಪವಾಸ ಹೇಗಿರಬೇಕು?

ADVERTISEMENT

ಉಪವಾಸ ಎನ್ನುವುದು ಹೊರೆಯಾಗಬಾರದು. ನಮ್ಮ ನಂಬಿಕೆಗಳಿಗೂ ಧಕ್ಕೆಯಾಗದ ಹಾಗೆ, ದೇಹಕ್ಕೂ ಮನಸ್ಸಿಗೂ ಸದಾ ಹಿತವೆನಿಸುವ ಹಾಗೆ ಉಪವಾಸ ಮಾಡಬೇಕು. ಉಪವಾಸ ಮಾಡಿದ ನಂತರ ದೇಹ ಪುನಶ್ಚೇತನಗೊಂಡು ಮತ್ತಷ್ಟು ಶಕ್ತಿಯನ್ನು ಪಡೆಯುವಂತೆ ಆಗಬೇಕು. ದೇಹವು ಕ್ರಿಯಾಶೀಲವಾಗಿ ಇರಲು ನಾವು ಮಾಡುವ ಉಪವಾಸ ನೆರವಾಗಬೇಕು. 

ಉಪವಾಸದ ವಿಧಾನ ಹೇಗಿರಬೇಕು?

ಉಪವಾಸವೆಂದರೆ ಅನ್ನ ಬಿಟ್ಟು ಉಳಿದದ್ದೆಲ್ಲವನ್ನೂ ತಿನ್ನುವುದಲ್ಲ ಅಥವಾ ದೇಹವನ್ನು ದಂಡಿಸುವ ನೆಪದಲ್ಲಿ ಆರೋಗ್ಯದ ವಿಚಾರದಲ್ಲಿ ದೇಹ ಸೂಚಿಸುವ ಕೆಲವು ಲಕ್ಷಣಗಳನ್ನು ಗಮನಿಸದೆ, ಏನನ್ನೂ ತಿನ್ನದೆ ಉಳಿಯುವುದೂ ಅಲ್ಲ. ಎಲ್ಲಿಯವರೆಗೆ ಏನನ್ನೂ ತಿನ್ನದೇ ಇರಲು ಸಾಧ್ಯವಾಗುತ್ತದೋ ಅಲ್ಲಿಯವರೆಗೆ ಇರಬಹುದು. ನಂತರ ಫಲಾಹಾರ, ಎಳನೀರು, ಸಣ್ಣ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸುವುದು ಸೂಕ್ತ.

ಶ್ರಾವಣಮಾಸದ ಉಪವಾಸ ಹೇಗಿದ್ದರೆ ಚೆನ್ನ?

ಉಪವಾಸ ಅಂದಾಕ್ಷಣ ಮನಸ್ಸು ಒಂದು ರೀತಿ ಸಿದ್ಧವಾಗಿರುತ್ತದೆ. ಇದರಿಂದ, ಹಸಿವೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಆದರೂ ಹಸಿವೆಯಾಗುತ್ತಿದೆ, ತಡೆಯಲು ಸಾಧ್ಯವಾಗುತ್ತಿಲ್ಲ ಅನ್ನಿಸಿದರೆ ಎಳನೀರು ಕುಡಿಯಿರಿ. ಸುಲಭವಾಗಿ ಜೀರ್ಣವಾಗುವ ಪಪ್ಪಾಯಿ, ದಾಳಿಂಬೆ, ಸೇಬಿನಂತಹ ಹಣ್ಣುಗಳನ್ನು ಸೇವಿಸಬಹುದು. ದೇಹಕ್ಕೆ ಹಸಿವೆಯೇ ಆಗುತ್ತಿಲ್ಲ, ಆರಾಮಾಗಿ ಇರಬಲ್ಲೆ ಎನ್ನುವವರು ಹಾಗೇ ಉಳಿಯಬಹುದು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೆ ಒಂದು ದಿನದ ಉಪವಾಸದಿಂದ ಏನೂ ತೊಂದರೆಯಾಗದು. 

ಯಾರು ಉಪವಾಸ ಮಾಡಲು ಶಕ್ತರು?

ಎಲ್ಲರೂ ಮಾಡಬಾರದು. ಸಾಮಾನ್ಯವಾಗಿ ತುಂಬಾ ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು, ಚಿಕ್ಕಮಕ್ಕಳು ತುಂಬಾ ವಯಸ್ಸಾದವರು, ತುಂಬಾ ವಯಸ್ಸಾದವರು ಅಂದರೆ ಕೆಲವರು 80ರ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿರುತ್ತಾರೆ. ಕೆಲವರು 60ರ ವಯಸ್ಸಿಯನಲ್ಲಿಯೇ ಶಕ್ತಿ ಹೊಂದಿಲ್ಲದವರಾಗಿರುತ್ತಾರೆ. ಹಾಗಾಗಿ, ನಿಃಶಕ್ತಿ ಹೊಂದಿರುವವರು, ಗರ್ಭಿಣಿಯರು, ಎದೆಹಾಲುಣಿಸುವ ತಾಯಂದಿರು ಉಪವಾಸದಿಂದ ದೂರ ಉಳಿಯುವುದು ಒಳ್ಳೆಯದು. ಯಾರೇ ಆದರೂ ಹಸಿವೆ ಆಗುತ್ತಿದ್ದರೆ ಬಲವಂತದಿಂದ ಉಪವಾಸ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. 

ಈಗೀಗ ಬಿ.ಪಿ. ಮಧುಮೇಹ, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಸಾಮಾನ್ಯ. ಅಂಥವರು ಯಾವ ವಿಧಾನ ಅನುಸರಿಸಿದರೆ ಉತ್ತಮ?

ಬಿ.ಪಿ. ನಿಯಂತ್ರಣದಲ್ಲಿದ್ದರೆ ಉಪವಾಸ ಮಾಡಬಹುದು. ಆದರೆ, ಬಿ.ಪಿ. ಮಾತ್ರೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಉಪವಾಸವಿದ್ದೇನೆ, ಮಾತ್ರೆ ತೆಗೆದುಕೊಳ್ಳುವುದಿಲ್ಲ ಎಂದೆಲ್ಲ ಯೋಚಿಸಬಾರದು. ಎಳನೀರು ಸೇವಿಸಿಯಾದರೂ ಮಾತ್ರೆ ತೆಗೆದುಕೊಳ್ಳಬೇಕು. ಮಧುಮೇಹ ಇದ್ದು ಇನ್ಸುಲಿನ್ ತೆಗೆದುಕೊಳ್ಳುವವರು ಅಥವಾ ಮಧುಮೇಹ ತುಂಬಾ ಚೆನ್ನಾಗಿ ನಿಯಂತ್ರಣದಲ್ಲಿ ಇರುವವರೂ ತುಂಬಾ ಹೊತ್ತು ಉಪವಾಸ ಮಾಡುವುದು ಒಳ್ಳೆಯದಲ್ಲ. 

ಉಪವಾಸ ಎಂಬುದು ಎಂದಿಗೂ ಹಿಂಸೆ ಎನಿಸಬಾರದು. ಹೊಟ್ಟೆ ಉರಿಯುತ್ತಿದ್ದರೆ, ಸಂಕಟ ಎನಿಸಿದರೆ ಉಪವಾಸವನ್ನು ಕೈಬಿಡುವುದು ಒಳ್ಳೆಯದು. ಉಪವಾಸ ಇದ್ದೇನೆ ಎನ್ನುವ ಕಾರಣಕ್ಕೆ ಇಂತಹ ತೊಂದರೆಗಳನ್ನು ಸಹಿಸಿಕೊಂಡು ದೇಹಕ್ಕೆ ಒತ್ತಡ ಹೇರಬೇಡಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.