ADVERTISEMENT

‘ಸೂಪರ್‌ ವುಮನ್‌ ಸಿಂಡ್ರೋಮ್‌’ ಅನುಕಂಪದ ಹೊಸ ಖಯಾಲಿ

ಸುಶೀಲಾ ಡೋಣೂರ
Published 10 ಜೂನ್ 2022, 19:30 IST
Last Updated 10 ಜೂನ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಲವತ್ತಕ್ಕೆ ಇನ್ನೆರಡು ವರ್ಷ ಬಾಕಿ ಇದೆ. ಆಗಲೇ ಸುಮಲತಾ ಸೋತು ಸುಸ್ತಾಗಿದ್ದಾಳೆ. ಏಕೆಂದರೆ, ದಿನದ 24 ಗಂಟೆಯನ್ನೂ ಅವಳು ತನ್ನದಲ್ಲದಂತೆ ಕಳೆಯುತ್ತಾಳೆ. ತನಗೇನು ಬೇಕು, ತನಗೆ ಯಾವುದಿಷ್ಟ ಎನ್ನುವುದನ್ನೂ ಮರೆತಿದ್ದಾಳೆ. ಇನ್ನೊಬ್ಬರಿಗಾಗಿ ಬದುಕುವುದೇ ತನ್ನ ಆದ್ಯ ಕರ್ತವ್ಯ ಎಂದು ನಂಬಿದ್ದಾಳೆ ಮತ್ತು ಅದೆಲ್ಲದರಿಂದ ಉಂಟಾಗುವ ಮನೋಕ್ಲೇಶಕ್ಕೆ ಹೈರಾಣಾಗಿದ್ದಾಳೆ. ವೈದ್ಯಕೀಯ ಭಾಷೆಯಲ್ಲಿ ಇದು ‘ಸೂಪರ್‌ ವುಮನ್‌ ಸಿಂಡ್ರೋಮ್‌’. ಇದೊಂದು ನವಯುಗದ ಹೊಸ ಕಾಯಿಲೆ. ಅದರಲ್ಲೂ ಕೊರೊನಾ ನಂತರದ ಧಾವಂತದ ಬದುಕಿನಲ್ಲಿ ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಇಂಥದ್ದೊಂದು ಹೊಸ ಸಂದಿಗ್ಧತೆಗೆ ಸಿಲುಕುತ್ತಿದ್ದಾರೆ.

ಎಲ್ಲವೂ ನಾನೇ. ಎಲ್ಲವೂ ನನ್ನಿಂದಲೇ. ನಾನಿಲ್ಲ ಎಂದರೆ ಏನೂ ಇಲ್ಲ. ಎಲ್ಲಾ ನನ್ನ ಎಣಿಕೆಯಂತೆ ನಡೆಯಬೇಕು ಎನ್ನುವ ಅತಿರೇಕದ ಭಾವನೆಯೇ ‘ಸೂಪರ್‌ ವುಮನ್‌ ಸಿಂಡ್ರೋಮ್‌’ ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಆಪ್ತ ಸಲಹೆಗಾರ (ಮನೋವೈದ್ಯ) ಡಾ. ವೆಂಕಟೇಶ್ ಬಾಬು.

ಎಲ್ಲಾ ಕೆಲಸವನ್ನೂ ತಾನೊಬ್ಬಳೇ ಮಾಡಬೇಕು, ಕಚೇರಿಯಲ್ಲಿ ಭಿನ್ನವಾಗಿ ಕಾರ್ಯಕ್ಷಮತೆ ಪ್ರದರ್ಶಿಸಬೇಕು, ಗಂಡ–ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಬೇಕು, ಹಿರಿಯರ ಕಾಳಜಿ ವಹಿಸಬೇಕು, ಮನೆಯವರಿಂದ, ಬಂಧುಗಳಿಂದ ಸೈ ಎನಿಸಿಕೊಳ್ಳಬೇಕು ಎನ್ನುವ ಅತಿನಿರೀಕ್ಷೆ ಸ್ವಾಭಾವಿಕವಂತೂ ಅಲ್ಲ. ಇದರಿಂದ ಮನೋದೈಹಿಕ ಆರೋಗ್ಯಕ್ಕೆ ಕುತ್ತು ಎನ್ನುತ್ತದೆ ಮನೋವಿಜ್ಞಾನ.

ADVERTISEMENT

ಹೆಣ್ಣಿರಲಿ, ಗಂಡಿರಲಿ ಒಬ್ಬೊಬ್ಬರಿಗೆ ಒಂದೊಂದು ಸಾಮರ್ಥ್ಯವಿರುತ್ತದೆ. ಕೆಲವರು ಹಲವು ಕೆಲಸಗಳನ್ನು ಒಟ್ಟಿಗೇ ಮಾಡಬಲ್ಲರು, ಕೆಲವರು ಒಂದು ಸಮಯಕ್ಕೆ ಒಂದೇ ಕೆಲಸ ಮಾಡಬಲ್ಲರು. ಆದರೆ, ತಾನು ಹೆಣ್ಣು ಎನ್ನುವ ಕಾರಣಕ್ಕೆ ತನ್ನನ್ನು ತಾನು ನಿರ್ಲಕ್ಷಿಸಿ, ತನ್ನಿಂದ ಎಷ್ಟು ಕೆಲಸ ಸಾಧ್ಯವಾಗುತ್ತದೆ ಎನ್ನುವುದನ್ನೂ ಲೆಕ್ಕಿಸದೆ, ಎಲ್ಲದಕ್ಕೂ ತಾನೇ ಹೆಗಲು ಕೊಡಲು ಹೋದಾಗ ಆಕೆ ದೈಹಿಕವಾಗಿಯೂ–ಮಾನಸಿಕವಾಗಿಯೂ ದಣಿಯುತ್ತಾಳೆ. ‘ಎಲ್ಲವನ್ನೂ’, ‘ಏಕಕಾಲಕ್ಕೆ’, ‘ಪರಿಪೂರ್ಣತೆ’ಯಿಂದ ಮಾಡಲು ಹೋಗಿ ಆದ್ಯತೆಯ ಪಟ್ಟಿಯಲ್ಲಿ ತನ್ನನ್ನೇ ತಾನು ಕಟ್ಟಕಡೆಯ ಜಾಗದಲ್ಲಿಟ್ಟುಕೊಳ್ಳುತ್ತಾಳೆ. ಸೂಪರ್‌ ವುಮನ್‌ ಸಿಂಡ್ರೋಮ್‌ನ ಮೊದಲ ಅಧ್ಯಾಯವಿದು.

ಅನುಕಂಪದ ಶೂಲ…

ಅನಿವಾರ್ಯತೆಯೊ–ಆಯ್ಕೆಯೊ, ಒಟ್ಟಾರೆ ಆಕೆ ತನ್ನ ಮಿತಿಗಿಂತ–ಶಕ್ತಿಗಿಂತ ಹೆಚ್ಚು ಜವಾಬ್ದಾರಿಗಳಿಗೆ ಬೆನ್ನು ಬಾಗಿಸುತ್ತ, ತನ್ನ ಇತಿ–ಮಿತಿಗಳನ್ನು ಮರೆತು, ಶಕ್ತಿ ಮೀರಿ ಶ್ರಮಿಸುತ್ತಿದ್ದಾಳೆ, ಸವೆಯುತ್ತಾಳೆ. ಜೊತೆಗೆ ತನ್ನ ಈ ಎಲ್ಲಾ ತ್ಯಾಗಕ್ಕೆ–ಶ್ರಮಕ್ಕೆ ಪ್ರತಿಯಾಗಿ ಇತರರಿಂದ ಅನುಕಂಪ ಬಯಸುತ್ತಾಳೆ. ಈ ಘಟ್ಟ ಬಹಳ ಅಪಾಯಕಾರಿ ಎನ್ನುತ್ತಾರೆ ಮನೋವೈದ್ಯರು.

ಸಮಸ್ಯೆ ಆರಂಭವಾಗುವುದೆಲ್ಲಿ?

ಎಲ್ಲರಿಗೂ ಒಳ್ಳೆಯವಳಾಗಬೇಕು, ಎಲ್ಲರನ್ನೂ ಮೆಚ್ಚಿಸಬೇಕು, ಯಾರಿಗೂ ‘ನೋ’ ಹೇಳಲಾಗದು. ಎಲ್ಲವನ್ನೂ ನಾನೇ ಮಾಡಬೇಕು, ಎಲ್ಲಾ ಕೆಲಸಗಳೂ ಪರಿಪೂರ್ಣವಾಗಿರಬೇಕು ಎನ್ನುವ ಒತ್ತಡ ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಾಗಿಲು ತೆರೆಯುತ್ತದೆ. ‘ಇದೆಲ್ಲಾ ಮನಸ್ಸಿನ ಮೂಲೆಯಲ್ಲಿ ಹುಟ್ಟಿಕೊಂಡರೂ ಮುಂದಿನ ಹೆಜ್ಜೆಯಾಗಿ ದೇಹವಿಡೀ ವ್ಯಾಪಿಸುತ್ತದೆ. ದೈಹಿಕ ಹಾಗೂ ಮಾನಸಿಕ ಆಯಾಸ, ಬೇಸರ, ಸುಸ್ತು, ಸಿಡುಕುತನ, ಅತಿಯಾದ ನಿದ್ರೆ ಅಥವಾ ನಿದ್ರಾಹೀನತೆ, ಆತಂಕ, ಸ್ನಾಯುವಿನ ಒತ್ತಡ, ಅತೃಪ್ತಿಯ ಭಾವನೆ... ಹೀಗೆ ಹತ್ತು ಹಲವು ಸಮಸ್ಯೆಗಳು ತಲೆಎತ್ತುತ್ತವೆ’ ಎನ್ನುತ್ತಾರೆ
ಡಾ. ವೆಂಕಟೇಶ್ ಬಾಬು.

ಹೊರಬರುವುದು ಹೇಗೆ?

ಈ ಸಮಸ್ಯೆಯ ಮೂಲ ಅಡಗಿರುವುದು ‘ಒಂದು ಹೆಣ್ಣು ಹೀಗೇ ಇರಬೇಕು’ ಎನ್ನುವ ಗ್ರಹಿಕೆಯಲ್ಲಿ ಹಾಗೂ ನಂಬಿಕೆಯಲ್ಲಿ. ಈ ನಂಬಿಕೆಯಲ್ಲಿ ಬದಲಾವಣೆ ತಂದುಕೊಳ್ಳದ ಹೊರತು ಇದು ಸರಿಹೋಗದು. ಅತಿಯಾದ ನಿರೀಕ್ಷೆ ಹಾಗೂ ಅತಿಯಾದ ಸಮರ್ಪಣೆ ಒಂದು ಸಮಸ್ಯೆ ಎನ್ನುವುದನ್ನು ಕಂಡುಕೊಳ್ಳಬೇಕು ಮತ್ತು ಆ ಆಲೋಚನಾ ಕ್ರಮದಲ್ಲಿ ಬದಲಾಣೆ ತಂದುಕೊಳ್ಳಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ.

‘ಓರ್ವ ಪತ್ನಿಯಾಗಿ, ತಾಯಿಯಾಗಿ, ಸೊಸೆಯಾಗಿ, ಜವಾಬ್ದಾರಿಯುತ ಮಹಿಳೆಯಾಗಿ ತಾನು ಹೀಗೇ ಇರಬೇಕು ಎನ್ನುವ ಭಾರವನ್ನು ತಲೆಯಲ್ಲಿ ಹೊತ್ತುಕೊಂಡಿರುವಷ್ಟು ದಿನ ನೆಮ್ಮದಿ ಅವಳಿಂದ ಬಹಳ ದೂರ. ತಾನೇನು? ತನ್ನ ಇತಿಮಿತಿ ಏನು? ಯಾವುದು ತನ್ನಿಂದ ಸಾಧ್ಯ? ಯಾವುದಿಲ್ಲ ಎನ್ನುವುದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಪರಾಮರ್ಶಿಸಿ, ತನಗೆ ನಿಲುಕುವುದನ್ನಷ್ಟೇ ತನ್ನ ಪಟ್ಟಿಗೆ ಸೇರಿಸಿಕೊಳ್ಳುವುದೇ ಇದಕ್ಕೆ ಪರಿಹಾರ’ ಎನ್ನುತ್ತಾರೆ ಅವರು.

ತಮ್ಮನ್ನು ಮಾನಸಿಕವಾಗಿ–ದೈಹಿಕವಾಗಿ ಕುಗ್ಗಿಸುವ ಈ ಸಿಂಡ್ರೋಮ್‌ನಿಂದ ಹೊರಬರಲು ಅವರು ನೀಡುವ ಕೆಲವು ಪರಿಹಾರಾತ್ಮಕ ಕ್ರಮಗಳು ಹೀಗಿವೆ:

ನಿಮಗೆ ಏನು ಸಾಧ್ಯ? ಎಷ್ಟು ಸಾಧ್ಯ? ಎನ್ನುವುದನ್ನು ಅರಿಯಿರಿ. ಪ್ರಜ್ಞಾಪೂರ್ವಕವಾಗಿ ನಿರ್ಧಾರ ತೆಗೆದುಕೊಳ್ಳಿ. ಏನು ಮಾಡುತ್ತಿದ್ದೀರಿ? ಯಾಕೆ ಮಾಡುತ್ತಿದ್ದೀರಿ? ಅದರಿಂದ ನಿಮ್ಮ ಮೇಲೆ ಉಂಟಾಗುವ ಪರಿಣಾಮಗಳೇನು? ಎನ್ನುವುದನ್ನು ವಿಶ್ಲೇಷಣೆ
ಮಾಡಿ.

ಸೂಚನೆಗಳನ್ನು ಅರಿಯಿರಿ: ನಿಮ್ಮ ಮನಸ್ಸು ಹಾಗೂ ದೇಹ ಕೆಲವು ಸೂಚನೆಗಳನ್ನು ಕೊಡುತ್ತಿರುತ್ತದೆ. ನಿಮ್ಮಿಂದ ಸಾಧ್ಯವಾಗದು ಎಂಬ ಸೂಚನೆಗಳನ್ನು ಕಡೆಗಣಿಸಿ ಒತ್ತಾಯಪೂರ್ವಕವಾಗಿ ಶ್ರಮಿಸಬೇಡಿ.

ಕೆಲಸಗಳನ್ನು ಹಂಚಿ: ನೀವು ಕುಟುಂಬವನ್ನು ಪೊರೆಯುವ ಆದಿಶಕ್ತಿಯಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಎಲ್ಲರ, ಎಲ್ಲಾ ಬಯಕೆ–ಬೇಡಿಕೆಗಳನ್ನು ಈಡೇರಿಸುವುದು ಅಸಾಧ್ಯ. ನೀವು ಯಾವ ಯಾವ ಕೆಲಸಗಳನ್ನು ನಿಭಾಯಿಸಬಹುದು, ಯಾವ ಕೆಲಸಗಳನ್ನು ಮನೆಯ ಇತರ ಸದಸ್ಯರಿಗೆ ವಹಿಸಬಹುದು ಎಂದು ಆಲೋಚಿಸಿ, ಕೆಲಸಗಳನ್ನು ಹಂಚಿ.

ಪರಿಪೂರ್ಣತೆಯ ಹಟ ಬಿಡಿ: ನೀವು ಮಾಡುವ ಎಲ್ಲಾ ಕೆಲಸವೂ ಪರಿಪೂರ್ಣವಾಗಿರಬೇಕು ಎನ್ನುವ ಹಟ ಬೇಡ. ಪರಿಪೂರ್ಣತೆಯ ನಿರೀಕ್ಷೆ ಮತ್ತು ವಾಸ್ತವದ ನಡುವಿನ ಸಂಘರ್ಷವೂ ಮಾನಸಿಕ ಕ್ಲೇಶಕ್ಕೆ ಕಾರಣವಾಗಬಲ್ಲದು.

ಸ್ವಯಂ ಕಾಳಜಿ ಸ್ವಾರ್ಥವಲ್ಲ: ಸ್ವಾರ್ಥ–ಸ್ವಯಂ ಕಾಳಜಿಯ ನಡುವೆ ಸಾಕಷ್ಟು ಅಂತರವಿದೆ. ನಿಮ್ಮ ಬಗ್ಗೆ ನೀವು ಯೋಚಿಸುವುದು, ನಿಮ್ಮ ಖುಷಿ, ನಿಮ್ಮ ಆರೈಕೆ, ನಿಮ್ಮ ಸಂತೋಷವನ್ನು ನೀವು ಬಯಸುವುದು ಸ್ವಾರ್ಥವಲ್ಲ. ಎಲ್ಲ ಕೆಲಸಗಳ ನಡುವೆ ನಿಮಗಾಗಿ, ನಿಮ್ಮ ಸ್ವಂತ ಹಿತಾಸಕ್ತಿಗಳು, ಆಸಕ್ತಿ ಅಭಿರುಚಿಗಳಿಗೂ ಆದ್ಯತೆ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.