ಪೂಜಾ
ಸಮಾಜದಲ್ಲಿ ‘ಕಳಂಕಿತರು’ ಎಂಬ ಹಣೆಪಟ್ಟಿಯನ್ನು ಹೊತ್ತು, ಮುಖ್ಯವಾಹಿನಿಯಿಂದ ದೂರವೇ ಉಳಿದಿರುವವರು ಲಿಂಗತ್ವ ಅಲ್ಪಸಂಖ್ಯಾತರು. ಇದರ ನಡುವೆಯೂ ತಮಗಾದ ಎಲ್ಲ ಅವಮಾನ, ನೋವನ್ನೂ ಮೆಟ್ಟಿ ನಿಂತು, ಘನತೆಯ ಬದುಕನ್ನು ಕಟ್ಟಿಕೊಟ್ಟಲು ಯಶಸ್ವಿಯಾಗಿರುವ ಕೆಲವೇ ಮಂದಿಯಲ್ಲಿ ಒಬ್ಬರಾಗಿರುವ ಪೂಜಾ, ತಮ್ಮ ಸಮುದಾಯದ ಇತರರಿಗೆ ಮಾದರಿಯಾಗಿದ್ದಾರೆ.
ಮನೆ ಬಿಟ್ಟು ಹೋಗಿದ್ದ ಮಗ ವಾಪಸ್ ಬಂದಾಗ ಮನೆಯವರು ಯಾರೂ ಸ್ವಾಗತಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವನು ಬಂದದ್ದಕ್ಕೆ ಖುಷಿಪಡುವ ಮನಃಸ್ಥಿತಿಯೂ ಅವರದಾಗಿರಲಿಲ್ಲ. ಏಕೆಂದರೆ ಮನೆಯಿಂದ ಹೋದಾಗ ಅಶ್ವತ್ಥಾಮ ಆಗಿದ್ದ ಮಗ, ಹಿಂದಿರುಗಿ ಬಂದಾಗ ಪೂಜಾ ಆಗಿದ್ದ, ಹೆಣ್ಣಾಗಿ ಬದಲಾಗಿದ್ದ. ಕುಟುಂಬದ ಮರ್ಯಾದೆ ಕಳೆದೆ ಎಂದು ಅಬ್ಬರಿಸಿದ ಅಣ್ಣ ಹೊರಗಟ್ಟಿದ. ಆ ನೋವಿನಲ್ಲೇ ಮತ್ತೆ ಮನೆಬಿಟ್ಟ ಪೂಜಾಗೆ ಬದುಕುಳಿಯಲು ಆಸರೆಯಾದದ್ದು ಭಿಕ್ಷಾಟನೆಯ ದಾರಿಯೊಂದೇ.
ಹಿಂದೆ ಮನೆಯಿಂದ ಹೊರಗಿದ್ದಾಗ ಭಿಕ್ಷಾಟನೆಯ ಆಗುಹೋಗು ಅರಿತಿದ್ದ ಪೂಜಾಗೆ ಮತ್ತೆ ಅದೇ ಕಾಯಕ ಮುಂದುವರಿಸುವುದು ನುಂಗಲಾರದ ತುತ್ತಾಯಿತು. ‘ದುಡಿಯಲು ಆಗಲ್ವಾ, ಭಿಕ್ಷೆ ಬೇಡ್ತೀಯ ನಾಚಿಕೆಯಾಗಲ್ವಾ’ ಎಂದು ಜನರಾಡಿದ ಚುಚ್ಚುಮಾತು
ಗಳಿಂದ ನೊಂದು, ಗೌರವಯುತವಾಗಿ ಬದುಕಿ ತೋರಿಸಬೇಕೆಂಬ ಛಲ ಮೂಡಿತು.
ಅಶ್ವತ್ಥಾಮ ಆಗಿದ್ದಾಗಲೇ ಪದವಿ ಪೂರೈಸಿದ್ದ ಪೂಜಾಗೆ, ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಕೋರ್ಟ್ ತೀರ್ಪು ವರದಾನವಾಯಿತು. ಕಲ್ಯಾಣ ಕರ್ನಾಟಕದವರಿಗೆ ಸಂವಿಧಾನದ 371ಜೆ ಕಲಂನಡಿ ನೀಡುವ ಉದ್ಯೋಗ ಮೀಸಲಾತಿಯನ್ನು ಬಳಸಿಕೊಂಡು 2022ರಲ್ಲಿ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದರು. ನೇಮಕಾತಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ಶಿಕ್ಷಕ ಹುದ್ದೆ ಒಲಿದುಬಂತು. ಇದೀಗ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ತೊಂಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾಜವಿಜ್ಞಾನ ಶಿಕ್ಷಕಿಯಾಗಿ ಪೂಜಾ ಸೇವೆ ಸಲ್ಲಿಸುತ್ತಿದ್ದಾರೆ.
ಕೈಬಿಡದ ವಿದ್ಯೆ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ದಲಿತ ಕುಟುಂಬದಲ್ಲಿ ಜನಿಸಿದ ಅಶ್ವತ್ಥಾಮ, ಬಾಲ್ಯದಿಂದಲೂ ಅತ್ಯಂತ ಚುರುಕುಮತಿಯಾಗಿದ್ದರೂ ಸೌಮ್ಯಸ್ವಭಾವದವನಾಗಿದ್ದ. ತನ್ನೊಳಗಿನ ಹೆಣ್ತನದ ಸುಡುಕೆಂಡದ ವಿಷಯವನ್ನು ತಂದೆ–ತಾಯಿ ಬಳಿ ಹೇಳಿಕೊಳ್ಳಲು ಧೈರ್ಯ ಸಾಲದೆ, ನೋವನ್ನು ಒಡಲಲ್ಲಿಟ್ಟುಕೊಂಡೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ತನ್ನೂರಿನಲ್ಲಿ ಮುಗಿಸಿದ್ದ. ಮುಂದೆ ಮಾನ್ವಿ ಪಟ್ಟಣದಲ್ಲಿ ಪಿಯುಸಿ, ಬಿ.ಎ . ಮುಗಿಸಿ, ರಾಯಚೂರಿನಲ್ಲಿ ಬಿ.ಇಡಿ ಹಾಗೂ ಸಿಂಧನೂರಿನಲ್ಲಿ ಎಂ.ಎ. ಶಿಕ್ಷಣ ಪೂರೈಸಿದ್ದ. ಎಸ್‌ಎಸ್‌ಎಲ್‌ಸಿಯಿಂದ ಎಂ.ಎ.ವರೆಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ ಅಶ್ವತ್ಥಾಮ, ಶಿಕ್ಷಕನಾಗುವ ಕನಸು ಹೊತ್ತು ಟಿಇಟಿ ಪರೀಕ್ಷೆ ಬರೆದು, ಒಂದು ವರ್ಷ ಮನೆಯಲ್ಲಿ ಖಾಲಿ ಕುಳಿತಿದ್ದ.
‘ನೀನು ಹೆಣ್ಣಿನಂತೆ ಆಡ್ತೀಯ’, ‘ನೀನು ಚಕ್ಕಾ’ ಎಂದೆಲ್ಲಾ ಚಪ್ಪಾಳೆ ತಟ್ಟಿ ಛೇಡಿಸುವುದು, ನಿರಂತರವಾಗಿ ಆಗುತ್ತಿದ್ದ ಅವಮಾನ, ಕಿರುಕುಳ ಮಿತಿಮೀರಿದಾಗ ಮನೆಬಿಟ್ಟು ಬೆಂಗಳೂರಿಗೆ ಬಂದು ಲಿಂಗತ್ವ ಅಲ್ಪಸಂಖ್ಯಾತರ ಪರಿವಾರವನ್ನು ಸೇರಿಕೊಂಡ. ಪರಿವಾರದ ಹಿರಿಯರ ಸಲಹೆ ಮೇರೆಗೆ ಟ್ರಾಫಿಕ್ ಸಿಗ್ನಲ್, ಮಾರುಕಟ್ಟೆ ಬಳಿ ಭಿಕ್ಷಾಟನೆ ಮಾಡಿ ಹಣ ಸಂಪಾದಿಸತೊಡಗಿದ. ಈ ನಡುವೆ, ಹುಡುಗನೊಳಗಿದ್ದ ‘ಹೆಣ್ತನ’ ಬಲಗೊಳ್ಳುತ್ತಲೇ ಇತ್ತು. ‘ಈ ನೋವನ್ನು 30 ವರ್ಷ ಅನುಭವಿಸಿದ್ದು ಸಾಕು, ಇನ್ನಾದರೂ ನನ್ನ ಭಾವನೆಗೆ ತಕ್ಕಂತೆ ಬದುಕಬೇಕು’ ಎಂಬ ದೃಢ ನಿರ್ಧಾರದಿಂದ 2018ರಲ್ಲಿ ₹ 6 ಲಕ್ಷ ಖರ್ಚು ಮಾಡಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ‘ಪೂಜಾ’ ಹೆಸರಿನ ಹೆಣ್ಣಾದ.
ಎದೆಯೆತ್ತರ ಬೆಳೆದು ನಿಂತ ಮಗ ವಂಶ ಬೆಳೆಸುತ್ತಾನೆ ಎಂದುಕೊಂಡರೆ, ಲಿಂಗ ಪರಿವರ್ತಿಸಿಕೊಂಡು ಬೀದಿಯಲ್ಲಿ ಭಿಕ್ಷಾಟನೆಗೆ ನಿಂತಾಗ ಯಾವ ತಾಯಿ ಮತ್ತು ಅಣ್ಣ ತಾನೇ ಸಹಿಸುತ್ತಾರೆ? ಆದರೆ ವಿದ್ಯಾಧಿದೇವತೆಯ ಪ್ರಭಾವಕ್ಕೆ ಅವರೆಲ್ಲ ತಲೆಬಾಗಲೇ ಬೇಕಾಯಿತು. ಶಿಕ್ಷಕಿಯಾಗಿ ಆಯ್ಕೆಯಾದಾಗ, ‘ಆಗ ಮಗ ಆಗಿದ್ದೆ, ಈಗ ಮಗಳಾಗಿ ಸಾಧನೆ ಮಾಡಿದ್ದೀಯ’ ಎಂದು ಪೂಜಾ ಅವರನ್ನು ತಾಯಿ ಅಪ್ಪಿಕೊಂಡು ಸಂತಸಪಟ್ಟರು. ಅಣ್ಣ ಕೂಡಾ ತಂಗಿಯ ಸಾಧನೆಗೆ ಬೆರಗಾಗಿ, ಖುದ್ದು ಬಂದು ಮನೆಗೆ ಕರೆದೊಯ್ದರು.
ಇದೀಗ, ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕಿ ಹುದ್ದೆಗೇರಿದ ಪ್ರಥಮ ಲಿಂಗತ್ವ ಅಲ್ಪಸಂಖ್ಯಾತೆ ಎಂಬ ಹಿರಿಮೆಗೆ ಪೂಜಾ ಪಾತ್ರರಾಗಿದ್ದಾರೆ. ಮಕ್ಕಳ ನೆಚ್ಚಿನ ಶಿಕ್ಷಕಿಯೂ ಆಗಿದ್ದಾರೆ. ಗ್ರಾಮದಲ್ಲಿನ ಮನೆ ಮನೆಗೆ ತೆರಳಿ, ಶಾಲೆ ಬಿಡಿಸದಂತೆ ಪಾಲಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುತ್ತಿದ್ದಾರೆ.
ಪೂಜಾ ಅವರ ಶಾಲಾ–ಕಾಲೇಜು ದಾಖಲಾತಿಗಳಲ್ಲಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯಲ್ಲಿ ಈಗಲೂ ಅಶ್ವತ್ಥಾಮ ಎಂಬ ಹೆಸರೇ ಇದೆ. ಹೆಸರು ಬದಲಾಯಿಸಲು ವಕೀಲರ ಮೂಲಕ ನಡೆಸಿದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿಲ್ಲ. ವೈದ್ಯಕೀಯ ಪ್ರಮಾಣಪತ್ರದ ಆಧಾರದಲ್ಲಿ ಜಿಲ್ಲಾಧಿಕಾರಿ ನೀಡಿದ ‘ಲಿಂಗತ್ವ ಅಲ್ಪಸಂಖ್ಯಾತ’ ಪ್ರಮಾಣಪತ್ರವೇ ಅವರಿಗೆ ಆಧಾರವಾಗಿದೆ. ಎಲ್ಲಾ ದಾಖಲಾತಿಗಳನ್ನು ಬದಲಾದ ಲಿಂಗತ್ವಕ್ಕೆ ಅನುಗುಣವಾದ ಹೆಸರಿನಲ್ಲಿಯೇ ಕಾನೂನುಬದ್ಧಗೊಳಿಸಲು ಸರ್ಕಾರ ಮುಂದಾದರೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪೂಜಾ.
‘ಶಾಲೆಗೆ ಸೇರಿದ ದಿನದಿಂದ ಇಲ್ಲಿಯವರೆಗೂ ತೊಂಡಿಹಾಳ ಶಾಲೆಯ ಸಹೋದ್ಯೋಗಿಗಳು, ಮಕ್ಕಳು ನನ್ನನ್ನು ಭೇದಭಾವ ಇಲ್ಲದೆ ಸಮನಾಗಿ ಕಾಣುತ್ತಿದ್ದಾರೆ. ಇಲ್ಲಿಯೇ ಮನೆ ಮಾಡಿದ್ದೇನೆ. ಗ್ರಾಮಸ್ಥರು ಕೂಡ ಮನೆ ಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ. ಪಿಯು ಕಾಲೇಜಿನ ಉಪನ್ಯಾಸಕಿಯಾಗುವ ಗುರಿ ಇದೆ. ಅದಕ್ಕಾಗಿ ತಯಾರಿ ನಡೆಸಿದ್ದೇನೆ’ ಎಂದ ಪೂಜಾ, ಆತ್ಮವಿಶ್ವಾಸದ ನಗೆ ಬೀರಿದರು.
ಮುಖ್ಯವಾಹಿನಿಗೆ ಬನ್ನಿ
ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಸೆಕ್ಸ್ ವರ್ಕರ್ಸ್, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವವರು, ಸಮಾಜದಲ್ಲಿ ಇರುವುದಕ್ಕೆ ಅವರು ನಾಲಾಯಕ್ಕು ಎಂದು ಭಾವಿಸಿ, ಅವರನ್ನು ಹೀಯಾಳಿಸುವವರೇ ಹೆಚ್ಚು. ಪುರುಷರು ಹಾಗೂ ಮಹಿಳೆಯರಂತೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು. ನಮಗೆ ಸರ್ಕಾರ ಉದ್ಯೋಗ ಮೀಸಲಾತಿಯ ಜತೆಗೆ ಇತರ ಸೌಲಭ್ಯ
ಗಳನ್ನೂ ಒದಗಿಸಬೇಕು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಈಗಲೂ ನನ್ನ ಸಂಪರ್ಕದಲ್ಲಿದ್ದಾರೆ. ಭಿಕ್ಷಾಟನೆ ಬಿಟ್ಟು ಸಮಾಜದಲ್ಲಿ ಗೌರವದಿಂದ ಬದುಕೋಣ. ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬನ್ನಿ, ಉತ್ತಮ ಬದುಕು ಕಟ್ಟಿಕೊಳ್ಳಿ.
ತಿರಸ್ಕರಿಸಿದವರೇ ಪುರಸ್ಕರಿಸಿದರು
ಭಿಕ್ಷೆ ನೀಡುವಾಗ ಜನ ಆಡುತ್ತಿದ್ದ ಚುಚ್ಚುಮಾತುಗಳಿಂದ ನೊಂದು, ಏನಾದರೂ ಸಾಧನೆ ಮಾಡಲೇಬೇಕೆಂಬ ಛಲ ಮೂಡಿಸಿಕೊಂಡೆ.
ಲಿಂಗತ್ವ ಅಲ್ಪಸಂಖ್ಯಾತರು ಸಾಮಾನ್ಯವಾಗಿ ತಮ್ಮವರಿಂದ ದೂರ ಇರಲು ಬಯಸುತ್ತಾರೆ. ಅವಮಾನ ಮಾಡಿದ ಜನರೆದುರು ಕಾಣಿಸಿಕೊಳ್ಳಬಾರದು ಎಂದು
ಕೊಳ್ಳುತ್ತಾರೆ. ಆದರೆ, ನಾನು ಚಿಗುರೊಡೆದ ಸ್ಥಳದಲ್ಲೇ ಬೇರುಬಿಟ್ಟು ಹೆಮ್ಮರವಾಗಿ ಬೆಳೆಯಬೇಕು ಅಂದುಕೊಂಡೆ.
ತಿರಸ್ಕರಿಸಿದವರೇ ಪುರಸ್ಕರಿಸುವಂತೆ ಆಗಬೇಕು ಎಂದು ಹಟ ತೊಟ್ಟು ಶಿಕ್ಷಕಿಯಾಗುವಲ್ಲಿ ಯಶಸ್ವಿಯಾದೆ.
ಈಗ ನನ್ನ ಊರಿನವರು, ಕುಟಂಬದವರು, ಸ್ನೇಹಿತರು ನನ್ನ ಸಾಧನೆಯನ್ನು ಮೆಚ್ಚಿ ಗೌರವದಿಂದ ಕಾಣುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.