ADVERTISEMENT

ಧೈರ್ಯ ಎಂಬ ದಿವ್ಯಮಂತ್ರ

ಇಂದು ವಿಶ್ವ ಮಹಿಳಾ ದಿನ

ಬಿ.ಜೆ.ಧನ್ಯಪ್ರಸಾದ್
Published 7 ಮಾರ್ಚ್ 2020, 19:45 IST
Last Updated 7 ಮಾರ್ಚ್ 2020, 19:45 IST
ಎಂ.ಆರ್‌.ಮೇಘನಾ ಶಾನುಭೋಗ್‌
ಎಂ.ಆರ್‌.ಮೇಘನಾ ಶಾನುಭೋಗ್‌   

ಚಿಕ್ಕಮಗಳೂರು: ಭಾರತೀಯ ವಾಯುಪಡೆ (ಐಎಎಫ್‌) ಯುದ್ಧ ವಿಮಾನದ ಹಾರಾಟ ನಡೆಸುವ ಫ್ಲೈಯಿಂಗ್‌ ಆಫೀಸರ್‌ ಎಂ.ಆರ್‌. ಮೇಘನಾ ಶಾನುಭೋಗ್‌ ಕಾಫಿ ನಾಡಿನ ಹೆಮ್ಮೆಯ ಕುವರಿ. ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ’ ಎಂಬ ನಾಣ್ಣುಡಿಯಲ್ಲಿ ದೃಢ ವಿಶ್ವಾಸವಿಟ್ಟು, ಯುದ್ಧ ವಿಮಾನದ ಫೈಟರ್‌ ಪೈಲಟ್‌ ಆಗಬೇಕೆಂಬ ಕನಸು ಕಟ್ಟಿ ನನಸಾಗಿಸಿಕೊಂಡ ಯುವತಿ.

ಮೇಘನಾ, ಚಿಕ್ಕಮಗಳೂರು ತಾಲ್ಲೂಕಿನ ಮರ್ಲೆ ಗ್ರಾಮದವರು. ತಂದೆ ಎಂ.ಕೆ. ರಮೇಶ್‌ ವಕೀಲ ಮತ್ತು ತಾಯಿ ಸಿ.ವಿ. ಶೋಭಾ ಉಡುಪಿಯ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷೆ.

ಚಿಕ್ಕಮಗಳೂರಿನ ಮಹರ್ಷಿ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ, ಉಡುಪಿಯ ಬ್ರಹ್ಮಾವರದ ಲಿಟಲ್‌ ರಾಕ್‌ ಇಂಡಿಯನ್‌ ಶಾಲೆಯಲ್ಲಿ 5ರಿಂದ 12ನೇ ತರಗತಿವರೆಗೆ ಹಾಗೂ ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಮಾಹಿತಿ ವಿಜ್ಞಾನ) ವ್ಯಾಸಂಗ ಮಾಡಿದ್ದಾರೆ.

ADVERTISEMENT

ಗಾಯನ, ಸಂಗೀತ, ಪ್ರವಾಸ, ಪರ್ವತಾರೋಹಣ ಇವು ಮೇಘನಾಗೆ ಇಷ್ಟ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬುದು ಅವರ ದಿವ್ಯಮಂತ್ರ. ಪುತ್ರಿಯ ಸಾಧನೆಯ ಹಾದಿಗೆ ಪೋಷಕರು ಪ್ರೋತ್ಸಾಹ ನೀಡಿದರು.

ಶಾಲೆ–ಕಾಲೇಜು ದಿನಗಳಲ್ಲಿ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಹಿಮಾಲಯದ ಸಾಹಸ ಶಿಬಿರದಲ್ಲಿ ಪಾಲ್ಗೊಂಡಿದ್ದರು. 16 ಸಾವಿರ ಅಡಿ ಎತ್ತರ ತಲುಪಿ ಸಾಹಸ ಮೆರೆದಿದ್ದರು. ಸಾಹಸ್‌ ಅಡ್ವೆಂಚರ್‌ ಕ್ಲಬ್‌ ಸ್ಥಾಪಿಸಿದ್ದರು. ವಾರಾಂತ್ಯದಲ್ಲಿ ಚಾರಣ, ಪ್ಯಾರಾಗ್ಲೈಡಿಂಗ್‌ ಆಯೋಜಿಸಿ ಸ್ನೇಹಿತರಲ್ಲಿ ಸಾಹಸದ ಬಗ್ಗೆ ಆಸಕ್ತಿ ಬೆಳೆಸಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆ ತಯಾರಿಗೆ ನವದೆಹಲಿಗೆ ಹೋದರು. ಏರ್‌ಫೋರ್ಸ್‌ನ ಸಾಮಾನ್ಯ ಪ್ರವೇಶ ಪರೀಕ್ಷೆ (ಎಎಫ್‌ಸಿಎಟಿ) ಬರೆದು ಯಶಸ್ವಿಯಾದರು. ನಂತರ ಸರ್ವಿಸ್‌ ಸೆಕ್ಟರ್‌ ಬೋರ್ಡ್‌ (ಎಸ್‌ಎಸ್‌ಬಿ) ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾದರು.

2016ರ ಜನವರಿಯಲ್ಲಿ ಶುರುವಾದ ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಯಶಸ್ಸು ಸಾಧಿಸಿದರು. ತೆಲಂಗಾಣದ ಡುಂಡಿಗಲ್‌ನ ಇಂಡಿಯನ್‌ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದರು. ‘ಕಿರಣ್‌’ ತರಬೇತಿ ವಿಮಾನ ಹಾರಾಟದ ತರಬೇತಿ ಪಡೆದರು. ಬೀದರ್‌ನಲ್ಲಿನ ವಾಯುಪಡೆ ಅಕಾಡೆಮಿ ಕೇಂದ್ರದಲ್ಲಿ 2018ರ ಜುಲೈನಲ್ಲಿ ‘ಹಾಕ್‌’ ತರಬೇತಿ ವಿಮಾನದಲ್ಲಿ 90 ಗಂಟೆ ಹಾರಾಟ ನಡೆಸಿದ್ದರು. ಪಶ್ಚಿಮ ಬಂಗಾಳದ ಕಲೈಕೊಂಡ, ಬಾರಕ್‌ಪುರ್‌ ಏರ್‌ಫೋರ್ಸ್‌ ಸ್ಟೇಷನ್‌ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜಸ್ತಾನದ ಸೂರತ್‌ಗಡದ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮಿಗ್–21’ ಯುದ್ಧ ವಿಮಾನಕ್ಕೆ ನಿಯೋಜನೆಯಾಗಿದ್ದಾರೆ.

ಐಎಎಫ್‌ ಯುದ್ಧ ವಿಮಾನಗಳ ಪೈಲಟ್‌ಗಳಾಗಿ ಸೇರಿದ್ದ ಮೋಹನಾ ಸಿಂಗ್‌, ಭಾವನಾ ಕಾಂತ್‌, ಅವನಿ ಚತುರ್ವೇದಿ ಅವರ ಸಾಧನೆ ಆ ಕ್ಷೇತ್ರಕ್ಕೆ ಕಾಲಿಟ್ಟ ಮೇಘನಾಗೆ ಪ್ರೇರಣೆ. ವಾಯುಪಡೆಯು ಪುರುಷರಿಗಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಈಗ ಮಹಿಳೆಯರು ಕೂಡ ಈ ಕ್ಷೇತ್ರಕ್ಕೆ ಇಳಿದಿದ್ದಾರೆ. ಕಾಫಿ ನಾಡಿನ ಯುವತಿಯ ಯಶೋಗಾಥೆ ಯುವಪೀಳಿಗೆಗೆ ಸ್ಫೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.