
ಪುತ್ರ ಪ್ರಣವ್ ಎಸ್. ಸಾಸಲು ಜೊತೆ ಸೌಮ್ಯಾ ಸುಧಾಕರ್
ಯಾವುದೇ ವೃತ್ತಿಯಲ್ಲಿ ತೊಡಗಿದ್ದರೂ ಅಮ್ಮ ಅಮ್ಮನೇ. ಆ ಕೆಲಸದಿಂದ ‘ಅಮ್ಮ’ನ ಪಾತ್ರಕ್ಕೆ ರಿಯಾಯಿತಿಯೇನೂ ಸಿಗುವುದಿಲ್ಲ. ಇಂತಹ ಸವಾಲಿಗೆ ಮುಖಾಮುಖಿಯಾಗಿ, ಉದ್ಯೋಗ ಮತ್ತು ಮಕ್ಕಳ ಪಾಲನೆಯ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿರುವ ಕೆಲವು ಅಮ್ಮಂದಿರ ಸ್ವಗತ ಇಲ್ಲಿದೆ. ಇದು ಈ ಬಾರಿಯ ‘ಮಕ್ಕಳ ದಿನಾಚರಣೆ’ಗೆ ‘ಭೂಮಿಕಾ’ದ ವಿಶೇಷ.
ಉದ್ಯೋಗವೂ ಮುಖ್ಯ ಮಕ್ಕಳೂ ಮುಖ್ಯ
ಮಕ್ಕಳ ಜೊತೆ ಎಷ್ಟು ಸಮಯ ಕಳೆಯುತ್ತೇವೆ ಎಂಬುದಕ್ಕಿಂತ ಎಷ್ಟು ಅರ್ಥಪೂರ್ಣವಾಗಿ ಕಳೆಯುತ್ತೇವೆ ಎಂಬುದು ಮುಖ್ಯ. ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಪೋಷಕರ ಸಭೆಗಳಲ್ಲಿ ಭಾಗವಹಿಸುತ್ತೇನೆ, ಶಾಲಾ ಚಟುವಟಿಕೆಗಳು ಮತ್ತು ಸ್ಪರ್ಧೆಗಳಿಗೆ ನಾನೇ ಮಗನನ್ನು ಕರೆದುಕೊಂಡು ಹೋಗುತ್ತೇನೆ. ವಾರಾಂತ್ಯದಲ್ಲಿ ಆಟವಾಡಲು ಕರೆದೊಯ್ಯುವ ಮೂಲಕ ಅವನೊಟ್ಟಿಗೆ ಸಮಯ ಕಳೆಯುತ್ತೇನೆ.
ಸೇಲಂಗೆ ವರ್ಗವಾದಾಗ ಬೆಂಗಳೂರಿನಲ್ಲಿ ಚಿಕ್ಕ ಮಗುವನ್ನು ಬಿಟ್ಟು ಹೋಗಬೇಕಾದ ಅನಿವಾರ್ಯ ಎದುರಾಯಿತು. ಆ ಸಂದರ್ಭದಲ್ಲಿ ಕೆಲಸ ಅಥವಾ ಮಗು ಎಂಬ ದ್ವಂದ್ವವೇ ನನಗೆ ಎದುರಾಗಲಿಲ್ಲ. ಏಕೆಂದರೆ ನನ್ನ ಪಾಲಿಗೆ ಉದ್ಯೋಗವೂ ಮಗುವಿನಷ್ಟೇ ಮಹತ್ವದ್ದು. ‘ನಾವಿದ್ದೇವೆ’ ಎಂಬ ಕುಟುಂಬಸ್ಥರ ಅಭಯ ಆಗ ನನಗೆ ಬಲ ನೀಡಿತು. ರಜೆಯಲ್ಲಿ ಸೇಲಂನಿಂದ ಬೆಂಗಳೂರಿಗೆ ಬಂದು ಮಗನೊಟ್ಟಿಗೆ ಸಮಯ ಕಳೆಯುತ್ತಿದ್ದೆ. ಬೇರೆಯವರ ರೀತಿ ಮಗನಿಗೆ ಪೂರ್ಣ ಪ್ರಮಾಣದಲ್ಲಿ ಸಮಯ ನೀಡಲಾಗುತ್ತಿಲ್ಲ ಎಂಬ ಬೇಸರ ಖಂಡಿತಾ ಇದೆ. ಉದ್ಯೋಗಸ್ಥ ಮಹಿಳೆಯರೆಲ್ಲರಿಗೂ ಇಂಥ ಕೆಲ ಸಂದಿಗ್ಧ ಸವಾಲುಗಳು ಎದುರಾಗಿಯೇ ಆಗುತ್ತವೆ. ಆಗ ಪಶ್ಚಾತ್ತಾಪ ಪಡಬಾರದು. ಜೀವನದಲ್ಲಿ ಉದ್ಯೋಗವೂ ಮುಖ್ಯ, ಮಕ್ಕಳೂ ಮುಖ್ಯ. ಎರಡೂ ಜವಾಬ್ದಾರಿಗಳನ್ನು ಸರಿದೂಗಿಸಿಕೊಂಡು ಹೋಗುವುದನ್ನು ರೂಢಿ ಮಾಡಿಕೊಳ್ಳಬೇಕು. ಸಿಗುವಷ್ಟು ಸಮಯದಲ್ಲಿಯೇ ಖುಷಿ ಪಡಬೇಕು, ಮಕ್ಕಳಿಗೂ ಅದನ್ನು ಅರ್ಥ ಮಾಡಿಸಬೇಕು.
ಈ ವಿಷಯದಲ್ಲಿ 12 ವರ್ಷದ ಮಗನೂ ನನಗೆ ಸಪೋರ್ಟಿವ್ ಆಗಿದ್ದಾನೆ. ನಮ್ಮ ಇಲಾಖೆಯಲ್ಲಿ 24/7 ಸಕ್ರಿಯರಾಗಿ ಇರಬೇಕಾಗುತ್ತದೆ. ಮನೆಯಲ್ಲಿ ಇದ್ದಾಗಲೂ ತುರ್ತು ಕರೆಗಳು ಬರುತ್ತವೆ. ಆಗ ‘ಆಯ್ತು ಕಚೇರಿಗೆ ಹೋಗ್ಬನ್ನಿ ಅಮ್ಮ’ ಅನ್ನುವಷ್ಟು ಪ್ರೌಢಿಮೆಯನ್ನು ಹೊಂದಿದ್ದಾನೆ ಎನ್ನುವುದೇ ಸಂತೋಷ.
-ಸೌಮ್ಯಾ ವಿ. ಸುಧಾಕರ್, ಹೆಚ್ಚುವರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು
****
ಕೆಲಸದವರನ್ನು ಅವಲಂಬಿಸಿಲ್ಲ
ನನಗೆ ಹತ್ತು ವರ್ಷ ಹಾಗೂ ಏಳೂವರೆ ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. ಕೆಲಸಕ್ಕೆ ಹೊರಡುವ ಒತ್ತಡದ ಮಧ್ಯೆಯೂ ಅವರನ್ನು ನಾನೇ ಶಾಲೆಗೆ ಅಣಿ ಮಾಡುತ್ತೇನೆ. ಮಕ್ಕಳ ಕೆಲಸಗಳಿಗೆ ಕೆಲಸದವರನ್ನು ಅವಲಂಬಿಸಿಲ್ಲ. ಮಕ್ಕಳ ಬೇಕುಬೇಡಗಳನ್ನು ತಾಯಿ ಆಲಿಸುವುದರಿಂದ ತಾಯಿ–ಮಕ್ಕಳ ನಡುವಿನ ಪ್ರೀತಿ ಹೆಚ್ಚುತ್ತದೆ, ಭಾವನಾತ್ಮಕ ಸಂಬಂಧವೂ ಗಟ್ಟಿಗೊಳ್ಳುತ್ತದೆ. ನಮ್ಮ ಒಂದೊಂದು ಒಳ್ಳೆಯ ಹೆಜ್ಜೆಯೂ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ ಆಗುತ್ತದೆ.
ಪೊಲೀಸ್ ಇಲಾಖೆಯಲ್ಲಿ ಎಕ್ಸಿಕ್ಯುಟಿವ್ ಹುದ್ದೆಯಲ್ಲಿ ಇರುವ ಕಾರಣಕ್ಕೆ ನನಗೆ ಬಂದೋಬಸ್ತ್, ಅಪರಾಧ ಪ್ರಕರಣಗಳ ಪತ್ತೆ, ಸಭೆಗಳಲ್ಲಿ ಭಾಗಿಯಾಗುವುದು, ಹಿರಿಯ ಅಧಿಕಾರಿಗಳ ಭೇಟಿಯಂತಹ ಹಲವು ಕೆಲಸಗಳು ಇರುತ್ತವೆ. ಕೆಲವೊಮ್ಮೆ ಬೆಳಿಗ್ಗೆಯೇ ಕಚೇರಿಗೆ ತೆರಳಬೇಕಿರುತ್ತದೆ. ರಾತ್ರಿ 11 ಕಳೆದರೂ ಮನೆಗೆ ಬರಲು ಸಾಧ್ಯವಾಗುವುದಿಲ್ಲ. ರಾತ್ರಿ ಯಾವುದೇ ಸಮಯದಲ್ಲಿ ಮನೆಗೆ ಬಂದರೂ ಮಕ್ಕಳ ಓದು, ಬರಹದ ಬಗ್ಗೆ ಗಮನ ಹರಿಸುತ್ತೇನೆ. ಹೋಂವರ್ಕ್ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇನೆ. ಒತ್ತಡದ ಬದುಕಿನ ಮಧ್ಯೆಯೂ ಮಕ್ಕಳ ಬಗ್ಗೆ ಕಾಳಜಿ ವಹಿಸಲೇಬೇಕು.
ಪತಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಅವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇದೆ. ಇದು ಮಕ್ಕಳ ಬಗೆಗಿನ ನನ್ನ ಒತ್ತಡವನ್ನು ತುಸು ತಗ್ಗಿಸಿದೆ.
-ಅನಿತಾ ಹದ್ದಣ್ಣನವರ್ ಡಿಸಿಪಿ, ನೈಋತ್ಯ ವಿಭಾಗ, ಬೆಂಗಳೂರು
ಮಗ ಹರ್ಷದೇವ್ ನಾಯ್ಡು ಜೊತೆ ಅಮೃತಾ ನಾಯ್ಡು
****
ಸ್ವತಂತ್ರವಾಗಿ ಬೆಳೆಯಬೇಕು
ಮಕ್ಕಳು ಶಾಲೆಯಿಂದ ಮಧ್ಯಾಹ್ನ 3.30ರ ಸುಮಾರಿಗೆ ಮನೆಗೆ ಬರುತ್ತಾರೆ. ಆ ಹೊತ್ತಿಗೆ ನಾನು ಮನೆ ತಲುಪುವಂತೆ ನೋಡಿಕೊಳ್ಳುತ್ತೇನೆ. ಒಮ್ಮೆ ಮನೆಗೆ ಬಂದ ಮೇಲೆ ಕಚೇರಿಯ ಯಾವ ಕೆಲಸ–ಕಾರ್ಯಗಳ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅತ್ಯಂತ ಮುಖ್ಯ ಕೆಲಸವೇನಾದರೂ ಇದ್ದರೆ, ಮಕ್ಕಳು ಮಲಗಿದ ಮೇಲೆಯೇ ಮಾಡಿಕೊಳ್ಳುತ್ತೇನೆ. ಮಕ್ಕಳಿಗೆ ರಜೆ ಇದ್ದರೆ, ವರ್ಕ್ ಫ್ರಂ ಹೋಮ್ ಮಾಡುತ್ತೇನೆ.
ಶಾಲೆಗೂ ನಾವೇ ಬಿಡಬೇಕು, ಕರೆದುಕೊಂಡು ಬರಬೇಕು ಎಂದು ಈಗಿನ ಮಕ್ಕಳೇನೂ ಬಯಸುವುದಿಲ್ಲ. ನಮಗೂ ಅದು ಸಾಧ್ಯವಾಗುವುದಿಲ್ಲ. ಅವರು ಶಾಲೆಯಿಂದ ಬಂದ ಮೇಲೆ, ಅವರ ಜೊತೆ ಪಾರ್ಕ್‌ಗೆ ಹೋಗುತ್ತೇನೆ, ಆಟವಾಡುತ್ತೇನೆ. ವಾರ ವಾರಕ್ಕೂ ಪರೀಕ್ಷೆ ಕೊಡುವಂಥ ಶಾಲೆಗೆ ನಮ್ಮ ಮಕ್ಕಳನ್ನು ನಾವು ಸೇರಿಸಿಲ್ಲ. ಪರ್ಯಾಯ ಶಿಕ್ಷಣ ವ್ಯವಸ್ಥೆ ಇರುವ ಶಾಲೆಗೆ ಸೇರಿಸಿದ್ದೇವೆ. ಆದ್ದರಿಂದ, ನಮ್ಮ ಮೇಲೆಯೂ ಹೆಚ್ಚಿನ ಒತ್ತಡ ಇರುವುದಿಲ್ಲ.
ಮಕ್ಕಳು ಕೇವಲ ಓದಬೇಕು ಎಂದು ನಾನು ಬಯಸುವುದಿಲ್ಲ. ಕ್ರೀಡೆ, ಸಂಗೀತ ಹೀಗೆ ಎಲ್ಲದರಲ್ಲಿಯೂ ಅವರು ತೊಡಗಿಕೊಳ್ಳಬೇಕು. ನಾನು ಮಕ್ಕಳೊಂದಿಗೆ ಸೇರಿ ಸಂಗೀತ ಅಭ್ಯಾಸ ಮಾಡುತ್ತೇನೆ. ರಾತ್ರಿ ಒಟ್ಟಿಗೆ ಕೂತು ಊಟ ಮಾಡುತ್ತೇವೆ. ಊಟವಾದ ಬಳಿಕ ನನ್ನ ಮಗನೇ ಡೈನಿಂಗ್ ಟೇಬಲ್ ಅನ್ನು ಒರೆಸಬೇಕು ಎನ್ನುವುದು ನಾನು ಮಾಡಿರುವ ನಿಯಮ. ಅವರು ಸ್ವತಂತ್ರವಾಗಿ ಬೆಳೆಯಬೇಕು, ಅದಕ್ಕೆ ನಾವೇ ಮಾದರಿಯಾಗಬೇಕು.
-ಶ್ವೇತಾ ರಾಜಶೇಖರ್, ಸ್ಥಾಪಕಿ, ಇಂಡಿಯನ್ ಸ್ವೀಟ್ ಹೌಸ್
ಮಗಾ ಅದ್ವೈತ್ ಮತ್ತು ಮಗಳು ಕೃಷ್ಣಾ ಜೊತೆಶ್ವೇತಾ
****
ಸಂಸ್ಕಾರ ಕಲಿಸಲು ಆದ್ಯತೆ
ಮಗನನ್ನು ಆದ್ಯತೆಯಾಗಿ ಇಟ್ಟುಕೊಂಡೇ ಧಾರಾವಾಹಿಯ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇನೆ. ವೃತ್ತಿ ಹಾಗೂ ತಾಯ್ತನ ಎರಡನ್ನೂ ಒಟ್ಟಿಗೆ ನಿಭಾಯಿಸುವಾಗ, ಆ ದಾರಿಯೇನೂ ಸರಾಗವಾಗಿ ಇರುವುದಿಲ್ಲ. ಅಲ್ಲಿ ಸವಾಲುಗಳಿರುತ್ತವೆ. ಆದರೆ, ನಾವು ನಿತ್ಯದ ಚಟುವಟಿಕೆಗಳನ್ನು ಆದಷ್ಟೂ ಯೋಜನಾಬದ್ಧವಾಗಿ ಮಾಡಬೇಕು. ಬಹು ಕೆಲಸ ನಿರ್ವಹಣಾ ಕೌಶಲವನ್ನು ರೂಢಿಸಿಕೊಳ್ಳುವುದು ಮುಖ್ಯ.
ಶೂಟಿಂಗ್ ಸ್ಥಳಕ್ಕೆ ತಡವಾಗಿ ಹೋಗಿ, ಬೇಗ ಬರುವ ರೀತಿಯಲ್ಲಿ ಟೀಮ್‌ಗೆ ಮನವಿ ಮಾಡಿಕೊಂಡಿದ್ದೇನೆ. ತಿಂಗಳೆಲ್ಲ ಶೂಟಿಂಗ್ ಇರುವುದಿಲ್ಲ. ಇದ್ದಾಗ ಗಂಡ ವರ್ಕ್ ಫ್ರಂ ಹೋಂ ಮಾಡುತ್ತಾರೆ. ಜತೆಗೆ ಮಾವ ನಮ್ಮ ಜತೆ ಇದ್ದಾರೆ. ಮಗನಿಗೆ ಈಗ ಮೂರೂವರೆ ವರ್ಷ. ಅವನನ್ನು ನೋಡಿಕೊಳ್ಳಲು ಒಬ್ಬ ‘ನ್ಯಾನಿ’ ಕೂಡ ಇದ್ದಾರೆ. ಇಷ್ಟೆಲ್ಲ ಜನ ಇರುವುದರಿಂದ ಅಷ್ಟು ತೊಂದರೆಯಾಗುವುದಿಲ್ಲ.
ಈಗ ಪ್ಲೇ ಸ್ಕೂಲಿಗೆ ಹೋಗುತ್ತಾನೆ. ಮಧ್ಯಾಹ್ನದ ಒಳಗೆ ಬಂದು ಬಿಡುತ್ತಾನೆ. ಊಟ ಮಾಡಿಸಿ, ಮೂರು ಗಂಟೆಗೆ ಮಲಗುತ್ತಾನೆ. ಅವನು ಏಳುವುದರ ಒಳಗೆ ನಾನು ಶೂಟಿಂಗ್ ಮುಗಿಸಿ ಮನೆಯಲ್ಲಿ ಇರುತ್ತೇನೆ. ಮುಖ್ಯವಾಗಿ ಮಗನಿಗೆ ಸಂಸ್ಕಾರ ಕಲಿಸುವುದಕ್ಕೆ ಹೆಚ್ಚು ಒತ್ತು ಕೊಡುತ್ತೇನೆ. ಶಿಕ್ಷಣ ಎಂಬುದು ಬರೀ ನಾಲ್ಕು ಗೋಡೆಗಳ ಮಧ್ಯೆ ಇದ್ದು ಕಲಿಯುವಂಥದ್ದಲ್ಲ. ದೊಡ್ಡವರು, ಚಿಕ್ಕವರ ಹತ್ತಿರ ನನ್ನ ಮಗ ಹೇಗೆ ಮಾತನಾಡುತ್ತಾನೆ, ಓರಗೆಯವರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ ಎಂಬುದು ಬಹುಮುಖ್ಯ. ಅವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮತ್ತು ಅವನದೇ ಆದ ಛಾಪು ಮೂಡಿಸುವಲ್ಲಿ ನಡವಳಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಅದರ ಕಡೆಗೆ ಹೆಚ್ಚು ಗಮನ ಕೊಡುತ್ತೇನೆ.
-ಅಮೃತಾ ನಾಯ್ಡು, ಕಿರುತೆರೆ ನಟಿ
ಮಕ್ಕಳಾದ ಶೌರ್ಯ ಮತ್ತು ಹರ್ಷಿತ್ ಅವರೊಂದಿಗೆ ಡಿಸಿಪಿ ಅನಿತಾ ಹದ್ದಣ್ಣನವರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.