ADVERTISEMENT

PV Web Exclusive: ಅವನಿಗೂ ಅವಳಿಗೂ ಬೇಕು ‘ಮೀ ಟೈಮ್‌’

ರೇಷ್ಮಾ
Published 8 ನವೆಂಬರ್ 2020, 15:13 IST
Last Updated 8 ನವೆಂಬರ್ 2020, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರೀತಿಸುವಾಗ ಎಲ್ಲವೂ ಚೆನ್ನಾಗಿರುವ ಪ್ರೇಮಿಗಳಿಗೆ ಸಮಯ ಕಳೆದಂತೆ ‘ಮೀ ಟೈಮ್‌’ ಅಂದರೆ ತಮಗೇ ಎಂದು ವೈಯಕ್ತಿಕ ಸಮಯವಿಲ್ಲ ಎಂದು ಅನ್ನಿಸಲು ಆರಂಭವಾಗುತ್ತದೆ. ಇದರಿಂದ ಅವರು ತಮ್ಮ ಸಂಗಾತಿಯಿಂದ ಸ್ವಲ್ಪ ಸಮಯ ದೂರವಾಗಲು ಬಯಸುತ್ತಾರೆ. ಆದರೆ ಕೆಲ ಸಮಯದ ದೂರ ಎಂಬುದು ಇಬ್ಬರನ್ನೂ ಶಾಶ್ವತವಾಗಿ ದೂರವಾಗುವಂತೆ ಮಾಡಬಹುದು.

ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಅನು ಹಾಗೂ ಅಭಯ್‌ಗೆ ಪ್ರೀತಿಯೇ ಜಗತ್ತಾಗಿತ್ತು. ತಮ್ಮ ಜಗತ್ತಿನಲ್ಲಿ ತಾವಿಬ್ಬರು ಬಿಟ್ಟರೆ ಬೇರೆ ಯಾರಿಲ್ಲ ಎಂಬಂತೆ ಕಾಲ ಕಳೆಯುತ್ತಿತ್ತು ಈ ಜೋಡಿ. ವಾರಾಂತ್ಯ ಬಂದರೆ ಸಿನಿಮಾ, ಶಾಪಿಂಗ್‌, ತಿಂಗಳಿಗೊಮ್ಮೆ ಪಿಕ್‌ನಿಕ್ ಹೀಗೆ ಸಂತೋಷದಿಂದ ದಿನ ಕಳೆಯುತ್ತಿದ್ದ ಇವರಿಗೆ ಇತ್ತೀಚೆಗೆ ಯಾಕೋ ಪ್ರೀತಿ ’’ಬಂಧನ’’ ಎನ್ನಿಸತೊಡಗಿದೆ. ಇಬ್ಬರಿಗೂ ತಮ್ಮದೇ ಎಂಬ ‘ಮೀ ಟೈಮ್‌’ ಎಂಬುದಿಲ್ಲ ಎನ್ನಿಸಲು ಶುರುವಾಗಿದೆ. ಅದರಲ್ಲೂ ಅಭಯ್‌ಗೆ, ‘ಅನು ತೀರಾ ನನ್ನ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸುತ್ತಾಳೆ, ನಾನು ಅವಳನ್ನು ಪ್ರೀತಿಸುತ್ತೇನೆ ನಿಜ. ಆದರೆ, ನನಗೆಂದೂ ಒಂದು ಬದುಕಿದೆ. ಅದರಲ್ಲಿ ನಾನೊಬ್ಬನೇ ಜೀವಿಸಬೇಕು. ಪ್ರೀತಿ–ಪ್ರೇಮ ಎಲ್ಲವೂ ನಿಜ. ಆದರೆ ನನ್ನದು ಎನ್ನುವ ಸಮಯ ಬೇಕು’ ಎಂಬ ಭಾವನೆ ಮೂಡಲಾರಂಭಿಸಿದೆ. ಹೀಗಿದ್ದಾಗ ಅಭಯ್ ಒಮ್ಮೆ ನೇರವಾಗಿ ‘ನನಗೆ ಈ ಸಂಬಂಧದಿಂದ ಒಂದಿಷ್ಟು ದಿನಗಳ ಕಾಲ ವಿರಾಮ ಬೇಕು’ ಎಂದಿದ್ದ. ಅಭಯ್‌ ಮೇಲೆ ಜೀವವನ್ನೇ ಇರಿಸಿಕೊಂಡಿದ್ದ ಅನುಗೆ ಅವನ ಈ ಮಾತು ಕಟುವಾಗಿ ಕೇಳಿಸಿತ್ತು. ಒಂದಿಷ್ಟು ಸಮಯ ಬೇಕು ಎಂಬುದು ಅವಳ ಮನಸ್ಸಿನಲ್ಲಿ ಬೇರೆನೇ ಅರ್ಥ ಮೂಡುವಂತೆ ಮಾಡಿತ್ತು. ಅದು ಅವರ ನಡುವೆ ಕಂದಕವನ್ನೇ ಸೃಷ್ಟಿಸಿತ್ತು. ಅಲ್ಲದೇ ಅಭಯ್‌ನ ಆ ಒಂದು ಮಾತು ಇಬ್ಬರನ್ನು ಸಂಪೂರ್ಣವಾಗಿ ದೂರವಾಗುವಂತೆ ಮಾಡಿತ್ತು.

ಇದು ಕೇವಲ ಅನು–ಅಭಯ್ ಕಥೆಯಲ್ಲ. ಈಗಿನ ಹಲವು ಯುವಕ–ಯುವತಿಯರ ಪ್ರೀತಿಯ ನಡುವೆ ನಡೆಯುವ ಕಥೆ. ಪ್ರೀತಿಸುವಾಗ ಎಲ್ಲವೂ ಚೆನ್ನಾಗಿರುವ ಅವರಿಗೆ ಸಮಯ ಕಳೆದಂತೆ ‘ಮೀ ಟೈಮ್‌’ ಅಂದರೆ ತಮಗೇ ಎಂದು ವೈಯಕ್ತಿಕ ಸಮಯವಿಲ್ಲ ಎಂದು ಅನ್ನಿಸಲು ಆರಂಭವಾಗುತ್ತದೆ. ಇದರಿಂದ ಅವರು ತಮ್ಮ ಸಂಗಾತಿಯಿಂದ ಸ್ವಲ್ಪ ಸಮಯ ದೂರವಾಗಲು ಬಯಸುತ್ತಾರೆ. ಆದರೆ ಕೆಲ ದಿನಗಳ ದೂರ ಎಂಬುದು ಇಬ್ಬರನ್ನೂ ಶಾಶ್ವತವಾಗಿ ದೂರವಾಗುವಂತೆ ಮಾಡಬಹುದು.

ADVERTISEMENT

ಪ್ರೀತಿಯ ಸಂಬಂಧದಲ್ಲಿ ಉಸಿರುಗಟ್ಟಿಸುವ ಭಾವನೆ ಬಂದಾಗ ಕುಳಿತು ನಿಧಾನಕ್ಕೆ ಮಾತನಾಡಬೇಕು. ನೇರವಾಗಿ ‘ನಿನ್ನಿಂದ ನನಗೆ ಸಮಯ ಸಿಗುತ್ತಿಲ್ಲ, ನಿನ್ನನ್ನು ಯಾಕೆ ಪ್ರೀತಿಸಿದೆ ಎಂದೆನ್ನಿಸುತ್ತಿದೆ, ನೀನು ಸಿಕ್ಕ ಮೇಲೆ ನನಗೆಂದು ವೈಯಕ್ತಿಕ ಜೀವನವೇ ಇಲ್ಲ ಎಂಬಂತಾಗಿದೆ’ ಎಂದೆಲ್ಲಾ ಆರೋಪ ಹೊರಿಸುವ ಬದಲು ಪರಿಸ್ಥಿತಿಯನ್ನು ಅವಲೋಕಿಸಿ ಸಂಗಾತಿಗೆ ಅರ್ಥ ಮಾಡಿಸಲು ಪ್ರಯತ್ನಿಸಬೇಕು. ಪ್ರೀತಿಯ ಭಾವನೆಯ ನಡುವೆಯೇ ‘ಮೀ ಟೈಮ್’ ಎನ್ನುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಹೇಳಬೇಕು. ಆಗ ಸಂಬಂಧದಲ್ಲಿ ಬೇಸರ ಮೂಡುವುದಿಲ್ಲ, ಶಾಶ್ವತವಾಗಿ ದೂರಾಗುವುದನ್ನು ತಪ್ಪಿಸಬಹುದು.

ಮನಸ್ಥಿತಿಯ ಅರಿವು ಮೂಡಿಸಿ
ಸಂಬಂಧದಲ್ಲಿ ವಿರಾಮ ಬೇಕು ಎನ್ನಿಸಲು ಕಾರಣ ಏನು ಎಂಬುದನ್ನು ಸ್ವಷ್ಟವಾಗಿ ತಿಳಿಸಿ. ಬಯ್ಯುವುದು, ರೇಗುವುದು ಮಾಡಬೇಡಿ. ‘ನಿನ್ನಿಂದ ನನ್ನ ಜೀವನ ಹಾಳಾಯ್ತು’ ಎಂಬೆಲ್ಲ ದೊಡ್ಡ ಮಾತುಗಳು ಬೇಡ. ನನಗೆ ಕೆಲಸದ ಒತ್ತಡವೂ ಹೆಚ್ಚಿದೆ. ಅಲ್ಲದೇ ಕೆಲವು ವೈಯಕ್ತಿಕ ವಿಚಾರಗಳ ಮೇಲೂ ಗಮನ ಹರಿಸಬೇಕು. ಹಾಗಾಗಿ ಸಮಯದ ಅವಶ್ಯಕತೆ ಇದೆ. ಈ ವಿರಾಮ ಎಂಬುದು ನಮ್ಮ ಭವಿಷ್ಯದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗಲಿದೆ. ಇದರಿಂದ ನಮ್ಮ ಮುಂದಿನ ಜೀವನ ಚೆನ್ನಾಗಿರುತ್ತದೆ. ಮುಂದೆ ಇನ್ನಷ್ಟು ಸುಂದರವಾಗಿ ಬದುಕಬಹುದು ಎಂದು ಅರ್ಥ ಮಾಡಿಸಿ.

ಭಾವನಾತ್ಮಕವಾಗಿ ದೂರಾಗುತ್ತಿಲ್ಲ ಎಂಬ ಭರವಸೆ ನೀಡಿ
ನೀವು ಯಾವ ಕಾರಣಕ್ಕೆ ವಿರಾಮ ಬೇಕು ಎಂದು ಹೇಳುತ್ತಿದ್ದೀರಿ ಎಂಬುದನ್ನು ನಿಮ್ಮ ಸಂಗಾತಿ ಅರ್ಥ ಮಾಡಿಕೊಳ್ಳದೇ ಇರಬಹುದು. ಶಾಶ್ವತವಾಗಿ ದೂರಾಗಲು ಹೀಗೆ ಪೀಠಿಕೆ ಹಾಕುತ್ತಿರಬಹುದು ಎಂದು ಅವರು ಭಾವಿಸಬಹುದು. ಆ ಭಾವನೆ ಅವರಲ್ಲಿ ಬಾರದಂತೆ ನೋಡಿಕೊಳ್ಳಿ. ನಮ್ಮ ಪ್ರೀತಿ ಶಾಶ್ವತ ಹಾಗೂ ಎಂದಿಗೂ ಜೊತೆಯಾಗಿಯೇ ಇರುತ್ತೇವೆ, ಆದರೆ ಸದ್ಯಕ್ಕೆ ಒಂದಷ್ಟು ದಿನದ ಮಟ್ಟಿಗೆ ನಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ಹರಿಸೋಣ ಎಂದು ತಿಳಿಸಿ ಹೇಳಿ.

ಚರ್ಚೆ ವಿವಾದಕ್ಕೆ ಎಡೆಯಾಗದಿರಲಿ
ಇಂತಹ ಮಾತುಗಳನ್ನು ಹೇಳಿದ ಮೇಲೆ ಶಾಂತ ಮನಸ್ಥಿತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ವಿಷಯ ಕೇಳಿದ ಮೇಲೆ ನಿಮ್ಮ ಸಂಗಾತಿ ನಿಮ್ಮ ಮೇಲೆ ರೇಗಬಹುದು, ಕಿರುಚಾಡಬಹುದು. ಆದರೆ ನೀವು ನಿಮ್ಮ ನಿರ್ಧಾರದಲ್ಲೇ ಇರಿ. ಯಾವುದೇ ಸಂಬಂಧವಾಗಲಿ ಮುಂದುವರಿಯಬೇಕು ಎಂದರೆ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಹಾಗೂ ಸಂಬಂಧದಲ್ಲಿ ಪಾರದರ್ಶಕತೆ ಇರಬೇಕು. ಇಬ್ಬರೂ ಸೇರಿ ಪ್ರೌಢತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಆದರೆ ಒಂದು ವಿಷಯ ನೆನಪಿರಲಿ. ನಿಮ್ಮ ಅಗತ್ಯಗಳನ್ನು ನೀವು ನೋಡಿಕೊಳ್ಳುವ ಜೊತೆಗೆ ಸಂಗಾತಿಯ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.

ಆಗಾಗ ಭೇಟಿ ಮಾಡುತ್ತಿರಿ
ನೀವು ಖುಷಿಯಿಂದ ಇರುವುದು ಹಾಗೂ ಶೇ 100ರಷ್ಟು ಸಂಬಂಧಕ್ಕೆ ಬದ್ಧರಾಗಿರುವುದಕ್ಕಿಂತ ಬೇರೆ ಸಂತೋಷವನ್ನು ನಿಮ್ಮ ಸಂಗಾತಿ ಬಯಸುವುದಿಲ್ಲ. ನೀವು ಅವರಿಂದ ಸಮಯ ಕೇಳಿದ ಮೇಲೂ ಆಗಾಗ ಭೇಟಿಯಾಗಿ. ಕ್ಯಾಂಡಲ್ ಲೈಟ್ ಡಿನ್ನರ್‌, ಮೂವಿ ನೈಟ್ ಆಯೋಜಿಸಿ. ಈ ಮೂಲಕ ಸಂಗಾತಿಗೆ ನೀವು ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಸಿ. ಅಲ್ಲದೇ ಈ ವಿಧಾನದ ಮೂಲಕ ನೀವು ಸದಾ ನಿಮ್ಮ ಸಂಬಂಧದೊಂದಿಗೆ ಮುಂದುವರಿಯಲು ಸಿದ್ಧರಿದ್ದೀರಿ ಎಂಬುದನ್ನು ಅರ್ಥ ಮಾಡಿಸಿ. ಈ ಬೆಳವಣಿಗೆ ಖಂಡಿತ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.