ADVERTISEMENT

Valentine day: ಜೀವ ಸಂಕುಲದ ಪ್ರೇಮ ಕಥನ

ಡಿ.ಜಿ.ಮಲ್ಲಿಕಾರ್ಜುನ
Published 14 ಫೆಬ್ರುವರಿ 2022, 3:45 IST
Last Updated 14 ಫೆಬ್ರುವರಿ 2022, 3:45 IST
ಸಲ್ಲಾಪದಲ್ಲಿ ತೊಡಗಿರುವ ಹಕ್ಕಿಗಳು
ಸಲ್ಲಾಪದಲ್ಲಿ ತೊಡಗಿರುವ ಹಕ್ಕಿಗಳು   

ಶಿಡ್ಲಘಟ್ಟ:ಫೆಬ್ರುವರಿ 14 ಬಂತೆಂದರೆ ಪ್ರೇಮಿಗಳ ಪಾಲಿನ ಅಚ್ಚುಮೆಚ್ಚಿನ ದಿನ. ಯುವ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹಂಚಿಕೊಂಡು ಸಡಗರದಿಂದ ಸಂಭ್ರಮಿಸುವ ದಿನ. ಯುವಕ-ಯುವತಿಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಾತೊರೆಯುತ್ತಾರೆ. ಪ್ರೇಮಿಗಳು ಪ್ರೀತಿಯ ಸಂಕೇತ ಗುಲಾಬಿ ಹೂ, ಚಾಕೋಲೇಟ್ ನೀಡಿ ಪರಸ್ಪರ ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಪ್ರೇಮಿಗಳ ದಿನದ ಸಂದರ್ಭದಲ್ಲಿ ಮನುಷ್ಯರೂ ಒಂದಾಗಿರುವ ಈ ಪರಿಸರ ವ್ಯವಸ್ಥೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಜೀವ ಸಂಕುಲದ ಪ್ರೇಮ ಜೀವನವನ್ನು ಕೊಂಚ ಗಮನಿಸೋಣವೇ ...

ಮಾನವರಂತೆ ಈ ಜೀವಿಗಳಿಗೆ ಪ್ರೀತಿ - ಪ್ರೇಮ - ಪ್ರಣಯ ಎಂಬ ಒಂದೊಂದು ಪದಕ್ಕೊಂದು ಅರ್ಥ, ವ್ಯಾಖ್ಯಾನ ಇಲ್ಲವಾದರೂ ಈ ಪದಗಳೆಲ್ಲ ಸೇರಿಕೊಂಡು ಅವುಗಳ ಪಾಲಿನ ಒಟ್ಟಾರೆ ಅರ್ಥ ಸಂತತಿಯ ಮುಂದುವರಿಕೆಯಷ್ಟೆ ಆಗಿದೆ. ಆದರೂ ಅಲ್ಲಿ ದಾಂಪತ್ಯಕ್ಕೆ ಮುನ್ನ ಅಸಂಖ್ಯ ಚಮತ್ಕಾರಗಳಿವೆ. ಗಂಡುಗುಬ್ಬಿಗೆ ಜೀವನವಿಡೀ ಒಂದೇ ಸಂಗಾತಿ. ಗೀಜಗ ಹೆಣ್ಣಿನ ನಿರಂತರ ವರಪರೀಕ್ಷೆ. ತನ್ನೊಂದಿಗೆ ಮಿಲನಗೊಂಡ ಸಂಗಾತಿಯನ್ನೇ ನುಂಗುವ ಹೆಣ್ಣು ಜೇಡ.... ಇವೆಲ್ಲವೂ ಸಂತಾನ ಮುಂದುವರಿಕೆಯ ವಿಸ್ಮಯ ಸಂಗತಿಗಳು.

ADVERTISEMENT

ಅಸಂಖ್ಯಾತ ಬಣ್ಣ, ಆಕಾರಗಳನ್ನು ಹೊಂದಿದ್ದು, ಬೆರಗು ಹುಟ್ಟಿಸುವ ವರ್ತನೆಗಳಿರುವ ಜೀವ ಕೋಟಿಗಳ ಸಾಮಾಜಿಕ ನಡವಳಿಕೆಗಳಲ್ಲಿ ಮುಖ್ಯವಾದದ್ದು ಬದುಕುವುದು ಮತ್ತು ಸಂತಾನಾಭಿವೃದ್ಧಿ. ತಮ್ಮ ಶಕ್ತಿಯ ಬಜೆಟ್ ಮಿತಿಯಾಗಿರುವುದರಿಂದ ಅದನ್ನು ಆದಷ್ಟೂ ಬೆಳವಣಿಗೆ ಮತ್ತು ಸಂತಾನ ಕ್ರಿಯೆಗೆ ಸದುಪಯೋಗ ಮಾಡಬೇಕು. ಇವುಗಳು ಆದಷ್ಟೂ ತಮ್ಮ ಆಹಾರ ಹೆಚ್ಚಾಗಿರುವಂತಹ ಕಾಲದಲ್ಲಿ ಮರಿಗಳು ಹೊರಬರುವಂತೆ ತಮ್ಮ ಸಂತಾನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ.

ವಿಕಾಸವಾದದ ಪ್ರಕಾರ ಉತ್ತಮ ಅನುವಂಶಿಕ ಗುಣಗಳು, ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯಲು ಹೆಣ್ಣಿಗೆ ತನಗುತ್ತಮನಾದ ಶಕ್ತ ಗಂಡನ್ನೇ ಆರಿಸುವ ಅವಶ್ಯಕತೆಯಿದ್ದರೆ, ಗಂಡಿಗೆ ಹೆಣ್ಣನ್ನು ಒಲಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಶೌರ್ಯ ಪ್ರದರ್ಶನವನ್ನೆಲ್ಲಾ ಮಾಡಬೇಕಾದ ಅನಿವಾರ್ಯತೆ ಇದೆ.

ನಾವು ನೋಡುವ ಬಣ್ಣ ಬಣ್ಣದ ಚಿಟ್ಟೆಗಳು ಹಿಂದೆ ಮೂರು ಬಾರಿ ವೇಷಗಳನ್ನು ಕಳಚಿ ಬಂದಿರುತ್ತವೆ. ಇವು ತಮ್ಮ ಊಟ, ನಿದ್ರೆಗಳ ಚಿಂತೆಗಳನ್ನೆಲ್ಲ ಹಿಂದಿನ ಅವತಾರಗಳಲ್ಲೇ ಮುಗಿಸಿ ಬಂದಿರುವುದರಿಂದ ಈಗಿನ ಅವತಾರವನ್ನು ಕೇವಲ ಪ್ರೇಮ ಜೀವನಕ್ಕಾಗಿ, ಪ್ರಿಯತಮೆಯ ಶೋಧಕ್ಕಾಗಿ ಮೀಸಲಿರಿಸುತ್ತವೆ.

“ನಮಗಿರುವಂತೆ ಇತರ ಜೀವ ಸಂಕುಲಕ್ಕೆ ತಂದೆಗೊಂದು ದಿನ, ತಾಯಿಗೊಂದು ದಿನ, ಅಜ್ಜನಿಗೊಂದು ದಿನ, ಗುರುವಿಗೊಂದು ದಿನ, ಗೆಳೆತನಕ್ಕೊಂದು ದಿನ, ಭ್ರಾತೃತ್ವಕ್ಕೊಂದು ದಿನ... ಹೀಗೆ ಇಲ್ಲ. ಆದರೂ ಪ್ರೇಮಿಗಳ ದಿನದ ಹೊಸಿಲ ಮೇಲೆ ನಿಂತು ಇತರ ಜೀವಿಗಳ ಪ್ರೇಮ ಜೀವನದ ಮೂಲಕ ಪರಿಸರದ ಮೂಲ ಪಾಠಗಳನ್ನು ಅರಿಯಬೇಕಿದೆ.

ಪ್ರತಿಯೊಂದು ವರ್ಗದ ಜೀವಿಗಳ ನಡುವೆಯೂ ಹಾಗೂ ಭೂಮಿಯ ಸಮಸ್ತ ವರ್ಗಗಳ ನಡುವೆಯೂ ಏಕಕಾಲದಲ್ಲಿ ಒಂದು ಸೂಕ್ಷ್ಮವಾದ ಪರಸ್ಪರ ಒಡನಾಟವು ನಡೆಯುತ್ತಿರುತ್ತದೆ. ಈ ಸಂಕೀರ್ಣ ಸಂಬಂಧವು ಒಂದು ಸಮತೋಲನವನ್ನು ಕಾಯ್ದುಕೊಂಡಿರುತ್ತದೆ. ಮಾನವ ತಾನು ಮಾತ್ರ ಇವುಗಳಿಂದ ಬೇರೆಯೇ ಎನ್ನುವಂತೆ ಊಹಿಸಿ ಈ ಸಮತೋಲನದ ಏರುಪೇರು ಮಾಡಲು ಹೊರಡುವುದು ತಪ್ಪಾಗುತ್ತದೆ” ಎಂದು ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.