ADVERTISEMENT

Valentine Day | ಮನಸುಗಳ ಸವಿಮಿಲನ ಮಧುರ ಬಂಧನ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2020, 13:44 IST
Last Updated 13 ಫೆಬ್ರುವರಿ 2020, 13:44 IST
ಮಾವನ ಮಗಳ ಹತ್ತಿರ ಸುಳಿಯಲು ಸುಳ್ಳು ಹೇಳಿಸಿದ ಪ್ರೇಮಿ
ಮಾವನ ಮಗಳ ಹತ್ತಿರ ಸುಳಿಯಲು ಸುಳ್ಳು ಹೇಳಿಸಿದ ಪ್ರೇಮಿ   

‘ನಿನಗೆ ಒಂದು ಮಾತು ಹೇಳಬೇಕಿತ್ತು’ ಎಂದು ಅವರು ಹೇಳುವಾಗ,ಹಣೆಯಲ್ಲಿ ಬೆವರಿನ ಸಾಲು ಟಿಸಿಲೊಡೆದಿತ್ತು. ‘ನಾನು ನಿನಗೆ ಇಷ್ಟಾನಾ’ ಎಂದು ಅವರು ಕೇಳಿದಾಗ ತಗ್ಗಿಸಿದ ತಲೆ ಎತ್ತಿ ನೋಡಿದೆ.ಅವರ ನೇರ ನೋಟ ಎದುರಿಸಲಾಗದೆ ‘ಹೂಂ’ ಎನ್ನುತ್ತಾ ತಲೆ ಬಗ್ಗಿಸಿದೆ.ತಟ್ಟನೆ ನನ್ನ ಕೈ ಹಿಡಿದು ‘ಇಂದಿಗೆ ನನ್ನ ಜನ್ಮ ಸಾರ್ಥಕವಾಯ್ತು, ನಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿತು’ ಎಂದು ಹೇಳುವಾಗ ಅವರ ಕಣ್ಣುಗಳಲ್ಲಿ ಹುದುಗಿದ್ದ ಪ್ರೀತಿಯನ್ನು ಕಂಡು ಅವಾಕ್ಕಾಗಿದ್ದೆ.ಅದರಲ್ಲಿ ಶ್ರಮ ಏನು ಅಂತ ಗೊತ್ತಾಗಲಿಲ್ಲ’ ಎಂದು ನಾನು ಅಚ್ಚರಿಯಿಂದ ಕೇಳಿದಾಗ ನಸುನಗುತ್ತ ಹೇಳತೊಡಗಿದರು.

ಹೌದು ನನ್ನ ಜೀವನದಲ್ಲಿ ಮೊದಲ ಪ್ರೀತಿ,ಅನುರಾಗ ಹುಟ್ಟಿದ್ದು ನಿನ್ನ ಮೇಲೆ ಮಾತ್ರ. ತಿಳುವಳಿಕೆ ಬಂದಾಗಿನಿಂದಲೂ ನಿನ್ನನ್ನೇ ಆರಾಧಿಸುತ್ತಾ ಬಂದವನು ನಾನು. ನೀನು ಹುಟ್ಟಿದಾಗಿನಿಂದಲೂ, ನನ್ನ ಹೆಂಡತಿ ಅಂತಾ ಅಮ್ಮ, ಚಿಕ್ಕಮ್ಮಂದಿರೆಲ್ಲ ಹೆಸರಿಟ್ಟುಬಿಟ್ಟಿದ್ದರು. ನೋಡೋ ನಿನ್ನ ಬಿಳಿಹೆಂಡ್ತಿ ಅಂತಾ ತಮಾಷೆ ಮಾಡುತ್ತಿದ್ದರು. ಅದು ನನ್ನ ಮನಸ್ಸಿನಲ್ಲಿ ದೃಢವಾಗಿ ಬೇರೂರಿತ್ತು. ನೀನು ನಮ್ಮೂರಿನ ಜಾತ್ರೆಗೆ ಬಂದಾಗಲೆಲ್ಲಾ ನನಗೆಷ್ಟು ಖುಷಿಯಾಗುತ್ತಿತ್ತು ಗೊತ್ತಾ.ನೀನು ಹೈಸ್ಕೂಲಿಗೆ ಬರುವಷ್ಟರಲ್ಲಿ ನಾನು ಕಾಲೇಜು ಮೆಟ್ಟಿಲು ಹತ್ತಿದ್ದೆ. ಹಠ ಮಾಡಿ ನಿಮ್ಮೂರಿನಲ್ಲೇ ಕಾಲೇಜು ಸೇರಿದ್ದೆ.ಅರಳಿದ ನವ ಸುಮದಂತಿದ್ದ ನಿನ್ನನ್ನು ನೋಡಲು, ಅಮ್ಮ ಕೊಟ್ಟ ತಿಂಡಿ ಹಿಡಿದು ನಿಮ್ಮ ಮನೆಗೆ ಬರುತ್ತಿದ್ದೆ. ಆದರೆ ನೀನು ಹೊರಬರುತ್ತಲೇ ಇರಲಿಲ್ಲ.ತುಂಬಾ ನಿರಾಸೆಯಾಗುತ್ತಿತ್ತು.ಎಲ್ಲಿಯಾದರೂ ಸಮಾರಂಭಗಳಲ್ಲಿ ಅಲಂಕರಿಸಿಕೊಂಡಿರುತ್ತಿದ್ದ ನಿನ್ನನ್ನು ಕದ್ದು ಕದ್ದು ನೋಡುತ್ತಿದ್ದೆ.ನಿನಗೆ ಮಾತ್ರ ಇದ್ಯಾವುದರ ಪರಿವೆಯೂ ಇರುತ್ತಿರಲಿಲ್ಲ.

ನಿನ್ನ ಡಿಗ್ರಿ ಮುಗಿಯುವ ಹೊತ್ತಿಗೆ ನಾನು ಖಾಸಗಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಸೇರಿಕೊಂಡಿದ್ದೆ.ನಿನಗೆ ವರ ನೋಡುತ್ತಿದ್ದಾರೆ ಅಂತಾ ಗೊತ್ತಾದಾಗ ನನ್ನ ಹೃದಯವೇ ಬಾಯಿಗೆ ಬಂದಿತ್ತು.ಅನುಕೂಲಸ್ಥ ಮನೆತನದಲ್ಲಿ ಬೆಳೆದ ನಿನಗೆ, ಬಡವ ಹಾಗೂ ಕಡಿಮೆ ಸಂಬಳದ ಖಾಸಗಿ ಕೆಲಸವಿರುವ ನಾನು ಯಾವ ರೀತಿಯಿಂದಲೂ ಅರ್ಹನಲ್ಲ ಎಂದುಕೊಂಡು ನಿರಾಶನಾಗುತ್ತಿದ್ದೆ. ಅಮ್ಮ ಮಾತ್ರ ನಾನೆಲ್ಲಾ ಅಣ್ಣನ ಬಳಿ ಒಮ್ಮೆ ಕೇಳ್ತೀನಿ ಸುಮ್ಮನಿರು ಅಂತಾ ಸಮಾಧಾನ ಮಾಡುತ್ತಿದ್ದಳು.

ADVERTISEMENT

ಸರ್ಕಾರಿ ಕೆಲಸದಲ್ಲಿರುವ ಒಂದಿಬ್ಬರು ನಿನ್ನನ್ನು ಒಪ್ಪಿದ್ದಾರೆ ಅಂತಾ ಗೊತ್ತಾಗುತ್ತಿದ್ದಂತೆ ಅವರ ಜಾತಕ ಜಾಲಾಡಿ,ಫೋನ್ ನಂಬರ್ ಸಂಪಾದಿಸಿಬಿಡುತ್ತಿದ್ದೆ.ನನ್ನ ಚಿಕ್ಕಪ್ಪನ ಮಗ ಹಾಗೂ ಅವನ ಹೆಂಡತಿಗೆ ನನ್ನ ಪ್ರೀತಿಯ ಬಗ್ಗೆ ಗೊತ್ತಿದ್ದರಿಂದ ಸಹಾಯಕ್ಕಾಗಿ ನಿಂತರು. ಅವರಿಗೆ ಫೋನು ಮಾಡಿ ಆ ಹುಡುಗಿಯನ್ನು ಅವರ ಸೋದರತ್ತೆಯ ಮಗನಿಗೇ ಫಿಕ್ಸ್ ಮಾಡಿಬಿಟ್ಟಿದ್ದಾರೆ ಅಂತಾ ರೀಲು ಬಿಟ್ಟು, ಬರುವ ಸಂಬಂಧಗಳನ್ನು ತಪ್ಪಿಸುತ್ತಿದ್ದರು.ನಿಮ್ಮ ಅಪ್ಪನಿಗೆ,ನೋಡಿಕೊಂಡು ಹೋದವರೆಲ್ಲಾ ಯಾಕೆ ಏನೂ ಉತ್ತರ ಹೇಳಿಕಳುಹಿಸುತ್ತಿಲ್ಲ,ಇಷ್ಟು ಸುಂದರ ಹುಡುಗಿಯನ್ನು ಯಾಕೆ ಯಾರೂ ಒಪ್ಪುತ್ತಿಲ್ಲ ಎಂಬ ಯೋಚನೆಯಾಗಿತ್ತು.

ಆಗ ಅಮ್ಮ ಸೂಕ್ಷ್ಮವಾಗಿ ನಿಮ್ಮ ಅಪ್ಪನ ಬಳಿ ವಿಷಯ ಪ್ರಸ್ತಾಪಿಸಿದ್ದಳು.ಚೆನ್ನಾಗಿ ಓದಿಕೊಂಡಿದ್ದ ಹುಡುಗ, ಮುಂದೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಧೈರ್ಯವನ್ನು, ಮಾವ ನನ್ನಲ್ಲಿ ತುಂಬಿ ನಿನ್ನನ್ನು ನೋಡುವ ಶಾಸ್ತ್ರಕ್ಕೆ ಅನುಮತಿ ಕೊಟ್ಟರು.ನಿನಗೆ ಎಲ್ಲ ವಿಷಯ ಹೇಳಿದ್ದೇನೆ, ನಿನಗೆ ಸಂಪೂರ್ಣ ಒಪ್ಪಿಗೆ ಮಾತ್ರ ನನಗೆ ತೃಪ್ತಿ.

‘ಈಗ ಹೇಳು, ಬಡವನ ಅರಮನೆಗೆ ರಾಣಿಯಾಗಿ ಬರುವೆಯಾ, ಕಷ್ಟವೋ, ಸುಖವೋ ನಿನ್ನನ್ನು ನನ್ನ ಹೃದಯ ಸಿಂಹಾಸನದಲ್ಲಿಟ್ಟು ಪೂಜಿಸುತ್ತೇನೆ’ ಎಂದು ಅವರು ಕೈಮುಂದೆ ಮಾಡಿದಾಗ, ನನ್ನ ಕಣ್ಣಲ್ಲಿ ಆನಂದಭಾಷ್ಪ. ‘ಇಷ್ಟೊಂದು ಪ್ರೀತಿ ತುಂಬಿದ ಹೃದಯವಿರುವಾಗ, ಮತ್ಯಾವುದಕ್ಕೆ ಆಸೆ ಪಡಲಿ’ ಎಂದು ಅವರ ತೋಳುಗಳಲ್ಲಿ ಬಂಧಿಯಾಗಿದ್ದೆ.ಹೊರಗೆ ದುಗುಡದ ಮೊಗ ಹೊತ್ತು ನಿಂತಿದ್ದ ಅತ್ತೆ ಖುಷಿಯಿಂದ ಕಣ್ಣೀರು ಒರೆಸಿಕೊಂಡಿದ್ದು ಕಂಡುಬಂತು.ಈಗ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ಎರಡು ಮಕ್ಕಳಿರುವ ನಮ್ಮ ಸಂಸಾರ ಆನಂದ ಸಾಗರ.

-ನಳಿನಿ. ಟಿ. ಭೀಮಪ್ಪ,ಧಾರವಾಡ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.