ADVERTISEMENT

PV Web Exclusive: ಒನ್‌ಪ್ಲಸ್‌ ಹಿರಿಮೆ ಹೆಚ್ಚಿಸಿದ 8 ಪ್ರೊ

ವಿಶ್ವನಾಥ ಎಸ್.
Published 5 ಸೆಪ್ಟೆಂಬರ್ 2020, 3:42 IST
Last Updated 5 ಸೆಪ್ಟೆಂಬರ್ 2020, 3:42 IST
ಒನ್‌ಪ್ಲಸ್‌ 8 ಪ್ರೊ
ಒನ್‌ಪ್ಲಸ್‌ 8 ಪ್ರೊ   
""
""

ದುಬಾರಿ ಎನ್ನುವ ಕಾರಣಕ್ಕೆ ಐಫೋನ್‌ ಖರೀದಿಸಲು ಹಿಂದೇಟು ಹಾಕುತ್ತಿದ್ದವರಿಗೆ ಅದಕ್ಕಿಂತ ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬಳಸುವ ಅವಕಾಶ ಕಲ್ಪಿಸಿದ್ದು ಒನ್‌ಪ್ಲಸ್‌ ಕಂಪನಿ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಒನ್‌ಪ್ಲಸ್‌ ಮೊದಲ ಸ್ಥಾನದಲ್ಲಿದೆ ಎಂದು ಕೌಂಟರ್ ‌ಪಾಯಿಂಟ್‌ ರಿಸರ್ಚ್‌ ಸಂಸ್ಥೆ ಹೇಳಿದೆ. ಈ ಬೆಳವಣಿಗೆಗೆ ಕಾರಣವಾಗಿದ್ದು, ಕಂಪನಿ ಬಿಡುಗಡೆ ಮಾಡಿರುವ 5ಜಿ ಬೆಂಬಲ ಇರುವ ಒನ್‌ಪ್ಲಸ್‌ 8 ಸರಣಿ.

‘ಒನ್‌ಪ್ಲಸ್‌ 6ಟಿ’ಯಿಂದ ‘ಒನ್‌ಪ್ಲಸ್‌ 8 ಪ್ರೊ’ವರೆಗಿನ ಹ್ಯಾಂಡ್‌ಸೆಟ್‌ಗಳನ್ನು ಬಳಸಿದಾಗ, ಪ್ರತಿ ಹ್ಯಾಂಡ್‌ಸೆಟ್‌ನಲ್ಲಿಯೂ ವಿನ್ಯಾಸ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌, ಕ್ಯಾಮೆರಾ, ಬ್ಯಾಟರಿಯಲ್ಲಿ ಸುಧಾರಣೆಯಾಗುತ್ತಲೇ ಇರುವುದು ಗಮನಕ್ಕೆ ಬಂದಿದೆ. ಒನ್‌ಪ್ಲಸ್‌ 8ಪ್ರೊ ರಿವ್ಯು ಮಾಡಿದಾಗ, ಕಾರ್ಯಾಚರಣೆಯ ವೇಗ, ಬ್ಯಾಟರಿ ಸಾಮರ್ಥ್ಯ, ಹೊಸ ಕ್ಯಾಮೆರಾ ಸೆನ್ಸರ್‌ ಮತ್ತು ಗರಿಷ್ಠ ರಿಫ್ರೆಷ್‌ ರೇಟ್ ಡಿಸ್‌ಪ್ಲೇ ಹೊಸ ಅನುಭವ ನೀಡಿತು.

ವಿನ್ಯಾಸದಲ್ಲಿ ಇದರ ಪರದೆ ಮತ್ತು ಕ್ಯಾಮೆರಾ ಒನ್‌ಪ್ಲಸ್‌ 8ಗಿಂತ ಭಿನ್ನವಾಗಿದೆ. ಡಿಸ್‌ಪ್ಲೇ ವಿಷಯದಲ್ಲಿ ಒನ್‌ಪ್ಲಸ್‌ 8ನಲ್ಲಿ ಕರ್ವ್‌ ಆಗಿರುವ ಗ್ಲಾಸ್‌ ಬಳಸಿದ್ದರೆ ಇದರಲ್ಲಿ ನಾಲ್ಕೂ ಅಂಚುಗಳಲ್ಲಿ ರೌಂಡ್‌ ಆಗಿದೆ. ಇದರಿಂದಾಗಿ ಪರದೆಯ ಸಂಪೂರ್ಣ ಭಾಗ ಬಳಕೆಗೆ ಲಭ್ಯವಾಗಲಿದೆ. ಆದರೆ ಫೋನ್‌ ಹಿಡಿದುಕೊಂಡಿದ್ದಾಗ ಅರಿವಿಲ್ಲದೇ ಕೈಯ ಒಂದು ಭಾಗ ಪರದೆಗೆ ತಾಕಿದ್ದರೆ ಅದರಿಂದ ಕೆಲವೊಮ್ಮೆ ಬೇರೆ ಆಯ್ಕೆಗಳು ತೆರೆದುಕೊಳ್ಳುತ್ತವೆ. ಬ್ಯಾಕ್‌ ಕವರ್ ಹಾಕಿಕೊಂಡರೆ ಸಮಸ್ಯೆ ತುಸು ತಗ್ಗುತ್ತದೆ. 6.78 ಇಂಚಿನ ಪರದೆಯ ಮೇಲ್ತುದಿಯ ಎಡಭಾಗದಲ್ಲಿ ಹೋಲ್‌ ಪಂಚ್‌ ಕಟೌಟ್‌ನಲ್ಲಿ ಸೆಲ್ಫಿ ಅಳವಡಿಸಿದ್ದು, ಮೊಬೈಲ್‌ಗೆ ಹೊಸನೋಟ ನೀಡಿದೆ.

ADVERTISEMENT
‘ಒನ್‌ಪ್ಲಸ್‌ 8 ಪ್ರೊ’ ಮೊಬೈಲ್‌ನಲ್ಲಿ ಕಾರಿನಲ್ಲಿ ಚಲಿಸುತ್ತಿದ್ದಾಗ ತೆಗೆದಿರುವ ಚಿತ್ರ

ಗರಿಷ್ಠ ಗುಣಮಟ್ಟದ ವಿಡಿಯೊ ನೋಡುವಾಗ, ಗೇಮ್‌ ಆಡುವಾಗ ಇದರ ಕಾರ್ಯಾಚರಣೆಯ ವೇಗವನ್ನು ಅನುಭವಿಸಬಹುದು.

ಹಿಂಬದಿಯಲ್ಲಿ 48 ಎಂಪಿ ಆಲ್ಟ್ರಾ ವೈಡ್‌ ಆ್ಯಂಗಲ್‌, 48 ಎಂಪಿ ಮೇನ್‌, 5 ಎಂಪಿ ಕಲರ್‌ ಫಿಲ್ಟರ್‌ ಹಾಗೂ 8 ಎಂಪಿ ಹೈಬ್ರಿಡ್‌ ಜೂಮ್‌ ಹೀಗೆ ಒಟ್ಟಾರೆ ನಾಲ್ಕು ಕ್ಯಾಮೆರಾ ಇದೆ. ಹಿಂಬದಿಯ 48 ಎಂಪಿ ಸೋನಿ ಐಎಂಎಕ್ಸ್‌ 689 ಸೆನ್ಸರ್‌ ಇರುವ ಕ್ಯಾಮೆರಾದ ಗುಣಮಟ್ಟವು ಒನ್‌ಪ್ಲಸ್‌ 8ಗಿಂತಲೂ ಉತ್ತಮವಾಗಿದೆ. ಕಂಪನಿಯ ಈ ಹಿಂದಿನ ಸರಣಿಯ ಹ್ಯಾಂಡ್‌ಸೆಟ್‌ಗಳಲ್ಲಿ ಒಂದು ಚಿತ್ರವನ್ನು ತೆಗೆದ ಬಳಿಕ ಅದನ್ನು ಜೂಮ್‌ ಮಾಡಿದರೆ ಕ್ಲಾರಿಟಿ ಇರುತ್ತಿರಲಿಲ್ಲ. 3ಎಕ್ಸ್‌ ಹೈಬ್ರಿಡ್‌ ಜೂಮ್‌ ಮತ್ತು 30ಎಕ್ಸ್‌ ಡಿಜಿಟಲ್‌ ಜೂಮ್‌ ಆಯ್ಕೆಗಳು ಇರುವುದರಿಂದ ಆ ಸಮಸ್ಯೆ ಇಲ್ಲಿ ನಿವಾರಣೆ ಆಗಿದೆ. ಅತಿ ಹತ್ತಿರದ ಚಿತ್ರಗಳನ್ನು ತೆಗೆಯಲು ಆಟೊಫೋಕಸ್‌ ಆಯ್ಕೆಯಲ್ಲಿಯೂ ಸಾಕಷ್ಟು ಸುಧಾರಣೆ ಆಗಿದೆ. ಬೈಕ್‌, ಕಾರಿನಲ್ಲಿ ಹೋಗುತ್ತಿದ್ದಾಗ ತೆಗೆದ ಚಿತ್ರವೂ ಬಹಳ ಸ್ಪಷ್ಟವಾಗಿದೆ.

ಒಂದು ವಸ್ತುವಿನ ಹತ್ತಿರಕ್ಕೆ ಮೊಬೈಲ್‌ ಅನ್ನು ತಂದಾಗ ಸ್ವಯಂಚಾಲಿತವಾಗಿ ವೈಡ್‌ ಆ್ಯಂಗಲ್‌ ಕ್ಯಾಮೆರಾ ಆಯ್ಕೆಗೆ ಬಂದು ಸೂಪರ್‌ ಮ್ಯಾಕ್ರೊ ಮೋಡ್‌ ಅನ್ನು ಸಕ್ರಿಯಗೊಳಿಸುತ್ತದೆ. ಮ್ಯಾನುಯಲ್ ಆಗಿ ಮ್ಯಾಕ್ರೊ ಮೋಡ್‌ ಸಕ್ರಿಯಗೊಳಿಸುವ ಕೆಲಸ ಇದರಿಂದಾಗಿ ತಪ್ಪಿದೆ.

ಸೆಲ್ಫಿ ತೆಗೆಯುವಾಗ ಟಚ್‌ ಸ್ಕ್ರೀನ್‌ ಬದಲಾಗಿ ಬಟನ್‌ ಬಳಸುವುದಾದರೆ ಕಷ್ಟಪಡಬೇಕಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಸೆಲ್ಫಿ ತೆಗೆಯಲು ಹೆಬ್ಬೆರಳು ಬಳಸುತ್ತೇವೆ. ಆದರೆ, ಇದರಲ್ಲಿ ವಾಲ್ಯುಂ ಬಟನ್‌ ಎಡಭಾಗದಲ್ಲಿ ನೀಡಿರುವುದರಿಂದ ಕ್ಲಿಕ್‌ ಮಾಡುವುದು ಕಷ್ಟವಾಗುತ್ತದೆ. ಸೆಲ್ಫಿ ಚಿತ್ರದ ಗುಣಮಟ್ಟ ಉತ್ತಮವಾಗಿಯೇ ಇದೆ. ಆದರೆ, ಈ ಹಿಂದಿನ ಸರಣಿಗಳಲ್ಲಿ, ಸೆಲ್ಫಿ ಕ್ಲಿಕ್ಕಿಸಿದಾಗ ಸಹಜ ಮೈಬಣ್ಣದಲ್ಲಿ ಚಿತ್ರವು ಮೂಡಿಬರುತ್ತಿತ್ತು. ಆದರೆ, 8 ಪ್ರೊದಲ್ಲಿ ಸ್ವಲ್ಪ ಬ್ಯೂಟಿಫೈ ಆಗುತ್ತದೆ. ಅಂದರೆ ನಾವು ಸ್ಟುಡಿಯೋದಲ್ಲಿ ತೆಳುವಾಗಿ ಪೌಡರ್‌ ಹಚ್ಚಿಕೊಂಡು ಫೋಟೊ ತೆಗೆಸಿದರೆ ಹೇಗೆ ಬರುತ್ತದೆಯೋ ಹಾಗೆ. ತುಟಿಗೆ ಹಚ್ಚಿಯೂ ಹಚ್ಚದಷ್ಟು ತೆಳುವಾಗಿ ಲಿಪ್‌ಸ್ಟಿಕ್‌ ಇರುವಂತೆ ಕಾಣುತ್ತದೆ. ಆದರೆ ಇವೆರಡೂ ಈಗಿನ ಬೇರೆ ಫೋನ್‌ಗಳ ಸೆಲ್ಫಿಯಲ್ಲಿ ಬರುವಷ್ಟು ಬ್ಯೂಟಿಫೈ ಆಗಿರುವುದಿಲ್ಲ ಎನ್ನುವುದು ಸಮಾಧಾನದ ಸಂಗತಿ. ತುಸು ಮಂದ ಬೆಳಕಿನಲ್ಲಿ ತೆಗೆದರೆ ಚಿತ್ರದ ಸೂಕ್ಷ್ಮ ಅಂಶಗಳು ಸ್ಪಷ್ಟವಾಗಿ ಕಾಣುವುದಿಲ್ಲ.

‘ಒನ್‌ಪ್ಲಸ್‌ 8 ಪ್ರೊ’ ಮೊಬೈಲ್‌ನಲ್ಲಿಕಬ್ಬನ್‌ ಪಾರ್ಕ್‌ ಮೆಟ್ರೊ ಬಳಿಯ ಚಿತ್ರ ತೆಗೆದಿರುವುದು

4,510 ಎಂಎಎಚ್‌ ಬ್ಯಾಟರಿ ಇದ್ದು, 30 ನಿಮಿಷದಲ್ಲಿ ಶೇ 50ರಷ್ಟು ಚಾರ್ಜ್‌ ಆಗುತ್ತದೆ. ಪೂರ್ತಿ ಚಾರ್ಜ್‌ ಆಗಲು 1 ಗಂಟೆ ‌20 ನಿಮಿಷ ಬೇಕು. ಒನ್‌ಪ್ಲಸ್‌ನಲ್ಲಿ ಇದೇ ಮೊದಲಿಗೆ ವೇಗದ ಚಾರ್ಜಿಂಗ್‌ಗೆ ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ರಿವ್ಯೂಗೆ ಕೊಟ್ಟ ಫೋನಿನ ಜತೆ ಅದನ್ನು ಕಂಪನಿ ನೀಡಿಲ್ಲ. ಹಾಗಾಗಿ ಅದನ್ನು ಬಳಸಲು ಆಗಿಲ್ಲ. ಬ್ಯಾಟರಿ ಬಾಳಿಕೆ ಕಾಯ್ದುಕೊಳ್ಳುವ ಬಗ್ಗೆ ಕಂಪನಿ ಗಮನ ಹರಿಸಿದ್ದು, ಒನ್‌ಪ್ಲಸ್‌ 8 ಗಿಂತಲೂ ಉತ್ತಮವಾಗಿದೆ. ಗೇಮ್‌ ಆಡುವುದು, ವಿಡಿಯೊ ನೋಡುವುದು, ಬ್ರೌಸಿಂಗ್‌ ಮಾಡಿದರೂ ಒಂದೂವರೆ ದಿನ ಬಳಸುವುದಕ್ಕಂತೂ ಯಾವುದೇ ಸಮಸ್ಯೆ ಆಗುವುದಿಲ್ಲ. 5ಜಿ ಮತ್ತು 5ಜಿ ಅಲ್ಲದ ನೆಟ್‌ವರ್ಕ್‌ನೊಂದಿಗೆ ಸ್ವಯಂ ಚಾಲಿತವಾಗಿ ಹೊಂದಿಕೊಳ್ಳುತ್ತದೆ. ಈ ಮೂಲಕ ಬ್ಯಾಟರಿ ಬಾಳಿಕೆಯನ್ನು ದೀರ್ಘಗೊಳಿಸುತ್ತದೆ.

ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿರುವಾಗ, ನಮ್ಮ ಕಿವಿಗಷ್ಟೇ ಕೇಳಬೇಕಾದ ಅವರ ಮಾತು ನಮ್ಮಿಂದ ಮೂರ್ನಾಲ್ಕು ಅಡಿ ದೂರದಲ್ಲಿ ಇರುವವರಿಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಇದನ್ನು ಬಗೆಹರಿಸಲು ಕಂಪನಿ ಗಮನ ಹರಿಸಬೇಕಿದೆ.

ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಒನ್‌ಪ್ಲಸ್‌ 8 ಪ್ರೊ ‘ಐಪಿ68’ ರೇಟಿಂಗ್‌ ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಿಂದಾಗಿ ದೂಳು, ಮತ್ತು ನೀರಿನಿಂದ ಫೋನ್‌ಗೆ ರಕ್ಷಣೆ ಸಿಗಲಿದೆ. 1.5 ಮೀ ಆಳದ ನೀರಿನಲ್ಲಿ 30 ನಿಮಿಷಗಳ ತನಕ ಇದ್ದರೂ ಸುರಕ್ಷಿತವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ. ಈ ರೀತಿಯಾಗಿ ಪರೀಕ್ಷೆಗೆ ಒಳಪಡಿಸದೇ ಇದ್ದರೂ, ಜಿಮುರು ಮಳೆಯಲ್ಲಿ ಫೋನ್‌ ಬಳಸಿದಾಗ, ಯಾವುದೇ ರೀತಿಯ ಸಮಸ್ಯೆ ಆಗಿಲ್ಲ.

ವೈಶಿಷ್ಟ್ಯ

* ಪರದೆ: 6.78 ಎಂಚು ಕ್ಯುಎಚ್‌ಡಿ ಪ್ಲಸ್. 120 ಹರ್ಟ್ಸ್‌ ರಿಫ್ರೆಷ್‌ ರೇಟ್‌
* ಒಎಸ್‌; ಆಂಡ್ರ್ಯಾಂಡ್‌ 10 ಆಧಾರಿತ ಆಕ್ಸಿಜನ್‌ ಒಎಸ್‌
* ಪ್ರೊಸೆಸರ್; ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 865
* ಕ್ಯಾಮೆರಾ; 48 ಎಂಪಿ ಕ್ವಾಡ್‌ ಕ್ಯಾಮೆರಾ
* ಸೆಲ್ಫಿ ಕ್ಯಾಮೆರಾ; 16ಎಂಪಿ
* ಬ್ಯಾಟರಿ; 4510 ಎಂಎಎಚ್‌ ಬ್ಯಾಟರಿ. 30ಟಿ ವಾರ್ಪ್‌ ಚಾರ್ಜಿಂಗ್‌
* ಫೇಸ್‌ ಅನ್‌ಲಾಕ್‌, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸರ್
* ಬೆಲೆ: 8ಜಿಬಿ ರ್‍ಯಾಮ್‌+ 128 ಜಿಬಿ ಸ್ಟೊರೇಜ್‌; ₹54,999. 12 ಜಿಬಿ ರ್‍ಯಾಮ್‌+ 256 ಜಿಬಿ ಸ್ಟೊರೇಜ್‌; ₹59,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.