ADVERTISEMENT

ಮರದಿಂದ ಜಲಶುದ್ಧ!

ಅಮೃತೇಶ್ವರಿ ಬಿ.
Published 28 ಮಾರ್ಚ್ 2023, 19:30 IST
Last Updated 28 ಮಾರ್ಚ್ 2023, 19:30 IST
1
1   

ನೀರಿನಲ್ಲಿನ ಕಲ್ಮಶಗಳಲ್ಲದೆ ಬಣ್ಣವನ್ನೂ ಬೇರ್ಪಡಿಸುವ ಸುಲಭ ತಂತ್ರವೊಂದನ್ನು ವಿಜ್ಞಾನಿಯೊಬ್ಬರು ಕಂಡುಹಿಡಿದಿದ್ದಾರೆ.

****

ನೀರಿನ ಎಲ್ಲ ಮೂಲಗಳು ಕಲುಷಿತಗೊಂಡು, ಇಡೀ ಜೀವಸಂಕುಲಕ್ಕೆ, ಅದರಲ್ಲೂ ಜಲಚರಜೀವಿಗಳಿಗೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ನಾವು ಆಗಿಂದಾಗ್ಗೆ ಕೇಳುತ್ತಲೇ ಇರುತ್ತೇವೆ. ಈ ಸಮಸ್ಯೆಯನ್ನು ಬಗೆಹರಿಸುವತ್ತ ನಡೆಯುತ್ತಿರುವ ಸಾಕಷ್ಟು ಸಂಶೋಧನೆಗಳ ಬಗ್ಗೆಯೂ ಓದಿದ್ದೇವೆ. ಕೊಳಚೆ ನೀರನ್ನು ಶುದ್ದೀಕರಿಸಿ ಮರುಬಳಸುವ ಅಥವಾ ಮಾಲಿನ್ಯಕಾರಕಗಳನ್ನು ಬೇರ್ಪಡಿಸಿ ಪರಿಸರಕ್ಕೆ ಬಿಡುವಂತಹ ಉಪಾಯ ಹೊಸತೇನಲ್ಲ. ಜೈವಿಕ, ರಾಸಾಯನಿಕ ಅಥವಾ ತಾಂತ್ರಿಕ ವಿಧಾನಗಳನ್ನು ಬಳಸಿ ಕೊಳಚೆ ನೀರಿನಲ್ಲಿನ ಮಲಿನವನ್ನು ವಿಘಟಿಸುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಆದರೆ ನೀರಿನಲ್ಲಿನ ಕಲ್ಮಶಗಳಲ್ಲದೆ ಬಣ್ಣವನ್ನೂ ಬೇರ್ಪಡಿಸುವ ಸುಲಭ ತಂತ್ರವೊಂದನ್ನು ಸ್ವೀಡನ್ನಿನ ಶಾಮರ್ಸ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ವಿಜ್ಞಾನಿ ಗನ್ನರ್‌ ವೆಸ್ಮನ್ ಕಂಡುಹಿಡಿದಿದ್ದಾರೆ. ಅದುವೇ ಗಿಡಮರಗಳ ಎಲೆ ಕಾಂಡಗಳಲ್ಲಿರುವ ‘ಸೆಲ್ಯುಲೋಸ್‌’ ಎನ್ನುವ ನಾರಿನಂತಿರುವ ಕಾರ್ಬೋಹೈಡ್ರೇಟಿನ ಪುಡಿರೂಪದ ಶೋಧಕ.

ADVERTISEMENT

ವಿಶ್ವದ ಸುಮಾರು 200 ಕೋಟಿ ಜನರಿಗೆ ಶುದ್ಧವಾದ ನೀರಿನ ಸೌಲಭ್ಯವೇ ಇಲ್ಲ. ಏಷ್ಯಾ ಹಾಗೂ ಆಫ್ರಿಕಾದಂತಹ ಖಂಡಗಳ ದೇಶಗಳಲ್ಲಿ ಬಟ್ಟೆ ಉದ್ಯಮ ಹೆಚ್ಚು. ಇಲ್ಲಿ ಆದಾಯವೂ ಕಡಿಮೆ, ತಂತ್ರಜ್ಞಾನಗಳೂ ಹಳೆಯವು ಮತ್ತು ಪರಿಸರ ರಕ್ಷಣೆಗಾಗಿ ಕಾನೂನುಗಳೂ ಭದ್ರವಾಗಿಲ್ಲ. ಹಾಗಾಗಿ ಕೈಗಾರಿಕೆಗಳ ತ್ಯಾಜ್ಯಗಳನ್ನು ಮನಸೋ ಇಚ್ಛೆ ನೀರಿಗೆ ಹರಿಯಬಿಡುತ್ತಾರೆ. ಒಂದು ಕೆಜಿಯಷ್ಟು ಹೊಸ ಬಟ್ಟೆಯನ್ನು ತಯಾರಿಸುವ ಕ್ರಿಯೆಯಲ್ಲಿ ಸುಮಾರು 7000ದಿಂದ 29000 ಲೀಟರು ನೀರು ಮತ್ತು ಸುಮಾರು 1.5ರಿಂದ 6.9 ಕೆ.ಜಿಯಷ್ಟು ರಾಸಾಯನಿಕಗಳು ವೆಚ್ಚವಾಗುತ್ತದೆಯಂತೆ. ಒಂದು ಕೆಜಿ ಬಟ್ಟೆಯ ಉತ್ಪಾದನೆಯಲ್ಲಿ ಇಷ್ಟೆಲ್ಲಾ ತ್ಯಾಜ್ಯ ಹೊರಬರುವುದಾರೆ, ಬಟ್ಟೆ ಉದ್ಯಮದ ಒಟ್ಟು ತ್ಯಾಜ್ಯ ಎಷ್ಟು ದೊಡ್ಡ ಪ್ರಮಾಣದಲ್ಲಿರಬಹುದು? ಬಟ್ಟೆ ಉದ್ಯಮದ ಕಲುಷಿತ ನೀರಿನಲ್ಲಿ ಮತ್ತೊಂದು ಸಮಸ್ಯೆಯೆಂದರೆ ತ್ಯಾಜ್ಯದಲ್ಲಿರುವ ಬಣ್ಣಕಾರಕಗಳು. ಬಣ್ಣಗಳಲ್ಲಿರುವ ಪಾದರಸ, ಸೀಸದಂತಹ ಭಾರಲೋಹಗಳು ಮಣ್ಣು, ನೀರನ್ನು ಕಲುಷಿತಗೊಳಿಸುತ್ತವೆ. ಕೊನೆಗೆ ಅಂತರ್ಜಲದ ನೀರನ್ನೂ ವಿಷವಾಗಿಸುತ್ತವೆ. ಕಾರ್ಖಾನೆಗಳಿಂದ ಹೊರಬರುವ ಮಲಿನಗೊಂಡ ನೀರಿನಲ್ಲಿರುವ ಘನತ್ಯಾಜ್ಯಗಳನ್ನು ಹೇಗೋ ಬೇರ್ಪಡಿಸಬಹುದು. ಆದರೆ ರಾಸಾಯನಿಕಗಳು ಮತ್ತು ಬಣ್ಣಕಾರಕಗಳನ್ನು ಬೇರ್ಪಡಿಸುವುದು ಹೆಚ್ಚಿನ ಶ್ರಮವನ್ನೇ ಬೇಡುತ್ತವೆ. ಗನ್ನರ್‌ ವೆಸ್ಮನ್‌ ಮತ್ತು ತಂಡದವರು ಈ ಬಣ್ಣವನ್ನು ತೆಗೆಯಲೆಂದು ಗಿಡಮರಗಳ ಸೆಲ್ಯುಲೋಸ್‌ ನಾರನ್ನು ಬಳಸಿರುವುದು ವಿಶೇಷ.

ಇದುವರೆಗೂ ಸೆಲ್ಯುಲೋಸನ್ನು ಕಾಗದ, ಪೇಪರುಬೋರ್ಡು, ಜೈವಿಕ ಇಂಧನವಾದ ಎಥನಾಲ್‌ – ಇವುಗಳ ಉತ್ಪಾದನೆಯಲ್ಲಿ ಬಳಸಿಕೊಳ್ಳುತ್ತಿದ್ದರು. ವೆಸ್ಮನ್‌ ಅವರು ಸೆಲ್ಯುಲೋಸ್‌ ನಾರಿನ ಹೊಸ ಉಪಯೋಗವನ್ನು ಪತ್ತೆ ಮಾಡಿದ್ದಾರೆ. ಇವರು ಸೆಲ್ಯುಲೋಸಿನ ನ್ಯಾನೋಕಣಗಳನ್ನು ತಯಾರಿಸಿ, ಅದರ ಹೀರಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಿದ್ದಾರೆ. ಅದನ್ನು ಮತ್ತಷ್ಟು ಸಂಸ್ಕರಿಸಿ ನೀರನ್ನು ಶುದ್ಧೀಕರಿಸುವ, ಬಣ್ಣಕಾರಕಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಗುಣವುಳ್ಳ ಅದ್ಭುತ ಪುಡಿಯನ್ನು ತಯಾರಿಸಿದ್ದಾರೆ. ಕಲುಷಿತ ನೀರನ್ನು ಹೊರಹಾಕುವ ಕೊಳವೆಗೆ ಸೋಸುವ ಸೆಲ್ಯುಲೋಸ್‌ ನಾರಿನ ಪುಡಿಯನ್ನು ತುಂಬಿರುವ ಒಂದು ಪೆಟ್ಟಿಗೆಯನ್ನು ಜೋಡಿಸಿಬಿಟ್ಟರೆ ಸಾಕು. ನೀರು ಈ ಸೋಸುಪದರದ ಮೂಲಕ ಹಾದುಹೋಗುತ್ತಿದ್ದಂತೆ ನೀರಿನಲ್ಲಿ ಬಣ್ಣ ಹಾಗೂ ಬಣ್ಣಕಾರಕಗಳನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಸೂರ್ಯನ ಬಿಸಿಲು ಕೂಡ ಅದರ ಮೇಲೆ ಬೀಳುತ್ತಿದ್ದಂತೆ ಈ ಮಾಲಿನ್ಯಕಾರಕಗಳು ಸುಲಭವಾಗಿ ವಿಘಟನೆಯಾಗಿಬಿಡುತ್ತವೆ. ಈ ವಿಧಾನದಲ್ಲಿ ಶಾಖ ಅಥವಾ ಇತರೆ ಶಕ್ತಿಯನ್ನು ಬಳಸುವ ಅವಶ್ಯಕತೆಯಿಲ್ಲ. ಸೂರ್ಯನ ಬಿಸಿಲೇ ಅತ್ಯಂತ ದಕ್ಷವಾಗಿ ನೀರನ್ನು ಸೋಸಿಬಿಡುತ್ತದೆ ಎನ್ನುತ್ತಾರೆ, ವೆಸ್ಮನ್.

ಒಂದಿಷ್ಟು ಅಕ್ಕಿಕಾಳಿರುವ ನೀರಿನ ಲೋಟದಲ್ಲಿ ಹಣ್ಣಿನ ರಸವನ್ನು ಸೇರಿಸಿದರೆ, ಅಕ್ಕಿಕಾಳು ಅದರ ಬಣ್ಣವನ್ನು ಹೀರಿಕೊಳ್ಳುವಂತೆ, ಈ ಸೆಲ್ಯುಲೋಸ್‌ ಕೂಡ ಬಟ್ಟೆಯ ಉದ್ಯಮದಲ್ಲಿ ಬಳಸುವ ತ್ಯಾಜ್ಯಬಣ್ಣಗಳನ್ನು ಹೀರಿಕೊಳ್ಳುತ್ತದೆಯಂತೆ. ಅಕ್ಕಿಯಲ್ಲಿರುವುದೂ ಪಿಷ್ಟ ಎನ್ನುವ ಕಾರ್ಬೋಹೈಡ್ರೇಟ್‌. ಸೆಲ್ಯುಲೋಸ್‌ ಕೂಡ ಮತ್ತೊಂದು ಬಗೆಯ ಸಂಕೀರ್ಣ ಕಾರ್ಬೋಹೈಡ್ರೇಟ್‌ ಅಷ್ಟೆ. ಇದೊಂದು ದುಬಾರಿಯೂ ಅಲ್ಲದ, ಪರಿಸರಸ್ನೇಹಿ ಹಾಗೂ ಸುಲಭ ತಂತ್ರಜ್ಞಾನವಾಗಿದ್ದು, ಕೊಳಚೆ ನೀರಿನ ನಿರ್ವಹಣೆಯ ಕೊರತೆ ಇರುವಂತಹ ಹಿಂದುಳಿದ ದೇಶಗಳಲ್ಲಿ ಬಹಳ ಉಪಯುಕ್ತವಾಗಬಲ್ಲದು ಎನ್ನುವುದು ವೆಸ್ಮನ್‌ ಅವರ ಅಭಿಪ್ರಾಯ. ದೊಡ್ಡ ಪ್ರಮಾಣದಲ್ಲಿ ಬಟ್ಟೆ ಉದ್ಯಮವಿರುವ ಭಾರತದಲ್ಲಿಯೂ ಕೈಗಾರಿಕೆಗಳ ಕೊಳಚೆನೀರನ್ನು ನದಿಸಾಗರಗಳಿಗೆ ಬಿಡಲಾಗುತ್ತಿದೆ. ಇದರಿಂದ ಜಲಚರಗಳು, ನೀರು, ಮಣ್ಣು ಕಲುಷಿತವಾಗಿವುದಲ್ಲದೇ, ಕೊನೆಗೆ ಸಸ್ಯಗಳ ಬೆಳವಣಿಗೆ ಪ್ರಕ್ರಿಯೆಯಲ್ಲಿಯೇ ವ್ಯತ್ಯಾಸ ಉಂಟುಮಾಡಬಲ್ಲವು. ಈ ರಾಸಾಯನಿಕಗಳು ಆಹಾರ ಸರಪಳಿಯನ್ನೂ ಸೇರಿ ಇಡೀ ಪರಿಸರ ಮತ್ತು ಜೀವಿಗಳನ್ನು ಬಾಧಿಸುತ್ತಿದೆ. ಹಾಗಾಗಿ ಈ ವಿಷತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಮುಖ್ಯ. ಕೈಗಾರಿಕಾ ತ್ಯಾಜ್ಯವನ್ನು ಪ್ರಯೋಗಾಲಯದಲ್ಲಿ ಸೆಲ್ಯುಲೋಸನ್ನು ಬಳಸಿ ಶುದ್ದೀಕರಿಸಿದಾಗ ಸುಮಾರು ಪ್ರತಿಶತ 80ರಷ್ಟು ಬಣ್ಣಕಾರಕಗಳು ಸೋಸಲ್ಪಟ್ಟಿದ್ದುವಂತೆ. ಮುಂದಿನ ದಿನಗಳಲ್ಲಿ ಇದರ ಶುದ್ದೀಕರಿಸುವ ಸಾಮರ್ಥ್ಯವನ್ನು ಸುಧಾರಿಸಲು ಇನ್ನಷ್ಟು ಪ್ರಯತ್ನಿಸಲಾಗುತ್ತದೆ ಎನ್ನುತ್ತಾರೆ, ವೆಸ್ಮನ್.‌

ಕಲುಷಿತ ನೀರನ್ನು ಯಾವುದೇ ರೀತಿಯಲ್ಲಿಯೂ ಸಂಸ್ಕರಿಸದೇ ಪರಿಸರಕ್ಕೆ ಬಿಡುವುದಕ್ಕಿಂತ ಸುಮಾರು ಶೇ. 80ರಷ್ಟು ಬೇರ್ಪಡಿಸಿ, ವಿಘಟಿಸಿ, ವಿಸರ್ಜಿಸುವುದು ಉತ್ತಮ ಸುಧಾರಣೆಯೇ ಸರಿ. ಇದರ ಜೊತೆಗೆ ನೀರಿನ ಆಮ್ಲೀಯ ಮಟ್ಟವನ್ನು ನಿರ್ವಹಿಸುತ್ತಾ, ಸಂಸ್ಕರಣೆಯ ಅವಧಿಯನ್ನು ಹೆಚ್ಚಾಗಿಸುತ್ತಾ ಪ್ರಕ್ರಿಯೆಯನ್ನು ಮತ್ತಷ್ಟು ಉತ್ತಮವಾಗಿಸಿ ಆ ನೀರನ್ನು ವ್ಯವಸಾಯ ಹಾಗೂ ಕುಡಿಯಲು ಬಳಸಬಹುದೇ ಎಂದು ಪರೀಕ್ಷಿಸುವ ಪ್ರಯತ್ನವನ್ನೂ ಮಾಡಲಿದ್ದಾರೆ, ವೆಸ್ಮನ್.‌

ಸಸ್ಯಜನ್ಯ ಸೆಲ್ಯುಲೋಸ್‌ ಕಾರ್ಬೋಹೈಡ್ರೇಟುಗಳನ್ನು ಬಳಸಿಕೊಂಡು ಈಗಾಗಲೇ ಕೈಗಾರಿಗಳ ತ್ಯಾಜ್ಯಗಳಲ್ಲಿರುವ ಅತ್ಯಂತ ವಿಷಕಾರಿ ರಾಸಾಯನಿಕ ಕ್ರೋಮಿಯಂ ಅನ್ನು ಬೇರ್ಪಡಿಸಲಾಗಿದೆ. ವೆಸ್ಮನ್‌ ಮತ್ತು ತಂಡದವರು, ನೀರಿನಲ್ಲಿ ಕರಗಿಹೋಗಿರುವ ಬಣ್ಣಗಳನ್ನು ಶೋಧಿಸಿ ಈ ವಿಧಾನವನ್ನು ಮತ್ತಷ್ಟು ಸುಧಾರಿಸಿದ್ದಾರೆ. ಜೊತೆಗೆ, ಸೆಲ್ಯುಲೋಸ್ ನಾರಿನ ನ್ಯಾನೋಕಣಗಳನ್ನು ಬಳಸಿಕೊಂಡು ಮತ್ತಾವ ಮಾಲಿನ್ಯಕಾರಕಗಳನ್ನು ತೆಗೆಯಬಹುದು ಮತ್ತು ಈಗ ಸಾಮಾನ್ಯವಾಗಿ ಬಳಸುತ್ತಿರುವ ಆ್ಯಂಟಿಬಯೋಟಿಕ್‌ ಉಳಿಕೆಗಳನ್ನು ಹೇಗೆ ಶುದ್ದೀಕರಿಸಬಹುದು ಎಂದೂ ಇವರು ಸಂಶೋಧನೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.