ADVERTISEMENT

ಯುಜಿಸಿ–ಎನ್‌ಇಟಿ ಪಾಸಾದ ಪ್ರಥಮ ಗಿರಿಜನ ಯುವತಿ

ಕುಬ್ಜತೆ ಮೀರಿ ಹಿರಿದಾದ ಸಾಧನೆ

ಎಚ್.ಎಸ್.ಸಚ್ಚಿತ್
Published 29 ಜನವರಿ 2021, 19:23 IST
Last Updated 29 ಜನವರಿ 2021, 19:23 IST
ಸೃಜನಾ ಪಿ.ವಿ
ಸೃಜನಾ ಪಿ.ವಿ   

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಪಿ.ವಿ.ಸೃಜನಾ, ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಯುಜಿಸಿ–ಎನ್‌ಇಟಿ) ತೇರ್ಗಡೆಯಾಗಿದ್ದು, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದ ಪ್ರಥಮ ಗಿರಿಜನ ಯುವತಿಯಾಗಿದ್ದಾರೆ.

ದೈಹಿಕವಾಗಿ ಕುಬ್ಜವಾಗಿರುವ ಈ ಯುವತಿ, ಗಿರಿಜನ ಸಮುದಾಯದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದವರಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಈ ಹಿಂದೆ ಬಿಳಿಗಿರಿರಂಗನ ಬೆಟ್ಟದ ಡಾ.ಸುದರ್ಶನ್ ಮಾರ್ಗದರ್ಶನದಲ್ಲಿ ಕೆಲವು ಗಿರಿಜನರು ಶಿಕ್ಷಣದಲ್ಲಿ ದಾಪುಗಾಲು ಹಾಕಿದ್ದರು. ಆ ನಂತರದಲ್ಲಿ ಗಿರಿಜನರ ಶೈಕ್ಷಣಿಕ ಪ್ರಯಾಣ ಸೊರಗಿತ್ತು.

ವಿರಾಜಪೇಟೆ ತಾಲ್ಲೂಕಿನ ಬಾಳೆಕೋವು ಹಾಡಿಯಲ್ಲಿ ಜನಿಸಿದ ಸೃಜನಾ, ಉಮ್ಮತ್ತೂರು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಹುಣಸೂರಿನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪೂರೈಸಿದ್ದಾರೆ. 2018–19 ರಲ್ಲಿ ಶೇ 74 ಅಂಕಗಳೊಂದಿಗೆ, ಮಾನಸ ಗಂಗೋತ್ರಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಅವರದು. ಇದೀಗ ಫೈನಾನ್ಸ್ ಆಂಡ್‌ ಟ್ಯಾಕ್ಸೇಶನ್‌ ವಿಷಯದಲ್ಲಿ ಎನ್‌ಇಟಿ ಬರೆದು, ಉತ್ತೀರ್ಣರಾಗಿದ್ದಾರೆ.

ADVERTISEMENT

ಕುಬ್ಜತೆ ಎಂಬುದು ದೇಹಕ್ಕಷ್ಟೇ ಸಾಧನೆಗಲ್ಲ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಸಾಬೀತುಮಾಡಿರುವ ಸೃಜನಾ, ಸಾಧನೆಗಾಗಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ ಮತ್ತು ಸಿಕ್ಕ ಅವಕಾಶಗಳ ಸದುಪಯೋಗ ಪಡೆಯುವತ್ತ ವಿಚಾರ ಮಾಡುತ್ತಾರೆ. ಶಿಕ್ಷಣದ ಹಾದಿಯಲ್ಲಿ ಎಲ್ಲೂ ಹಿಂತಿರುಗಿ ನೋಡದ ಅವರು, ಕಾಲೇಜು ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಬೇಕು ಎಂಬ ತುಡಿತದಲ್ಲಿದ್ದಾರೆ. ಇದರೊಂದಿಗೆ ಪಿಎಚ್‌.ಡಿ ಮಾಡುವ ಕನಸೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.