ADVERTISEMENT

ಸ್ಪಂದನ: ವಯಸ್ಸಿನ ಅಂತರ ಹೆಚ್ಚಿದ್ದರೆ ಮಗುವಾಗುವುದು ಕಷ್ಟವೇ?

ಡಾ.ವೀಣಾ ಎಸ್‌ ಭಟ್ಟ‌
Published 13 ಮಾರ್ಚ್ 2021, 8:48 IST
Last Updated 13 ಮಾರ್ಚ್ 2021, 8:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ರಶ್ನೆ: ನನಗೆ 28 ವರ್ಷ, ಪತಿಗೆ 38 ವರ್ಷ ವಯಸ್ಸು. ಮದುವೆಯಾಗಿ 6 ತಿಂಗಳುಗಳಾಗಿವೆ. ಇನ್ನಾರು ತಿಂಗಳು ಮಕ್ಕಳು ಬೇಡ ಅಂದುಕೊಂಡಿದ್ದೀನಿ. ಋತುಚಕ್ರ ನಿಯಮಿತವಾಗಿದೆ. ನನಗೆ ಹಾಗೂ ಪತಿಗೆ 10 ವರ್ಷ ಅಂತರವಿದ್ದು, ಇದರಿಂದ ಮಕ್ಕಳಾಗುವುದು ಕಷ್ಟವೇ?

ದೀಕ್ಷಾ, ಮಂಗಳೂರು

ಉತ್ತರ: ಅಂಡಾಣು ಮತ್ತು ಪುರುಷರ ವೀರ್ಯಾಣುಗಳ ಸಮಾಗಮದಿಂದ ಭ್ರೂಣೋತ್ಪತ್ತಿಯಾಗಿ ಸಂತಾನ ಪ್ರಾಪ್ತಿಯಾಗುವುದು. ಹೆಣ್ಣಿನಲ್ಲಿ ಋತುಚಕ್ರ ಆರಂಭದಿಂದ ಅಂದರೆ ಸುಮಾರು 12– 13 ವರ್ಷದೊಳಗಾಗಿ ಋತುಬಂಧದವರೆಗೆ ಅಂದರೆ ಸುಮಾರು 48 ರಿಂದ 50 ವರ್ಷವಾಗುವುದರೊಳಗೆ ಅಂಡಾಣು ಬಿಡುಗಡೆಯಾಗುತ್ತಿದ್ದರೂ, ಆರೋಗ್ಯವಂತ ಸಂತಾನಪ್ರಾಪ್ತಿಗಾಗಿ ಸೂಕ್ತ ವಯಸ್ಸು 22 ರಿಂದ 35 ವರ್ಷಗಳೊಳಗಾಗಿ. ಆದ್ದರಿಂದ ತಡಮಾಡದೇ ಮಗುವನ್ನು ಪಡೆಯಲು ಪ್ರಯತ್ನಿಸಿ. ಪುರುಷರಲ್ಲಿ ಹದಿವಯಸ್ಸಿನಲ್ಲಿ ಆರಂಭವಾಗುವ ವೀರ್ಯಾಣುಗಳ ಉತ್ಪಾದನಾಕ್ರಿಯೆ 70ವರ್ಷಗಳವರೆಗೂ ಅಡೆತಡೆಯಿಲ್ಲದೇ ಮುಂದುವರಿಯುತ್ತದೆ. ಲೈಂಗಿಕ ಆಸಕ್ತಿ ಹಾಗೂ ಚೋದಕಶಕ್ತಿ ಕೂಡ ಹೆಚ್ಚಿನ ಮಹಿಳೆಯರಲ್ಲಿ ಬೇಗನೆ ಕ್ಷೀಣಿಸುತ್ತಾ ಬರುತ್ತದೆ. ಆದರೆ ಆರೋಗ್ಯವಂತ ಪುರುಷರಲ್ಲಿ ಇವೆರಡೂ ಪ್ರಕ್ರಿಯೆ ಬಹಳ ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತದೆ. ಆದ್ದರಿಂದ ನಿಮ್ಮಿಬ್ಬರ ನಡುವೆ ವಯಸ್ಸಿನ ಅಂತರದ ಬಗ್ಗೆ ನಿಮಗೆ ಆತಂಕಬೇಡ. ಆದರೆ ತಡ ಮಾಡಬೇಡಿ, ಅದಷ್ಟು ಬೇಗ ಮಗು ಹೊಂದಲು ಪ್ರಯತ್ನಿಸಿ, ಅಂದರೆ ಋತುಚಕ್ರದ 12ನೇ ದಿನದಿಂದ 18 ದಿನದವರೆಗೆ ತಪ್ಪದೇ ಸತಿ-ಪತಿಗಳ ಮಿಲನವಾದಲ್ಲಿ ಸಂತಾನ ಫಲಪ್ರದವಾಗುತ್ತದೆ. ವಿಫಲವಾದರೆ ತಜ್ಞವೈದ್ಯರನ್ನು ಸಂಪರ್ಕಿಸಿ.

ADVERTISEMENT

***

ಪ್ರಶ್ನೆ: ನನಗೆ 31 ವರ್ಷ, ಮದುವೆ ನಿಶ್ಚಯವಾಗಿದೆ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದರಿಂದ 2 ವರ್ಷ ಮಗು ಬೇಡವೆಂದು ತೀರ್ಮಾನಿಸಿದ್ದೇನೆ. ತಡವಾದರೆ ಏನೂ ತೊಂದರೆಯಿಲ್ಲವೇ?

ಹೆಸರು, ಊರು ಇಲ್ಲ,

ಉತ್ತರ: ನಿಮಗೆ ಕುಟುಂಬ, ಉದ್ಯೋಗದ ಹೊಣೆಗಾರಿಕೆ, ಮಕ್ಕಳ ಜಂಜಾಟ ತಕ್ಷಣವೇ ಬೇಡ ಎನಿಸಿರಬೇಕು. ಆದರೆ ಮೇಲೆ ತಿಳಿಸಿದ ಹಾಗೆ ಹೆಣ್ಣಿನ ಸಂತಾನೋತ್ಪತ್ತಿ ಸಾಮರ್ಥ್ಯ 30 ವರ್ಷಗಳ ನಂತರ ಕಡಿಮೆಯಾಗುತ್ತಾ ಬರುವುದಲ್ಲದೆ ಗರ್ಭಧಾರಣೆ ತಡವಾದಾಗ ಗರ್ಭಪಾತ, ಅಕಾಲಿಕ ಹೆರಿಗೆ, ಮಗುವಿನ ಅಸಮರ್ಪಕ ಬೆಳವಣಿಗೆ, ಆಟಿಸಮ್ ಮತ್ತು ಡೌನ್‌ಸಿಂಡ್ರೋಮ್ ಆಗುವ ಸಂಭವ ಹೆಚ್ಚು. ಜೊತೆಗೆ ಗರ್ಭಿಣಿಯರಲ್ಲಿ ಮಧುಮೇಹ ಸಮಸ್ಯೆ, ಏರುರಕ್ತದೊತ್ತಡದ ಸಮಸ್ಯೆ, ಸಿಜೇರಿಯನ್ ಆಗುವ ಸಂಭವ, ಅಸಮರ್ಪಕ ಸ್ತನ್ಯಪಾನ, ಇವೆಲ್ಲವುಗಳ ಸಾಧ್ಯತೆ ಹೆಚ್ಚಾಗಬಹುದು. ಆದ್ದರಿಂದ ತಡಮಾಡದೇ ಮಗು ಬೇಕೆಂದಿದ್ದರೆ ಬೇಗನೆ ಪ್ರಯತ್ನಿಸಿ. ಆರೋಗ್ಯವಂತ ಮಗುವನ್ನು ಪಡೆಯಿರಿ.

***

ಪ್ರಶ್ನೆ: ನನಗೆ 25 ವರ್ಷ. 20 ವರ್ಷವಿರುವಾಗಲೇ ನಾನು ಪ್ರೇಮವಿವಾಹ ಮಾಡಿಕೊಂಡು ಮೊದಲ ತಿಂಗಳೇ ಗರ್ಭ ಧರಿಸಿ ಮಗು ಬೇಡವೆಂದು ಮಾತ್ರೆ ತೆಗೆದುಕೊಂಡೆ. ಹಾಗೇ ಕಾರಣಾಂತರಗಳಿಂದ 3 ಬಾರಿ ಗರ್ಭವನ್ನು ನಾನೇ ಹಾಳು ಮಾಡಿಕೊಂಡು ಬಿಟ್ಟೆ. ಆದರೆ ಈಗ ಮಗು ಬೇಕೆಂದು ಪ್ರಯತ್ನಿಸುತ್ತಿದ್ದರೂ ಎರಡರಿಂದ ಎರಡೂವರೆ ತಿಂಗಳಿಗೆ ಒಟ್ಟು ನಾಲ್ಕು ಬಾರಿ ಗರ್ಭಪಾತ ಆಗಿದೆ. ವೈದ್ಯರು ಪರೀಕ್ಷಿಸಿ ಏನೂ ತೊಂದರೆ ಇಲ್ಲ ಅಂದಿದ್ದಾರೆ. ನನಗೆ ಭಯ ಆಗ್ತಿದೆ. ಇದಕ್ಕೆ ಪರಿಹಾರವೇ ಇಲ್ಲವೇ?

ಆಶಾ, ಊರಿನ ಹೆಸರಿಲ್ಲ

ಉತ್ತರ: ಆಶಾರವರೆ, ನೀವು ಪ್ರೇಮವಿವಾಹವಾಗಿದ್ದೇನೂ ತಪ್ಪಿಲ್ಲ. ಆದರೆ ಮದುವೆಯ ಉದ್ದೇಶ ಮೊದಲನೆಯದಾಗಿ ಗಂಡುಹೆಣ್ಣಿನ ಬಯಕೆಗಳನ್ನು ಪೂರೈಸುತ್ತಾ ಒಂದೇ ಮನಸ್ಸಿನಿಂದ ಪರಸ್ಪರ ಸಹಕರಿಸುತ್ತಾ ಬಾಳುವುದು. ಎರಡನೆಯದಾಗಿ ಅದರ ಫಲವಾಗಿ ಅನಿವಾರ್ಯವಾಗಿಯೋ ಅಥವಾ ಅವಶ್ಯವಾಗಿಯೋ ಸಂತಾನ ಪಡೆಯುವುದು. ಯಶಸ್ವಿ ದಾಂಪತ್ಯದಲ್ಲಿ ಜೀವನದ ಅವಿಭಾಜ್ಯ ಅಂಗವಾದ, ನಾಳೆ ಹುಟ್ಟಬಹುದಾದ ಮಕ್ಕಳ ಸಂಖ್ಯೆ ಎಷ್ಟಿರಬೇಕು? ಮಕ್ಕಳಾಗುವ ವೈಜ್ಞಾನಿಕ ಪ್ರಕ್ರಿಯೆ ಹೇಗೆ? ಮಕ್ಕಳಾಗದ ಹಾಗೆ ಹೇಗೆ ಲೈಂಗಿಕಸುಖವನ್ನು ಪಡೆಯುವುದು? ಎಂಬುದನ್ನು ಸತಿಪತಿಯರಿಬ್ಬರೂ ತಿಳಿದಿರಬೇಕು. ಗರ್ಭಧಾರಣೆ ಒಂದು ಅಪೇಕ್ಷಿತ ಸಂಭ್ರಮವಾಗಬೇಕೇ ಹೊರತು ಅನಪೇಕ್ಷಿತ ಅವಘಡವಾದಾಗ, ಗರ್ಭಪಾತದಂತಹ ಪ್ರಕ್ರಿಯೆಯಿಂದ ಎಷ್ಟೇ ವ್ಯವಸ್ಥಿತವಾಗಿ ಮಾಡಿದರೂ ಕೂಡ ಗರ್ಭಕೋಶಕ್ಕೆ ಸೋಂಕಾಗಬಹದು, ಗರ್ಭನಾಳದ ಅಡೆತಡೆಯಾಗಬಹುದು. ಹೀಗಾಗಿ ನೀವಷ್ಟೇ ಅಲ್ಲ ವಿವಾಹವಾಗಿ ಉತ್ತಮ ದಾಂಪತ್ಯ ಹೊಂದಬಯಸುವ ಪ್ರತಿಯೊಬ್ಬರೂ ಸಂತಾನೋತ್ಪತ್ತಿಕ್ರಿಯೆ, ಸಂತಾನ ನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಹೊಂದಬೇಕು. ತಜ್ಞವೈದ್ಯರ ಸಲಹೆ ಪಡೆಯಬೇಕು. ನೀವೀಗ ಚಿಂತಿಸದೇ ಧೈರ್ಯದಿಂದಿದ್ದು ಮತ್ತೆ ಮಗು ಪಡೆಯಲು ತಜ್ಞರನ್ನು ಸಂಪರ್ಕಿಸಿ. ದಿನಾ 5 ಮಿ.ಗ್ರಾಂ ಫೋಲಿಕ್‌ ಆಸಿಡ್ ಮಾತ್ರೆ ತೆಗೆದುಕೊಳ್ಳಿ. ಗರ್ಭನಾಳ ಅಡೆತಡೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ (ಟ್ಯೂಬ್ ಟೆಸ್ಟ್). ನಿಮ್ಮ ಪತಿಯ ವೀರ್ಯತಪಾಸಣೆಯೂ ಆಗಲಿ. ನಿಮಗೆ ಮಗು ಆಗುತ್ತದೆ ಎಂಬ ಭರವಸೆಯಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.