ADVERTISEMENT

ಆರ್ಥಿಕತೆ ಚೇತರಿಕೆಗೆ ಭಾರತದಿಂದ 'ಅತ್ಯಂತ ನಿರ್ಣಾಯಕ' ಕ್ರಮ: ಐಎಂಎಫ್

ಪಿಟಿಐ
Published 15 ಜನವರಿ 2021, 6:02 IST
Last Updated 15 ಜನವರಿ 2021, 6:02 IST
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ: ಎಎಫ್‌ಪಿ ಚಿತ್ರ
ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ಮತ್ತು ಅದರ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಭಾರತವು "ಅತ್ಯಂತ ನಿರ್ಣಾಯಕ" ಕ್ರಮಗಳನ್ನು ಕೈಗೊಂಡಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ ಶ್ಲಾಘಿಸಿದ್ದಾರೆ. ಈ ವರ್ಷ ಮತ್ತಷ್ಟು ಪ್ರಗತಿ ಸಾಧಿಸಲು ಆರ್ಥಿಕತೆಯ ವೇಗವರ್ಧಿತ ರೂಪಾಂತರವನ್ನು ಬೆಂಬಲಿಸಲು ಭಾರತ, ದೇಶದ ಜನತೆಗೆ ಕರೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಮುಂಬರುವ ವಿಶ್ವ ಆರ್ಥಿಕ ವರದಿಯಲ್ಲಿ ಭಾರತವು ತಾನು ಕೈಗೊಂಡ ಕ್ರಮಗಳಿಂದಾಗಿ ಅತ್ಯಂತ ಕಡಿಮೆ ಕೆಟ್ಟ ಪರಿಣಾಮವನ್ನು ಹೊಂದಿರುತ್ತದೆ ಎಂದು ಊಹಿಸಲಾಗಿದೆ ಎಂದು ಜಾಗತಿಕ ಮಾಧ್ಯಮಗಳನ್ನು ಉದ್ದೇಶಿಸಿ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

"ಜನವರಿ 26 ರವರೆಗೆ ಎಲ್ಲರೂ ಕಾದು ನೋಡಿ ನಾನು ಹೇಳಿದ್ದೆ, ಅದು ಭಾರತಕ್ಕೆ ಬಹುವಾಗಿ ಅನ್ವಯಿಸುತ್ತದೆ. ನಮ್ಮ ಆರ್ಥಿಕ ವರದಿಯಲ್ಲಿ ಇಲ್ಲಿನ ಆರ್ಥಿಕತೆ ಮೇಲೆ ಕಡಿಮೆ ಕೆಟ್ಟ ಪರಿಣಾಮದ ಚಿತ್ರಣವನ್ನು ನೀವು ನೋಡುತ್ತೀರಿ. ಏಕೆಂದರೆ, ಭಾರತ ದೇಶವು ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಅದರ ಆರ್ಥಿಕ ಪರಿಣಾಮಗಳನ್ನು ಎದುರಿಸುವ ನಿಟ್ಟಿನಲ್ಲಿ ಬಹಳ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ, ”ಎಂದು ಕ್ರಿಸ್ಟಿಲಿನಾ ಜಿಯೊರ್ಜಿವಾ ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ಹಣಕಾಸು ನಿಧಿಯು ತನ್ನ ವಿಶ್ವ ಆರ್ಥಿಕ ವರದಿಯನ್ನು ಜನವರಿ 26 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ.

ಭಾರತದ ಬಗ್ಗೆ ಮಾತನಾಡುತ್ತಾ, ಅವರು ಈ ಗಾತ್ರದ ಜನಸಂಖ್ಯೆಯ ದೇಶ ಬಹಳ ನಾಟಕೀಯ ಲಾಕ್ ಡೌನ್ ಅನುಭವಿಸಿದೆ. ಆದರೂ ಸಹ ದೇಶದ ಜನ ಮತ್ತೆ ಒಟ್ಟುಗೂಡಿದ್ದಾರೆ ಎಂದು ಅವರು ಹೇಳಿದ್ದಾರೆ.

"ಭಾರತವು ಹೆಚ್ಚು ಉದ್ದೇಶಿತ ನಿರ್ಬಂಧಗಳು ಮತ್ತು ಲಾಕ್‌ಡೌನ್‌ಗಳನ್ನು ಮಾಡಿತ್ತು. ನಾವು ಗಮನಿಸುತ್ತಿರುವ ಸಂಗತಿಯೆಂದರೆ, ನೀತಿ ಬೆಂಬಲದೊಂದಿಗೆ ಆ ಪರಿವರ್ತನೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ನೀವು ಚಲನಶೀಲತೆ ಸೂಚಕಗಳನ್ನು ನೋಡಿದರೆ, ಕೋವಿಡ್‌ಗೂ ಮೊದಲು ಇದ್ದ ಸ್ಥಳದಲ್ಲೇ ಇದೆ. ಅಂದರೆ, ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಪುನಶ್ಚೇತನಗೊಳಿಸಲಾಗಿದೆ, ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ವಿತ್ತೀಯ ನೀತಿ ಮತ್ತು ಹಣಕಾಸಿನ ನೀತಿ ವಿಷಯದಲ್ಲಿ ಸರ್ಕಾರ ಏನು ಸಾಧಿಸಿದೆ ಎಂಬುದು ಶ್ಲಾಘನೀಯ. ಇದು ಉದಯೋನ್ಮುಖ ಮಾರುಕಟ್ಟೆಗಳ ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ. ಉದಯೋನ್ಮುಖ ಮಾರುಕಟ್ಟೆಗಳು ಜಿಡಿಪಿಯ ಶೇ. 6ರಷ್ಟನ್ನು ಒದಗಿಸಿದ್ದು, ಭಾರತದಲ್ಲಿ, ಇದು ಸ್ವಲ್ಪ ಹೆಚ್ಚಾಗಿದೆ. ಭಾರತಕ್ಕೆ ಇದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದ್ದು, ಮತ್ತಷ್ಟು ಪ್ರಗತಿ ಸಾಧಿಸಲು ಸ್ಥಳವಿದೆ… ನೀವು ಇನ್ನೂ ಹೆಚ್ಚಿನದನ್ನು ಮಾಡಲು ಸಾಧ್ಯವಾದರೆ ದಯವಿಟ್ಟು ಮಾಡಿ, ” ಎಂದು ಕ್ರಿಸ್ಟಿಲಿನಾ ಜಿಯೊರ್ಜಿವಾ ಹೇಳಿದ್ದಾರೆ.

ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರ ಪ್ರಕಾರ, 2021ರ ವರ್ಷ ಆರ್ಥಿಕತೆಯ ಅಭಿವೃದ್ಧಿಗೆ ಬಳಸಬೇಕಾದ ವರ್ಷ.

“ಈ ಸಮಯವನ್ನು ಉದ್ದೇಶಿತ ಗುರಿಯೊಂದಿಗೆ ಚಾಣಾಕ್ಷತೆಯಿಂದ ಬಳಸಿ ಮತ್ತು ಆರ್ಥಿಕತೆಯ ವೇಗವರ್ಧಿತ ರೂಪಾಂತರವನ್ನು ಬೆಂಬಲಿಸಿ. ಏಕೆಂದರೆ ರಚನಾತ್ಮಕ ಬದಲಾವಣೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂಬುದನ್ನು ನಾವು ನೋಡಿದ್ದೇವೆ. ನೀತಿ ನಿರೂಪಕರು ಈ ಪರಿಸರದಲ್ಲಿ ರಚನಾತ್ಮಕ ರೂಪಾಂತರವನ್ನು ಬೆಂಬಲಿಸಲು ಮತ್ತು ಅದರ ವಿಫಲಗೊಂಡ ಬದಿಯ ವಲಯಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಗಮನ ಹರಿಸಬೇಕು, ”ಎಂದು ಅವರು ಹೇಳಿದರು.

ಭಾರತವು ಆರ್ಥಿಕತೆಯನ್ನು ಮರುಸ್ಥಾಪಿಸುತ್ತಿರುವ ರಚನಾತ್ಮಕ ಸುಧಾರಣಾ ಕ್ರಮದಿಂದ ತಾನು ಪ್ರಭಾವಿತನಾಗಿದ್ದೇನೆ ಎಂದು ಕ್ರಿಸ್ಟಿಲಿನಾ ಜಿಯೊರ್ಜಿವಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.