ADVERTISEMENT

ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು

ದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ ಹೆಚ್ಚಳ

ಪಿಟಿಐ
Published 7 ಜುಲೈ 2018, 13:59 IST
Last Updated 7 ಜುಲೈ 2018, 13:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ವಾಣಿಜ್ಯ ಸಮರದ ಆತಂಕದ ನಡುವೆಯೂ ಉತ್ತಮ ಗಳಿಕೆ ಕಾಣುವ ಮೂಲಕ ಷೇರುಪೇಟೆಯ ವಾರದ ವಹಿವಾಟು ಅಂತ್ಯವಾಗಿದೆ.

ಚೀನಾದ ಸರಕುಗಳ ಮೇಲೆ ಆಮದು ಸುಂಕ ವಿಧಿಸುವ ಅಮೆರಿಕದ ಕ್ರಮವು ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ವಾಣಿಜ್ಯ ಸಮರ ಆರಂಭವಾಗುವ ಆತಂಕ ಮತ್ತಷ್ಟು ಹೆಚ್ಚಾಯಿತು. ಇದರಿಂದ ಮಾರಾಟದ ಒತ್ತಡ ಸೃಷ್ಟಿಯಾಯಿತು.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು. ಇದರ ಜತೆಗೆ ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳ ಮಾರಾಟಕ್ಕೆ ಗಮನ ನೀಡಿದ್ದಾರೆ. ಈ ಅಂಶಗಳು ನಕಾರಾತ್ಮಕ ಪರಿಣಾಮ ಬೀರಿದವು.

ADVERTISEMENT

ದೇಶಿ ವಿದ್ಯಮಾನಗಳು: ಕೇಂದ್ರ ಸರ್ಕಾರ, ಮುಂಗಾರು ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿದೆ. ಇದರಿಂದ ಉತ್ಪಾದನೆಗೆ ಉತ್ತೇಜನ ದೊರೆತಿದೆ. ಇನ್ನು ತಯಾರಿಕಾ ವಲಯದ ಸೂಚ್ಯಂಕ (ಪಿಎಂಐ)ಜೂನ್‌ ತಿಂಗಳಿನಲ್ಲಿ 12 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಸಕಾರಾತ್ಮಕ ಅಂಶಗಳು ದೇಶಿ ಹೂಡಿಕೆಗೆ ಇನ್ನಷ್ಟು ಉತ್ತೇಜನ ನೀಡಿ, ಸೂಚ್ಯಂಕದ ಏರಿಕೆಗೆ ನೆರವಾದವು.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 234 ಅಂಶ ಏರಿಕೆ ಕಂಡು 35,658 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 58 ಅಂಶ ಹೆಚ್ಚಾಗಿ 10,772 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ವಾಹನ, ಎಫ್‌ಎಂಸಿಜಿ, ಬ್ಯಾಂಕ್‌, ಆರೋಗ್ಯ ಸೇವೆ, ತೈಲ ಮತ್ತು ಅನಿಲ, ಬೃಹತ್‌ ಯಂತ್ರೋಪಕರಣ ಮತ್ತು ಐ.ಟಿ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.