ADVERTISEMENT

ಎರಡೇ ಗಂಟೆಯಲ್ಲಿ ಮುಗಿದ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 14:12 IST
Last Updated 5 ಜುಲೈ 2018, 14:12 IST

ಹೊಸಪೇಟೆ: ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಎರಡೇ ಗಂಟೆಗಳಲ್ಲಿ ಮುಗಿದು ಹೋಯಿತು.

ಬೆಳಿಗ್ಗೆ 11ಕ್ಕೆ ನಡೆಯಬೇಕಿದ್ದ ಸಭೆ ಒಂದು ಗಂಟೆ ತಡವಾಗಿ ಆರಂಭವಾಯಿತು. ಅದಾದ ಬಳಿಕ ಯಾವುದೇ ಮಹತ್ವದ ಚರ್ಚೆಗಳು ನಡೆಯಲಿಲ್ಲ. ಕೆಲ ಅಧಿಕಾರಿಗಳು ಗಿಳಿಪಾಠದಂತೆ ಅವರ ಇಲಾಖೆಯ ಪ್ರಗತಿ ಕುರಿತ ಅಂಕಿ ಅಂಶಗಳನ್ನು ಓದಿದರು. ಇದರಿಂದ ಸಭೆ ಮಧ್ಯಾಹ್ನ ಎರಡು ಗಂಟೆಗೆ ಮುಕ್ತಾಯವಾಯಿತು.

ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಮಾತನಾಡಿ, ‘ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಸಭೆಗೆ ಬರುವುದಿಲ್ಲ. ಇಂದು ಪ್ರಗತಿ ವರದಿ ಸಲ್ಲಿಸಿದ್ದೀರಿ. ಇಲ್ಲಿ ಏನು ಚರ್ಚಿಸಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಸಿದ್ಧತೆ ಮಾಡಿಕೊಂಡು ಬರಬೇಕು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಬೇಕು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನ ಮರಿಯಮ್ಮನಹಳ್ಳಿ ಹಾಗೂ ರಾಮಸಾಗರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಏನು ಕಾರಣ ಎನ್ನುವುದೇ ಗೊತ್ತಾಗುತ್ತಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ಜನರು ಕೇಳುವ ಪ್ರಶ್ನೆಗಳಿಗೆ ನಾವು ಮುಜುಗರ ಅನುಭವಿಸಬೇಕಾಗುತ್ತದೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ ಎ. ಸೂಡಿ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಮನ್ವಯ ಅಧಿಕಾರಿ ಗುರುರಾಜ್‌ ಮಾತನಾಡಿ,‘ತಾಲ್ಲೂಕಿನ 21 ಕ್ಲಸ್ಟರ್‌ಗಳ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಬಹುತೇಕ ಕೊನೆಗೊಂಡಿದೆ’ ಎಂದರು.

ಪಶು ಸಂಗೋಪನಾ ಇಲಾಖೆಯ ಬಸವರಾಜ ಬೆಣ್ಣೆ, ‘ಅರ್ಹ ಫಲಾನುಭವಿಗಳಿಗೆ 700 ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗಿದೆ’ ಎಂದರು. ‘ನಿಮ್ಮ ಇಲಾಖೆಯ ಬಹುತೇಕ ಯೋಜನೆಗಳ ಬಗ್ಗೆ ಜನರಿಗೆ ಗೊತ್ತಿಲ್ಲ. ಸರಿಯಾಗಿ ಪ್ರಚಾರ ಮಾಡಬೇಕು’ ಎಂದು ರಾಜಪ್ಪನವರು ಬೆಣ್ಣೆ ಅವರಿಗೆ ಸೂಚಿಸಿದರು.

ಇನ್ನುಳಿದ ಇಲಾಖೆಯ ಅಧಿಕಾರಿಗಳು, ಜೂನ್‌ ತಿಂಗಳಲ್ಲಿ ಯಾವುದೇ ಅನುದಾನ ಬರದ ಕಾರಣ ಕ್ರಿಯಾ ಯೋಜನೆ ಮಾಡಿಲ್ಲ ಎಂದು ಉತ್ತರಿಸಿದರು. ಇದರಿಂದಾಗಿ ಸಭೆ ಮೊಟಕುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.