ADVERTISEMENT

ಡಂಬಳ | ಬರಗಾಲ: ಮೇವು, ನೀರು ಅರಸಿ ಕುರಿಗಾರರ ಅಲೆದಾಟ

ಲಕ್ಷ್ಮಣ ಎಚ್.ದೊಡ್ಡಮನಿ
Published 9 ಮಾರ್ಚ್ 2024, 4:29 IST
Last Updated 9 ಮಾರ್ಚ್ 2024, 4:29 IST
ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದಿಂದ  ಡಂಬಳ ಹೋಬಳಿ ಪೇಠಾಲೂರ ಗ್ರಾಮದತ್ತ ಮೇವು ಅರಸಿ ಬರುತ್ತಿರುವ ಕದಾಂಪುರ ಗ್ರಾಮದ ಕುರಿಗಾರರು
ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದಿಂದ  ಡಂಬಳ ಹೋಬಳಿ ಪೇಠಾಲೂರ ಗ್ರಾಮದತ್ತ ಮೇವು ಅರಸಿ ಬರುತ್ತಿರುವ ಕದಾಂಪುರ ಗ್ರಾಮದ ಕುರಿಗಾರರು   

ಡಂಬಳ: ಶಾಶ್ವತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಮುಂಡರಗಿ ತಾಲ್ಲೂಕು ಭೀಕರ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಬರಗಾಲದ ಭೀಕರತೆಗೆ ಕುರಿ, ಆಡು, ಎಮ್ಮೆ, ಆಕಳು ಸೇರಿದಂತೆ ಜಾನುವಾರುಗಳು ಹಸಿರು ಮೇವು ಹಾಗೂ ಒಣಗಿದ ಹುಲ್ಲಿಗಾಗಿ ರಣ ಬಿಸಿಲಿನಲ್ಲಿ ಅಲೆದಾಡುತ್ತಿವೆ.ಕುಡಿಯುವ ನೀರಿಗೂ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಆಹಾರಕ್ಕಾಗಿ ಕುರಿಗಾಯಿಗಳು ದೂರದೂರದವರೆಗೆ ವಲಸೆ ಹೋಗುತ್ತಿರುವ ಚಿತ್ರಣ ಸಾಮಾನ್ಯವಾಗಿದ್ದರೆ. ಜಾನುವಾರಗಳು ಬರದ ಭೀಕರತೆಗೆ ತತ್ತರಿಸಿ ಹೋಗಿವೆ. ಕೈಗಾರಿಕೆಗಳು ಈ ಭಾಗದಲ್ಲಿ ಸ್ಥಾಪನೆಯಾಗದೆ ಇರುವುದರಿಂದ ತಾಲ್ಲೂಕಿನ ಜನರು ಹೆಚ್ಚಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿದ್ದಾರೆ. ವಿವಿಧ ನೀರಾವರಿ ಯೋಜನೆಗಳ ಮೂಲಕ ಕೃಷಿಯಲ್ಲಿ ಬದುಕು ಕಂಡ ಜನರು ಬೇಸಿಗೆಯಲ್ಲಿ ನದಿ ನೀರು ಬತ್ತುವುದರಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ.

‘ಕುರಿಗಳ ಆಹಾರಕ್ಕಾಗಿ ನಿತ್ಯ ವಲಸೆ ಹೋಗುತ್ತೇವೆ. ನಾಲ್ಕೈದು ದಿನ ಕೊಪ್ಪಳ ಜಿಲ್ಲೆಯ ಕವಲೂರ ಗ್ರಾಮದಲ್ಲಿ ವಾಸ್ತವ್ಯ ಇದ್ದೇವೂ. ಕವಲೂರ ಗ್ರಾಮದ ಸರಹದ್ದಿನಲ್ಲಿ ಕುರಿಗಳಿಗೆ ನೀರು ಕುಡಿಸಿದ್ದೇವೆ. ಕವಲೂರ ಗ್ರಾಮದಿಂದ 18 ಕೀ.ಮೀ ಪೇಠಾಲೂರ ಗ್ರಾಮದವರಿಗೂ ವಲಸೆ ಬಂದರೂ ಎಲ್ಲಿಯೂ ಒಂದು ಹನಿ ನೀರು ಹಸಿರು ಮತ್ತು ಒಣ ಹುಲ್ಲು ದೊರೆಯಲಿಲ್ಲ’ ಎಂದು ಡಂಬಳ ಹೋಬಳಿ ಶಿಂಗಟರಾಯನಕೇರಿ ಗ್ರಾಮದ ಕುರಿಗಾರ ಮೈಲಾರಪ್ಪ ನಿಂಗಪ್ಪ ಗುರುವಿನ ನೋವಿನಿಂದ ಹೇಳುತ್ತಾರೆ.

ADVERTISEMENT

‘ನಮ್ಮಲ್ಲಿ 300 ಕುರಿಗಳು ಇವೆಕುರಿ, ಆಡುಗಳ ಮೂಕ ವೇದನೆ ಹೇಳ ತೀರದು. ಆಹಾರದ ಸಮಸ್ಯೆಯಿಂದ ಸೊರಗಿವೆ. ಒಂದು ಆಡು ಅಥವಾ ಕುರಿ ಮರಿಗೆ ಎರಡು ಕುರಿಗಳಿಂದ ಹಾಲು ಕುಡಿದರೆ ಮಾತ್ರ ಸ್ವಲ್ಪ ಹಸಿವು ನಿಗುತ್ತದೆ. ಎಲ್ಲಿ ನೋಡಿದರು ಒಣಭೂಮಿಯ ದರ್ಶನವಾಗುತ್ತಿದೆ. ಪ್ರತಿಯೊಂದು ಗ್ರಾಮದ ಹತ್ತಿರ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡಿದರೆ ಅನುಕೂಲವಾಗುತ್ತದೆ. ಮೇವಿನ ಕೊರತೆಯಾಗದಂತೆ ಅಗತ್ಯ ಕ್ರಮ ತಗೆದುಕೊಂಡರೆ ಪುಣ್ಯ ಬರುತೈತಿ’ ಎಂದು ಅಂಗಲಾಚಿದರು.

ಬಿಸಿಲಿನ ತಾಪಕ್ಕೆ ನಿತ್ಯ ತತ್ತರಿಸಿ ಹೋಗುತ್ತೇವೆ. ಮೂಕ ಪ್ರಾಣಿಗಳು ಆಹಾರದ ಸಮಸ್ಯೆ ಎದುರಿಸುತ್ತಿರುವದನ್ನು ನೋಡಿ ಕಣ್ಣೀರು ಬರುತ್ತವೆ. ನಮಗೆ ಒಂದು ಹೊತ್ತು ಊಟ ಇಲ್ಲಂದ್ರ ನಡಿಯುತ್ತದೆ. ಆದ್ರೆ ಕುರಿಗಳು ಹೊಟ್ಟಿ ತುಂಬಬೇಕು ಎನ್ನುವ ನಿಸ್ವಾರ್ಥ ಜೀವನ ನಮ್ಮದು. ನಮ್ಮ ಬದುಕು ಕುರಿಗಳಿಗೆ ಮೀಸಲು. ಮಾನವಿಯ ನೆಲೆಯಲ್ಲಿಯಾದರು ಮೂಕ ಪ್ರಾಣಿಗಳ ಹಸಿವು ನಿಗಿಸಬೇಕು ಎನ್ನುವ ತುಡಿತ ನನ್ನದು’ ಎನ್ನುತ್ತಾರೆ ಕದಾಂಪೂರ ಗ್ರಾಮದ ಹನಮಪ್ಪ ಯಲ್ಲಪ್ಪ ಕರಿ.

ಮಳೆ ಕೊರತೆ ಪರಿಣಾಮ: ರೈತರ ಬೆಳೆಗಳಿಗೆ ಜಾನುವಾರುಗಳ ಕುಡಿಯುವ ನೀರಿಗೆ ಕಾಮಧೇನುವಾಗಿದ್ದ ರೈತರ ಜಮೀನುಗಳಲ್ಲಿನ ಕೃಷಿಹೊಂಡಗಳು ಆಟದ ಮೈದಾನದಂತೆ ಆಗಿವೆ.

‘20ನೇ ಜಾನುವಾರು ಗಣತಿಯನ್ನು 15 ಸಂಸ್ಥೆಗಳು ಕೂಡಿ ವೈಜ್ಞಾನಿಕವಾಗಿ ನಡೆಸಿವೆ. ಆ ಆಧಾರದ ಮೇಲೆ ಬೇಸಿಗೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶೀಘ್ರ ಸಭೆ ನಡೆಸಲಾಗುತ್ತದೆ’ ಎಂದು ತಹಶೀಲ್ದಾರ್‌ ಧನಂಜಯ ಮಾಲಗಿತ್ತಿ.

ಮಳೆ ಕೊರತೆ: ಮೇವು ತುಟ್ಟಿ

ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೈಬ್ರೀಡ್ ಬೀಳಿ ಜೋಳ ಶೇಂಗಾ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆಯದೆ ನಾಶವಾಗಿದ್ದರಿಂದ ಜೋಳದ ಕಣಕಿ ಮೇವು ಶೇಂಗಾ ಹೊಟ್ಟನ್ನು ರೈತರು ದುಪ್ಪಾಟಾದರು ಜಾನುವಾರಗಳಿಗೆ ಸಂಹ್ರಹಿಸಿಟ್ಟುಕೊಳ್ಳುತ್ತಿದ್ದಾರೆ.

‘ಮೇವು ಸಂಗ್ರಹ ಬೇಡಿಕೆ ಅಧಿಕವಾಗುತ್ತಿದ್ದು 1 ಟ್ರ್ಯಾಕ್ಟರ್‌ ಮೇವಿಗೆ ₹ 5ರಿಂದ ₹ 6 ಸಾವಿರ ಗಡಿ ದಾಟಿದೆ. ಶ್ರೀಮಂತರು ಮತ್ತು ಮಧ್ಯಮ ವರ್ಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೇವು ಖರೀದಿ ಮಾಡುತ್ತಾರೆ. ನಾವು ಸಣ್ಣ ರೈತರು ಏನ ಮಾಡಬೇಕು 4 ರಿಂದ 5 ಕಿ.ಮೀ ದೂರ ಹೋದರು ಎಲ್ಲಿಯು ಹಸಿರು ಹುಲ್ಲ ಕಾಣುತ್ತಿಲ್ಲ ನೀರು ಸಿಗುತ್ತಿಲ್ಲ. ನಿತ್ಯ ಆಕಳು ಎಮ್ಮೆ ಹಾಲು ಹಿಂಡುವ ಪ್ರಮಾಣ ಕಡಿಮೆಯಾಗಿದೆ. ಸರ್ಕಾರ ಇಂತಹ ಭೀಕರ ಬರಗಾಲದ ಸಂಕಷ್ಠದಲ್ಲಿ ಜಾನುವಾರಗಳ ರಕ್ಷಣೆಗೆ ಮುಂದಾಗಬೇಕು.ನೀರು ಮೇವು ಕೊರತೆಯಾಗದಂತೆ ಕ್ರಮ ತಗೆದುಕೊಳ್ಳಬೇಕು’ ಎನ್ನುತ್ತಾರೆ ಡಂಬಳ ಗ್ರಾಮದ ರಂಗಪ್ಪ ಹನಮಪ್ಪ ಪೂಜಾರ ಮತ್ತು ಮಳ್ಳಪ್ಪ ಕೊಳ್ಳಾರ.

ಭೀಕರ ಬರಗಾಲ ಎದುರಿಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಂದು ಮೇವು ಬ್ಯಾಂಕ್ ಶೀಘ್ರದಲ್ಲೆ ಪ್ರಾರಂಭ ಮಾಡುತ್ತೇವೆ.
ಧನಂಜಯ ಮಾಲಗಿತ್ತಿ, ತಹಶೀಲ್ದಾರ್
ಡಂಬಳದ ರೈತರ ಜಮೀನಿನಲ್ಲಿ ಆಹಾರಕ್ಕಾಗಿ ಅಲೆದಾಡುತ್ತಿರುವ ಎಮ್ಮೆಗಳ ಚಿತ್ರಣ.
ಕೊಪ್ಪಳ ಜಿಲ್ಲೆ ಕವಲೂರ ಗ್ರಾಮದಿಂದ  ಡಂಬಳ ಹೋಬಳಿ ಪೇಠಾಲೂರ ಗ್ರಾಮದತ್ತ ಮೇವು ಅರಸಿ ಬರುತ್ತಿರುವ ಶಿಂಗಟರಾಯನಕೇರಿ ಗ್ರಾಮದ ಕುರಿಗಾಯಿ ಮೈಲಾರಪ್ಪ ನಿಂಗಪ್ಪ ಗುರುವಿನ.
ಡಂಬಳ ಹೋಬಳಿಯಲ್ಲಿ ರೈತರೊಬ್ಬರು ಟ್ರಾಕ್ಟರ ಮೂಲಕ ಮೇವು ಖರೀದಿ ಮಾಡಿಕೊಂಡು ಹೋಗುತ್ತಿರುವ ಚಿತ್ರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.