ADVERTISEMENT

ಅನುಮತಿ ಇಲ್ಲದೆ ಚಾರಣ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2018, 14:23 IST
Last Updated 23 ಸೆಪ್ಟೆಂಬರ್ 2018, 14:23 IST

ರಾಮನಗರ: ತಾಲ್ಲೂಕಿನ ಹಂದಿಗುಂದಿ ಅರಣ್ಯ ಪ್ರದೇಶಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡಿದ ಆರೋಪದ ಮೇಲೆ ಆಯೋಜಕರ ವಿರುದ್ಧ ಅರಣ್ಯ ಇಲಾಖೆಯು ಭಾನುವಾರ ಪ್ರಕರಣ ದಾಖಲಿಸಿದೆ.

ಬೆಂಗಳೂರಿನ ಎಕೋ ಕ್ಲಬ್‌ವೊಂದರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಮಂದಿ ಭಾನುವಾರ ಮುಂಜಾನೆ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್‌ಗೆ ಬಂದಿದ್ದರು. ಈ ಅರಣ್ಯವು ಮೀಸಲು ಪ್ರದೇಶವಾಗಿದ್ದು, ಪ್ರವೇಶಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಚಾರಣಿಗರು ಅರಣ್ಯ ಇಲಾಖೆಯ ಗಮನಕ್ಕೆ ತಾರದೆಯೇ ಟ್ರಕ್ಕಿಂಗ್‌ ಹಮ್ಮಿಕೊಂಡಿದ್ದರು.

ವಿಷಯ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಾರಣಿಗರನ್ನು ತಡೆದರು. ಬಳಿಕ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೂ ಜನರನ್ನು ವಾಪಸ್ ಕಳುಹಿಸಲಾಯಿತು.

ADVERTISEMENT

‘ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಚಾರಣಕ್ಕೆ ತೆರಳುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಐವರ ವಿರುದ್ಧ ಅರಣ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡು ₨20 ಸಾವಿರ ದಂಡ ವಿಧಿಸಲಾಯಿತು’ ಎಂದು ವಲಯ ಅರಣ್ಯಾಧಿಕಾರಿ ದಾಳೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ವ್ಯಕ್ತಿಗಳು ಅರಣ್ಯ ಪ್ರವೇಶಿಸುವ ಮುನ್ನ ಕಡ್ಡಾಯವಾಗಿ ಇಲಾಖೆಯ ಅನುಮತಿ ಪಡೆದಿರಬೇಕು. ಕಾಡು ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಇದನ್ನು ಪಾಲಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.